ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಉದ್ಯಮ : ವನಿತೆಯರ ಯಶೋಗಾಥೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇದು ಬೆಂಗಳೂರಿನ ಕವಿತಾ ವೆಂಕಟೇಶ್‌, ಮಾಲಾ ಮತ್ತು  ಶ್ರೀಕಮಲಾ ಎಂಬ ಮೂವರು ವನಿತೆಯರು ‘ಸ್ವಂತ ಉದ್ಯಮ’ದ  ಹಾದಿಯಲ್ಲಿ ಏಳುತ್ತಾ, ಬೀಳುತ್ತಾ, ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಾ ಸಾಗಿ ಯಶಸ್ಸು ಕಂಡ ಕಥೆ. ಇವರಂತೆಯೇ ಇರುವ ಲಕ್ಷಾಂತರ ವನಿತೆಯರಿಗೆ ಪ್ರೇರಣೆ ನೀಡುವಂತಹ, ಮಾರ್ಗದರ್ಶನ ಮಾಡುವಂತಹ ಯಶೋಗಾಥೆ.

ಏನಾದರೂ ಮಾಡಲೇಬೇಕು ಎನ್ನುವ ತುಡಿತದಿಂದಾಗಿಯೇ ಸ್ವಂತ ಉದ್ಯಮ ಕಟ್ಟಿಕೊಂಡವರು ಕವಿತಾ. ದಿಢೀರ್‌ ಎಂಬಂತೆ ಕಣ್ಮರೆಯಾದ ಪ್ರೀತಿಯ ಅಣ್ಣನ ಸಾವನ್ನು ಅರಗಿಸಿಕೊಳ್ಳಲಾರದೇ ಕಂಗೆಟ್ಟಿದ್ದ ಮಾಲಾ, ಮನಸ್ಸನ್ನು ಬೇರೆ ದಿಕ್ಕಿಗೆ ತಿರುಗಿಸಬೇಕೆಂಬ ಪ್ರಯತ್ನದ ಫಲವಾಗಿ ಸ್ವಂತದ್ದೇ ಆದ ದುಡಿಮೆಯ ಸಂಸ್ಥೆ ಹುಟ್ಟುಹಾಕಿದರು. ಕೆಲವು ವನಿತೆಯರಿಗೆ ಕೆಲಸವನ್ನೂ ಕೊಟ್ಟರು. ಮದುವೆಗೆ ಮುನ್ನ, ಮದುವೆ ಆದ ಮೇಲೂ ದುಡಿಯುವುದು ಬದುಕಿನ ಅಗತ್ಯವೇ ಆಗಿತ್ತು. ಹಾಗಾಗಿ ದುಡಿಮೆಯೇ ನನ್ನ ಬದುಕು ಎನ್ನುತ್ತಿರುವವರು ಶ್ರೀಕಮಲಾ.

ಕವಿತಾ ಕಥೆ
‘ಜೀವನ ಅಂದ ಮೇಲೆ ಸಮಸ್ಯೆ–ಸವಾಲುಗಳು ಇದ್ದದ್ದೇ. ಅವನ್ನು ಬಿಟ್ಟು ಬದುಕಿಲ್ಲ. ಆದರೆ ಏನಾದರೂ ಮಾಡಲೇಬೇಕು ಅಂತ ಹೊರಟವರ ದಾರಿಗೆ ಅಡ್ಡ ಬಂದರೆ ಆ ಅಡ್ಡಿಗಳಿಗೇ ಉಳಿಗಾಲವಿಲ್ಲ ಎನ್ನುವುದು ಮಾತ್ರ ಸುಸ್ಪಷ್ಟ’.

ಇಮಿಟೇಟ್ ಜ್ಯುವಲರಿ  (ಅನುಕರಣೆಯ ಆಭರಣಗಳ) ಉದ್ಯಮದಲ್ಲಿ ಇದೀಗ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವ ಕವಿತಾ ವೆಂಕಟೇಶ್ ಅವರ ಜೀವನ ಪ್ರೀತಿ ಇದು. ‘ಏನಾದರೂ ಮಾಡಲೇಬೇಕು. ಆದ್ರೆ ಏನು ಮಾಡಲಿ?’ ಎಂದು ತಲೆಕೆಡಿಸಿಕೊಂಡು ಕುಳಿತ ಆ ಹೊತ್ತು. ಅತ್ತೆಯ ಸಂಗ್ರಹದಲ್ಲಿದ್ದ ದಶಕಗಳ ಹಿಂದಿನ ಸರವೊಂದು ಹೊಸ ಪ್ರಯೋಗಕ್ಕೆ ಸಾಕ್ಷಿಯಾದ ಗಳಿಗೆ.

ಅತ್ತೆ ರತ್ನಮ್ಮ ‘ಇದನ್ನು ನಾನೇ ಮಾಡಿದ್ದು ಮಗಾ, ನೋಡು’ ಅಂತ ಆ ಮಾಸಿದ ಮಣಿ ಸರವನ್ನು ಕೈಗಿಟ್ಟಾಗ ಕವಿತಾ ಕಣ್ಣಲ್ಲಿ ಹೊಸ ಮಿಂಚು. ಅವರ ಕಲ್ಪನಾ ಶಕ್ತಿ ವಿಶಿಷ್ಟವಾದುದು. ಆ ಹಳೆಯ ಸರವೊಂದನ್ನು ನೋಡುತ್ತಿದ್ದಂತೆಯೇ ಅವರ ಆಲೋಚನೆಯಲ್ಲಿ ಹೆಸರೂ ಇಲ್ಲದ, ಎಲ್ಲೂ ಕಂಡರಿಯದ ಹೊಸ ಹೊಸ ವಿನ್ಯಾಸಗಳು ಚಕಚಕನೆ ಹಾದು ಹೋದವು.

‘ಇದನ್ನ ಹ್ಯಾಗೆ ಮಾಡ್ತಿದ್ರಿ ಅತ್ತೆ?’ ಅಂದಾಗ ‘ಅದೆಲ್ಲಾ ಯಾಕೆ ಬಿಡವ್ವ, ಹಳೇ ಕಾಲದ್ದು... ನಿಮಗೆಲ್ಲ ಸರಿ ಹೊಂದಲ್ಲ’ ಅಂದರು. ‘ಹೊಸ ಕಾಲಕ್ಕೆ ಹೊಂದುವಂತೆ ಮಾಡೋಣ, ಮೂಲ ಹೇಳಿ’ ಎಂದ ಕವಿತಾ ಮಣಿ–ದಾರದ ಮೂಲ ಹಿಡಿದು ಹೊರಟರು.

ಗೂಗಲ್ ಗುರು
‘imitation jewellery’ ಅಂತ ಟೈಪಿಸಿ ಗೂಗಲ್ ಸರ್ಚ್ ಕೊಟ್ಟಾಗ ಸಾವಿರ ಸಾವಿರ ವೆಬ್‌ಸೈಟ್‌ಗಳು ತೆರೆದುಕೊಂಡವು. ಅದೆಂತಹ ದೊಡ್ಡಲೋಕ ಎಂದರೆ, ಅಲ್ಲಿರುವುದನ್ನು ಬರೀ ನೋಡಲು ಅವರಿಗೆ ಗಂಟೆ ಗಂಟೆಗಳೇ ಸಾಲದಾದವು.

‘ಅಲ್ಲಿ ನಾವು ಏನನ್ನಾದರೂ ಹೆಕ್ಕಬಹುದು. ಆದರೆ ಯಾವುದನ್ನೂ ಕಾಪಿ ಮಾಡಬಾರದು. ಮಾಡಿದರೆ ಅದರ ಜೀವಂತಿಕೆ ಕಳೆದುಹೋಗುತ್ತದೆ. ಅಲ್ಲದೇ ಆಯುಷ್ಯವೂ ಕಡಿಮೆ. ಸತತ ಎಂಟು ಗಂಟೆಗಳ ಕಾಲ ಕಂಪ್ಯೂಟರ್ ಮುಂದೆಯೇ ಕುಳಿತು ಶೋಧಿಸಿದೆ,  ಓದಿದೆ, ಮಾಹಿತಿ ಸಂಗ್ರಹಿಸಿದೆ. 9ನೇ ತಾಸಿನಲ್ಲಿ ಕಂಪ್ಯೂಟರ್ ಜಗದಿಂದ ಆಚೆಗೆ ಬಂದಾಗ ನನ್ನೊಳಗೆ ಹೊಸದೊಂದು ಶಕ್ತಿ ಆವಾಹನೆಗೊಂಡಿತ್ತು’ ಎಂದ ಕವಿತಾ ಕಣ್ಣಲ್ಲಿ ಅದೆಂತಹುದೊ ಖುಷಿ.

‘ಮೊದಲು ಅಜ್ಜಿಯ ಸರವನ್ನೇ ಬಿಚ್ಚಿ ಮರುಹುಟ್ಟು ನೀಡಿದೆ. ಮತ್ತೆ ಅದನ್ನು ಬಿಚ್ಚಿ ಮತ್ತೊಂದು ರೂಪ ಕೊಟ್ಟೆ. ಇನ್ನೊಂದು ಮಾದರಿಗೆ ಅಳವಡಿಸಿದೆ... ಹೀಗೇ ಒಂದೇ ಸರಕ್ಕೆ ಹತ್ತಾರೂ ಆಕಾರ ಕೊಟ್ಟು ಸಂಭ್ರಮಿಸಿದೆ. ನಾನು ಏನು ಮಾಡಬಹುದು, ಹೇಗೆ ಮಾಡಬಹುದು ಎಂಬ ಅಂದಾಜು ಸಿಕ್ಕಿದ್ದೇ ಆಗ’...

ಹೇಳುತ್ತಾ ಹೋದಹಾಗೆ ಕವಿತಾ ಮಾತಿನಲ್ಲಿ ಸಣ್ಣ ಸಣ್ಣ ರೋಮಾಂಚನಗಳು, ಚಿಕ್ಕ ಚಿಕ್ಕ ನೋವುಗಳು, ಅನುಭವಿಸಿದ ಅವಮಾನಗಳ ಸಾಲುಗಳು....
‘ಅವಮಾನ, ಆತಂಕ, ನೋವುಗಳೆಲ್ಲ ನಮಗೆ ಬುದ್ಧಿ ಕಲಿಸುವ ಪಾಠಗಳಷ್ಟೆ. ಅವುಗಳಿಂದ ಕುಸಿದು ಭೂಮಿಗೆ ಇಳಿದುಹೋಗದೇ ಪುಟಿದು ಮೇಲೆದ್ದಾಗಲೇ ಬದುಕಿನ ನಿಜವಾದ ಅರ್ಥ ಸಿಗುತ್ತದೆ’ ಎನ್ನುವ ಕವಿತಾ, ತಮ್ಮ ಬದುಕಿನ ಅಂತಹ ದಿನಗಳನ್ನೊಮ್ಮೆ ಮೆಲುಕು ಹಾಕುತ್ತಾ ಹೋದರು.

ಹುಟ್ಟಿದ್ದು ಸಂಪ್ರದಾಯಸ್ತ ವೈಶ್ಯ ಕುಟುಂಬದಲ್ಲಿ. ಅಪ್ಪ ಸುಬ್ಬಯ್ಯ ಶೆಟ್ಟಿ, ಅಮ್ಮ ಚಂದ್ರಕಾಂತಮ್ಮ ಅತ್ಯುತ್ತಮ ಸಂಸ್ಕಾರ ನೀಡಿ ಬೆಳೆಸಿದರು. ಸಣ್ಣ ಪ್ರಾಯದಲ್ಲಿದ್ದಾಗಿನ ಕನಸುಗಳೇ ಬೇರೆ. ಶ್ರೀಮಂತ ಗಂಡನನ್ನು ಮದುವೆಯಾಗಿ, ಬನಾರಸ್ ಸೀರೆ ಉಟ್ಟು, ಮೈತುಂಬ ಆಭರಣ ತೊಟ್ಟು, ಗೌರಿ ವ್ರತ, ಲಕ್ಷ್ಮಿ ಪೂಜೆ ಮಾಡುತ್ತಾ ಹಾಯಾಗಿ ಕಾಲ ಕಳೆಯಬೇಕು ಅಂದುಕೊಂಡಿದ್ದೂ ಉಂಟು.

ಆದರೆ ಎಸ್‌ಎಸ್‌ಎಲ್‌ಸಿಗೆ ಬರುವ ವೇಳೆಗೆ, ಬದುಕು ಅದಷ್ಟೇ ಅಲ್ಲ, ಸುಖ ಸಂಸಾರ ಎಲ್ಲರ ಪಾಲಿಗೂ ಸಿಗುವಂಥದ್ದಲ್ಲ ಎನ್ನವುದರ ಅರಿವಾಯಿತು. ಕಣ್ಣ ಮುಂದೆಯೇ ಇದ್ದ ವಿಫಲ ವಿವಾಹ ಸಂಬಂಧಗಳು ಎದೆಗೆ ಚುಚ್ಚುತ್ತಿದ್ದವು.

ಮದುವೆಯೊಂದೇ ಬದುಕಲ್ಲ. ‘ಏನಾದರೂ ಸಾಧಿಸಬೇಕು’ ಎನ್ನುವ ಕುದುರೆ ಏರಿದಾಗ ಅದಾಗಲೇ ಬಹಳ ತಡವಾಗಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ನಾನು ಫೇಲಾಗಿದ್ದೆ. ಬದುಕು ಇಲ್ಲಿಗೇ ಮುಗಿಯಿತು ಎಂದು ಕುಗ್ಗಿ ಹೋದ ದಿನವದು.

ಮುಂದೆ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾದೆ. ನಂತರ ಪಿಯುಸಿ, ಪದವಿಯೂ ಮುಗಿಯಿತು.  ಈ ವೇಳೆಗೆ ವೆಂಕಟೇಶ್ ನನ್ನ ಮೆಚ್ಚಿ, ಕೈ ಹಿಡಿದು ಸಂಗಾತಿಯಾಗಿದ್ದರು. ಮುಂದೆ ಇನ್ನಷ್ಟು ಓದು ಎಂದು ಒತ್ತಾಯಿಸಿದರು. ಎರಡನೇ ದರ್ಜೆಯ ವಿದ್ಯಾರ್ಥಿಯಾಗಿಯೇ ಎಂಬಿಎ ಮುಗಿಸಿದೆ. ಪ್ರಾಧ್ಯಾಪಕಿ ಆಗಿ ಕೆಲಸಕ್ಕೂ ಸೇರಿದೆ. ವರ್ಷಗಳು ಹಾಗೇ ಖಾಲಿ ಖಾಲಿಯಾಗಿ ಉರುಳಿ ಹೋಗುತ್ತಿವೆ ಎನಿಸುತ್ತಲೇ ಇತ್ತು.

ಮತ್ತೂ ಎದೆಯೊಳಗೆ ಅದೇ ತುಡಿತ ‘ಏನಾದರೂ ಭಿನ್ನವಾದುದನ್ನು ಮಾಡಬೇಕು’ ಎನ್ನುವ ಒತ್ತಡ. ಆ ಸಂದರ್ಭದಲ್ಲೇ ಅತ್ತೆಯವರು ಪೋಣಿಸಿದ್ದ ಹಳೆಯ ಮಣಿ ಸರ ನನ್ನ ಗಮನ ಸೆಳೆದಿದ್ದು. ‘ಗೂಗಲ್’ ಅನ್ನೊ ಆಪದ್ಬಾಂಧವ ನನ್ನೆದುರು ಹೊಸ ಅವಕಾಶಗಳ ರಾಶಿ ಚೆಲ್ಲಿದ್ದು.

ಕಣ್ಣು ಒದ್ದೆಯಾದ ಗಳಿಗೆ
ಸುಮಾರು ಮೂರು ವರ್ಷಗಳ ಹಿಂದಿನ ಮಾತದು. ಕೆನರಾ ಬ್ಯಾಂಕ್ ವತಿಯಿಂದ ಮಹಿಳೆಯರಿಗಾಗಿ ಉಚಿತ ಉದ್ಯಮ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ನಾನೂ ಅಲ್ಲಿ ನನ್ನ ಆಭರಣಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಆಶಿಸಿದೆ. ಆದರೆ ನನ್ನ ಬಳಿ ಅಷ್ಟೆಲ್ಲ ಹೆಚ್ಚಿನ ಪ್ರಮಾಣದ ಸಂಗ್ರಹಗಳೂ ಇರಲಿಲ್ಲ. ಪತಿಯಿಂದ ₨5000 ಪಡೆದು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದೆ. ರಾತ್ರಿಯೆಲ್ಲಾ ಕುಳಿತು ಶ್ರಮಿಸಿದ ನಂತರ ಹತ್ತಾರು ಸರ, ಕಿವಿಯೋಲೆಗಳು ತಯಾರಾದವು.

ಮಾರನೇ ದಿನ ಹೋದರೆ ಅಲ್ಲೊಂದು ಜಾತ್ರೆಯೇ ನೆರೆದಿತ್ತು. ನನ್ನ ವಸ್ತುಗಳನ್ನು ಡಿಸ್‌ಪ್ಲೇ ಮಾಡಲೂ ಭಯವಾಗುತ್ತಿತ್ತು. ವೆಂಕಟೇಶ್ ಹಾಗೂ ಅಕ್ಕ ಶೋಭಾವತಿ ಜತೆಗೆ ಬಂದಿದ್ದರು. ಅಚ್ಚರಿ ಎಂಬಂತೆ ಜನರು ನನ್ನ ಕೌಶಲವನ್ನು, ನಾನು ತಯಾರಿಸಿದ ಮಣಿ ಸರಗಳನ್ನು  ಮೆಚ್ಚಿದರು. ಅಲ್ಲೇ ಆರ್ಡರ್ ಬರೋಕೆ ಶುರುವಾಯಿತು. ಇಟ್ಟಿರುವ ವಸ್ತುಗಳಲ್ಲದೇ ತಾವೇ ಮಾದರಿ ತೋರಿಸಿ ಒಡವೆ ಮಾಡಿ ಕೊಡುವಂತೆ ಕೇಳಿದರು. ಊಟ–ನೀರು ಮರೆತು ಅಲ್ಲೇ ಕುಳಿತು ನಾನು ಆಭರಣ ತಯಾರು ಮಾಡಿದೆ. ಅವು ಹಾಗ್ಹಾಗೆ ಮಾರಾಟವೂ ಆದವು. ಕತ್ತಲಾದ ಮೇಲೆ ಮನೆಯತ್ತ ಹೊರಟಾಗ ದುಡ್ಡು ಎಣಿಸಲು ಹೋದೆ...

ಎಷ್ಟು ಎಣಿಸಿದರೂ ಮುಗಿಯುತ್ತಿಲ್ಲ. ಬರೋಬ್ಬರಿ ₨36 ಸಾವಿರ ಗಳಿಕೆಯಾಗಿತ್ತು. ಖುಷಿಯಿಂದ ನನ್ನ ಕಣ್ಣಿನಲ್ಲಿ ಧಾರಾಕಾರ ನೀರು. ಸಂತೋಷಾತಿರೇಕದ ಕಣ್ಣೀರನ್ನು ತಡೆಯುವಲ್ಲಿ ನಾನು ವಿಫಲಳಾದೆ. ನನ್ನ ಅಳು ನೋಡಿ ನನ್ನ ಮನೆಯವರ ಕಣ್ಣಲ್ಲೂ ನೀರಾಡಿದವು. ಆ ದಿನವನ್ನು  ನೆನೆದರೆ ಈಗಲೂ ನಾವಿಬ್ಬರೂ ಭಾವಪರವಶವಾಗುತ್ತೇವೆ ಎನ್ನುತ್ತಿದ್ದಂತೆ ಕವಿತಾ ಕಣ್ಣು ಮತ್ತೊಮ್ಮೆ ಹನಿಗೂಡಿದವು.

‘ಓನ್ಲಿ ಗರ್ಲ್ಸ್‌’ ಅನ್ನೋದು ನನ್ನ ಕನಸಿನ ಕೂಸಿಗೆ ನಾನಿಟ್ಟ ಹೆಸರು. ಈಗ ನಾಲ್ಕಾರು ಜನಕ್ಕೆ ನಾನೇ ಕೆಲಸ ಕೊಟ್ಟಿದ್ದೇನೆ. ಇದರ ನಡುವೆ ಮಗನಿಗೆ ಮೂರು ವರ್ಷ ತುಂಬಿದ್ದೂ ತಿಳಿಯದಷ್ಟು ದುಡಿಮೆಯಲ್ಲಿ ಮಗ್ನಳಾಗಿದ್ದೆ. ವರ್ಷಕ್ಕೆ ಸುಮಾರು ₨8 ಲಕ್ಷದಷ್ಟು ವಹಿವಾಟು ನಡೆಯುತ್ತದೆ. ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶವೂ ಈಡೇರುತ್ತಿದೆ.

‘ಅಡುಗೆ ಮನೆಯ ಕಿಟಕಿಯಿಂದ ವಿಮಾನ ನೋಡುವುದನ್ನು ಬಿಟ್ಟು ಬಿಡಿ. ಜೀವನದಲ್ಲಿ ನಿಮ್ಮದೇ ಆದ ಸ್ಪೇಸ್ ಮಾಡಿಕೊಳ್ಳುವುದನ್ನು ಕಲಿಯಿರಿ. ದೇವರು ಏನೂ ಇಲ್ಲದೇ ಯಾರನ್ನೂ ಭೂಮಿಗೆ ಕಳಿಸಿರುವುದಿಲ್ಲ. ನೀವು ಏನು ಪಡೆದು ಬಂದಿದ್ದೀರಿ, ನಿಮ್ಮಲ್ಲಿರುವ ಶಕ್ತಿ ಯಾವುದು ಎಂಬುದನ್ನು ಗುರುತಿಸಿಕೊಳ್ಳಿ. ಅದು ಖಂಡಿತ ನಿಮ್ಮನ್ನು ಎತ್ತರಕ್ಕೇರಿಸುತ್ತದೆ’ ಎನ್ನುವುದು ಯುವತಿಯರಿಗೆ ಮತ್ತು ಮಹಿಳೆಯರಿಗೆ ನಾನು ಹೇಳುವ ಅನುಭವದ ಮಾತು.

ಮಾಲಾಗೆ ಅಣ್ಣನೇ ಸ್ಪೂರ್ತಿ
‘2006 ನನ್ನ ಪಾಲಿನ ಕರಾಳ ವರ್ಷ. ಬದುಕು ಎಂದೂ ಮಾಗದ ಬರೆ ಎಳೆದಿತ್ತು ನನ್ನ ಮನಸ್ಸಿಗೆ. ನಾನು ಅತ್ಯಂತ ಹೆಚ್ಚು ಪ್ರೀತಿಸುವ, ನನ್ನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ನನ್ನ ಅಣ್ಣ ಸತೀಶ್ ‘ಹೀಗೆ ಹೋಗಿ ಬಂದೆ ಇರು’ ಎಂದು ಹೋದವ ಹೆಣವಾಗಿದ್ದ. ಕಣ್ಣ ಮುಂದೂ ಕತ್ತಲು, ಮನದ ಒಳಗೂ ಕತ್ತಲು. ದಿಕ್ಕು ತೋಚದಂತಾಗಿತ್ತು. ಪತಿ, ಅತ್ತೆ, ಸ್ನೇಹಿತರು, ಸಂಬಂಧಿಕರು ಯಾರೇ ಏನೇ ಸಮಾಧಾನ ಮಾಡಿದರೂ ನನ್ನ ಮನಸ್ಸಿಗದು ಅರ್ಥವಾಗುತ್ತಿರಲಿಲ್ಲ.

‘ಇನ್ನೇನು ಹೊರಗೆ ಹೋದ ಅಣ್ಣ ಬರುವ ಹೊತ್ತಾಯಿತು’ ಎನ್ನುವ ಭ್ರಮೆಯಲ್ಲಿಯೇ ದಿನಗಳು ಉರುಳಿದವು.
ಅಪ್ಪ ವೆಂಕಟೇಶ್ ಹಾಗೂ ಅಮ್ಮ ಕಮಲಾ ಸಂಪ್ರದಾಯಸ್ತ ಮನೋಭಾವದವರು. ಹೆಣ್ಣು ಮಕ್ಕಳು ಎಂದರೆ ಸಹಿ ಹಾಕುವುದನ್ನು, ಪತ್ರ ಓದುವುದನ್ನು ಕಲಿತರೆ ಸಾಕು. ಹೆಚ್ಚಿನ ಶಿಕ್ಷಣ ಏಕೆ? ಎನ್ನುವ ಸಾಮಾಜಿಕ ವಾತಾವರಣ ಆಗಿತ್ತು.

ಎಸ್‌ಎಸ್‌ಎಲ್‌ಸಿವರೆಗೆ ಓದಿದ ಮೇಲೆ ಸಾಕಿನ್ನು ಅಂದರು ಅಪ್ಪ. ಆದರೆ ಅಣ್ಣನಿಗೆ ನನ್ನನ್ನು ಪದವಿವರೆಗೆ ಓದಿಸಬೇಕು ಎನ್ನುವ ಖುಷಿ. ಕೊನೆಗೂ ಅಪ್ಪನನ್ನು ಒಪ್ಪಿಸಿ ಕಾಲೇಜು ಸೇರಿಸಿದ್ದ. ಪದವಿಯೂ ಮುಗಿದು, ಮದುವೆಯೂ ಆಗಿತ್ತು. ಮನೆ, ಗಂಡ, ಅತ್ತೆ ಇದಿಷ್ಟೇ ಬದುಕಾಗಿತ್ತು.

ಪತಿ ರವಿಶಂಕರ್ ರಿಯಲ್ ಎಸ್ಟೇಟ್ ಉದ್ಯಮಿ. ದಿನವಿಡಿ ಹೊರಗೇ ಇರುವವರು. ಅಣ್ಣನ ನೆನಪು ಜೀವವನ್ನು ಹಿಂಡುತ್ತಲೇ ಇತ್ತು. ಅದನ್ನು ಮರೆಯಲು, ಮನಸ್ಸನ್ನು ಬೇರೆ ಕಡೆ ತೊಡಗಿಸಿಕೊಳ್ಳಲು ನನಗೆ ಮೊದಲೇ ಗೊತ್ತಿದ್ದ ಆಭರಣ ತಯಾರಿಕೆಯಲ್ಲಿ ತೊಡಗಿದೆ. ಹೊಸ ಹೊಸ ನಮೂನೆ, ನವೀನ ಶೈಲಿ, ವಿಶೇಷ ಲುಕ್ ಇರುವ ಆಭರಣಗಳ ಪ್ರಯತ್ನ ಖುಷಿ ಕೊಡುತ್ತಿತ್ತು.

ಯಾರದೊ ಸಮಾರಂಭಕ್ಕೆ ಉಡುಗೊರೆ ಕೊಡಲೂ ಪತಿಯಿಂದ ಹಣ ಕೇಳಬೇಕಾದಾಗ ಏನೊ ಮುಜುಗರ. ಆದ್ದರಿಂದ ಯಾರದೇ ಸಭೆ–ಸಮಾರಂಭ, ವಿವಾಹ ಕಾರ್ಯಕ್ರಮಗಳಿದ್ದರೂ ನಾನೇ ಮನೆಯಲ್ಲಿ ಆಭರಣ ತಯಾರಿಸಿ ಕೊಡುತ್ತಿದ್ದೆ. ಸರಳವಾದ ಆದರೆ ಆಕರ್ಷಕವಾದ, ನವೀನ ಮಾದರಿಯ ಆಭರಣಗಳು ಬಹು ಬೇಗ ಎಲ್ಲರಿಗೂ ಇಷ್ಟವಾದವು.

ಒಂದು ಬಾರಿ ಹೀಗೇ ಮೇಳವೊಂದರಲ್ಲಿ ನಾನು ಸಿದ್ಧಪಡಿಸಿದ ಆಭರಣಗಳನ್ನೂ ಪ್ರದರ್ಶನಕ್ಕಿಟ್ಟರೆ ಲಾಭ ಬರಬಹುದು ಎಂದು ಒಬ್ಬರು ಹೇಳಿದರು. ಅದಕ್ಕಾಗಿ ಸಾಕಷ್ಟು ಆಭರಣಗಳನ್ನು ತಯಾರಿಸಿುಕೊಳ್ಳಬೇಕಿತ್ತು. ಮದುವೆಯಲ್ಲಿ ಕೊಟ್ಟ ಚಿನ್ನದ ಆಭರಣಗಳನ್ನೆಲ್ಲ ಅಡವಿಟ್ಟು ₨50 ಸಾವಿರ ಸಾಲ ಪಡೆದೆ. ಆ ಆರಂಭಿಕ ಬಂಡವಾಳವೇ ಆರು ತಿಂಗಳಲ್ಲಿ ದುಪ್ಪಟ್ಟಾಗಿ ಬೆಳೆಯಿತು. ನನ್ನ ಉಳಿತಾಯ ಖಾತೆಯಲ್ಲಿ ಒಟ್ಟು ₨1.30 ಲಕ್ಷ ಸೇರಿತ್ತು.

ಅಲ್ಲಿಂದ ಮತ್ತೆ ಮತ್ತೆ ತರಬೇತಿ ಪಡೆದು ನನ್ನ ಕೌಶಲವನ್ನು ವೃದ್ಧಿಸಿಕೊಂಡೆ. ಈಗ ವರ್ಷಕ್ಕೆ ಕಡಿಮೆ ಎಂದರೂ ಮೂರರಿಂದ ಐದು ಲಕ್ಷ ರೂಪಾಯಿ ವ್ಯವಹಾರ ಆಗುತ್ತದೆ. ಇದೆಲ್ಲದರ ಹಿಂದೆ ನನ್ನಣ್ಣನ ಪ್ರೀತಿ ಇದೆ ಎಂದು ಹೇಳುವುದನ್ನು ಮಾತ್ರ ನಾನು ಮರೆಯಲಾರೆ ಎನ್ನುತ್ತಾರ ಮಾಲಾ.

ದುಡಿಮೆಯೇ ಶ್ರೀಕಮಲಾ ಬದುಕು

‘ಆಗಲೂ ನಾನು ದುಡಿಯಬೇಕಿತ್ತು. ಈಗಲೂ ಅಷ್ಟೆ, ದುಡಿಮೆ ನನ್ನ ಎಂದಿನ ಅಗತ್ಯ. ದುಡಿಮೆಯೇ ನನ್ನ ಬದುಕು...

ಹುಟ್ಟಿದ್ದು ಸಾಧಾರಣ ಕುಟುಂಬದಲ್ಲಿ ಅಪ್ಪ–ಅಮ್ಮ, ಮೂರು ಜನ ಸಹೋದರರಿರುವ ನಮ್ಮ ಕುಟುಂಬದಲ್ಲಿ ಬಹಳ ಬೇಗ ನಾವೆಲ್ಲರೂ (ಸಹೋದರರು ಮತ್ತು ನಾನು) ದುಡಿಯಲೇಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಪಿಯುಸಿ ಮುಗಿಯುತ್ತಿದ್ದಂತೆ ತಕ್ಷಣ ಉದ್ಯೋಗ ಸಿಗಬಹುದಾದ ಕೋರ್ಸಿನ ಹುಡುಕಾಟ ನಡೆಸಿದೆ. ಆಗೆಲ್ಲ ಸ್ಟೆನೊಗ್ರಫಿಗೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ಆ ತರಬೇತಿ ಪಡೆದು ಕೆಲಸಕ್ಕೆ ಸೇರಿಕೊಂಡೆ. ₨800 ಸಂಬಳಕ್ಕೆ ಎಂಟು ಗಂಟೆ ಕೆಲಸ. ಕೆಲಸದಲ್ಲಿ ಖುಷಿ ಇರಲಿಲ್ಲ. ಅಲ್ಲಿಂದ ಮತ್ತೊಂದು ಕಂಪೆನಿ, ಅಲ್ಲಿಂದ ಇನ್ನೊಂದು... ಹೀಗೆ ಕೆಲ ವರ್ಷಗಳು ಅದೇ ಕ್ಷೇತ್ರದಲ್ಲಿ ದುಡಿಮೆ ಮತ್ತು ಬೇಸರ.

ಮದುವೆಯಾಯಿತು, ಮಗಳೂ ಹುಟ್ಟಿದಳು. ಆದರೆ ಏಕೋ ಬದುಕು ನಿಂತಲ್ಲೇ ನಿಂತು ಬಿಟ್ಟಿದೆ ಅನ್ನುವ ಭಾವ ಮನೆ ಮಾಡಿತು. ಮದುವೆಯಾದರೂ ದುಡಿಯುವ ಅಗತ್ಯ ನನ್ನನ್ನು ಬಿಟ್ಟು ಹೋಗಲಿಲ್ಲ. ಪತಿಯ ಮನೆಯಲ್ಲಿಯೂ ದುಡಿಮೆಯ ಅನಿವಾರ್ಯತೆ ಇತ್ತು. ಇತ್ತ ಮಗಳಿಗೆ ಸಮಯ ಕೊಡಲು ಆಗುತ್ತಿಲ್ಲ ಎನ್ನುವ ಪ್ರಜ್ಞೆಯ ಕಾಟ.

ಒಂದುದಿನ ಪತ್ರಿಕೆಯಲ್ಲಿ ‘ಮಹಿಳೆಯರಿಗೆ ಉಚಿತ ತರಬೇತಿ’ ಜಾಹಿರಾತು ನೋಡಿದೆ. ಧೈರ್ಯ ಮಾಡಿ ಕೆಲಸ ಬಿಟ್ಟು ತರಬೇತಿಗೆ ಸೇರಿದೆ. ಮಾಡು ಇಲ್ಲವೆ ಮಡಿ ಎನ್ನುವ ಸ್ಥಿತಿಯದು. ಕೈಯಲ್ಲಿದ್ದ ಕೆಲಸ ಬಿಟ್ಟಿದ್ದೆ. ಈಗ ಇಟ್ಟಿರುವ ಹೆಜ್ಜೆಯಲ್ಲಿ ಸಾವು ಬದುಕಿನ ಪ್ರಶ್ನೆಯಿತ್ತು. ಇಟ್ಟ ಹೆಜ್ಜೆಯನ್ನು ಮತ್ತೆ ಹಿಂತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ.

ಹೀಗಾಗಿ ಬಹಳ ಆಲೋಚಿಸಿ ಜೀವನ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಅದೇ ದಿನನಿತ್ಯ ಎಲ್ಲಾ ಮನೆಗಳಲ್ಲಿ, ಕಂಪೆನಿಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ ಅಗತ್ಯವಾಗಿ ಬಳಸುವ ನೆಲ, ಶೌಚಾಯಲ ಶುಚಿಗೊಳಿಸುವ (ಕ್ಲೀನಿಂಗ್‌) ಉತ್ಪನ್ನಗಳು. ಹೇಗಾದರೂ ಸರಿ ಈ ವಲಯದಲ್ಲಿ ಒಂದು ಸ್ಪೇಸ್ ಕಂಡುಕೊಳ್ಳಬಹುದು ಎಂಬ ನಂಬಿಕೆ ಬಂದಿತು. ಮನೆಯಲ್ಲಿಯೇ ಸಣ್ಣದಾಗಿ ಈ ಉದ್ಯಮವನ್ನು ಆರಂಭಿಸಿದರೆ ಮಕ್ಕಳಿಗೂ ಸಮಯ ಕೊಡಬಹುದು ಎಂದು ತರಬೇತಿ ಪೂರ್ಣಗೊಳಿಸಿ ಬಂದೆ.

ಅಮ್ಮ, ಅಪ್ಪ, ಪತಿ ರಾಮಸ್ವಾಮಿ ನೈತಿಕ ಬೆಂಬಲ ನೀಡಿದರು. ಆದರೆ ನನಗೆ ಯಾರಿಂದಲೂ ಯಾವ ಮೂಲದಿಂದಲೂ ಹಣದ ಬೆಂಬಲವಿರಲಿಲ್ಲ. ಆವರೆಗೆ ದುಡಿದ ಹಣವೂ ಸಂಸಾರಕ್ಕೆ ಖರ್ಚಾಗಿ ಹೋಗಿತ್ತು. ₨30,000 ಪಿಎಫ್ ದುಡ್ಡನ್ನೇ ಆರಂಭಿಕ ಬಂಡವಾಳವಾಗಿ  ಹೂಡಿಕೆ ಮಾಡಿದೆ. ಕಚ್ಚಾವಸ್ತುಗಳನ್ನು ಖರೀದಿಸಿ ತಂದು ಕ್ಲೀನಿಂಗ್ ಉತ್ಪನ್ನಗಳನ್ನು ನಾನೇ ತಯಾರಿಸಿದೆ.  ಮಾರಾಟಕ್ಕಿಳಿದಾಗ ಹೊಸತೇ ಪ್ರಪಂಚ ಪ್ರವೇಶಿಸಿದ ಹಾಗಾಯಿತು. ಅನುಭವ ಇರಲಿಲ್ಲವಲ್ಲ. ಸಾಕಷ್ಟು ತಪ್ಪುಗಳು, ಸೋಲು, ಅವಮಾನ, ಕುಹಕದ ಮಾತು... ಈ ನಡುವೆಯೇ ಎರಡು ವರ್ಷಗಳು ಉರುಳಿದವು. ಬದುಕು ಇನ್ನಷ್ಟು ಭಾರವಾದಂತೆ ಅನಿಸಿತು.

ಆದರೂ ಛಲ ಬಿಡಲಿಲ್ಲ. ಮತ್ತೆ ಮತ್ತೆ ಹೊಸ ಹೊಸ ಪ್ರಯತ್ನ ಮಾಡಿದೆ. ಉತ್ಪನ್ನದಲ್ಲೂ, ಪ್ಯಾಕಿಂಗ್‌ನಲ್ಲೂ ಸುಧಾರಣೆ ತಂದುಕೊಂಡು ದೊಡ್ಡ ದೊಡ್ಡ ಕಂಪೆನಿಗಳನ್ನು ಸಂಪರ್ಕಿಸಲಾರಂಭಿಸಿದೆ.

ಅಂತೂ 2010ರಲ್ಲಿ ನಾನು ನಂಬಿದ ದೈವ ಕೈ ಹಿಡಿಯಿತು. ಆಚಾರ್ಯ ಸಂಸ್ಥೆಯಿಂದ ದೊಡ್ಡ ಆರ್ಡರ್ ಸಿಕ್ಕಿತು. ನನ್ನ ಸಂಸ್ಥೆಯ ಕ್ಲೀನಿಂಗ್‌ ಉತ್ಪನ್ನಗಳು ಅವರಿಗೆ ಇಷ್ಟವೂ ಆದವು. ಮೊದಲ ಬಾರಿಯ ಪೇಮಿಂಟ್ ಸುಮಾರು ₨60 ಸಾವಿರ ರೂಪಾಯಿ ಬಂದಿತು. ಅಷ್ಟೊಂದು ಹಣವನ್ನು ಕೈಯಲ್ಲಿ ಹಿಡಿದಾಗ ರೋಮಾಂಚನ. ನನ್ನದೇ ದುಡಿಮೆಯ ಹಣ ಖುಷಿಯಿಂದ ಕಣ್ಣು ಒದ್ದೆಯಾಗಿಸಿತ್ತು.

ಈಗ ನನ್ನ ಸಂಸ್ಥೆ ಬೆಳೆದಿದೆ. ಸಾಕಷ್ಟು ಜನರಿಗೆ ಉದ್ಯೋಗವನ್ನೂ ಕೊಟ್ಟಿದ್ದೇನೆ. ವಾರ್ಷಿಕ ₨25 ಲಕ್ಷದಷ್ಟು ವರಮಾನವಿದೆ. ಈ ವರ್ಷ ₨50 ಲಕ್ಷ ವಹಿವಾಟು ಗುರಿ ಹಾಕಿಕೊಂಡಿದ್ದೇನೆ. ಸೋಲು ಯಾರಿಗಿರೋದಿಲ್ಲ ಹೇಳಿ, ಸೋಲನ್ನು ಸೋಲಿಸಿ ಎದ್ದು ಬಂದವರಿಗಷ್ಟೇ ಜಯ ದೊರೆಯುವುದು. ಇದು ನನ್ನ ಅನುಭವದ ಮಾತು ಎನ್ನುತ್ತಾರೆ ಶ್ರೀಕಮಲಾ.

ಒಂದು ಹೆಜ್ಜೆ ಮುಂದಿಟ್ಟರೆ ದಾರಿ ನೂರಾರು
ಏನಾದರೂ ಮಾಡಬೇಕು ಎನ್ನುವ ಛಲದಿಂದ ಬಂದವರಿಗೆ ಕೆನರಾ ಬ್ಯಾಂಕ್ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಅದೇ ರೀತಿಯಲ್ಲಿ ಸ್ವಂತ ಉದ್ಯಮದ ಕನಸು ಕಾಣುವ ಮಹಿಳೆಯರಿಗೂ ಆರ್ಥಿಕವಾಗಿ ನೆರವಾಗಿದೆ ಎನ್ನುತ್ತಾರೆ ಕೆನರಾ ಬ್ಯಾಂಕಿನ ಮಹಿಳಾ ಕ್ಷೇಮಾಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಭಟ್.

ಆರ್ಥಿಕವಾಗಿ ಹಿಂದುಳಿದ, ಆದರೆ ಏನಾದರೂ ಸಾಧಿಸಬೇಕು, ಸ್ವಂತವಾಗಿ ದುಡಿಮೆ ಆರಂಭಿಸಬೇಕು ಎನ್ನುವ ಹಂಬಲ ಹೊತ್ತು ಬರುವ ಮಹಿಳೆಯರಿಗೆ ತರಬೇತಿ ಮತ್ತು ಸಾಲ ನೀಡಲಾಗುತ್ತದೆ.  ಅವರು ಒಂದು ಹೆಜ್ಜೆ ಮುಂದೆ ಬಂದರೆ ನಾವು ನೂರು ದಾರಿಗಳನ್ನು ತೋರಿಸುತ್ತೇವೆ. ಸೂಕ್ತವಾದುದನ್ನು ಆರಿಸಿಕೊಂಡು ಮುಂದಿನ ಹೆಜ್ಜೆಗಳನ್ನಿಡಬೇಕಾದುದು ಮಾತ್ರ ಅವರದ್ದೇ ಹೊಣೆಗಾರಿಕೆ.

ಸ್ವಂತ ಉದ್ಯಮ, ವಾಣಿಜ್ಯ ಸಂಸ್ಥೆ ಆರಂಭಿಸುವ ಉದ್ದೇಶದೊಂದಿಗೆ ಬರುವ ಮಹಿಳೆಯರ ಜತೆ ಮೊದಲು ಕೌನ್ಸೆಲಿಂಗ್ ವಿಭಾಗದ ಮುಖ್ಯಸ್ಥರು   ಚರ್ಚಿಸುತ್ತಾರೆ. ಮಹಿಳೆಯ ಆರ್ಥಿಕ ಸ್ಥಿತಿ, ಆಸಕ್ತಿ, ಸಾಮರ್ಥ್ಯ, ಕೌಶಲಗಳ ಬಗ್ಗೆ ತಿಳಿದುಕೊಂಡು ಅವರಿಗೆ ಸೂಕ್ತವಾಗುವ ಕ್ಷೇತ್ರ, ಅವರಿಗೆ ಸಿಗಬಹುದಾದ ಅವಕಾಶಗಳು, ಸೌಲಭ್ಯಗಳ ಬಗ್ಗೆ ಮಾಹಿತಿ–ಮಾರ್ಗದರ್ಶನ ನೀಡುತ್ತಾರೆ. ನಂತರ ಅವರನ್ನು ಸೂಕ್ತ ಕ್ಷೇತ್ರದಲ್ಲಿ ಜ್ಞಾನ ಮತ್ತು ಪರಿಣಿತಿ ಪಡೆಯಲು ತರಬೇತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ.

ಮಹಿಳೆಯರಿಗೆ ಕೌಶಲ ಅಭಿವೃದ್ಧಿ ತರಬೇತಿಗಾಗಿಯೇ ಕೆನರಾ ಬ್ಯಾಂಕ್‌ನಿಂದ ರಾಜ್ಯದಲ್ಲಿ ಎಂಟು ಕೇಂದ್ರಗಳನ್ನು ಆರಂಭಿಸಲಾಗಿದೆ. ಅಡುಗೆ ತಯಾರಿಸುವುದ ರಿಂದ (ಕೇಟರಿಂಗ್‌) ಆರಂಭಿಸಿ ಯಾವುದೇ ವಿಭಾಗದಲ್ಲಾದರೂ ಅವರಿಗೆ ತರ ಬೇತಿ, ಪ್ರಮಾಣ ಪತ್ರ ನೀಡಲಾಗುವುದು. ಜತೆಗೆ ₨1 ಲಕ್ಷದಿಂದ ₨1 ಕೋಟಿವರೆಗೂ ಸಾಲ ಪಡೆಯಲೂ ಮಹಿಳೆಯರಿಗೆ ಅವಕಾಶವಿದೆ. ನಂತರದ ವರ್ಷಗಳಲ್ಲಿ 6ರಿಂದ 15 ವ್ಯಾಪಾರ ಮೇಳಗಳನ್ನು, ಶಿಬಿರಗಳನ್ನು ಆಯೋಜಿಸುವ ಮೂಲಕ ಮಾರುಕಟ್ಟೆಗೂ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ಇಂತಹ ಮಹಿಳೆಯರ ವಸ್ತುಗಳನ್ನು ಮನೆ–ಮನೆಗೆ ಹೋಗಿ ಮಾರಾಟ ಮಾಡಿಕೊಂಡು ಬರಲು ‘ಮೊಬೈಲ್ ಮೇಳ’ದ ಅಡಿ ಒಂದು ವ್ಯಾನಿನ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಭಟ್‌.

ಆಸಕ್ತ ವನಿತೆಯರು ಕೌಶಲ ತರಬೇತಿ ಮತ್ತು ಆರ್ಥಿಕ ನೆರವಿಗಾಗಿ ಕೆನರಾ ಬ್ಯಾಂಕ್‌ನ ಪ್ರಧಾನ ಕಚೇರಿಯ ದೂ: 080-22221581/ 080 22210557 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT