ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿ ಕನಸು ನನಸಿಗೆ ‘ಡ್ರೀಮ್ ಲ್ಯಾಬ್’

ವಿಜ್ಞಾನ ಲೋಕದಿಂದ
Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಇದು ಸ್ಮಾರ್ಟ್ ಯುಗ. ಸ್ಮಾರ್ಟ್ ಫೋನ್‌ಗಳು ದಿನೇ ದಿನೇ ಹೆಚ್ಚು ಜನರ ಕೈ ಸೇರುತ್ತಿವೆ. ಹಾಗೆಯೇ ದಿನ ಬಳಕೆಯ ಇತರೆ ಸಾಧನಗಳಾದ ದೂರದರ್ಶನ, ಬಟ್ಟೆ ತೊಳೆಯುವ ಯಂತ್ರ, ವಾತಾನು ಕೂಲಿಗಳು (ಏರ್ ಕಂಡಿಷನರ್) ಕೂಡ ‘ಸ್ಮಾರ್ಟ್’ ಆಗುತ್ತಿವೆ.

ಸೆನ್ಸರ್ ಎಂಬ ಎಲೆಕ್ಟ್ರಾನಿಕ್ ಸಾಧನ ಮತ್ತು ಇಂಟರ್ನೆಟ್‌ಗಳ ಸಹಾಯದಿಂದ ಈ ವಸ್ತುಗಳು ತಮ್ಮ ತಮ್ಮಲ್ಲೇ  ‘ಮಾತನಾಡಿಕೊಳ್ಳಬಹುದು’.  2020ರ ಹೊತ್ತಿಗೆ ಪ್ರಪಂಚದಲ್ಲಿ ಪರಸ್ಪರ ಸಂಪರ್ಕದಲ್ಲಿರುವ 8,000 ಕೋಟಿ ವಸ್ತುಗಳಿರುತ್ತವೆ ಎನ್ನುತ್ತಾರೆ ತಂತ್ರಜ್ಞಾನ ಪಂಡಿತರು.

ಈ ರೀತಿ ಪರಸ್ಪರ ಸಂಪರ್ಕದಲ್ಲಿರುವ ವಸ್ತುಗಳ ಸಮೂಹವನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಇಂಟರ್ನೆಟ್ ಆಫ್ ಥಿಂಗ್ಸ್’ ಎಂದು ಕರೆಯುತ್ತಾರೆ. ಇದು ಸಾರಿಗೆ, ಆರೋಗ್ಯ ಸೇವೆ, ನೀರು ಸರಬರಾಜು, ಕೈಗಾರಿಕೋದ್ಯಮ ಮತ್ತು ಇತರೆ ವ್ಯವಸ್ಥೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು.

ಹಾಗೆ ನೋಡಿದರೆ ‘ಇಂಟರ್ನೆಟ್ ಆಫ್ ಥಿಂಗ್ಸ್’ ಇಲ್ಲದೆ ಭಾರತ ಸರ್ಕಾರದ ಕನಸಾದ ‘ಸ್ಮಾರ್ಟ್ ಸಿಟಿ’ಗಳನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಸಂಶೋಧನೆಯಲ್ಲಿ ತೊಡಗಿದ್ದಾರೆ ಐಐಎಸ್ಸಿಯ, ‘ಕಂಪ್ಯುಟೆಶನಲ್ ಮತ್ತು ಡಾಟಾ ಸೈನ್ಸ್’ ವಿಭಾಗದ  ಪ್ರೊ. ಯೋಗೇಶ್ ಸಿಂಹನ್.

ಇಂಟರ್ನೆಟ್ ಆಫ್ ಥಿಂಗ್ಸ್ ಅಂದರೆ ಪರಸ್ಪರ ಸಂಬಂಧದಲ್ಲಿರುವ ಭೌತಿಕ ವಸ್ತುಗಳ ಜಾಲ. ಉದಾಹರಣೆಗೆ, ನೀವು ನಿಮ್ಮ ಫೋನ್‌ನಿಂದ ನಿಮ್ಮ ಸ್ನೇಹಿತರ ಫೋನ್‌ಗೆ ಹಾಡನ್ನು ಕಳಿಸುತ್ತಿದ್ದೀರಿ ಅಂದುಕೊಳ್ಳೋಣ. ಹಾಡು ಇಲ್ಲಿಂದ ಅಲ್ಲಿಗೆ ಹೋಗುವಾಗ ನಿಮ್ಮ ಫೋನ್‌ಗಳು ಪರಸ್ಪರ ಸಂಪರ್ಕದಲ್ಲಿರುತ್ತವೆ ತಾನೇ? ಇದು ಇಂಟರ್ನೆಟ್ ಆಫ್ ಥಿಂಗ್ಸ್‌ಗೆ ಕೊಡಬಹುದಾದಂತಹ ಅತ್ಯಂತ ಸರಳ ಉದಾಹರಣೆ.

ಇಲ್ಲಿ ‘ಥಿಂಗ್’ ಅಂದರೆ ಹೃದಯ ಕಸಿ ಮಾಡಿಸಿ ಕೊಂಡಿರುವ ವ್ಯಕ್ತಿಯಾಗಿರಬಹುದು, ಅಥವಾ ಒಂದು ಇಲೆಕ್ಟ್ರಾನಿಕ್ ಚಿಪ್ ಅಳವಡಿಸಿರುವ ಹಸುವಾಗಿರಬಹುದು, ಕಾರಿನ ಚಕ್ರದಲ್ಲಿ ಗಾಳಿ ಕಡಿಮೆಯಿದೆ ಎಂದು ಸಾರಥಿಗೆ ಸಂದೇಶ ಕೊಡುವ ಸಾಧನ ಆಗಿರಬಹುದು - ಹೀಗೆ ಈ ತಂತ್ರಜ್ಞಾನದ ಸಾಧ್ಯತೆಗಳು ಹತ್ತು ಹಲವು. ಆ ರೀತಿ ತಂತ್ರಜ್ಞಾನಗಳನ್ನು ಸಾಮಾನ್ಯರ ದೈನಂದಿನ ಜೀವನವನ್ನು ಸುಧಾರಿಸಲು ಬಳಸಿಕೊಳ್ಳುವ ನಗರವೇ ‘ಸ್ಮಾರ್ಟ್ ಸಿಟಿ’.

ಬೇರೆ ದೇಶಗಳಲ್ಲಿ ಈಗಾಗಲೇ ಕೆಲವು ನಗರಗಳು ತಕ್ಕ ಮಟ್ಟಿಗೆ ‘ಸ್ಮಾರ್ಟ್’ ಆಗಿಬಿಟ್ಟಿವೆ. ನೆದರ್ಲೆಂಡ್‌ ದೇಶದ ಆಮ್‌ಸ್ಟರ್‌ಡ್ಯಾಮ್‌, ಸ್ಪೇನ್‌ನ ಬಾರ್ಸಿಲೋನಾ, ಸ್ವೀಡನ್‌ನ ಸ್ಟಾಕ್‌ಹೋಂ ಕೆಲವು ಉದಾಹರಣೆಗಳು. ಆದರೆ ಅವುಗಳು ತಂತ್ರಜ್ಞಾನದಲ್ಲಿ ಈಗಾಗಲೇ ಅಭಿವೃಧ್ಧಿ ಹೊಂದಿರುವ ದೇಶಗಳು.

ಭಾರತದಂತಹ ಅಭಿವೃದ್ಧಿ ಪಥದಲ್ಲಿರುವ ದೇಶಗಳಲ್ಲಿನ ನಗರಗಳನ್ನು ‘ಸ್ಮಾರ್ಟ್’ ಮಾಡುವುದು ಸವಾಲಿನ ಕೆಲಸವೇ. ಮೊದಲನೆಯದಾಗಿ ನಮ್ಮಲ್ಲಿ ಮೂಲಸೌಕರ್ಯಗಳೇ ಸಮರ್ಪಕವಾಗಿಲ್ಲ. ಹಾಗೆಯೇ, ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರ ಕೈಗೆಟುಕದ ಇಂಟರ್ನೆಟ್ ಇವುಗಳೂ ಸ್ಮಾರ್ಟ್ ಸಿಟಿಗಳ ನಿರ್ಮಾಣದ ಹಾದಿಯಲ್ಲಿರುವ ಸವಾಲುಗಳೇ.

ಈ ಸವಾಲುಗಳ ನಡುವೆಯೂ ಸ್ಮಾರ್ಟ್ ಭಾರತದ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ ಪ್ರೊ. ಯೋಗೇಶ್ ಸಿಂಹನ್. ‘ಮೊಬೈಲ್ ಕ್ಷೇತ್ರದಲ್ಲಿ ನಾವು ಕೇವಲ ಹತ್ತು ವರ್ಷಗಳಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಸಾಧಿಸಿದೆವು. ಇದರಿಂದ ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸ್ವೀಕರಿಸುವ ಛಾತಿ ಇದೆ ಎಂಬುದಂತೂ ದಿಟ. ನಾವೀಗ ಕೆಲವು ಮೂಲಭೂತ ತಾಂತ್ರಿಕ ಸವಾಲುಗಳನ್ನು ಬಗೆಹರಿಸಲು ಪ್ರಯತ್ನಿಸಬೇಕಷ್ಟೆ’ ಎನ್ನುತ್ತಾರೆ ಅವರು.

ಯೋಗೇಶ್ ಸಿಂಹನ್ ಅವರ ಪ್ರಯೋಗಾಲಯ ‘ಡ್ರೀಮ್ ಲ್ಯಾಬ್‌’ನಲ್ಲಿ ಈಗಾಗಲೇ ಒಂದು ಚಿಕ್ಕ ಸ್ಮಾರ್ಟ್ ಸಿಟಿ ತಲೆ ಎತ್ತುತ್ತಿದೆ. ಸಿಂಹನ್ ಮತ್ತು ಅವರ ವಿದ್ಯಾರ್ಥಿಗಳು ಐಐಎಸ್ಸಿ ಆವರಣದಲ್ಲಿ ‘ಸ್ಮಾರ್ಟ್’ ಆಗಿರುವ ನೀರು ನಿರ್ವಹಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗೆಯೇ, ಮಳೆ ನೀರು ಸಂಗ್ರಹಕ್ಕೂ ಹೊಸ ತಂತ್ರಜ್ಞಾನದ ಅಳವಡಿಕೆ ಪ್ರಯತ್ನಗಳು ನಡೆಯುತ್ತಿವೆ.

ಸಾಮಾನ್ಯವಾಗಿ ಇಂತಹ ಹಲವು ಪ್ರಯತ್ನಗಳು ಶೈಕ್ಷಣಿಕ ಸಂಸ್ಥೆಗಳಿಂದ ಆಚೆ ಬಂದು ಸರ್ಕಾರ ಮತ್ತು ಜನಸಾಮಾನ್ಯರನ್ನು ತಲುಪುವುದು ಅಪರೂಪ. ಆದರೆ, ಸಿಂಹನ್ ಅವರು ಪ್ರಾರಂಭದಿಂದಲೇ ಸರ್ಕಾರ ಮತ್ತು ಉದ್ದಿಮೆಗಳನ್ನು ತಮ್ಮೊಡನೆ ಸೇರಿಸಿಕೊಂಡಿರುವುದು ವಿಶೇಷ.

ಡ್ರೀಮ್ ಲ್ಯಾಬ್‌ನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮಳೆ ನೀರು ಸಂಗ್ರಕ್ಕೆ ಒಂದು ಆ್ಯಪ್ ಮಾಡಿರುವುದು ಸಿಂಹನ್ ಅವರ ಸಂಶೋಧನಾ ಮಾರ್ಗವು ಫಲ ನೀಡಬಲ್ಲದು ಎಂಬುದಕ್ಕೆ ಸಾಕ್ಷಿ.

‘ನಮ್ಮ ದೇಶದಲ್ಲಿ ಮಾತ್ರ ಇರುವ ಸಮಸ್ಯೆಗಳನ್ನು ಬಗೆಹರಿಸಲು ನಾವು ನಮಗೆ ಸಮಂಜಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕೆ ಸಾಮಾನ್ಯ ಜನರನ್ನು ಸಂಶೋಧನೆಯ ಮೊದಲ ಹಂತದಿಂದಲೇ ಭಾಗಿ ಮಾಡಿಕೊಳ್ಳುವುದು ಒಳ್ಳೆಯದು.

ಉದಾಹರಣೆಗೆ, ನಮ್ಮ ಸ್ಮಾರ್ಟ್ ಆವರಣ ಸಂಶೋಧನೆಯಲ್ಲಿ ಜನರು ತಮ್ಮ ನೀರಿನ ಬಳಕೆಯ ಬಗ್ಗೆ ಮಾಹಿತಿ ನೀಡಲೆಂದೇ ಒಂದು ಮೊಬೈಲ್ ಆ್ಯಪ್ ಅನ್ನು ತಯಾರಿಸಿದ್ದೇವೆ. ಈ ರೀತಿ ನೂರಾರು ಜನರಿಂದ ಪಡೆದ ನೀರಿನ ಬಳಕೆಯ ಮಾಹಿತಿಯ ಆಧಾರದ ಮೇಲೆ ನಾವು ಒಂದು ಉತ್ತಮ ಜಲ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸಿಂಹನ್.

ಸ್ಮಾರ್ಟ್ ಸಿಟಿಗಳನ್ನು ಕಟ್ಟುವುದು ಒಂದು ತಾಂತ್ರಿಕ ಸವಾಲು.  ಇಂತಹ ಸವಾಲುಗಳನ್ನು ಎದುರಿಸಲು ಐಐಎಸ್ಸಿಯ ಡ್ರೀಮ್ ಲ್ಯಾಬ್‌ನಂತಹ ಪ್ರಯೋಗಾಲಯಗಳು ಸಿದ್ಧವಾಗಿವೆ.
-ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT