ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹೊಸ ಸಂಚಲನ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳ ವಿರಾಮದ ನಂತರ ಆ್ಯಪಲ್ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಿದೆ. ಐದನೇ ತಲೆಮಾರಿನ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಹಾಗೂ ವೇರಬಲ್‌ ಟೆಕ್ನಾಲಜಿಯ (ಧರಿಸಬಹುದಾದ ತಂತ್ರಜ್ಞಾನ) ಸ್ಮಾರ್ಟ್ ವಾಚ್‌ಗಳನ್ನು ಏಕಕಾಲದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್ ಫೋನ್‌ಗಳಿಗೆ ಇರುವಷ್ಟು ಬೇಡಿಕೆ ಮತ್ತೊಂದಕ್ಕೆ ಇಲ್ಲ. ಹೀಗಾಗಿಯೇ ಪ್ರತಿ ಎರಡ ಮೂರು ತಿಂಗಳಿಗೊಮ್ಮೆ ವಿವಿಧ ಕಂಪೆನಿಗಳ ಹೊಸ ಹೊಸ ಮೊಬೈಲ್‌ ಫೋನ್‌ ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಗ್ರಾಹಕರನ್ನು ಸೆಳೆಯಲು, ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಕಂಪೆನಿಗಳ ಮಧ್ಯೆ ದೊಡ್ಡ ಸಮರವೇ ನಡೆಯುತ್ತಿದೆ.

ಉತ್ಕೃಷ್ಟ ಗುಣಮಟ್ಟದ  ಗ್ಯಾಡ್ಜೆಟ್‌ಗಳು ಹಾಗೂ ತನ್ನ ಬ್ರ್ಯಾಂಡ್ ಹೆಸರಿನಿಂದಲೇ ಜನಪ್ರಿಯವಾಗಿರುವ ಆ್ಯಪಲ್ ಕಂಪೆನಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿ ಕೊಂಡಿರಲಿಲ್ಲ. ಬೆಲೆಯಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳಲು ಮುಂದಾಗಿರಲಿಲ್ಲ. ಆದರೆ, ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪೆನಿ ಕಳೆದ ವರ್ಷ ಗ್ಯಾಲಕ್ಸಿ ಎಸ್‌ ಮಾದರಿಯ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಬಹುವಾಗಿ ಆಕರ್ಷಿಸಿದ ನಂತರ ಆ್ಯಪಲ್‌ಗೆ ಹಿನ್ನಡೆ ಯಾಗಿತ್ತು. ಅದರ ಲಾಭ ಗಳಿಕೆ ಪ್ರಮಾಣವೂ ಕಡಿಮೆ ಯಾಗಿತ್ತು. ಮಾರುಕಟ್ಟೆ ವ್ಯಾಪ್ತಿ ಕೂಡ ಕುಗ್ಗಿತ್ತು.

ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿಯೇ ಅದು ಈ ಬಾರಿ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.
ಈ ಮೂರು ಉತ್ಪನ್ನಗಳ ಬಿಡುಗಡೆ ಸಮಾರಂಭಕ್ಕೆ ಕಂಪೆನಿ ದೊಡ್ಡ ಪ್ರಮಾಣದಲ್ಲಿ ಪೂರ್ವ ತಯಾರಿ ಮಾಡಿಕೊಂಡಿತ್ತು. ಆದರೆ, ಎಲ್ಲಿಯೂ ಆ ಬಗ್ಗೆ ಸಣ್ಣ ಸುಳಿವನ್ನೂ  ಬಿಟ್ಟುಕೊಟ್ಟಿರಲಿಲ್ಲ. ಉತ್ಪನ್ನಗಳ ಬಿಡು ಗಡೆಗೆ ಕಂಪೆನಿಯು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಕ್ಯೂಪರ್ಟಿನೊದ ಫ್ಲಿಂಟ್ ಸೆಂಟರ್  ಎಂಬ ಸುವಿಶಾಲ ಸಭಾಂಗಣವನ್ನೇ ಆಯ್ಕೆ ಮಾಡಿಕೊಂಡಿತ್ತು. 30 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕಂಪೆನಿಯ ಮೊದಲ ಮೆಕಿಂತೋಷ್‌ ಕಂಪ್ಯೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು ಎನ್ನುವುದು ವಿಶೇಷ.

ಅಲ್ಲದೇ ಕಲಾಕೇಂದ್ರವಾಗಿರುವ ಈ ಸ್ಥಳಕ್ಕೆ ಸಾಂಸ್ಕೃತಿಕವಾಗಿ ಅಮೆರಿಕದಲ್ಲಿ ಬಹಳ ಮಹತ್ವವೂ ಇರುವುದರಿಂದ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರಗಾರಿಕೆಯೂ ಇದರಲ್ಲಿ ಅಡಗಿತ್ತು ಎನ್ನುವುದು ತಜ್ಞರ ಅಭಿಪ್ರಾಯ.

ಕಾರ್ಯಕ್ರಮಕ್ಕೆ ಜಗತ್ತಿನ ಬಹಳಷ್ಟು ದೇಶಗಳ ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿತ್ತು. ವಿಶಾಲ ವೇದಿಕೆಯಲ್ಲಿ ನಿಂತ ಕಂಪೆನಿಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಟಿಮ್ ಕುಕ್, ಮೂರೂ ಹೊಸ ಉತ್ಪನ್ನ ಶ್ರೇಣಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಷಯ ಪ್ರಕಟಿಸುತ್ತಿದ್ದಂತೆ ಅವರ ಹಿಂದಿನ ಪರದೆ ಮೇಲೆ ಮೂಡಿದ ಮೂರೂ ಉತ್ಪನ್ನಗಳ ಬೃಹದಾಕಾ ರದ ಚಿತ್ರ ಎಲ್ಲರನ್ನೂ ಬೆರಗಾಗಿಸಿದ್ದವು. ಇದರೊಂದಿಗೆ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆ್ಯಪಲ್ ಮತ್ತೊಂದು ಹೊಸ ಅಧ್ಯಾಯ ಆರಂಭಿಸಿದಂತಾಯಿತು. ತಾನೇನೂ ಕೈಕಟ್ಟಿ ಕುಳಿತಿಲ್ಲ. ಸ್ಪರ್ಧೆ ಇನ್ನು ತುರುಸುಗೊಳ್ಳಲಿದೆ ಎಂಬ ಸಂದೇಶವನ್ನೂ ಮಾರುಕಟ್ಟೆಗೆ ರವಾನಿಸಿ ದಂತಿತ್ತು.

ಸ್ಮಾರ್ಟ್‌ಫೋನ್ ಮಾರುಕಟ್ಟೆ
ಬಸ್, ವಿಮಾನ, ರೈಲು, ಸಿನಿಮಾ, ನಾಟಕ ಟಿಕೆಟ್‌ ಖರೀದಿಗೆ, ರೆಸ್ಟೊರೆಂಟ್‌ಗಳಲ್ಲಿ ಟೇಬಲ್‌ ಕಾಯ್ದಿರಿಸಲು, ಹಣ ವರ್ಗಾವಣೆ, ಆಟ, ಪಾಠ, ಮನರಂಜನೆ ಸೇರಿ ದಂತೆ ಅನೇಕ ಕಾರಣಗಳಿಗಾಗಿ ಸ್ಮಾರ್ಟ್‌ಫೋನ್ ಬಹಳ ಉಪಯುಕ್ತ. ಈ ಕಾರಣದಿಂದಲೇ ಮಕ್ಕಳಿಂದ ವಯ ಸ್ಕರವರೆಗೆ ಎಲ್ಲರಿಗೂ ಸ್ಮಾರ್ಟ್‌ಫೋನ್ ಬಲು ಇಷ್ಟ. ಇದರಿಂದ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಕ್ಷೇತ್ರ ದಿನ ದಿನಕ್ಕೂ ವಿಸ್ತರಿಸುತ್ತಲೇ ಇದೆ. ಮೊಬೈಲ್‌ ಫೋನ್‌ ತಯಾರಿಸುವ ಕಂಪೆನಿಗಳ ಮಧ್ಯೆಯೂ ಭಾರಿ ಸ್ಪರ್ಧೆ ಏರ್ಪಟ್ಟಿದೆ.

ಒಂದು ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಶ್ರೀಮಂತ ರಿಗೆ ಮಾತ್ರ ಎಂಬಂತಾಗಿತ್ತು. ಇದಕ್ಕೆ ಕಾರಣ ದುಬಾರಿ ಬೆಲೆ. ಆದರೆ, ಈಗ ಕಡಿಮೆ ದರದಲ್ಲಿ ಸಿಗುತ್ತಿರುವುದ ರಿಂದ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಫೋನ್‌ ಇವೆ. ಆ್ಯಪಲ್, ಬ್ಲ್ಯಾಕ್‌ಬೆರಿ ಮಾತ್ರ ಮಾರುಕಟ್ಟೆಗೆ ಸ್ಮಾರ್ಟ್‌ ಫೋನ್ ಬಿಡುಗಡೆ ಮಾಡಿದ್ದಾಗ ಅಷ್ಟೊಂದು ತೀವ್ರ ಸ್ಪರ್ಧೆ ಇರಲಿಲ್ಲ. ಜತೆಗೆ ಬೆಲೆ ಕೂಡ ಅಧಿಕವಾಗಿ ಇರುವುದರಿಂದ ಕೆಲವೇ ಕೆಲವರು ಸ್ಮಾರ್ಟ್‌ಫೋನ್‌ ಬಳಸುತ್ತಿ ದ್ದರು. ಈ ಕ್ಷೇತ್ರ ಸೀಮಿತ ಮಂದಿಗಷ್ಟೇ ಎನ್ನುವಂತಿತ್ತು. ಯಾವಾಗ ಸ್ಯಾಮ್‌ಸಂಗ್ ಮಾರುಕಟ್ಟೆ ಪ್ರವೇಶ ಮಾಡಿತೋ ಈ ಕ್ಷೇತ್ರ ದೊಡ್ಡ ಬದಲಾವಣೆಗೆ ಸಾಕ್ಷಿ ಯಾಯಿತು. ಆ್ಯಪಲ್, ಬ್ಲ್ಯಾಕ್‌ಬೆರಿಗೆ ಹೋಲಿಸಿದರೆ ಸ್ಯಾಮ್‌ಸಂಗ್ ಉತ್ಪನ್ನಗಳ ಬೆಲೆ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಇತ್ತೀಚಿನ ವರ್ಷಗಳಲ್ಲಂತೂ ಈ ಕ್ಷೇತ್ರದ ಚಹರೆಯೇ ಸಂಪೂರ್ಣ ಬದಲಾಗಿದೆ.

ಸೋನಿ, ಪ್ಯಾನಾಸೋನಿಕ್, ಲೆನೆವೊ, ಎಲ್.ಜಿ, ಮೋಟೊರೋಲಾ, ಎಚ್‌ಟಿಸಿ, ನೋಕಿಯಾ, ಓಪೊ, ಅಸುಸ್, ಅಲ್ಕಾಟೆಲ್, ಫಿಲಿಪ್ಸ್, ಭಾರತದ ಮೈಕ್ರೊ ಮ್ಯಾಕ್ಸ್, ಕಾರ್ಬನ್, ಸೆಲ್ಕಾನ್‌ ಸೇರಿದಂತೆ ಬಹುತೇಕ ಕಂಪೆನಿಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆ ಯಲ್ಲಿವೆ.

ಸ್ಪೀಕರ್, ಟಿ.ವಿ, ವಾಷಿಂಗ್ ಮೆಷಿನ್, ಪ್ರಿಂಟರ್ ಸೇರಿದಂತೆ ಕೆಲ ಉತ್ಪನ್ನಗಳನ್ನು ಮಾತ್ರ ತಯಾರಿಸುತ್ತಿದ್ದ ಕಂಪೆನಿಗಳೂ ಈ ಕ್ಷೇತ್ರಕ್ಕೆ ಬಂದಿವೆ. ಇದು ದೊಡ್ಡ ಮಟ್ಟದ ದರ ಸಮರಕ್ಕೂ ಕಾರಣವಾಗಿದೆ. ಸ್ಮಾರ್ಟ್‌ ಫೋನ್‌ಗಳಿಗೆ ಭಾರತ ಬಹಳ ದೊಡ್ಡ ಮಾರುಕಟ್ಟೆ ಎಂಬುದನ್ನು ಅರಿತು ಒಂದರ ನಂತರ ಒಂದು ಹೊಸ ಕಂಪೆನಿಗಳು ಇಲ್ಲಿಗೆ ಕಾಲಿಡುತ್ತಲೇ ಇವೆ. ಕಳೆದ ವರ್ಷ ಗೂಗಲ್ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ‘ಮೊಟೊ ಜಿ’ ಸ್ಮಾರ್ಟ್‌ಫೋನ್‌ ದಿನ ಬೆಳಗಾಗುವುದ ರೊಳಗೆ ಹಾಟ್‌ಕೇಕ್‌ ರೀತಿಯಲ್ಲಿ ಬಿಕರಿಯಾಗಿದ್ದವು.

ಆನ್‌ಲೈನ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಂಪೆನಿಯ ಪ್ರಕಾರ, ಆರು ತಿಂಗಳ ಅವಧಿಯಲ್ಲಿ 20 ಲಕ್ಷಕ್ಕೂ ಅಧಿಕ ಸೆಲ್‌ಫೋನ್ ಮಾರಾಟವಾಗಿವೆ. ಇದಕ್ಕೂ ಕಡಿಮೆ ಬೆಲೆಯೇ ಪ್ರಮುಖ ಕಾರಣವಾಗಿತ್ತು. 8ಜಿಬಿ ಮತ್ತು 16ಜಿಬಿ ಮೊಬೈಲ್‌ಗಳನ್ನು ಕೇವಲ ₨12,000 ಮತ್ತು ₨14,000ಕ್ಕೆ ಮಾರಾಟ ಮಾಡಿದ್ದೇ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.

ಚೀನಾದಲ್ಲಿ ಲೋಕಲ್‌ ಆ್ಯಪಲ್ ಎಂದೇ ಕರೆಸಿಕೊಳ್ಳುವ ‘ಕ್ಸಿಯೊಮಿ ಎಂಐ3’ ಇದೇ ವರ್ಷ ಭಾರತದ ಮಾರುಕಟ್ಟೆ ಪ್ರವೇಶಿಸಿತು. ಅಷ್ಟೇ ಅಲ್ಲ, ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಇದನ್ನು ಕೂಡ ಫ್ಲಿಫ್‌ಕಾರ್ಟ್‌ನಲ್ಲಿ ಮಾತ್ರ ಖರೀದಿಸಬಹುದಾಗಿದೆ. ಮಾರುಕಟ್ಟೆಗೆ ಬರುವ ಮುನ್ನವೇ ಎರಡು ಲಕ್ಷಕ್ಕೂ ಅಧಿಕ ಜನ ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದರು ಎಂದರೆ ಅದಕ್ಕಿದ್ದ ಬೇಡಿಕೆಯ ಪ್ರಮಾಣದ ಅರಿವಾಗಬಹುದು.

ಫ್ಲಿಫ್‌ಕಾರ್ಟ್‌ನಲ್ಲಿ ಮೊದಲು ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ವಾರಕ್ಕೊಮ್ಮೆ 20,000 ಸೆಟ್‌ಗಳು ಬಿಡುಗಡೆಯಾಗುತ್ತಿದ್ದರೂ ಕೆಲವೇ ಸೆಕೆಂಡ್‌ಗಳಲ್ಲಿ ಬಿಕರಿಯಾಗುತ್ತಿದ್ದವು ಎನ್ನುವುದು ಗಮನಾರ್ಹ. ಕೇವಲ ₨13,999 ಮುಖಬೆಲೆಗೆ 13 ಮೆಗಾಪಿಕ್ಸಲ್ ಕ್ಯಾಮೆರಾ, ಐದು ಅಂಗುಲ ವಿಸ್ತಾರದ ಟಚ್‌ಸ್ಕ್ರಿನ್, 2ಜಿಬಿ ಮೆಮೊರಿ (ಅಂತರ್ಗತ ಸ್ಮರಣ ಕೋಶ) ಸೇರಿ ದಂತೆ ಹಲವು ವೈಶಿಷ್ಟ್ಯಗಳನ್ನು ಈ ಮೊಬೈಲ್ ಒಳಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣ. ಈಗಲೂ ಫ್ಲಿಫ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗೆ ಬೇಡಿಕೆ ಇದೆ. ಇದರ ಮಾರಾಟ ಪ್ರಗತಿಯಲ್ಲಿರು ವಾಗಲೇ ಕ್ಸಿಯೊಮಿ ಎಂಐ3’ ಕಂಪೆನಿ ಕೇವಲ 6000ಕ್ಕೆ ‘ರೆಡ್‌ಮಿ’ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇದಕ್ಕೂ ಈಗ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಫ್ಲಿಫ್‌ಕಾರ್ಟ್‌ನಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಜನ ಖರೀದಿಗೆ ನೋಂದಣಿ ಮಾಡಿಸಿದ್ದಾರೆ.

ಚೀನಾ ಹ್ಯಾಂಡ್‌ಸೆಟ್‌ಗೆ ಸಿಕ್ಕ ಬೇಡಿಕೆ ನೋಡಿಯೇ ಮೊಟೊ ಜಿ ಇತ್ತೀಚಿಗೆ ತನ್ನ ಮೊಬೈಲ್‌ ಫೋನ್‌ ಬೆಲೆಯನ್ನು ಒಮ್ಮೆಲೇ ₨2 ಸಾವಿರದಷ್ಟು ಕಡಿಮೆ ಮಾಡಿತು. ಅಲ್ಲದೇ ಮೊಟೊ ಜಿ ಸರಣಿಯ ಮೊಬೈಲ್‌ ಫೋನ್ ಸ್ಕ್ರೀನನ್ನೂ ಐದು ಅಂಗುಲಕ್ಕೆ ಹೆಚ್ಚಿಸಿತು. ಎಂಟು ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಿ ಎರಡನೇ ತಲೆಮಾರಿನ ಮೊಟೊ ಜಿ ಎಂದು ಹೆಸರಿಸಿದೆ. ಬೆಲೆಯನ್ನೂ ಈ ಹಿಂದಿನ ಮಾದರಿ ಮೊಬೈಲ್‌ಗಳಿ ಗಿಂತಲೂ ₨1 ಸಾವಿರ ಕಡಿಮೆ ಮಾಡಿದೆ. ಪ್ರಸ್ತುತ ಅದರ ಮಾರುಕಟ್ಟೆ ದರ ₨12,999 ಇದೆ.

ಒಂದು ಕಾಲದಲ್ಲಿ ಉತ್ಕೃಷ್ಟ ಗುಣಮಟ್ಟದ ಉಪಕರಣಗಳು ಬೇಕು ಎಂದರೆ ಜನರು ಹೆಸರಾಂತ ಬ್ರ್ಯಾಂಡ್‌ ಕಂಪೆನಿಗಳತ್ತಲೇ ಗಮನ ಹರಿಸುತ್ತಿದ್ದರು. ಕಾಲ ಬದಲಾಗಿದೆ. ಕಡಿಮೆ ಬೆಲೆಯಲ್ಲಿ  ದೊರಕುವ ಹೆಚ್ಚು ಸೌಕರ್ಯಗಳಿರುವ ಸ್ಮಾರ್ಟ್‌ಫೋನ್‌ಗಳ ಹಿಂದೆ ಹೋಗುತ್ತಿದ್ದಾರೆ.

ಭಾರತದ್ದೇ ಕಂಪೆನಿಯಾದ ಮೈಕ್ರೊಮ್ಯಾಕ್ಸ್ ಕೂಡ ಅಗ್ಗದ ಬೆಲೆಗೆ ಹೆಚ್ಚು ಸೌಲಭ್ಯಗಳ ಸ್ಮಾರ್ಟ್‌ಫೋನ್‌ ನೀಡುವುದಕ್ಕೆ  ಆರಂಭಿಸಿದ ಕಾರಣದಿಂದಲೇ ಬಹಳ ಕಡಿಮೆ ಸಮಯದಲ್ಲಿ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳಲು ಕಾರಣವಾಯಿತು. ಮೈಕ್ರೊಮ್ಯಾಕ್ಸ್ ₨10 ಸಾವಿರ ರೂಪಾಯಿ ಆಸುಪಾಸಿನ ಬೆಲೆಯಲ್ಲಿ ಐದು ಅಂಗುಲ ವಿಸ್ತಾರದ ಸ್ಪರ್ಶಪರದೆಯ, ಎಂಟ ರಿಂದ ಹತ್ತು ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇರುವ ಮೊಬೈಲ್‌ಗಳನ್ನು ಗ್ರಾಹಕರ ಕೈಗೆ ಕೊಟ್ಟಿದ್ದೇ ಅದರ ಮಾರುಕಟ್ಟೆ ಪ್ರಗತಿಗೆ ಕಾರಣವಾಯಿತು. ಈ ₨3 ಸಾವಿರಕ್ಕೂ ಸ್ಮಾರ್ಟ್‌ಫೋನ್‌ ನೀಡುತ್ತಿದೆ. ಈ ಸ್ಪರ್ಧೆಯಿಂದಾಗಿ ಇಂದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಮೊಬೈಲ್‌ಗಳು ಸಿಗುತ್ತಿವೆ.

ಸ್ಪರ್ಶಪರದೆ ವಿಸ್ತಾರ
ವಿಶಾಲವಾದ ಹಾಗೂ ಹೆಚ್ಚಿನ ದೃಶ್ಯ ಸ್ಪಷ್ಟತೆ ಇರುವ ಸ್ಪರ್ಶ ಪರದೆಯ ಮೊಬೈಲ್‌ಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿವೆ ಎಂಬ ಸಂಗತಿ ಅರಿತ ನಂತರವಂತೂ ಎಲ್ಲ ಕಂಪೆನಿಗಳು ಈಗೀಗ ಐದು, ಆರು ಅಂಗುಲ ವಿಸ್ತಾರದ ಪರದೆ ಇರುವ ಮೊಬೈಲ್‌ಗಳನ್ನೇ ಪರಿಚಯಿಸುತ್ತಿವೆ. ಇದೇ ಕಾರಣಕ್ಕಾಗಿಯೇ ಆ್ಯಪಲ್ ತನ್ನ ಐಫೋನ್ 6 ಪ್ಲಸ್ ಮೊಬೈಲ್ 5.5 ಅಂಗುಲಕ್ಕೆ ಹಿಗ್ಗಿಸಿದೆ.

ಎಲ್ಲ ಕಂಪೆನಿಗಳು ಈಗೀಗ ಐದು, ಆರು ಅಂಗುಲ ವಿಸ್ತಾರದ ಪರದೆ ಇರುವ ಮೊಬೈಲ್‌ಗಳನ್ನೇ ಪರಿಚಯಿಸುತ್ತಿವೆ. ಇದೇ ಕಾರಣಕ್ಕಾಗಿಯೇ ಆ್ಯಪಲ್ ತನ್ನ ಐಫೋನ್ 6 ಪ್ಲಸ್ ಮೊಬೈಲ್ 5.5 ಇಂಚ್‌ಗೆ ಹೀಗಿಸಿದ್ದು. ಈ ಹಿಂದಿನ ಆ್ಯಪಲ್ ಫೋನ್‌ಗಳನ್ನು ನೋಡುವುದಾದರೆ ಯಾವುದು ಕೂಡ ೪.೫ ಅಂಗುಲಕ್ಕಿಂತ ಹೆಚ್ಚಿಗೆ ಇರಲಿಲ್ಲ.

ತುರುಸಿನ ಸ್ಪರ್ಧೆಗೆ ತಯಾರಿ
ಜಾಗತಿಕ ಮಟ್ಟದಲ್ಲಿ ಜಪಾನ್‌ನ ಸ್ಯಾಮ್‌ಸಂಗ್‌, ಚೀನಾದ ಜಿಯೊನಿ, ಅಮೆರಿಕದ ಗೂಗಲ್‌ ಸೇರಿದಂತೆ ಹತ್ತಾರು ಪ್ರಮುಖ ಕಂಪೆನಿಗಳಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತೀವ್ರ ಸ್ವರೂಪದ ಸ್ಪರ್ಧೆ ಕಾಣಬುರುತ್ತಿರುವುದರಿಂದ ಇನ್ನಷ್ಟು ಹೊಸ ಆವಿಷ್ಕಾರಗಳಲ್ಲಿ ತೊಡಗಲು ಆ್ಯಪಲ್‌ ಸಜ್ಜಾಗುತ್ತಿದೆ. ವಿವಿಧ ದೇಶಗಳಲ್ಲಿನ ನುರಿತ ಎಲೆಕ್ಟ್ರಾನಿಕ್‌  ತಜ್ಞರು, ಗ್ಯಾಡ್ಜೆಟ್‌ ವಿನ್ಯಾಸಕಾರರನ್ನು ತನ್ನತ್ತ ಸೆಳೆದುಕೊಳ್ಳಲು ಕಂಪೆನಿ ಮುಂದಾಗಿದೆ.

ಆಸ್ಟ್ರೇಲಿಯಾದ ಹೆಸರಾಂತ ವಿನ್ಯಾಸಕ ಮಾರ್ಕ್ ನ್ಯೂಸನ್ ಅವರನ್ನು ಇತ್ತಿಚೆಗೆ ಕಂಪೆನಿಗೆ ನೇಮಿಸಿಕೊಂಡಿರುವುದು ತಾಜಾ ಉದಾಹರಣೆ. ಮಾರ್ಕ್ ಈ ತಲೆಮಾರಿನ ಪ್ರಶ್ನಾತೀತ ಸಾಫ್ಟ್‌ವೇರ್ ವಿನ್ಯಾಸಕ ಎಂದೇ ಹೆಸರಾದವರು. 2005ನೇ ಸಾಲಿನ ಟೈಮ್ಸ್ ನಿಯತಕಾಲಿಕದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ನ್ಯೂಸನ್ ಹೆಸರು ಕೂಡ ಇತ್ತು ಎಂಬುದು ಉಲ್ಲೇಖಾರ್ಹ.

ಪ್ರಚಾರ, ಸಂಗೀತ ಆಮಿಷ
ಹೊಸ ಐಫೋನ್‌ 6 ಮತ್ತು 6ಪ್ಲಸ್‌ ಪ್ರಚಾರಕ್ಕೆ ಕಂಪೆನಿ ಹಣದ ಹೊಳೆ ಹರಿಸುತ್ತಿದೆ. ಹಾಲಿವುಡ್ ತಾರೆ ಜಸ್ಟಿನ್ ಟಿಂಬರ್ ಲೇಕ್ ಮತ್ತು ಜಿಮ್ಮಿ ಫಾಲನ್ ಅವರನ್ನು ಪ್ರಚಾರ ರಾಯಭಾರಿ ಆಗಿ ನೇಮಿಸಿಕೊಂಡಿದೆ.

ಈ ಇಬ್ಬರೂ ನಟಿಸಿದ 30 ಸೆಕೆಂಡ್‌ಗಳ ಜಾಹೀರಾತು ತಯಾರಾಗಿದೆ. ಹೊಸ ಸ್ಮಾರ್ಟ್ ಫೋನ್‌ನಿಂದ ಜನ ಏನೇನು ಸೌಲಭ್ಯ, ಪ್ರಯೋಜನ ಪಡೆಯಬಹುದು ಎಂಬ ಅಂಶವೂ ಜಾಹೀರಾತಿನಲ್ಲಿದೆ ಎಂದಿದೆ ಆ್ಯಪಲ್‌.

ಅಕ್ಟೋಬರ್ ಮಧ್ಯದಲ್ಲಿ ಆ್ಯಪಲ್‌ 50 ಕೋಟಿ ಹಾಡು­ಗ­ಳಿರುವ ಆಲ್ಬಂ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆ್ಯಪಲ್ ಗ್ರಾಹಕರು ಇವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್ ನಂತರ ಜಗತ್ತಿನಲ್ಲಿಯೇ ಎರಡನೇ ಅತಿ ಹೆಚ್ಚು ಸ್ಮಾರ್ಟ್‌ಫೋನ್ ತಯಾರಿಸುವ ಕಂಪೆನಿ ಎಂಬ ಹೆಗ್ಗಳಿಕೆ ಆ್ಯಪಲ್‌ನದು. ಆದರೆ, ಅದರ ದೃಷ್ಟಿ ಇರು ವುದು ನಂಬರ್ 1 ಸ್ಥಾನದ ಮೇಲೆ. ಹೊಸ ಉತ್ಪನ್ನಗಳ ಕುರಿತು ಘೋಷಣೆ ಮಾಡುತ್ತಿ ದ್ದಂತೆ ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ಆ್ಯಪಲ್ ಷೇರು ಮೌಲ್ಯವೂ ಶೇ 20ರಷ್ಟು ಏರಿಕೆ ಕಂಡಿದೆ. ಅದೇ ಪ್ರಕಾರದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆ್ಯಪಲ್‌ ಸ್ಥಾನವೂ ನಂ. 1 ಸ್ಥಾನಕ್ಕೇ ರುವುದೇ? ಹಾಗಾಗಲು ಸ್ಪರ್ಧಿಗಳು ಬಿಟ್ಟುಕೊಟ್ಟಾರೆಯೇ? ಕಾಲವೇ ಇದಕ್ಕೆ ಉತ್ತರಿಸಲಿದೆ.

10 ಪ್ರಥಮ ಸ್ಮಾರ್ಟ್‌ಫೋನ್‌
ಆ್ಯಪಲ್‌ 6 ಮತ್ತು 6 ಪ್ಲಸ್‌ ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ಟೆಲಿಗ್ರಾಫ್ ಗುರುತಿಸಿದ್ದ ವಿಶ್ವದ ಹತ್ತು ಪ್ರಥಮ ಸ್ಮಾರ್ಟ್‌ಫೋನ್‌ಗಳಿವು.
ಜಗತ್ತಿನ ಹತ್ತು ಮೊಬೈಲ್‌ ಫೋನ್‌ಗಳಲ್ಲಿ ಆ್ಯಪಲ್ ಕಂಪೆನಿಯ ಐಫೋನ್ 5ಎಸ್‌ ಮೊದಲ ಸ್ಥಾನದಲ್ಲಿದೆ. ಎ7 ಚಿಪ್ ಹೊಂದಿರುವ ಇದು 64 ಬಿಟ್ ಪ್ರೊಸೆಸರ್ ಹೊಂದಿದೆ. ಐಒಎಸ್ 7 ಒಎಸ್ ಹೊಂದಿರುವ ಕಂಟ್ರೊಲ್ ಸೆಂಟರ್, ನೋಟಿಫಿಕೇಷನ್ ಸೆಂಟ್, ಮಲ್ಟಿಟಾಸ್ಕಿಂಗ್, ಏರ್‌ಡ್ರಾಪ್, ಐಟ್ಯೂನ್ಸ್ ರೇಡಿಯೊ ಇದೆ. 4 ಅಂಗುಲ ಸ್ಪರ್ಶ ಪರದೆ, 8 ಮೆಗಾಪಿಕ್ಸಲ್ ಕ್ಯಾಮೆರಾ ಒಳಗೊಂಡಿದೆ. 158 ಗ್ರಾಂ ತೂಕವಿದೆ. 16/32/64 ಜಿಬಿಗಳಲ್ಲಿ ಲಭ್ಯ.(ಇನ್ನು ಈ ನಂ. 1 ಸ್ಥಾನವನ್ನು ಐಫೋನ್ 6, ಐಫೋನ್ 6 ಪ್ಲಸ್ ತುಂಬಲಿವೆ).

ಎರಡನೇ ಸ್ಥಾನದಲ್ಲಿ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್5 ಮಾದರಿ ಇದೆ. ಶರವೇಗದ ನೆಟವರ್ಕ್, ಎಚ್‌ಡಿಆರ್ ಪಿಕ್ಚರ್, ಉತ್ತಮ ವಿಡಿಯೊ ಗುಣಮಟ್ಟ, 5.1 ಅಂಗುಲ ವಿಸ್ತಾರದ ಸಂಪೂರ್ಣ ಹೈಡೆಫಿನಿಷನ್‌ ಸ್ಪರ್ಶಪರದೆ, ಸೂಪರ್ ಅಮೊಲೆಡ್ ಪ್ರೊಸೆಸರ್, ಕ್ವಾಡ್‌ಕ್ರೇಟ್ 2.5 ಗೀಗಾಹರ್ಟ್ಜ್, 16 ಮೆಗಾಪಿಕ್ಸಲ್ ಕ್ಯಾಮೆರಾ ಇದೆ. 145 ಗ್ರಾಂ ತೂಕ ಹೊಂದಿದೆ. ಫಿಂಗರ್‌ಪ್ರಿಂಟ್‌ ಸ್ಕ್ಯಾನ್ ಸೌಲಭ್ಯವೂ ಇದೆ.

ಮೂರನೇ ಸ್ಥಾನ ಐಫೋನ್ ೫ಸಿ ಆಕ್ರಮಿಸಿಕೊಂಡಿದೆ. 4 ಅಂಗುಲದ ರೆಟಿನಾ ಡಿಸ್ಪ್ಲೆ, 8 ಮೆಗಾಪಿಕ್ಸಲ್‌ ಐಸೈಟ್ ಕ್ಯಾಮೆರಾ, ಎ6 ಚಿಪ್, 4ಜಿ ಸ್ಪೀಡ್, ನ್ಯೂ ಫೇಸ್‌ಟೈಮ್ ಎಚ್‌ಡಿ ಕ್ಯಾಮೆರಾ, ಐಒಎಸ್ 7, 3ಜಿ ನೆಟವರ್ಕ್‌ನಲ್ಲಿ ನಿರಂತರ 10 ಗಂಟೆ ಮಾತಿಗೆ ಅವಕಾಶವಿದೆ. 132 ಗ್ರಾಂ ತೂಕ ಇದೆ.

ಎಲ್‌ಜಿಯ ಜಿ3 ಸ್ಮಾರ್ಟ್‌ಫೋನ್‌ ನಾಲ್ಕನೇ ಸ್ಥಾನದಲ್ಲಿದೆ. ಉತ್ತಮ ಬ್ಯಾಟರಿ ಕಾರಣಕ್ಕಾಗಿ ಇದು ಜನರ ಮೆಚ್ಚುಗೆ ಗಳಿಸಿದೆ. 5.5 ಅಂಗುಲ ಸ್ಪರ್ಶ ಪರದೆ, ಕ್ವಾಲಕಂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್, 13 ಮೆಗಾಪಿಕ್ಸಲ್‌ ಕ್ಯಾಮೆರಾ, 8.9 ಮಿ.ಮೀ ತೆಳು ಗಾತ್ರದ ಇದರ ತೂಕ 149 ಗ್ರಾಂ. 2ಜಿಬಿ ರ್‍ಯಾಮ್‌ ಹೊಂದಿದೆ.

ತೈವಾನ್ ಕಂಪೆನಿ ಎಚ್‌ಟಿಸಿ ಐದನೇ ಸ್ಥಾನದಲ್ಲಿದೆ. ಅಚ್ಚರಿ ಎಂದರೆ ಅಮೆರಿಕದ ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದೆ. ಪೂರ್ಣ ಲೋಹದ ಕವಚ ಒಳಗೊಂಡಿದೆ. ಸ್ಪರ್ಶಪರದೆ 5 ಅಂಗುಲವಿದೆ. ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್, 2.3ಗೀಗಾಹರ್ಟ್ಜ್‌, ಕ್ಯಾಮೆರಾ 4.1 ಅಲ್ಟ್ರಾಪಿಕ್ಸಲ್, ತೂಕ 160 ಗ್ರಾಂ.

ಕಾಗದ ಹಾಗೂ ಪೆನ್ ಬಳಕೆ ಕಡಿಮೆಯಾಗುವಂತೆ ಮಾಡುವುದಾಗಿ ಹೇಳಿಕೊಂಡಿದ್ದ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್‌ಗೆ 6ನೇ ಸ್ಥಾನ ನೀಡಲಾಗಿದೆ. ಇದರಲ್ಲಿರುವ ಪೆನ್ ವಿಂಡೊ ಸೌಕರ್ಯ ಜನರಿಗೆ ಬಹಳ ಇಷ್ಟವಾಗಿದೆ. ಸ್ಪರ್ಶಪರದೆ 5.7 ಅಂಗುಲವಿದೆ. 1.6 ಗೀಗಾಹರ್ಟ್ಜ್‌ ಕ್ವಾಡ್‌ಕೋರ್ ಪ್ರೊಸೆಸರ್, 13 ಮೆಗಾಪಿಕ್ಸಲ್ ಕ್ಯಾಮೆರಾ, 8.3 ಮಿಮಿ ತೆಳುವಾಗಿರುವ ಇದರ ತೂಕ 168 ಗ್ರಾಂನಷ್ಟಿದೆ.

ಮೊಟೊರೋಲಾದ ಮೋಟೊ ಎಕ್ಸ್ ಏಳನೇ ಸ್ಥಾನದಲ್ಲಿದೆ. ಕಾರ್ನಿಂಗ್ ಗೊರಿಲ್ಲಾ ಗಾಜು, ಅಮೊಲೆಡ್ ಡಿಸ್‌ಪ್ಲೇ ಇರುವ 4.7 ಅಂಗುಲದ ಸ್ಪರ್ಶಪರದೆ, ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್, 10 ಮೆಗಾಪಿಕ್ಸಲ್ ಕ್ಯಾಮೆರಾ.  ತೂಕ ಕೇವಲ 130 ಗ್ರಾಂ ಇದೆ. ಈ ಪಟ್ಟಿಯಲ್ಲಿಯೇ ಇದ ಹಗುರವಾದ ಫೋನ್.

ಸುಧಾರಿತ ಸಾಫ್ಟ್‌ವೇರ್ ತಂತ್ರಾಂಶದಿಂದಲೇ ಜಗತ್ತಿನಾದ್ಯಂತ ಗುರುತಿಸಿಕೊಳ್ಳುವ ಮೊಬೈಲ್ ಅಂದರೆ ನೆಕ್ಸಸ್ 5 ಗೂಗಲ್.  ಪೂರ್ಣ ಎಚ್‌ಡಿಯ 4.95 ಅಂಗುಲ ಸ್ಪರ್ಶಪರದೆ, ಗೊರಿಲ್ಲಾ ಗ್ಲಾಸ್, ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್, 8 ಮೆಗಾಪಿಕ್ಸಲ್ ಕ್ಯಾಮೆರಾ ಹೊಂದಿದೆ. ತೂಕ 130 ಗ್ರಾಂ ಇದೆ.
ನೋಕಿಯಾ ಲುಮಿಯಾ 1570 ಶ್ರೇಣಿಯ ವಿಂಡೋಸ್ ಫೋನ್ 6 ಅಂಗುಲ ವಿಸ್ತಾರದ ಸ್ಕ್ರೀನ್‌ನಿಂದಲೇ ಜನರ ಗಮನ ಸೆಳೆದಿದೆ. ಕ್ವಾಲಕಂ ಸ್ನ್ಯಾಪ್‌ಡ್ರಾಗನ್‌ 800 ಕ್ವಾಡ್‌ಕೊ ಪ್ರೊಸೆಸರ್, 2.2 ಗಿಗಹರ್ಟ್ಜ್‌, 2ಜಿಬಿ ರ್‍ಯಾಮ್‌ ಇದೆ. ತೂಕ ತುಸು (209 ಗ್ರಾಂ) ಹೆಚ್ಚಿದೆ.

ಪಟ್ಟಿಯಲ್ಲಿ ಕೊನೆ ಸ್ಥಾನ ಸೋನಿ ಕಂಪೆನಿಯ ಎಕ್ಸ್‌ಪೀರಿಯಾ ಝಡ್ 1ಗೆ. ಬಹಳ ಸ್ಟ್ರೈಲಿಷ್‌ ಆಗಿದೆ. ಸಾಕಷ್ಟು ಉತ್ತಮ ಸೌಕರ್ಯಗಳಿವೆ. ಬ್ಯಾಟರಿ ಉತ್ತಮವಾಗಿದೆ. 4.3 ಅಂಗುಲ ಸ್ಪರ್ಶಪರದೆ. ಕ್ವಾಲಕಂ ಸ್ನ್ಯಾಪ್‌ಡ್ರಾಗನ್‌ 800 ಪ್ರೊಸೆಸರ್, 16 ಜಿಬಿ ಕ್ಯಾಮೆರಾ ಇರುವ ಇದರ ತೂಕ 137 ಗ್ರಾಂ ಇದೆ.

ಗ್ರಾಹಕರ ಕೈಗೆ ಯಾವಾಗ?
ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಇದೇ ಶುಕ್ರವಾರ (ಸೆ. 19) ಅಮೆರಿಕಾ, ಕೆನಡಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಹಾಂಕಾಂಗ್‌, ಜಪಾನ್, ಪ್ಯೂರ್ಟೊರಿಕಾ ಮತ್ತು ಸಿಂಗಪುರ ಮಾರುಕಟ್ಟೆ ಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ.

ಭಾರತದ ಗ್ರಾಹಕರು ಮಾತ್ರ ಇನ್ನೂ ಒಂದು ತಿಂಗಳು ಕಾಯಬೇಕು. ಅಕ್ಟೋಬರ್ 17ರಂದು ಐಫೋನ್‌ 6 ಮತ್ತು 6ಪ್ಲಸ್‌ ಭಾರತದಲ್ಲಿ ಸಿಗಲಿವೆ. 2015ರಲ್ಲಿ 115 ದೇಶಗಳ ಮಾರುಕಟ್ಟೆಗಳಲ್ಲಿ ಲಭ್ಯ ಇರಲಿವೆ.

ಸೆ. 12ರಿಂದಲೇ ಐಫೋನ್‌ ಹೊಸ ಸರಣಿ ಫೋನ್‌ಗ ಖರೀದಿಗೆ ಬುಕಿಂಗ್ ಆರಂಭ ಗೊಂಡಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿ ಗ್ರಾಹಕರ ದಟ್ಟಣೆಯಿಂದಾಗಿ ಆ್ಯಪಲ್ ಸ್ಟೋರ್ ಆನ್‌ಲೈನ್‌ ಮಾರಾಟದ ಸರ್ವರ್‌ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT