ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಅತಿ ಅವಲಂಬನೆ ಆಲೋಚನಾ ಶಕ್ತಿ ಕಡೆಗಣನೆ

Last Updated 24 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪದೇ ಪದೇ ಸ್ಮಾರ್ಟ್‌ಫೋನ್‌ ಬಳಸುವುದರಿಂದ ನಮ್ಮ ಚಿಂತನಾ ಸಾಮರ್ಥ್ಯ ಕುಸಿಯುತ್ತದೆ. ಎಲ್ಲವೂ ಬೆರಳ ತುದಿಯಲ್ಲಿ ಸಿಗುತ್ತಿರುವುದರಿಂದ ಯಾವುದೇ ವಿಷಯದ ಬಗ್ಗೆ ಮನುಷ್ಯ ಮುಕ್ತವಾಗಿ ಯೋಚಿಸುತ್ತಿಲ್ಲ!

ಸ್ಮಾರ್ಟ್‌ಫೋನ್‌ ಬಳಕೆದಾರರು ಪ್ರತಿಯೊಂದಕ್ಕೂ ತಮ್ಮ ಸಾಧನವನ್ನು ಅವಲಂಬಿಸಿರುತ್ತಾರೆ. ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾದರೂ ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಮೊರೆ ಹೋಗುತ್ತಾರೆ. ಮಿದುಳಿಗೆ ಕೆಲಸ ಕೊಡುವುದನ್ನೇ ನಿಲ್ಲಿಸಿ ಚಿಂತನಾಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ  ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಂಶೋಧಕರು.

‘ಅವರಿಗೆ ಯಾವ ವಿಷಯದ ಬಗ್ಗೆ ಮಾಹಿತಿ ಬೇಕಿರುತ್ತದೆಯೋ ಅದನ್ನು ಅವರು ಸುಲಭವಾಗಿ ಕಲಿಯಬಹುದು ಅಥವಾ ತಿಳಿದುಕೊಳ್ಳಬಹುದು. ಆದರೆ, ಸ್ಮಾರ್ಟ್‌ಫೋನ್‌ ಸದಾ ಜೊತೆಗಿರುವುದರಿಂದ ಅದಕ್ಕಾಗಿ ಅವರು ಮನಸ್ಸೇ ಮಾಡುವುದಿಲ್ಲ’ ಎಂದು ವಿಷಾದಿಸುತ್ತಾರೆ ವಾಟರ್ ಲೂ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಗೋರ್ಡನ್‌ ಪೆನ್ನಿಕುಕ್‌.

ಇದೇ ವೇಳೆ ಯಾರು ತಮ್ಮ ಮಿದುಳಿಗೆ ಕೆಲಸ ಕೊಡುತ್ತಾರೋ ಅಂತಹವರು ಸಮಸ್ಯೆಯನ್ನು ಸೂಕ್ಷ್ಮ ರೀತಿಯಲ್ಲಿ ವಿಶ್ಲೇಷಿಸಿ ತಾರ್ಕಿಕವಾಗಿ ಬಗೆಹರಿಸಲು ಪ್ರಯತ್ನಿಸುತ್ತಾರೆ. ಅತಿ ಬುದ್ಧಿವಂತರು ಪ್ರತಿಯೊಂದನ್ನೂ ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷಿಸುತ್ತಾರೆ. ಇವರು ಸ್ಮಾರ್ಟ್‌ಫೋನ್‌ ಸೇರಿದಂತೆ ಇತರ ಸಾಧನ ಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ ಎಂಬುದು ಸಂಶೋಧನೆ ಯಿಂದ ದೃಢಪಟ್ಟಿದೆ.

‘ಇಂದು ಯಾವುದೇ ರೀತಿಯ ಸಮಸ್ಯೆ ಎದುರಾದರೆ ಮನುಷ್ಯ ತನ್ನ ಬುದ್ಧಿಶಕ್ತಿ ಖರ್ಚು ಮಾಡಲು ಅಥವಾ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುವುದನ್ನೇ ನಿಲ್ಲಿಸಿದ್ದಾನೆ. ಅದರ ಬದಲಾಗಿ ತನ್ನ ಇನ್ನೊಂದು ಮಿದುಳು ಎಂದು ಪರಿಗಣಿಸಿರುವ ಸ್ಮಾರ್ಟ್‌ ಫೋನ್‌  ಮೊರೆ ಹೋಗುತ್ತಾನೆ’ ಎನ್ನುತ್ತಾರೆ ಈ ಕುರಿತು ಸಂಶೋಧನಾ ಅಧ್ಯಯನ ನಡೆಸಿದ ತಂಡದ ಮುಖ್ಯಸ್ಥ ನಥಾನಿಯಲ್‌ ಬರ್‌.

ಎಲ್ದಕ್ಕೂ ಸ್ಮಾರ್ಟ್‌ಫೋನ್‌ ಅವಲಂಬಿಸುವ 660 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಅವರ ಯೋಚನಾಶಕ್ತಿ, ಅಕ್ಷರ ಜ್ಞಾನ ಮತ್ತು ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ತಿಳಿವಳಿಕೆಯನ್ನು ಸಂಶೋಧಕರು ಪರೀಕ್ಷೆಗೆ ಒಳಪಡಿಸಿ, ಅತಿಯಾಗಿ ಸ್ಮಾರ್ಟ್‌ಫೋನ್‌ ಅವಲಂಬಿಸಿದವರು ಯಾವ ರೀತಿಯ ಸಮಸ್ಯೆ ಎದುರಿಸಿದರು ಎಂಬುದನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ.

ಅಧ್ಯಯನಕ್ಕೆ ಒಳಗಾದವರ ಪೈಕಿ ಯಾರು ತಾರ್ಕಿಕವಾಗಿ ವಿಶ್ಲೇಷಣೆ ಮಾಡಿ ಎಲ್ಲ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಕಂಡುಕೊಂಡರೊ ಅಂತಹವರು ಸ್ಮಾರ್ಟ್‌ಫೋನ್‌ಗೆ ಕಡಿಮೆ ಸಮಯ ಮೀಸಲಿಟ್ಟಿದ್ದರು. ಅತಿಯಾಗಿ ಸ್ಮಾರ್ಟ್‌ ಫೋನ್‌ ಬಳಸುವವರಲ್ಲಿ ಬುದ್ಧಿಮತ್ತೆ, ಯೋಚನಾಶಕ್ತಿ ಕಡಿಮೆ ಇರುವುದು ಕಂಡುಬಂದಿತು. ಎದುರಾಗುವ ಸಮಸ್ಯೆಗಳನ್ನು ಸ್ವಸಾಮರ್ಥ್ಯದಿಂದ ಬಗೆಹರಿಸು ವುದನ್ನು ಬಿಟ್ಟು ಬೇರೆ ಸಾಧನದ ಮೊರೆ ಹೋದರೆ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಸಂಶೋಧಕರು.

‘ಇತ್ತೀಚೆಗೆ ಗ್ಯಾಜೆಟ್‌ಗಳ ಮೇಲಿನ ಅವಲಂಬನೆ ಹೆಚ್ಚಿದೆ. ಯುವಜನರಂತೂ ಅವು ಇಲ್ಲದೇ ಜೀವಿಸಲೇ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಮುಂದೆ ಬರಬಹುದಾದ ಇಂತಹ ಸಂಕಷ್ಟದ ಸನ್ನಿವೇಶಗಳಿಂದ ದೂರವಿರ ಬೇಕಾದರೆ ಈಗಿನಿಂದಲೇ ಎಚ್ಚರ ವಹಿಸಬೇಕಾದದ್ದು ಅಗತ್ಯ’ ಎಂದಿದ್ದಾರೆ ಸಂಶೋಧಕ ಬರ್‌.

ಇಷ್ಟಾಗಿಯೂ ನಿಜಕ್ಕೂ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಮನುಷ್ಯನ ಬುದ್ಧಿಶಕ್ತಿ ಕಡಿಮೆಯಾಗುತ್ತದೆಯೇ? ಎಂಬ ಪ್ರಶ್ನೆ ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತದೆ. ಆದ್ದರಿಂದ ಈ ಕುರಿತು ಇನ್ನಷ್ಟು ಆಳ ಅಧ್ಯಯನ, ಸಂಶೋಧನೆಯ ಅಗತ್ಯವಿದೆ ಎಂದೂ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಹಾಗೂ ಮನರಂಜನೆಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನಮ್ಮ ಯೋಚನಾಶಕ್ತಿ ಹೆಚ್ಚಾಗುತ್ತದೆಯೋ ಅಥವಾ ಕುಸಿಯುತ್ತದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ. ಮನುಷ್ಯನ ವರ್ತನೆಗೆ ಸಂಬಂಧಿಸಿದ ಜರ್ನಲ್‌ ಕಂಪ್ಯೂಟರ್‌್ಸನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT