ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಫೋನ್ ಗೇಮ್‌ಗಳಿಂದಲೂ ಮಕ್ಕಳಿಗೆ ಶಿಕ್ಷಣ!

Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ದೇಶದಲ್ಲಿ ದಿನೇದಿನೇ ಸ್ಮಾರ್ಟ್ ಫೋನ್‌ಗಳು ಅಗ್ಗವಾಗುತ್ತಿವೆ. ಒಂದೆರಡು ವರ್ಷಗಳ ಹಿಂದೆ ಕೇವಲ ಹೈಟೆಕ್ ಮಂದಿಗಳ ಕೈಗೆ ದಕ್ಕುತ್ತಿದ್ದ ಇವು ಇದೀಗ ಗ್ರಾಮೀಣ ಜನರ ಕೈಗೂ ಸುಲಭದಲ್ಲಿ ಎಟುಕುವಂತಾಗಿದೆ. ಯುವಜನತೆಯಂತೂ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೆ ಇನ್ನಾವ ಫೋನ್ ಖರೀದಿಯ ಕಡೆಗೂ ಮುಖ ಮಾಡುತ್ತಿಲ್ಲ.

ಇದರಿಂದ ಸಹಜವಾಗಿಯೇ ದೇಶದಲ್ಲಿ ಸ್ಮಾರ್ಟ್ ಫೋನ್ ಗೇಮ್‌ಗಳು ಪ್ರವಾಹೋಪಾದಿಯಲ್ಲಿ ದಾಂಗುಡಿ ಇಡುತ್ತಿವೆ. ಕೇವಲ ಯುವಕರು ಮಾತ್ರವಲ್ಲ ಮಕ್ಕಳೂ ಇದರ ಚಟಕ್ಕೆ ಬೀಳುತ್ತಿದ್ದಾರೆ. ಮೊದಮೊದಲಿಗೆ ಕೇವಲ ಮನರಂಜನೆಗಾಗಿ ಸೀಮಿತ ಎನಿಸುತ್ತಿದ್ದ ಈ ಆಟಗಳು ಕ್ರಮೇಣ ವ್ಯಸನವಾಗಿ ಪರಿಣಿಸುತ್ತಿವೆ.

‘ವಿಸರ್ವ್’ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ದಿನಕ್ಕೆ ಕನಿಷ್ಠ 169 ನಿಮಿಷ ಭಾರತೀಯ ವ್ಯಕ್ತಿ ಸ್ಮಾರ್ಟ್ ಫೋನ್‌ನಲ್ಲಿ ಗೇಮಿಂಗ್‌ನಲ್ಲಿ ತೊಡಗಿರುತ್ತಾನೆ ಎಂದು ಗೊತ್ತಾಗಿದೆ. 2014ಕ್ಕೆ ಹೋಲಿಸಿದರೆ ಈ ವರ್ಷ ಈ ಕ್ಷೇತ್ರದಲ್ಲಿ ಗೇಮಿಂಗ್‌ ಕಂಪೆನಿಗಳಿಗೆ ಬರುವ ಆದಾಯದ ಪ್ರಮಾಣ ಒಂದೂವರೆ ಪಟ್ಟು ಅಧಿಕವಾಗಲಿದೆ ಎಂಬ ಅಂದಾಜಿದೆ.

‘ನ್ಯೂ ಜ್ಹೂ’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿವರ್ಷ ಸರಾಸರಿ ಶೇ 42ರಷ್ಟು ಪ್ರಗತಿಯನ್ನು ಗೇಮಿಂಗ್‌ ಜೋನ್‌ ಸಾಧಿಸುತ್ತಿದೆ. ಸದ್ಯ ಇದರ ಪ್ರಮಾಣ 2500 ಕೋಟಿ ಡಾಲರ್‌ಗಳಷ್ಟು (₹1.64 ಲಕ್ಷ ಕೋಟಿಗಳಷ್ಟು) ಇದೆ ಎಂದು ಅಂದಾಜು ಮಾಡಲಾಗಿದೆ.

ಮಕ್ಕಳು, ಹದಿಹರೆಯದವರ ಕೈಗೆ ಸ್ಮಾರ್ಟ್‌ಫೋನ್‌ ಸಿಗುತ್ತಿದ್ದಂತೆ ಅವರ ಆದ್ಯತೆ ಕೇವಲ ಗೇಮಿಂಗ್‌ ಆ್ಯಪ್‌ಗೆ ಎಂಬುದು ಗೊತ್ತಾಗುತ್ತದೆ. ‘ಯಾಹೂ’ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಕಳೆದ ವರ್ಷ ಏಷ್ಯಾದಲ್ಲಿ ಸ್ಮಾರ್ಟ್ ಫೋನ್ ಗೇಮ್‌ಗಳ ಪ್ರಗತಿ ಶೇ 77ರಷ್ಟಿದ್ದರೆ ಭಾರತದಲ್ಲಿ ಮಾತ್ರ ಶೇ 100ರಷ್ಟು ಕಂಡು ಬಂದಿದೆ.

ಕೆಲಸ ಮುಗಿಸಿ ಮನೆಗೆ ಬರುವ ತಂದೆ, ತಾಯಿಯರನ್ನು ಚಾತಕ ಪಕ್ಷಿಗಳಂತೆ ಕಾಯುವ ಮಕ್ಕಳು ಅವರು ಬಂದ ಕೂಡಲೇ ಅವರ ಕೈಗಳಿಂದ ಸ್ಮಾರ್ಟ್ ಫೋನ್‌ ಕಸಿದುಕೊಳ್ಳುವುದನ್ನು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಕಾಣಬಹುದು. ‘ಮಗು ಆಟವಾಡಿಕೊಳ್ಳಲಿ ಬಿಡು’ ಎಂದು ತಾಯಿ, ತಂದೆ ಇದನ್ನು ಉದಾಸೀನ ಮಾಡಬಹುದು. ಆದರೆ, ಇದು ಮಿತಿಮೀರಿದರೆ ಕ್ರಮೇಣ ವ್ಯಸನವಾಗಿಬಿಡುತ್ತದೆ.

ಮಕ್ಕಳು ಆಡುವ ರೇಸ್ ಗೇಮ್‌ಗಳಂತೂ ಒಂದೆಡೆ ಮಕ್ಕಳಿಗೂ ಅತೀವ ಖುಷಿ ನೀಡಿದರೆ, ಮತ್ತೊಂದೆಡೆ ಭವಿಷ್ಯದಲ್ಲಿ ವಾಹನ ಚಾಲನೆ ಮಾಡುವ ಅವರ ಮನಸ್ಸಿಗೆ ಅತಿ ವೇಗದ ಹುಚ್ಚನ್ನು ಹಿಡಿಸುತ್ತದೆ. ಮನೆ ಅಥವಾ ರಚನೆಗಳನ್ನು ಧ್ವಂಸ ಮಾಡುವ ಮತ್ತೊಂದು ಆಟವಂತೂ ಮನಸ್ಸಿಗೆ ಕಟ್ಟುವ ಸಂಸ್ಕೃತಿಯನ್ನು ಹೇಳಿಕೊಡದೇ ಕೇವಲ ಧ್ವಂಸಗೊಳಿಸುವ ಇಚ್ಛೆಯನ್ನು ನೂರ್ಮಡಿಗೊಳಿಸುತ್ತದೆ. ಈ ರೀತಿ ಅನೇಕ ಗೇಮ್‌ಗಳು ಮಕ್ಕಳ ಹಾಗೂ ಯುವಕರ ನಡವಳಿಕೆ, ಮನೋಭಾವ ಬದಲಿಸುವ ತಾಕತ್ತು ಪಡೆದಿವೆ ಎಂಬುದು ಅನೇಕ ಮನೋವಿಜ್ಞಾನಿಗಳ ಅಭಿಪ್ರಾಯ.

ಕೇವಲ ಸ್ಮಾರ್ಟ್ ಫೋನ್ ಗೇಮ್‌ಗಳ ನಕರಾತ್ಮಕ ಮುಖಗಳನ್ನಷ್ಟೇ ಕಾಣುತ್ತಿರುವಾಗ ಅದರ ಸಕರಾತ್ಮಕ ಮುಖವೊಂದು ಕಾಣತೊಡಗಿದೆ. ‘ಪ್ಲೇ ಎನ್ ಲರ್ನ್’ ಎಂಬ ಮಕ್ಕಳ ಶೈಕ್ಷಣಿಕ ಸಂಸ್ಥೆ ಹಾಗೂ ‘ಕ್ವಾಲಕಂ ವೈರ್‌ಲೆಸ್ ರೀಚ್’ ಎಂಬ ಸಂಸ್ಥೆ ದೇಶದಲ್ಲಿ ನಡೆಸಿದ ಅಧ್ಯಯನ ಪ್ರಕಾರ ಮಕ್ಕಳಿಗೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್‍ ಗೇಮ್‌ಗಳ ಆಧಾರಿತ ಶಿಕ್ಷಣ ನೀಡುವುದರಿಂದ ಅವರ ಸಂಖ್ಯಾಜ್ಞಾನ ಹಾಗೂ ಸಾಕ್ಷರತೆ ಇಮ್ಮಡಿಯಾಗುತ್ತದೆ ಎಂದು ಗೊತ್ತಾಗಿದೆ.

ಸಂಸ್ಥೆಯು ಮೊದಲಿಗೆ ಪ್ರಾಥಮಿಕ ಹಂತದ ಮಕ್ಕಳಿಗಾಗಿ 25 ಮನರಂಜನಾ ಡಿಜಿಟಲ್ ಗೇಮ್‌ಗಳನ್ನು ರೂಪಿಸಿತು. ದೆಹಲಿ, ಬಿಹಾರದ ಪಟ್ನಾ ಹಾಗೂ ವೈಶಾಲಿ ಸೇರಿದಂತೆ ವಿವಿಧ ನಗರಗಳ 57ಕ್ಕೂ ಅಧಿಕ ಶಾಲೆಗಳ 4 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಇದನ್ನು ನೀಡಿತು.

ಒಂದನೇ ತರಗತಿಯಿಂದ 2ನೇ ತರಗತಿವರೆಗಿನ ಮಕ್ಕಳು ಒಂದೂವರೆ ಪಟ್ಟು ಅಧಿಕ ಪ್ರಗತಿಯನ್ನು ಭಾಷಾ ಜ್ಞಾನದಲ್ಲಿ ತೋರಿಸಿದರು. ಗೇಮ್ ಆಧಾರಿತ ಶಿಕ್ಷಣ ಪಡೆಯದವರ ಮಟ್ಟ ಹಾಗೆಯೇ ಇತ್ತು. ಸಂಖ್ಯಾ ಜ್ಞಾನ ದಲ್ಲೂ ಬಹಳಷ್ಟು ಸುಧಾರಣೆ ಕಂಡು ಬಂದಿತು. ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್ ಫೋನ್‌ಗಳಲ್ಲಿ ಆಟ ಆಡಬಹುದು ಎಂಬ ಒಂದೇ ಕಾರಣಕ್ಕೆ ಮಕ್ಕಳು ಶಾಲೆಗೆ ತಪ್ಪದೇ ಬರುತ್ತಿದ್ದರು.

ಎಲ್ಲಕ್ಕಿಂತ ಮುಖ್ಯ ವಾದ ಸಂಗತಿ ಎಂದರೆ ಮಕ್ಕಳ ಹಾಜರಾತಿ ಪ್ರಮಾಣದಲ್ಲೂ ಏರಿಕೆ ಕಾಣಲಾಯಿತು. ಈ ಅಧ್ಯಯನದ ಪ್ರಕಾರ ಮಕ್ಕಳಿಗೆ ಡಿಜಿಟಲ್ ಆಧಾರಿತ ಶಿಕ್ಷಣವನ್ನು ಗೇಮ್‌ಗಳ ಮೂಲಕ ನೀಡಿದರೆ ಹೆಚ್ಚಿನ ಪ್ರಗತಿ ಸಾಧ್ಯ ಎಂದು ತಿಳಿಯುತ್ತದೆ. ಹಾಗೆ ನೋಡಿದರೆ, ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್‌ಗಳ ಕಣಜ ಎಂದೇ ಹೆಸರಾದ ‘ಗೂಗಲ್ ಪ್ಲೇ ಸ್ಟೋರ್‌’ನಲ್ಲಿ ಮಕ್ಕಳ ಕಲಿಕೆಗೆ ಬೇಕಾದ ನೂರಾರು ಆ್ಯಪ್‌ಗಳಿವೆ.

ಇಂಗ್ಲಿಷ್ ವರ್ಣಮಾಲೆ, ಅಂಕಿ ಸಂಖ್ಯೆಗಳು, ಪ್ರಾಣಿ ಪಕ್ಷಿಗಳ ಹೆಸರು, ಚಿತ್ರಗಳು ಮಾತ್ರವಲ್ಲ ಕನ್ನಡ ವರ್ಣಮಾಲೆಯ ಅಕ್ಷರಗಳು, ಕಾಗುಣಿತಗಳ ಆ್ಯಪ್‌ಗಳೂ ಇವೆ. ಸ್ಲೇಟಿನ ಮೇಲೆ ಬೆರಳಿನಿಂದ ತಿದ್ದುವಂತಹ ಸೌಲಭ್ಯ ಇರುವ ಆ್ಯಪ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಇವುಗಳನ್ನು ಹುಡುಕಿ ಮಕ್ಕಳಿಗೆ ಇವುಗಳನ್ನು ಪರಿಚಯಿಸುವ ಮನಸ್ಸು ಮಾತ್ರ ಎಲ್ಲರಲ್ಲೂ ಇರಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT