ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪ್ನಸದೃಶ ಕಲಾತಾಣಗಳಲಿ...

ಮರೆಯಲಿ ಹ್ಯಾಂಗ
Last Updated 28 ಜೂನ್ 2014, 19:30 IST
ಅಕ್ಷರ ಗಾತ್ರ

ಹಸಿರು ಸಿರಿಯನ್ನು ಮೈತುಂಬಾ ತೊಟ್ಟಿರುವ, ಅದ್ಭುತ ಮತ್ತು ಅಪಾರ ಶಿಲ್ಪಕಲಾ ಕುಸುರಿಯ ತವರು ಎನ್ನುವ ಹೆಗ್ಗಳಿಕೆಯ ನಮ್ಮ ನಾಡು ನನಗೆ ಸದಾ ಆಪ್ತ. ವಿದೇಶ ಪ್ರವಾಸಗಳಲ್ಲಿ ಅನೇಕ ಅದ್ಭುತ ಸ್ಥಳಗಳನ್ನು ನೋಡಿದ್ದರೂ, ನನ್ನ ಪಾಲಿಗೆ ಬೆರಗಿನಂತೆ ಕಾಣಿಸುವುದು ನಮ್ಮ ನೆಲದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು.

ಮೂರು ತಿಂಗಳ ಹಿಂದೆ ಬಾಗಲಕೋಟೆಯಲ್ಲಿ ‘ಇಂಗಳೆ ಮಾರ್ಗ’ ಚಿತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆಯ ಪ್ರವಾಸ ಕೈಗೊಂಡೆ. ಎರಡು ದಿನಗಳ ಆ ಪ್ರವಾಸದಲ್ಲಿ ಮಡದಿ ಜತೆಯಲ್ಲಿದ್ದಳು. ಸಂಗೀತ ನಿರ್ದೇಶಕ ಇಳೆಯರಾಜ ಅವರು ಹದಿನಾಲ್ಕು ವರುಷಗಳ ಹಿಂದೆ ಕೈಗೊಂಡಿದ್ದ ಕರ್ನಾಟಕ ಪ್ರವಾಸದಲ್ಲಿ ನಾನು ಅವರ ಜತೆಯಲ್ಲಿದ್ದೆ. ಆ ಪ್ರವಾಸದಲ್ಲಿ ಐಹೊಳೆಯ ಶಿಲ್ಪಸಿರಿಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೊದಲ ಬಾರಿಗೆ ‘ದೇಗುಲಗಳ ತೊಟ್ಟಿಲು’ ಐಹೊಳೆಗೆ ಭೇಟಿ ನೀಡಿದ್ದ ಕ್ಷಣ, ಶಿಲ್ಪಕಲೆಯ ರಸಾನುಭವಕ್ಕೆ ಕಾರಣವಾಯಿತು. ಆರನೇ ಶತಮಾನದಲ್ಲಿಯೇ ನಮ್ಮ ನೆಲದಲ್ಲಿ ಎಂಥ ಅದ್ಭುತ ಶಿಲ್ಪಿಗಳಿದ್ದರು, ನುರಿತ ಕಲಾವಿದರಿದ್ದರು ಎನ್ನುವ ಸೋಜಿಗ ಉಂಟಾಯಿತು.

ಕಲಾವೈಭವ
ಹಂಪಿಯ ಕಲಾವೈಭವಕ್ಕೆ ಸರಿ ಸಮಾನಾಂತರವಾಗಿ ಐಹೊಳೆಯ ಕಲಾಕೃತಿಗಳು ನನಗೆ ಕಾಣುತ್ತವೆ. ‘ಲಾಡ್‌ಖಾನ್‌’, ‘ದುರ್ಗಾ ದೇವಾಲಯ’ ಸೇರಿದಂತೆ ಇಲ್ಲಿನ ಐತಿಹಾಸಿಕ ದೇಗುಲಗಳ ಶಿಲ್ಪಕಲಾ ವೈಭವವನ್ನು ಅಪಾರವಾಗಿ ಆಸ್ವಾದಿಸಿದೆ. ಬಗೆ ಬಗೆಯ ರಚನೆಗಳು, ಶಿಲ್ಪ ವೈವಿಧ್ಯಗಳು ಯೋಚನೆ–ಆಲೋಚನೆಗೆ ಕಾರಣವಾಗುವಂತೆ ಮನವನ್ನೂ ತಣಿಸಿದವು. ಐಹೊಳೆಯಲ್ಲಿ ಒಂದು ಜಾಗದಲ್ಲಿ ನಿಂತು ಒಂದು ಸ್ಮಾರಕವನ್ನು ಕಂಡೆ. ಆಸೆ ತಣಿಯಲಿಲ್ಲ. ಎತ್ತರವಾದ ಜಾಗಕ್ಕೆ ಓಡಿದೆ. ಪ್ರತಿ ಸ್ಮಾರಕಗಳು ಎತ್ತರದ ಸ್ಥಳಗಳಲ್ಲಿ ಯಾವ ಯಾವ ಕೋನಗಳಲ್ಲಿ ಕಾಣುತ್ತವೆ ಎನ್ನುವ ಕುತೂಹಲ ನನ್ನದ್ದು. ಪಕ್ಷಿನೋಟ ಅನ್ನುತ್ತಾರಲ್ಲ ಆ ರೀತಿ. ನನಗೆ ಅಲ್ಲಿನ ಪ್ರತಿ ಕಲ್ಲುಗಳೂ ಕಲಾಕೃತಿಗಳಾಗಿಯೇ ಕಂಡಿವೆ. ಇಷ್ಟೆಲ್ಲ ಕಲಾಸೊಬಗು ಸವಿದ ಕೆಲವೇ ಕ್ಷಣಗಳಲ್ಲಿ ಮನದಲ್ಲಿ ಬೇಸರದ ಛಾಯೆಯೂ ಮೂಡಿತು. ಈ ವಾತಾವರಣದಿಂದ ಸ್ವಲ್ಪ ಹೊರ ಬಂದು ಸುತ್ತಮುತ್ತ ಕಣ್ಣು ಹರಿಸಿದಾಗ ಬೇಸರ ನೋವಿನ ರೂಪ ತಾಳಿತು.

ಐಹೊಳೆಯ ಪರಿಸರ ಮತ್ತು ಹೊರವಲಯದಲ್ಲಿ ಸುಮಾರು 50–60 ಅತ್ಯುತ್ತಮವಾದ ಕಲಾತ್ಮಕ ನೆಲೆಗಳಿವೆ. ಆದರೆ ಆ ಸ್ಮಾರಕಗಳು ದನಗಳನ್ನು ಕಟ್ಟಲು, ಮನುಷ್ಯರು ವಾಸ ಮಾಡಲು ಇಲ್ಲವೆ ಬಚ್ಚಲು ಮನೆಗಳಾಗಿ ಪರಿವರ್ತನೆಗೊಂಡಿವೆ. ಸ್ಮಾರಕಗಳ ಒಳಗಿನ ವಿಗ್ರಹಳನ್ನು ಕಿತ್ತು ಎಸೆದಿದ್ದಾರೆ. ಇತಿಹಾಸ ಪಠ್ಯದಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಆಕ್ರಮಣ ಓದಿದ್ದ ನನಗೆ ನಮ್ಮವರೇನು ಕಡಿಮೆ ಇಲ್ಲ ಎನಿಸಿತು. ‘ಐ’ಹೊಳೆ ಕಣ್ಣೀರ ಹೊಳೆ ಎನ್ನುವಂತೆ ಮನಸ್ಸು ಭಾರವಾಯಿತು. 

ಬಾದಾಮಿಯಲ್ಲಿ ಮುಸ್ಸಂಜೆ
ಬಾದಾಮಿ ತಲುಪಿದಾಗ ಮುಸ್ಸಂಜೆ. ಅಲ್ಲಿಗೆ ನನ್ನದು ಎರಡನೇ ಬಾರಿಯ ಪ್ರವಾಸ. ಇಳೆಯರಾಜ ಅವರ ಜತೆ ಬಾದಾಮಿಗೆ ಹೋಗಿದ್ದು. ಅಲ್ಲಿನ ವಿಶ್ವವಿಖ್ಯಾತ ಗುಹಾಲಯಗಳು ನನಗೆ ಎಂದೆಂದಿಗೂ ರೋಮಾಂಚನಕ್ಕೆ ಕಾರಣವಾಗುವ ಸ್ಥಳಗಳು. ಮೊದಲ ಬಾರಿ ನಾನು ಕಂಡ ಬಾದಾಮಿಗೂ ಈಗಿನ ಬಾದಾಮಿಗೂ ವ್ಯತ್ಯಾಸವಿದೆ. ಅಂಗಡಿ ಮತ್ತು ಜನವಸತಿಯಿಂದ ಮುಕ್ತವಾಗಿದ್ದರೆ ಈ ಪರಿಸರಕ್ಕೆ ಮತ್ತಷ್ಟು ಹೊಳಪು ಸಿಕ್ಕುತ್ತಿತ್ತು. ಗುಹಾಲಯದಲ್ಲಿರುವ ನಟರಾಜನ ವಿಗ್ರಹಕ್ಕೆ ಹಗ್ಗವನ್ನು ಬೇರೆ ಬೇರೆ ಕೋನಗಳಲ್ಲಿ ಹಿಡಿದರೆ ಸುಮಾರು 80 ಭಂಗಿಗಳ ನಾಟ್ಯ ಶೈಲಿ ಕಾಣುತ್ತದೆ. ಒಂದೇ ಕೆತ್ತನೆಯಲ್ಲಿ ವಿಭಿನ್ನ ಶೈಲಿಗಳು ಕಾಣಿಸುವುದು ಅದ್ಭುತ.

ಐಹೊಳೆ ಮತ್ತು ಬಾದಾಮಿಗೆ ಹೋಲಿಸಿದರೆ ಪಟ್ಟದಕಲ್ಲು ನಿರ್ವಹಣೆಯ ದೃಷ್ಟಿಯಿಂದ ಚೆನ್ನಾಗಿದೆ. ಅಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಕಲಾವೈಭವನ್ನು ಸೂಕ್ಷ್ಮವಾಗಿ ನೋಡಿದೆ. ನಾನು ಗಮನಿಸಿದಂತೆ ಪ್ರಾಕೃತಿಕ ಏರುಪೇರಿನಿಂದ ಇಲ್ಲಿನ ಒಂದಿಷ್ಟು ಕಲ್ಲುಗಳು ಸವೆದುಹೋಗಿದೆ. ‘ಇಲ್ಲೂ ಆಕ್ರಮಣವಾಗಿತ್ತು ಸರ್. ನಂತರದ ದಿನಗಳಲ್ಲಿ ಎಲ್ಲರನ್ನೂ ತೆರವು ಮಾಡಿಸಿದೆವು. ಈಗ ನಿರ್ವಹಣೆ ಚೆನ್ನಾಗಿದೆ’ ಎಂದು ಪಟ್ಟದಕಲ್ಲಿನಲ್ಲಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಬಾದಾಮಿ ಮತ್ತು ಐಹೊಳೆಯಲ್ಲೂ ಈ ರೀತಿಯಾಗಿದ್ದರೆ ಎಷ್ಟು ಚೆಂದವಿತ್ತು.

ಪ್ರದರ್ಶನ ಗುಣ ಕಡಿಮೆ
ನಾನು ಒಬ್ಬ ಕಲಾವಿದ. ಪ್ರತಿ ಕಲಾಕೃತಿಯ ಕುಸುರಿ ಕೆಲಸವನ್ನು ಕನಿಷ್ಠ ಅರ್ಧಗಂಟೆಯಾದರೂ ಸೂಕ್ಷ್ಮವಾಗಿ ನೋಡುತ್ತೇನೆ. ಬಾದಾಮಿ, ಪಟ್ಟದಕಲ್ಲು, ಐಹೊಳೆಯ ಕಲಾಕೃತಿಗಳ ರಕ್ಷಣೆ ಸೂಕ್ತವಾಗಿ ನಡೆಯುತ್ತಿಲ್ಲ ಎನ್ನುವುದು ನನಗೆ ಬೇಸರಕ್ಕೆ ಕಾರಣ. ನಾನು ಟರ್ಕಿ ಮತ್ತು ಮಸ್ಕತ್‌ನ ಪ್ರವಾಸ ಮಾಡಿದ್ದೇನೆ. ಅಲ್ಲಿ ಮೂರ್ತಿಪೂಜೆ ಇಲ್ಲ. ಶಿಲ್ಪಕಲೆಯೂ ಇಲ್ಲ. ಆದರೆ ಮರಗಿಡಗಳು ಬೆಳೆದಿರುವ ಒಂದು ಸಣ್ಣ ಸ್ಥಳವಿದ್ದರೂ ಪ್ರವಾಸಿ ತಾಣವನ್ನಾಗಿ ರೂಪಿಸುತ್ತಾರೆ.

ಟರ್ಕಿಯ ಬೀಚ್‌ನಲ್ಲಿ ಕಲ್ಲುಗಳನ್ನು ಮೃದಂಗಗಳನ್ನು ರಾಶಿ ಮಾಡಿದಂತೆ ಕೆತ್ತಿದ್ದಾರೆ. ಆ ಸ್ಥಳಗಳಲ್ಲಿ ಮನಸೆಳೆಯುವ ರಮಣೀಯವಾದದ್ದೇನೂ ಇಲ್ಲ. ಆದರೂ, ಇರುವುದನ್ನೇ ಪ್ರವಾಸಿಗಳ ಆಕರ್ಷಕ ತಾಣಗಳನ್ನಾಗಿ ರೂಪಿಸುವ ಪ್ರಯತ್ನ ಅವರದು. ನಮಗೆ ಪ್ರದರ್ಶನಗುಣ ಮತ್ತು ಮಾರುಕಟ್ಟೆಯ ವ್ಯಾಪ್ತಿ ಗೊತ್ತಿಲ್ಲ. ಆ ಅರಿವು ಇದ್ದಿದ್ದರೆ, ಈ ಚಾಲುಕ್ಯ ವಾಸ್ತುಶಿಲ್ಪ ಮತ್ತಷ್ಟು ಅಂತರರಾಷ್ಟ್ರೀಯ ಪ್ರವಾಸಿಗರ ಕೇಂದ್ರವಾಗುತ್ತಿತ್ತು.

ಮತ್ತೆ ಮತ್ತೆ ಚಾಲುಕ್ಯರ ಈ ತಾಣಗಳಿಗೆ ತೆರಳುವ ಮನಸ್ಸಿದೆ. ಪ್ರತಿ ಕಲ್ಲುಗಳೂ ನನಗೆ ಕಲಾಕೃತಿಯಂತೆ ಕಾಣುತ್ತವೆ. ಪ್ರವಾಸದಿಂದ ಬಂದ ನಂತರ ಈ ಸ್ಥಳಗಳ ವಿಪರ್ಯಾಸವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಕಥೆ ಬರೆಯಬೇಕು ಎನ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT