ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಷೆಗಳಲ್ಲಿ ಸೋಲಿಗರ ಜೇನು

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೌಲ್ಯವರ್ಧನೆಯಿಂದಾಗಿ ಚಾಮ­ರಾಜ­­­ನಗರ ಜಿಲ್ಲೆಯ ಸೋಲಿಗರ ಜೇನು ತುಪ್ಪಕ್ಕೆ ಈಗ ಬಂಪರ್‌ ಬೆಲೆ ಸಿಗಲಾರಂಭಿಸಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ  ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಹಾ­ಯ­ದಿಂದ ನೆರವಿ­ನಿಂದ ಈಗ ಜೇನನ್ನು ಸ್ಯಾಷೆ­ಗಳಲ್ಲಿ ಮಾರಾಟ ಮಾಡುವ ಕೆಲಸ ಶುರುವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ‘ಕೃಷಿ ಮೇಳ–2014’­ರಲ್ಲಿ ಜೇನು ಸ್ಯಾಷೆ­ಗ­ಳನ್ನು ಪರಿಚಯಿಸಲಾಯಿತು.

10 ಗ್ರಾಂ ಸ್ಯಾಷೆ ಬೆಲೆ ₨ 5. ಮೂರು ದಿನಗಳಲ್ಲಿ ಮಾರಾಟದಿಂದ ₨ 10 ಸಾವಿರ ಆದಾಯ ಬಂದಿದೆ.  ಸೋಲಿಗರು ಜೇನು ತೆಗೆ­ಯು­ವುದ­ರಲ್ಲಿ ಪರಿಣಿತರು. ಅವರು ಬಂದಷ್ಟು ಬೆಲೆಗೆ ಅದನ್ನು ಮಾರಾಟ ಮಾಡು­ತ್ತಿ­ದ್ದರು. ಹೆಚ್ಚಿನ ತೇವಾಂಶ ಉಳಿದು­ಕೊಳ್ಳು­ತ್ತಿದ್ದ ಕಾರಣ ಅದಕ್ಕೆ ಒಳ್ಳೆಯ ಬೆಲೆಯೂ ಸಿಗುತ್ತಿರಲಿಲ್ಲ.

ಇದನ್ನು ಗಮನಿಸಿದ ಕೃಷಿ ವಿವಿಯು ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ ವರ್ಷ ಜೇನಿನ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಿತು. ಇದಕ್ಕೆ ರುಡ್‌ಸೆಟ್ ನೆರವು ಸಿಕ್ಕಿತು. ತಲಾ 15 ಸದಸ್ಯರಂತೆ ಸೋಲಿ­ಗರ ಗುಂಪುಗಳನ್ನು ರಚಿಸಿತು. ಅವರಿಗೆ ಜೇನು ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಿತು.

‘ಸೋಲಿಗರು ಸಾಂಪ್ರದಾಯಿಕವಾಗಿ ಜೇನು ತೆಗೆಯುತ್ತಿದ್ದರು. ಒಂದು ಕೆ.ಜಿ. ಜೇನನ್ನು ₨200ಕ್ಕೆ ಮಾರಾಟ ಮಾಡುತ್ತಿದ್ದರು. ಈಗ ಅವರಿಗೆ ಕೆ.ಜಿ.ಗೆ ₨300 ಸಿಗುತ್ತಿದೆ. ಸಂಸ್ಕರಣಾ ಘಟಕ­ದಲ್ಲಿ ಜೇನಿನ ತೇವಾಂಶ ಪ್ರಮಾಣವನ್ನು ಶೇ 24ಕ್ಕೆ ಇಳಿಸಿ ಪ್ಯಾಕಿಂಗ್‌ ಮಾಡ­ಲಾ­ಗುತ್ತಿದೆ. ಇದರಿಂದ ಜೇನಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಅಲ್ಲದೆ ಗುಣಮಟ್ಟ ಹೆಚ್ಚಾಗಿದೆ. ಸೋಲಿಗರಿಗೂ ಅನುಕೂಲ­ವಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ ಚಂದ್ರಕಲಾ ಹೇಳುತ್ತಾರೆ.

ಅರಿಶಿನದ ಮೌಲ್ಯವರ್ಧನೆ:  ಚಾಮ­ರಾಜ­ನಗರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣ­ದಲ್ಲಿ ಬೆಳೆಯುವ ಅರಿಶಿನ ಬೆಳೆಯ ಮೌಲ್ಯವರ್ಧನೆ ಮಾಡುವ ಕಾರ್ಯಕ್ಕೂ ಬೆಂಗಳೂರು ಕೃಷಿ ವಿಶ್ವ­ವಿದ್ಯಾ­ಲಯ ಮುಂದಾಗಿದೆ. ಈಗ ಜಿಲ್ಲೆಯ ಅರಿಶಿನ ಬೆಳೆಗೆ ತಮಿಳು­ನಾಡು ಪ್ರಮುಖ ಮಾರುಕಟ್ಟೆ. ಮಧ್ಯ­ವರ್ತಿಗಳು ಕಡಿಮೆ ಬೆಲೆಗೆ ರೈತ­ರಿಂದ ಅರಿಶಿನ ಖರೀದಿ ಮಾಡಿ ತಮಿಳು­ನಾಡಿನ ಈರೋಡು ಮಾರುಕಟ್ಟೆಯಲ್ಲಿ ಮಾರು­ತ್ತಿದ್ದರು.

ರೈತರಿಗೆ ನ್ಯಾಯಯುತ ಬೆಲೆ ದೊರಕುವಂತೆ ಮಾಡಲು ವಿವಿಯ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ರೈತರ ಸಂಘ ರಚಿಸಿ ಮೌಲ್ಯವರ್ಧನೆಯ ಕಾರ್ಯ ಆರಂಭವಾಗಿದೆ. ಈಗ ಒಂದು ಸಂಘ ರಚಿಸಲಾಗಿದ್ದು, 25 ರೈತ ಸದಸ್ಯರು ಇದ್ದಾರೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋ­ಧನಾ ಸಂಸ್ಥೆಯ ತಾಂತ್ರಿಕ ಸಹ­ಕಾರದ ನೆರವಿನಿಂದ ಅರಿಶಿನವನ್ನು ಒಣ­ಗಿಸಿ ಪುಡಿ ಮಾಡಿ ಪೌಡರ್‌ ರೂಪ­ದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಪ್ರಾಯೋಗಿಕವಾಗಿ ಈ ಕಾರ್ಯ ಮಾಡ­ಲಾ­ಗುತ್ತಿದೆ. ಕೃಷಿ ಮೇಳದಲ್ಲಿ ಪೌಡರ್‌­ಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ರೈತರ ಜಮೀನಿನಲ್ಲೇ ₨1 ಕೋಟಿ ವೆಚ್ಚ­ದಲ್ಲಿ ಅರಿಶಿನ ಸಂಸ್ಕರಣಾ ಘಟಕ ಸ್ಥಾಪಿಸ­ಲು ಉದ್ದೇಶಿಸಲಾಗಿದೆ. ಇದಕ್ಕೆ ರೈತರೇ ಪ್ರಸ್ತಾವ ಸಿದ್ಧಪಡಿಸಿದ್ದಾರೆ. ಕೃಷಿ ವಿವಿ ಇದಕ್ಕೆ ಅಂತಿಮ ರೂಪುರೇಷೆ ನೀಡಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ. ವಿವಿಯಿಂದ ₨1 ಲಕ್ಷ ಅನುದಾನ ನೀಡಲಾಗಿದ್ದು, ಒಂದು ವರ್ಷದಲ್ಲಿ ಈ ಸಂಸ್ಕರಣಾ ಘಟಕ ಆರಂಭ­ವಾಗಲಿದೆ ಎಂದು ಕೃಷಿ ವಿವಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT