ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತದ ಸವಾಲು

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಧಾನಿ­ ನರೇಂದ್ರ ಮೋದಿಯವರು ಸ್ವತಃ ಪೊರಕೆ­ಯಿಂದ  ಕಸಗುಡಿ­ಸುವ ಮೂಲಕ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ದಿನ ಚಾಲನೆ  ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಅವರ ‘ನಿರ್ಮಲ ಭಾರತ’ ಕನಸನ್ನು ಮುಂದಿನ ಐದು ವರ್ಷ­ಗಳಲ್ಲಿ  ನನಸು ಮಾಡುವ ಪಣವನ್ನು ಅವರು ತೊಟ್ಟಿದ್ದಾರೆ.

ಇದಕ್ಕಾಗಿ  ₨ 2 ಲಕ್ಷ ಕೋಟಿ  ವೆಚ್ಚದಲ್ಲಿ  ಯೋಜನೆ ರೂಪಿಸಲಾಗಿದೆ. ಸ್ವತಃ ಪ್ರಧಾನಿ­ಗಳೇ ಕೈಯಲ್ಲಿ ಪೊರಕೆ ಹಿಡಿದು ಈ ಅಭಿಯಾನಕ್ಕೆ ಚಾಲನೆ ನೀಡಿರುವುದು ನಾಟಕೀಯ ಎಂದೆ­ನಿ­ಸು­ವಂತಹದ್ದು. ಆದರೆ ಸಶಕ್ತ ಸಾಂಕೇತಿಕತೆಯನ್ನೂ  ಧ್ವನಿಸುವಂತಹದ್ದು. ರಾಷ್ಟ್ರ­ಪತಿ ಸೇರಿದಂತೆ, ಸಚಿವರು, ರಾಜಕೀಯ ನೇತಾ­ರರು ಹಾಗೂ ಅಧಿ­ಕಾರಿ­ಗಳು ಸ್ವಚ್ಛತಾ ಪ್ರಮಾಣ ವಚನ ಸ್ವೀಕರಿಸಿ­ದ್ದಾರೆ.

50 ವರ್ಷಗಳ ಹಿಂದೆಯೂ, ಗಾಂಧಿ ಜಯಂತಿಯ ದಿನ­ವನ್ನು ‘ರಾಷ್ಟ್ರೀಯ ನೈರ್ಮಲ್ಯ ದಿನಾಚರಣೆ’­ಯಾಗಿ ರಾಷ್ಟ್ರದಲ್ಲಿ ಆಚರಿಸ­ಲಾ­ಗಿತ್ತು. ನೈರ್ಮಲ್ಯದ ಬಗ್ಗೆ ತಮ್ಮ ಜವಾಬ್ದಾರಿಯ ಕುರಿತಂತೆ ಜನರಲ್ಲಿ ಅರಿವನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು. ನಂತರವೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.  ಆದರೆ  ಈ ಬಗ್ಗೆ ನಾಗರಿಕ ಪ್ರಜ್ಞೆ ಇನ್ನೂ ಜಾಗೃತಗೊಂಡಿಲ್ಲ  ಎಂಬುದು ದುರದೃಷ್ಟದ ಸಂಗತಿ.

ನಮ್ಮ ಮನೆಗಳು ಸ್ವಚ್ಛವಾಗಿದ್ದರೆ ಸರಿ. ಸಾರ್ವಜನಿಕ ಸ್ವಚ್ಛತೆ ಎಂಬುದು ಬೇರೆಯವರು ನಿರ್ವಹಿಸಬೇಕಾದದ್ದು ಎಂಬಂಥ ಮನೋಭಾವ ಜಾತಿ ವ್ಯವಸ್ಥೆ­­ಯಿಂದ ಕೂಡಿದ ಭಾರತೀಯ ಸಮಾಜದಲ್ಲಿ ಅಂತರ್ಗತ. ಈ ಮನೋ­ಭಾವ ಮೊದಲಿಗೆ ಬದಲಾಗ ಬೇಕಿರುವುದು ಅವಶ್ಯ. ನಮ್ಮ ಶಾಲಾ ಪಠ್ಯಗಳು, ಎಳೆಯ ವಯಸ್ಸಿನಲ್ಲಿಯೇ ಈ ಬಗ್ಗೆ ಜಾಗೃತಿ ಮೂಡಿಸುವಂತಿರ­ಬೇಕು. ಅಭಿವೃದ್ಧಿ ಸಾಧಿಸುತ್ತಾ ನಗರಗಳು ತ್ವರಿತವಾಗಿ ಬೆಳೆದಂತೆ ಕಸ ವಿಲೇವಾರಿ ಸಮಸ್ಯೆಯೂ ಬೃಹದಾಕಾರ ತಾಳುತ್ತದೆ.

ಬೆಂಗಳೂರಿನ ಕಸವನ್ನು ಮಂಡೂರು ಗ್ರಾಮದಲ್ಲಿ ಸುರಿಯಲಾಗುತ್ತಿದ್ದು ಅಲ್ಲಿನ ಗ್ರಾಮಸ್ಥರು ಎದು­ರಿ­ಸುತ್ತಿರುವ ಸಮಸ್ಯೆ ಇದಕ್ಕೆ ಜ್ವಲಂತ ಉದಾಹರಣೆ.  ಕಸವನ್ನು ಮೂಲ­ದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಪ್ರತಿ­ಯೊಬ್ಬ ನಾಗರಿಕರೂ ನಿರ್ವಹಿಸದ ಹೊರತು ಸ್ವಚ್ಛ ಭಾರತ ಅಭಿಯಾನ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ದೊಡ್ಡದೊಂದು ಆಂದೋಲನವೇ ಆಗ­ಬೇಕು. ಇದು ಸುದೀರ್ಘವಾದ ಪಯಣ ಹಾಗೂ ನಿರಂತರವಾದುದು.

ಕಡಿಮೆ ಬಳಕೆ, ಮರು ಬಳಕೆ ಹಾಗೂ ಪುನರ್ ಸಂಸ್ಕರಿಸುವ ತತ್ವಗಳನ್ನು  ಪಾಲಿ­ಸ­ದಿ­ದ್ದಲ್ಲಿ ಕಸ ವಿಲೇವಾರಿ ಎಂಬುದು ಬೃಹದಾಕಾರದ ಸಮಸ್ಯೆಯಾಗಿ ಪರಿಸರ­ವನ್ನೂ ಹಾಳುಗೆಡವುತ್ತದೆ ಎಂಬುದು ಜನರ ಪ್ರಜ್ಞೆಯ ಆಳಕ್ಕಿಳಿಯ­ಬೇಕಿದೆ. ಭಾರತದಲ್ಲಿ ಶಿಶು ಮರಣ ಹಾಗೂ ಅಪೌಷ್ಟಿಕತೆಗೆ ಬಯಲು ಶೌಚಾ­ಲಯ ಪದ್ಧತಿಯೂ ಒಂದು ಕಾರಣ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಿದ್ದೂ ನಮ್ಮ ರಾಷ್ಟ್ರದಲ್ಲಿ ಶೌಚಾಲಯಗಳಿಗಿಂತ ಮೊಬೈಲ್ ಬಳಸು­ವವರ ಸಂಖ್ಯೆ ಹೆಚ್ಚಿದೆ ಎಂಬುದು ವಿಪರ್ಯಾಸ.

ದೇವಾ­ಲ­ಯಗಳಿಗಿಂತ ಶೌಚಾಲಯಗಳು ಮುಖ್ಯ ಎಂಬುದನ್ನು ನರೇಂದ್ರ ಮೋದಿ­ಯ­ವರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಜೈರಾಂ ರಮೇಶ್ ಅವರೂ ಈ ವಾದ ಮಂಡಿಸಿದ್ದರು. ಆದರೆ ಈ ವಿಚಾರದಲ್ಲಿ ಪ್ರಗತಿ ಸಾಧನೆಗೆ ಜನರಲ್ಲಿ ಹಾಸು­ಹೊಕ್ಕಾಗಿರುವ  ಮೂಢನಂಬಿಕೆಗಳೂ ಅಡ್ಡಬರುತ್ತವೆ ಎಂಬುದನ್ನು ಮರೆಯ­ಲಾ­ಗದು. ಹೀಗಾಗಿ ‘ಸ್ವಚ್ಛ ಭಾರತ’ ನಿರ್ಮಾಣದ ಹಾದಿ ಸಂಕೀರ್ಣ­ವಾ­ದದ್ದು. ಈ ಗುರಿ ಸಾಧನೆಗೆ  ಸರ್ಕಾರ, ಅಧಿಕಾರಶಾಹಿ ಹಾಗೂ ಜನ­ಸಾಮಾನ್ಯರು ಒಟ್ಟಾಗಿ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT