ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಧರ್ಮ ಮತ್ತು ಸ್ಪರ್ಧೆ

ಬೆಳದಿಂಗಳು
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಸ್ಪರ್ಧೆ ಎಂಬುದು ವರ್ತಮಾನದ ಬದುಕಿನಲ್ಲೊಂದು ಗೀಳಾಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಆರಂಭಿಸಿ ದೊಡ್ಡ ಸಂಸ್ಥೆಗಳ ಮುಖ್ಯಸ್ಥರ ತನಕ ಎಲ್ಲರೂ ಸ್ಪರ್ಧೆಯ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ಸ್ಪರ್ಧಾತ್ಮಕವಾಗಿರುವ ಜಗತ್ತಿನಲ್ಲಿ ಗೆಲ್ಲುವುದು ಹೇಗೆ ಎಂಬುದರ ಕುರಿತು ಪ್ರತಿಯೊಬ್ಬರೂ ದೊಡ್ಡ ದೊಡ್ಡ ಉಪದೇಶಗಳನ್ನು ನೀಡುತ್ತಿರುತ್ತಾರೆ. ಇದಕ್ಕಿಂತ ಭಿನ್ನವಾಗಿ ಯಾರು ಮಾತನಾಡಿದರೂ ಅದು ಪ್ರಾಯೋಗಿಕವಲ್ಲ ಎಂಬ ಟೀಕೆ ಕೇಳಿಬರುತ್ತದೆ.

ಈ ವಾದ ವಿವಾದಗಳನ್ನೆಲ್ಲಾ ಮರೆತು ಜಗತ್ತೇ ಸ್ಪರ್ಧಾತ್ಮಕ, ಬಲವುಳ್ಳವನಷ್ಟೇ ಈ ಜಗತ್ತಿನಲ್ಲಿ ಬದುಕುತ್ತಾನೆ ಎಂಬ ಸರಳೀಕೃತ ಸೂತ್ರಗಳನ್ನೆಲ್ಲಾ ಬದಿಗಿರಿಸಿ ಅರೆಕ್ಷಣ ತಣ್ಣಗೆ ಅಲೋಚಿಸಿದರೆ ನಾವೆಂಥ ಭ್ರಮೆಯಲ್ಲಿದ್ದೇವೆ ಎಂಬುದು ಅರ್ಥವಾಗುತ್ತದೆ. ಇದಕ್ಕೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ. ನಮ್ಮ ಸುತ್ತಲಿನ ಪ್ರಕೃತಿಯೇ ಇದಕ್ಕೆ ದೊಡ್ಡ ಉದಾಹರಣೆ. ಕಣ್ಣಿಗೆ ಕಾಣಿಸದೇ ಇರುವ ಏಕಕೋಶ ಜೀವಿಗಳಿಂದ ಆರಂಭಿಸಿ ಬೃಹತ್ ತಿಮಿಂಗಿಲದ ತನಕ ಎಲ್ಲವೂ ಈ ಪ್ರಪಂಚದಲ್ಲಿವೆ.

ಎಲ್ಲವೂ ಬದುಕುವುದಕ್ಕೆ ಬೇಕಿರುವ ಅವಕಾಶವೂ ಇದೆ. ಬರೇ ಬಲಶಾಲಿಗಳು ಬದುಕಬೇಕಿದ್ದರೆ ಡೈನೋಸಾರುಗಳಷ್ಟೇ ಇಲ್ಲಿ ಉಳಿದಿರಬೇಕಿತ್ತೇನೋ. ಕಾಡಿನಲ್ಲಿ ಹುಲಿ ಸಿಂಹಾದಿಗಳಷ್ಟೇ ಇರುತ್ತಿದ್ದವೇನೋ. ಆದರೆ ಹಾಗಾಗದೆ ಎಲ್ಲವೂ ಉಳಿದುಕೊಂಡಿರುವಲ್ಲಿಯೇ ಪ್ರಕೃತಿಯ ಸಂಕೀರ್ಣತೆ ಇದೆ. ಇದು ಮನುಷ್ಯ ಜೀವನಕ್ಕೆ ಬಂದರೂ ಭಿನ್ನವಲ್ಲ. ಪ್ರತಿಯೊಬ್ಬರೂ ವಿಶಿಷ್ಟರು. ಇದನ್ನು ಅರಿತರೆ ಸ್ಪರ್ಧೆಯೆಂಬ ಪರಿಕಲ್ಪನೆಯ ಪೊಳ್ಳುತನವೂ ಅರ್ಥವಾಗುತ್ತವೆ. ಪ್ರತಿಯೊಬ್ಬರೂ ಮತ್ತೊಬ್ಬರಲ್ಲಿ ಇಲ್ಲದ ಯಾವುದೋ ಒಂದು ಗುಣವನ್ನು ಹೊಂದಿರುತ್ತಾರೆ. ಅದನ್ನವರು ಬಳಸಿಕೊಳ್ಳಬೇಕಷ್ಟೇ.

ಸ್ಪರ್ಧೆ ಎಂಬುದನ್ನು ವೈಶಿಷ್ಟ್ಯ ಎಂಬ ಅರ್ಥದಲ್ಲಿ ಗ್ರಹಿಸುತ್ತಾ ಹೋದರೆ ಬದುಕು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ. ಎಲ್ಲರೂ ಎಂಜಿನಿಯರುಗಳೋ ವೈದ್ಯರೋ ಆಗಿಬಿಟ್ಟರೆ ಈ ಜಗತ್ತಿನ ಇತರ ಕೆಲಸಗಳನ್ನು ಮಾಡುವವರು ಯಾರು? ಇದೊಂದು ಸರಳ ಪ್ರಶ್ನೆಯಷ್ಟೇ ಅಲ್ಲ. ಗಂಭೀರವಾಗಿ ಆಲೋಚಿಸಿದರೆ ಹೊಸತೊಂದು ಜೀವನ ದರ್ಶನವನ್ನೇ ನೀಡಬಹುದಾದ ಪ್ರಶ್ನೆಯಿದು. ಈ ದೃಷ್ಟಿಯಲ್ಲಿ ಆಲೋಚಿಸುತ್ತಾ ಹೊರಟರೆ ಸ್ಪರ್ಧಾತ್ಮಕ ಜಗತ್ತಿನ ಪರಿಕಲ್ಪನೆಗೆ ಪರ್ಯಾಯವನ್ನು ಹುಡುಕಬಹುದು. ನಮ್ಮ ಬದುಕನ್ನು ಹೆಚ್ಚು ಸಹನೀಯಗೊಳಿಸಬಹುದು.

ಕಾಲ ಕಾಲಕ್ಕೆ ಈ ವಿಚಾರವನ್ನು ಮತ್ತೆ ಮತ್ತೆ ಅನೇಕ ಜ್ಞಾನಿಗಳು ಹೇಳಿದ್ದಾರೆ. ಗೀತಾಚಾರ್ಯ ಇದನ್ನು ಧರ್ಮ ಗ್ಲಾನಿಯಾಗುವುದು ಎನ್ನುತ್ತಾನೆ. ಪ್ರತಿಯೊಂದು ಜೀವಿಗೂ ಒಂದು ಸ್ವಧರ್ಮವಿರುತ್ತದೆ. ಅರ್ಥಾತ್ ಅದರ ಸಹಜ ಸ್ವಭಾವವೊಂದಿರುತ್ತದೆ. ಇದು ಪ್ರಕೃತಿಯ ಜೊತೆಗೆ ಅರ್ಥಾತ್ ಇಡೀ ಪ್ರಪಂಚದ ನಿರ್ವಹಣೆಗೆ ಅನುಗುಣವಾಗಿ ಇರುತ್ತದೆ. ಜೀವಿ ಇದನ್ನು ಮರೆತು ಮತ್ತೊಂದು ದಾರಿ ಹಿಡಿದರೆ ಈಗ ಮನುಷ್ಯ ಮಾಡುತ್ತಿರುವಂತೆ ಜಗತ್ತನ್ನು ಮಾಲಿನ್ಯದ ಕೂಪವನ್ನಾಗಿಸಲು ಹೊರಟರೆ ಪ್ರಕೃತಿ ಅದಕ್ಕೆ ಪ್ರತಿಕ್ರಿಯಿಸುತ್ತದೆ. ನೈಸರ್ಗಿಕ ವಿಕೋಪಗಳಲ್ಲಿ ಅದು ನಮ್ಮ ಕಣ್ಣಿಗೆ ಕಾಣಿಸುತ್ತದೆ.


ಧರ್ಮ ಗ್ಲಾನಿಯಾಗುವ ಪ್ರಕ್ರಿಯೆಯೂ ಇಂಥದ್ದೇ. ಮನುಷ್ಯ ಜೀವಿ ತನ್ನ ಸ್ವಧರ್ಮವನ್ನು ಮರೆತು ಮತ್ತೇನನ್ನೋ ಮಾಡಲು ಹೊರಟಾಗ ಜೀವಜಾಲದಲ್ಲೇ ಸಮತೋಲನ ತಪ್ಪುತ್ತದೆ. ಆಗ ದೇವರು ಅವತರಿಸಲೇಬೇಕಾಗುತ್ತದೆ. ಅದು ನೈಸರ್ಗಿಕ ವಿಕೋಪವೂ ಆಗಿರಬಹುದು. ಈ ಸ್ವಧರ್ಮ ಪಾಲನೆಯ ತರ್ಕವನ್ನು ಸೂಕ್ಷ್ಮವಾಗಿ ನೋಡಿದರೆ ಇಲ್ಲೆಲ್ಲ ಸ್ಪರ್ಧೆಗೆ ಅವಕಾಶವೇ ಇಲ್ಲ ಎಂಬುದು ತಿಳಿಯುತ್ತದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT