ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಫೋಟೊ ನಿರ್ವಹಣೆ ತಂತ್ರಾಂಶ

Last Updated 12 ಜುಲೈ 2016, 19:30 IST
ಅಕ್ಷರ ಗಾತ್ರ

ಮುಖ ಮನಸ್ಸಿನ ಕನ್ನಡಿ ಎಂಬ ಮಾತಿದೆ. ಈಗಿನ ಡಿಜಿಟಲ್‌ ಯುಗಕ್ಕೆ ಇದನ್ನೇ ಸ್ವಲ್ಪ ಬದಲಿಸಿ, ಸ್ಮಾರ್ಟ್‌ಫೋನ್‌ನಲ್ಲಿರುವ ಚಿತ್ರಗಳು ಆಧುನಿಕ ಬದುಕಿನ ಕನ್ನಡಿ ಎನ್ನಬಹುದು. ಸ್ಮಾರ್ಟ್‌ಫೋನ್‌ ಸೇರಿದಂತೆ ಡಿಜಿಟಲ್‌ ಉಪಕರಣಗಳು ಆತ್ಮಸಂಗಾತಿಗಳಾಗಿ ಬದಲಾಗಿರುವ ಕಾಲವಿದು. ಮೊಬೈಲ್‌ ಮೆಮರಿ ಚಿಪ್‌ನಲ್ಲಿ ಸಂಗ್ರಹವಾಗುತ್ತಾ ಹೋಗುವ ಚಿತ್ರಗಳು ಬದುಕಿನ ಅಪರೂಪದ ಕ್ಷಣಗಳ ಮೈಲಿಗಲ್ಲುಗಳು ಕೂಡ ಹೌದು.

ವಾರ, ತಿಂಗಳು, ವರ್ಷ ಕಳೆದಂತೆ ಈ ಚಿತ್ರಗಳು ಒಂದಂಕಿಯಿಂದ ನಾಲ್ಕಂಕಿ ಮಟ್ಟಕ್ಕೆ ಬೆಳೆದಿರುತ್ತವೆ. ಇರುವ ಸಾವಿರಾರು ಚಿತ್ರಗಳಲ್ಲಿ, ಬೇಕಿರುವುದನ್ನು ಹುಡುಕಿ ತೆಗೆಯುವುದು, ತಕ್ಷಣಕ್ಕೆ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವುದು ಅಥವಾ ಇನ್ನೊಬ್ಬರಿಗೆ ಕಳುಹಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕಾಗಿಯೇ ಎಷ್ಟೇ ಚಿತ್ರಗಳಿದ್ದರೂ, ಅದನ್ನು ವ್ಯವಸ್ಥಿತವಾಗಿ ಜೋಡಿಸಿಡಲು, ಮತ್ತು ಕ್ಷಣಮಾತ್ರದಲ್ಲಿ ಹುಡುಕಲು ಸಾಧ್ಯವಾಗುವಂತಹ ಹಲವು ಅಪ್ಲಿಕೇಷನ್ಸ್‌ಗಳು  ಅಭಿವೃದ್ಧಿಯಾಗಿವೆ.

ಆದರೆ, ಇಂತಹ ಆ್ಯಪ್‌ಗಳಲ್ಲಿ ಹಲವು ಮಿತಿಗಳಿವೆ. ಕೆಲವು ಕೊರತೆಗಳೂ ಇವೆ. ಕೆಲವು ಅಪ್ಲಿಕೇಷನ್ಸ್‌ಗಳಲ್ಲಿ ಚಿತ್ರವನ್ನು ದಿನಾಂಕ, ಕೀ ವರ್ಡ್‌ ನೀಡಿ ಹೊಂದಿಸಿಡಬಹುದು,
ಹುಡುಕಲೂಬಹುದು,  ಆದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಗೆ ಶೇರ್‌ ಮಾಡಲು ಆಗುವುದಿಲ್ಲ. ಕೀ ವರ್ಡ್‌ ನೀಡಿ ಚಿತ್ರ ಹುಡುಕಿದರೆ ನೂರಾರು ಫಲಿತಾಂಶಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ನಮಗೆ ಬೇಕಿರುವ ಚಿತ್ರವನ್ನು ಗುರುತಿಸಲು ಕನಿಷ್ಠ 10 ನಿಮಿಷ ಹಿಡಿಯುತ್ತದೆ. ಚಿತ್ರ ಸಿಕ್ಕ ನಂತರ ಅದನ್ನು ಸ್ನೇಹಿತರಿಗೆ ಶೇರ್‌ ಮಾಡಬೇ
ಕೆಂದರೆ ಇನ್ನೂ ಅರ್ಧ ಗಂಟೆ ಬೇಕಾಗುತ್ತದೆ ಎನ್ನುತ್ತಾರೆ ವೃತ್ತಿ ಪರ ಛಾಯಾಗ್ರಾಹಕರಿಗಾಗಿ ‘ಬಹು ಚಿತ್ರ ನಿರ್ವಹಣೆ’ ಅಪ್ಲಿಕೇಷನ್‌ಗಳ ಕುರಿತು ಅಧ್ಯಯನ ನಡೆಸಿರುವ ಗಣಕ ವಿಜ್ಞಾನಿ ಬ್ರಿಯಾನ್‌ ಕ್ರಿಸ್ಟಿನ್‌.  

ಹಳೆ ಫೋಟೊ ಹುಡುಕುವುದಿರಲಿ, ಹೊಸ ಫೋಟೊ ಸಂಗ್ರಹಿಡುವುದಿರಲಿ, ಎಲ್ಲವೂ ಕ್ಷಣಮಾತ್ರದಲ್ಲಿ ಆಗುವಂತಹ ಚತುರ ಅಪ್ಲಿಕೇಷನ್‌ ಬೇಕು ಎನ್ನುತ್ತಾರೆ ಅವರು. ಬಳಕೆದಾರನ ಸಮಯ ಕೊಲ್ಲುವಂತಹ ಅಪ್ಲಿಕೇಷನ್‌ಗಳಿಗಿಂತಲೂ ಹೆಚ್ಚು ಜಾಣತನದಿಂದ ಕೆಲಸ ಮಾಡುವ ತಂತ್ರಾಂಶಗಳು ಅಭಿವೃದ್ಧಿಯಾಗಬೇಕಿವೆ ಎನ್ನುವುದು ಅವರ ಅಭಿಮತ. ಉದಾಹರಣೆಗೆ ಐಫೋನ್‌ ಫೋಟೊ ಗ್ಯಾಲರಿಯಲ್ಲಿ 8 ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ ಎಂದಿಟ್ಟುಕೊಳ್ಳಿ. ಇದನ್ನು ನಿರ್ವಹಣೆ ಮಾಡಲು ಆ್ಯಪಲ್‌ನ ಐ ಕ್ಲೌಡ್‌ ಫೋಟೊ ಲೈಬ್ರರಿ, ಡ್ರಾಪ್‌ಬಾಕ್ಸ್‌ ಮತ್ತು ಗೂಗಲ್‌ ಫೋಟೊಸ್‌ ಬ್ಯಾಕ್‌ಅಪ್‌ ಸೇವೆಗಳನ್ನು ಬಳಸಬಹುದು. ಈ ತಂತ್ರಾಂಶಗಳು ಡಿವೈಸ್‌ನಲ್ಲಿರುವ  ಚಿತ್ರಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ಕ್ಲೌಡ್‌ ಸ್ಟೋರೇಜ್‌ನಡಿ ಸಂಗ್ರಹಿಸಿ ಇಡುತ್ತವೆ.

ಇವುಗಳ ಕಾರ್ಯನಿರ್ವಹಣೆ ವಿಮರ್ಶಿಸಿದರೆ, ಆ್ಯಪಲ್‌ನ ಐಕ್ಲೌಡ್‌ ಚೆನ್ನಾಗಿದೆ. ಐಫೋನ್‌ನ ಕ್ಯಾಮೆರಾ ಸೆಟ್ಟಿಂಗ್ಸ್‌ನಲ್ಲಿ ಐಕ್ಲೌಡ್‌ ಫೋಟೊ ಲೈಬ್ರರಿ ಗುಂಡಿ ಒತ್ತಿದರೆ, ಇದು ಬಳಕೆದಾರ ತೆಗೆದ ಚಿತ್ರಗಳನ್ನು ವ್ಯವಸ್ಥಿತವಾಗಿ ಕ್ಲೌಡ್‌ ಸ್ಟೋರೇಜ್‌ನಲ್ಲಿ ಹೊಂದಿಸಿ ಇಡುತ್ತಾ ಹೋಗುತ್ತದೆ. ಈ ರೀತಿ ಸೇವ್‌ ಆದ ಚಿತ್ರಗಳನ್ನು ಆ್ಯಪಲ್‌ ಮತ್ತು ವಿಂಡೋಸ್‌ ಡಿವೈಸ್‌ನಲ್ಲಿ ಕೂಡ ತೆರೆಯಬಹುದು.

ಡ್ರಾಪ್‌ಬಾಕ್ಸ್‌ ಕೂಡ ಅತ್ಯುತ್ತಮ ಫೋಟೊ ಬ್ಯಾಕ್‌ ಆ್ಯಪ್‌ ತಂತ್ರಾಂಶ. ಸ್ಮಾರ್ಟ್‌ಫೋನ್‌ನಲ್ಲಿರುವ ಚಿತ್ರಗಳನ್ನು ಡ್ರಾಪ್‌ಬಾಕ್ಸ್ ಫೋಲ್ಡರ್‌ನಲ್ಲಿ ಸೇವ್‌ ಮಾಡಿಟ್ಟು
ಕೊಳ್ಳುತ್ತದೆ. ಇದನ್ನು ವಿಂಡೋಸ್‌ ಪಿಸಿ, ಐಫೋನ್‌ ಮತ್ತು ಆಂಡ್ರಾಯ್ಡ್‌ ಡಿವೈಸ್‌ನಲ್ಲೂ ತೆರೆಯಬಹುದು.

ಗೂಗಲ್‌ ಫೋಟೋಸ್‌ ತಂತ್ರಾಂಶವು ಹಲವು ವಿಶೇಷತೆಗಳಿಂದ ಇವು ಮೂರರಲ್ಲಿ ಹೆಚ್ಚು ಗಮನ ಸೆಳೆಯುತ್ತದೆ. ಈ ಅಪ್ಲಿಕೇಷನ್‌ ತೆರೆಯುತ್ತಿದ್ದಂತೆ, ಇದು ನಿಮ್ಮ ಡಿವೈಸ್‌ನಲ್ಲಿರುವ ಸಕಲ ಚಿತ್ರಗಳನ್ನೂ ಗೂಗಲ್‌ ಕ್ಲೌಡ್‌ ಸೇವೆಗೆ ವರ್ಗಾಯಿಸಿ, ಗೂಗಲ್‌ ಡ್ರೈವ್‌ನಡಿ ಬ್ಯಾಕ್‌ಅಪ್‌ ಮಾಡಿ ಇಡುತ್ತದೆ. ಇದರಲ್ಲಿರುವ ಆಟೊ ಸಾರ್ಟಿಂಗ್‌ ಸೌಲಭ್ಯವು  ಚಿತ್ರಗಳನ್ನು ಸ್ಕ್ಯಾನ್‌ ಮಾಡಿ, ಬಹು ಮಾದರಿಯಲ್ಲಿ ಸಂಗ್ರಹಿಸಿಡುತ್ತದೆ. ಅಂದರೆ, ಬಳಕೆದಾರ ಈ ಚಿತ್ರಗಳನ್ನು ಹೇಗೆ ಬೇಕಾದರೂ ಹುಡುಕಬಹುದು.

ಒಬ್ಬ ವ್ಯಕ್ತಿಯ ಮುಖವನ್ನು ತೋರಿಸಿ, ಇರುವ ಸಾವಿರಾರು ಚಿತ್ರಗಳಲ್ಲಿ ಇದೇ ವ್ಯಕ್ತಿಯ ಚಿತ್ರ ಹುಡುಕು ಎಂದರೆ ಕ್ಷಣಮಾತ್ರದಲ್ಲಿ ಹುಡುಕಿ ಮುಂದಿಡುತ್ತದೆ. ಹೆಸರು, ಕೀ ವರ್ಡ್‌, ದಿನಾಂಕ, ಧ್ವನಿ ಆಧಾರಿತ ಶೋಧ ಸೌಲಭ್ಯವೂ ಇದರಲ್ಲಿವೆ. ವಾರಾಂತ್ಯದ ಪ್ರಯಾಣದ ಚಿತ್ರ, ವಿಡಿಯೊಗಳಾದರೆ ಅದನ್ನು ಪ್ರತ್ಯೇಕವಾಗಿ ‘ವೀಕೆಂಡ್‌ ಶೀರ್ಷಿಕೆಯಡಿ’ ಸಂಗ್ರಹಿಸಿಡುತ್ತದೆ. ಇವು ಮೂರರಲ್ಲಿ ಯಾವುದು ಉತ್ತಮ ಎಂದರೆ, ಮೂರು ಒಂದಕ್ಕಿಂತ ಒಂದು ಚೆನ್ನಾಗಿವೆ ಎನ್ನುತ್ತಾರೆ ಕ್ರಿಸ್ಟಿನ್‌. 

ಡ್ರಾಪ್‌ಬಾಕ್ಸ್‌ ಮತ್ತು ಆ್ಯಪಲ್‌ ಫೋಟ್‌ ಸರ್ವೀಸಸ್‌ನಲ್ಲಿ  ಕೂಡ ಕೆಲವು ಸ್ವಯಂ ಚಾಲಿತ ಫೋಟೊ ನಿರ್ವಹಣೆ ಸೌಲಭ್ಯಗಳಿವೆ. ಆದರೆ, ಇವು ಗೂಗಲ್‌ನ ಸೇವೆಯಷ್ಟು ಸ್ಮಾರ್ಟ್‌ ಆಗಿಲ್ಲ. ಆ್ಯಪಲ್‌ ತಂತ್ರಾಂಶವು ಚಿತ್ರವನ್ನು ಎಲ್ಲಿ ಮತ್ತು ಯಾವಾಗ ತೆಗೆಯಲಾಗಿದೆ ಎನ್ನುವುದರ ಮೇಲೆ ಹೊಂದಿಸಿಡುತ್ತದೆ. ಮುಖಚರ್ಯೆ ಆಧರಿಸಿದ ಶೋಧ ಸೌಲಭ್ಯವೂ ಇಲ್ಲಿದೆ. ಡ್ರಾಪ್‌ಬಾಕ್ಸ್‌ ಕೂಡ ಚಿತ್ರ ತೆಗೆದ ದಿನಾಂಕ, ಸಮಯಕ್ಕನುಗುಣವಾಗಿ ಹೊಂದಿಸಿಡುತ್ತದೆ. ಆದರೆ, ಇವೆಲ್ಲವನ್ನೂ ಮೀರಿದ, ಗೂಗಲ್‌ ಫೋಟೋಸ್‌ನ ಇನ್ನೊಂದು ಸೌಲಭ್ಯವೆಂದರೆ ಇದು ಅಸಂಖ್ಯಾತ ಚಿತ್ರಗಳನ್ನು ಉಚಿತವಾಗಿ ಸಂಗ್ರಹಿಸಿಡುವ ಸ್ಟೋರೇಜ್‌ ಸೌಲಭ್ಯ ಒದಗಿಸುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್‌ ಕಳೆದು ಹೋದರೂ, ಅದರಲ್ಲಿನ ಎಲ್ಲ ಚಿತ್ರಗಳು ಸುರಕ್ಷಿತವಾಗಿರುತ್ತವೆ.

ಸಂಪೂರ್ಣ ರೆಸಲ್ಯೂಷನ್ ಹೊಂದಿರುವ ಚಿತ್ರಗಳಿಗೆ ಕನಿಷ್ಠ 15 ಗಿಗಾಬೈಟ್‌ನಷ್ಟು ಉಚಿತ ಸಂಗ್ರಹ ಸ್ಥಳವನ್ನು ಗೂಗಲ್ ನೀಡುತ್ತದೆ. ಹೆಚ್ಚುವರಿಯಾಗಿ 100 ಗಿಗಾಬೈಟ್‌ನಷ್ಟು ಸ್ಥಳ ಬೇಕಿದ್ದರೆ ತಿಂಗಳಿಗೆ 2 ಡಾಲರ್‌ಗಿಂತ ಕಡಿಮೆ ಶುಲ್ಕ ಇದೆ. ಇದನ್ನೇ ಆ್ಯಪಲ್‌ಗೆ ಹೋಲಿಸಿದರೆ, ಆ್ಯಪಲ್‌ 5 ಗಿಗಾಬೈಟ್ಸ್‌ನಷ್ಟು ಉಚಿತ ಸ್ಥಳಾವಕಾಶ ನೀಡುತ್ತದೆ. ಆ ನಂತರ, ಪ್ರತಿ 50 ಗಿಗಾಬೈಟ್ಸ್‌ಗೆ ಪ್ರತಿ ತಿಂಗಳಿಗೆ 1 ಡಾಲರ್‌ನಂತೆ ಶುಲ್ಕ ವಿಧಿಸುತ್ತದೆ. ಡ್ರಾಪ್‌ಬಾಕ್ಸ್‌ ವಿಚಾರಕ್ಕೆ ಬಂದರೆ, ಇದು 2 ಗಿಗಾಬೈಟ್ಸ್‌ನಷ್ಟು ಉಚಿತ ಸ್ಥಳ ನೀಡುತ್ತದೆ, ನಂತರ ಹೆಚ್ಚುವರಿ ಸ್ಥಳ ಬೇಕಿದ್ದರೆ, ಪ್ರತಿ 1ಟೆರಾಬೈಟ್‌ಗೆ ತಿಂಗಳಿಗೆ 10 ಡಾಲರ್‌ ತೆತ್ತಬೇಕು. ಬಳೆದಾರನಿಗೆ ಅತ್ಯಂತ ಸುಲಭವಾಗಿ ಚಿತ್ರಗಳನ್ನು ಸಂಗ್ರಹಿಸಿ ಇಡಲು, ಹುಡುಕಲು ಮತ್ತು ಹಂಚಿಕೊಳ್ಳುವ ನಿಟ್ಟಿನಲ್ಲಿ ಗೂಗಲ್‌ ಫೋಟೊ ಸೇವೆ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ, ಗೂಗಲ್‌ ಫೋಟೊ ವಿಭಾಗದ ಉಪಾಧ್ಯಕ್ಷ ಅನಿಲ್‌ ಸಬರ್‌ವಾಲ್‌.

ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸ್ಕ್ಯಾನ್‌ಡಿಸ್ಕ್‌ ಐ ಎಕ್ಸ್‌ಪ್ಯಾಂಡ್‌ ಡ್ರೈವ್‌ ಕೂಡ ಉತ್ತಮ ಡಿವೈಸ್‌. ಇದು ಸ್ವಯಂಚಾಲಿತವಾಗಿ ಚಿತ್ರಗಳನ್ನು ಬ್ಯಾಕ್‌ಅಪ್‌ ಮಾಡಿಡುತ್ತದೆ. ಆದರೆ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT