ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪ್ನಾಂತರಂಗ! ಕನಸುಗಳನ್ನು ಶೋಧಿಸುತ್ತಾ...

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

“ಡಾಕ್ಟ್ರೇ ತುಂಬಾ ಕೆಟ್ಟ ಕನಸು ಬೀಳುತ್ತೆ, ಅದು ಎಲ್ಲಿ ನಿಜವಾಗಿ ಬಿಡುತ್ತೋ ಅಂಥ ಭಯ ಆಗುತ್ತೆ. ಕನಸೇ ಇಲ್ದೇ ಇರೋ ಥರ ನಿದ್ದೆ ಬರೋ ಹಾಗೆ ಮಾಡ್ಬಿಡಿ ಡಾಕ್ಟ್ರೇ”.

‘ಬೆಳಗಿನ ಜಾವ ಬೀಳೋ ಕನಸು ನಿಜವಾಗತ್ತೆ ಅಂತಾರೆ. ಯಾರಿಗೋ ಕೇಡಾಗುತ್ತೆ ಅಂದರೆ ಮದುವೆ ಕನಸು ಬೀಳುತ್ತೆ ಅಂತಾರೆ ಹೌದಾ ಡಾಕ್ಟ್ರೇ?’
ಕನಸಿನ ಬಗ್ಗೆ ಎಷ್ಟೊಂದು ಪ್ರಶ್ನೆಗಳು!  ಕನಸು ಏಕೆ ಬೀಳುತ್ತದೆ? ಅದರ ಹಿಂದಿರುವುದೇನು? ಅದು ಭವಿಷ್ಯವನ್ನು ಸೂಚಿಸುತ್ತದೆಯೇ ಇತ್ಯಾದಿ,

ಇತ್ಯಾದಿ, ನಮಗೆ ಸಾಮಾನ್ಯ ಜ್ಞಾನ ಅಥವಾ ವಿಜ್ಞಾನದ ತಿಳಿವಳಿಕೆ ಸಾಕಷ್ಟಿದೆ ಎಂದರೂ ಕನಸಿನ ಬಗ್ಗೆ “ನಮ್ಮ ಸುಪ್ತ ಮನಸ್ಸಿನ ಭಾವನೆಗಳನ್ನು ನಿದ್ರೆಯಲ್ಲಿ ಹೊರತರುವ ಒಂದು ವಿಧಾನ ಕನಸು” ಎಂಬಲ್ಲಿಗೆ ಅದು ಸೀಮಿತವಾಗಿರುತ್ತದೆ.

ಕನಸಿನ ವಿವಿಧ ಉಪಯುಕ್ತತೆ, ಅದರ ಆಸಕ್ತಿಪೂರಕ ಆಯಾಮಗಳನ್ನು ವೈಜ್ಞಾನಿಕವಾಗಿ, ಇಂದಿನ ಆವಿಷ್ಕಾರಗಳ ಹಿನ್ನೆಲೆಯಲ್ಲಿ ತೆರೆದಿಡುವ ಪ್ರಯತ್ನ ಇದು. ಅಂದರೆ ಸರಳವಾಗಿ ಹೇಳುವುದಾದರೆ ನಾವು ಕನಸು ಕಾಣುವುದು ನಮ್ಮ ಆರೋಗ್ಯಕ್ಕೆ ಹೇಗೆ ಅವಶ್ಯಕ ಎಂಬುದನ್ನು ವಿವರಿಸುವ ಕೆಲಸ!

ಮನೋವೈದ್ಯಕೀಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ನಮಗೆ ಬೇಕೋ ಬೇಡವೋ ನಾವೆಲ್ಲರೂ ಕವಿಗಳು ಎಂದ. ಏಕೆಂದರೆ ರಾತ್ರಿ ನಿದ್ದೆಯಲ್ಲಿ ನಾವೆಲ್ಲರೂ ಕನಸು ಕಾಣುತ್ತೇವೆ, ಏಕೆ? ಕಾವ್ಯದ ಮೂಲಕ ನಮ್ಮ ಅಂತರಂಗವನ್ನು ಹೊರಹಾಕಿದಂತೆ ಕನಸುಗಳಲ್ಲಿಯೂ ನಮ್ಮ ಸುಪ್ತ ಪ್ರಜ್ಞೆಯಲ್ಲಿ ಹುದುಗಿರುವ ವಿಷಯಗಳು ಹೊರಬರುತ್ತವೆ ಎಂಬ ಕಾರಣದಿಂದ.

ಫ್ರಾಯ್ಡ್‌ನ ಅಭಿಪ್ರಾಯ ನಿಜವಲ್ಲದ, ಆದರೆ ನಮಗೆ ನಿಜವಾಗಬೇಕೆನಿಸುವ ಬಯಕೆಗಳನ್ನು ಕನಸುಗಳು ಬಿಂಬಿಸುತ್ತವೆ ಎಂದಾಗಿತ್ತು. ಉದಾಹರಣೆಗೆ ಆಫೀಸಿನ ಕಟ್ಟಡ ಉರಿದು ಬೂದಿಯಾಗುವಂತೆ ಕನಸು ಬಿತ್ತು ಎಂದುಕೊಳ್ಳಿ.

ಫ್ರಾಯ್ಡ್‌ನ ಪ್ರಕಾರ ಹಾಗೆ ಕನಸು ಕಂಡ ವ್ಯಕ್ತಿಗೆ ಆಫೀಸಿನಲ್ಲಿ ತೊಂದರೆಯಾಗುತ್ತಿದ್ದು, ಆತ ಸಹಿಸಿಕೊಂಡು ನಗುನಗುತ್ತಲೇ ಆಫೀಸಿಗೆ ಹೋಗುತ್ತಿದ್ದಿರಬೇಕು. ಸುಪ್ತ ಮನಸ್ಸಿನಲ್ಲಿ ಆತನಿಗಿದ್ದ ಆಫೀಸಿನವರ ಮೇಲಿನ ಆಕ್ರೋಶ ಕನಸಿನ ಮೂಲಕ ಹೊರಬೀಳುತ್ತದೆ.

ಫ್ರಾಯ್ಡ್‌ನ ‘ಥಿಯರಿ’ ಆಕರ್ಷಕವಾಗಿಯೇನೋ ಇತ್ತು. ಆದರೆ ನಮಗೆ ಬೀಳುವ ವಿವಿಧ ಕನಸುಗಳನ್ನು ವಿವರಿಸುವಷ್ಟು ಶಕ್ತವಾಗಿರಲಿಲ್ಲ. ಹಾಗಾಗಿ ಆತನ ""Dreams are the royal road to our unconscious”- ಕನಸುಗಳು ಸುಪ್ತ ಮನಸ್ಸಿಗೆ ರಾಜಮಾರ್ಗ ಎಂಬ ಪ್ರಸಿದ್ಧ ಹೇಳಿಕೆ ಚಾರಿತ್ರಿಕವಾಗಿಯಷ್ಟೇ ಮುಖ್ಯವಾಯಿತು.

ಇಂದಿನ ವೈಜ್ಞಾನಿಕ ಸಂಶೋಧನೆಗಳು ನಮ್ಮ ಮೆದುಳಿನ ಕಾರ್ಯಗಳನ್ನು, ನಿದ್ರೆಯನ್ನು ವಿವರವಾಗಿ ಅಧ್ಯಯನ  ಮಾಡಿವೆಯಷ್ಟೆ. ಇದರ ಒಂದು ಮುಖ್ಯ ಪ್ರಕ್ರಿಯೆಯಾಗಿ ‘ಕನಸಿ’ನ ಬಗ್ಗೆ ಐದು ಮುಖ್ಯ ಸಿದ್ಧಾಂತಗಳನ್ನು ಪಟ್ಟಿ ಮಾಡಿದೆ.

ಅವುಗಳಲ್ಲಿ ಮೊದಲನೆಯದು, ನಾವು ಕನಸು ಕಾಣುವುದು ನಮ್ಮನ್ನು ನಿಜಜೀವನದಲ್ಲಿ ಬರಬಹುದಾದ ಆತಂಕದ ಸನ್ನಿವೇಶಗಳಿಗೆ ಸಜ್ಜು ಮಾಡುತ್ತದೆ. ಅಂದರೆ ಕನಸಿನಲ್ಲಿ ಹೊಡೆದಾಡುವುದು, ಮುಳುಗುವುದು, ಯಾರೋ ಅಟ್ಟಿಸಿಕೊಂಡು ಬರುವುದು, ಸಾರ್ವಜನಿಕವಾಗಿ ಅಪಮಾನಕ್ಕೊಳಗಾಗುವುದು ಮೊದಲಾದ ಸನ್ನಿವೇಶಗಳು ಬರುತ್ತವೆಯಷ್ಟೆ.

ಮಿದುಳು ಇಂಥ ಸನ್ನಿವೇಶಗಳು ಎದುರಾದರೆ ತಾನು ಹೇಗೆ ವರ್ತಿಸಬೇಕು ಎಂಬುದನ್ನು ‘ರಿಹರ್ಸಲ್’ ಮಾಡಿಕೊಳ್ಳುವ ಸಮಯ ಇದು. ಇದು ‘ರಿಹರ್ಸಲ್’ ಅಷ್ಟೇ. ಆದ್ದರಿಂದ ನಾವು ಕೈಕಾಲು ಆಡಿಸದ ಹಾಗೆ ಸ್ನಾಯುಗಳನ್ನು ಮೆದುಳು ‘ನಿಷ್ಕ್ರಿಯ’ ಗೊಳಿಸಿರುತ್ತದೆ!  ಹಾಗಾಗಿಯೇ ಎಷ್ಟೇ ಓಡುವ /ಹೊಡೆಯುವ ಕನಸು ಬಿದ್ದರೂ ನಾವು ನಿದ್ದೆ ಮಾಡುತ್ತಲೇ ಇರುತ್ತೇವೆ. ನಿಜವಾಗಿ ಓಡುವುದಿಲ್ಲ!

ಎರಡನೆಯ ಸಿದ್ಧಾಂತ ನಮ್ಮ ನೆನಪುಗಳನ್ನು ಸರಿಯಾಗಿ ಜೋಡಿಸಿಡುವ ಕೆಲಸವನ್ನು ಕನಸುಗಳು ಮಾಡುತ್ತವೆ. ದಿನವೆಲ್ಲಾ ಮಾಹಿತಿಯನ್ನು ಕಲೆಹಾಕುತ್ತಲೇ ಇರುತ್ತೇವಷ್ಟೆ. ಅವುಗಳಲ್ಲಿ ಬೇಡವಾದದ್ದನ್ನು, ಮರೆಯಬಹುದಾದ್ದನ್ನು ಹೊರಗೆಸೆದು, ಬೇಕಾದ್ದನ್ನು, ನೆನಪಿಡಬೇಕಾದ್ದನ್ನು ಮಾತ್ರ ಕನಸು ಕಾಣುವ ಸಮಯದಲ್ಲಿ ಮೆದುಳು ಸಂಗ್ರಹಿಸಿಡುತ್ತದೆ. ಮೂರನೆಯದು ನಮ್ಮ ಯೋಚನಾ ವ್ಯೂಹಗಳನ್ನು ಕನಸು ಸರಿಪಡಿಸುತ್ತದೆ ಎಂಬುದು.

ಸರಿಯಿಲ್ಲದ ಕೆಲವನ್ನು ಅಳಿಸಿಹಾಕುತ್ತದೆ. ಕಂಪ್ಯೂಟರ್‌ನಲ್ಲಿ ನಾವು ’'format'’  ಮಾಡುವ ಹಾಗೆ! ನಂತರದ ‘ಥಿಯರಿ’ ಕನಸುಗಳು ‘ಮನೋಚಿಕಿತ್ಸೆ’ಯ ರೀತಿಯಲ್ಲಿ ಕೆಲಸ ಮಾಡುತ್ತವೆ. ಕನಸುಗಳಲ್ಲಿ ನಾವು ನಮಗೆ ಎಲ್ಲರೆದುರಿಗೆ ಮಾಡಲಾಗದ, ನಾಚಿಕೆ ಎನಿಸಬಹುದಾದ ಸಂಗತಿಗಳನ್ನು ಮಾಡುತ್ತೇವೆ.

ಹಾಗೆ ಅಂಥಹ ಭಾವನೆಗಳನ್ನು ಸುರಕ್ಷಿತವಾಗಿ ಹೊರಹಾಕಬಹುದಾದ ಒಂದು ‘ನಮ್ಮದೇ’ ಆದ ಸ್ವಂತ 'space' ಅನ್ನು ಕನಸುಗಳು ನೀಡುತ್ತವೆ. ಹಾಗಾಗಿ ‘ಕನಸು’ಗಳು ಒಂದು ರೀತಿಯಲ್ಲಿ ‘ಸ್ವಂತ’ದ psychotherapy- ಮನೋಚಿಕಿತ್ಸೆ. ಕೊನೆಯ ಸಿದ್ಧಾಂತ ತುಂಬಾ ಸರಳವಾದದ್ದು. ಕನಸುಗಳಿಗೆ ಯಾವ ಅರ್ಥವೂ ಇಲ್ಲ. ಅದು ಮೆದುಳು ವಿಶ್ರಾಂತಿಗಾಗಿ ಆಗಾಗ ವಿರಮಿಸುವಾಗಲೂ ಕೆಲಸ ನಡೆಯುತ್ತಿದೆ ಎಂಬುದಕ್ಕೆ ಗುರುತು’ ಎನ್ನುವುದು ಈ ಥಿಯರಿ.

ಮೆದುಳಿನ ಕಾರ್ಯದ ಬಗೆಗಿನ ಸಂಶೋಧನೆಗಳು ಸ್ಪಷ್ಟವಾಗಿ ‘ಕನಸು’ ಕಾಣುವುದೂ, ಅವುಗಳನ್ನು ‘ಚೆನ್ನಾಗಿ’ ಕಾಣುವುದೂ ಮಾನವ ಮೆದುಳಿನ ಪ್ರಮುಖ ಸಾಮರ್ಥ್ಯವಾಗಿ ಗುರುತಿಸುತ್ತವೆ. ಪ್ರಯೋಗಗಳಲ್ಲಿ ಉಪಯೋಗಿಸುವ ಪ್ರಾಣಿಗಳು ಕನಸು ಕಾಣುವುದನ್ನು ಈ ಸಂಶೋಧನೆಗಳು ದಾಖಲಿಸಿವೆಯಷ್ಟೆ.

ಆದರೆ ಮಾನವ ಮೆದುಳು ಕನಸು ಕಾಣುವುದರಿಂದ ತನ್ನ ಕ್ರಿಯಾಶೀಲ ಸಾಮರ್ಥ್ಯ, ಸೃಜನಶೀಲತೆ, ಸಮಸ್ಯೆಗಳನ್ನು ಬಿಡಿಸುವ ಶಕ್ತಿ ಇವುಗಳನ್ನು ಹೆಚ್ಚಿಸಿಕೊಂಡಂತೆ ಪ್ರಾಣಿಗಳ ಮೆದುಳಿಗೆ ಸಾಧ್ಯವಿಲ್ಲ.

‘ಕನಸು’ಗಳು ಉಪಯುಕ್ತ ಎಂಬುದು ಬಲವಾಗಿಯೇ ಸಿದ್ಧವಾದಂತಾಯಿತು. ಆದರೆ ‘ಕನಸು’ಗಳು ಉಪಯುಕ್ತ ಎಂದಾಕ್ಷಣ ಎದುರಾಗುವ ಸಾಮಾನ್ಯ ಪ್ರಶ್ನೆ “ನಮ್ಮ ಕನಸು ವಿಶ್ಲೇಷಿಸಿ -analyse ಮಾಡಿ ನಮ್ಮ ಮನಸ್ಸಿನಲ್ಲಿ ಏನಿದೆ ಅಂತ ಹೇಳಿಬಿಡ್ತೀರಾ?”.

  ‘ಡ್ರೀಮ್ಸ್’ ಎಂಬ ಪದವನ್ನು ಗೂಗಲ್‌ನಲ್ಲಿ ಕ್ಲಿಕ್ಕಿಸಿದಾಕ್ಷಣ ಮಿಲಿಯನ್‌ಗಟ್ಟಲೆ ತಾಣಗಳು ತೆರೆದುಕೊಳ್ಳುವುದು "Dream interpretation"- ಕನಸುಗಳ ವಿಶ್ಲೇಷಣೆ ಬಗ್ಗೆ. ಆದರೆ ಈ ವಿಶ್ಲೇಷಣೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

ಅವರವರ ಕ್ರಿಯಾಶೀಲತೆ, ಸೃಜನಶೀಲತೆಗೆ ತಕ್ಕಂತೆ ಒಂದು ಕನಸನ್ನು ಹೇಗೆ ಬೇಕಾದರೂ ವಿಶ್ಲೇಷಿಸಬಹುದು. ಒಂದು ಗೆರೆ (ರೇಖೆ) ಒಬ್ಬರಿಗೆ ‘ಗೆರೆ’ಯಂತೆ ಕಂಡರೆ, ಮತ್ತೊಬ್ಬರಿಗೆ ಕೋಲಿನ ಹಾಗೆ ಕಾಣಬಹುದು, ಇನ್ನೊಬ್ಬರಿಗೆ ‘ಪರಬ್ರಹ್ಮ’, ‘ದೇವರು ಒಂದೇ’ ಎಂದೂ ಅನ್ನಿಸಬಹುದು.

ಮಗದೊಬ್ಬರಿಗೆ ಅದು ‘ಮುಚ್ಚಿರುವ ಬಾಗಿಲ’ ನ್ನು ಸೂಚಿಸಬಹುದು. ಗೆರೆ ಬರೆದವನ ಮನಸ್ಸಿನಲ್ಲಿ ಏನಿತ್ತು, ಆತ ಏಕೆ ಗೆರೆ ಬರೆದ ಎಂಬ ಪ್ರಶ್ನೆಗೆ ಇವ್ಯಾವುದೂ ಉತ್ತರವಲ್ಲವಷ್ಟೆ! ಹೆಚ್ಚೆಂದರೆ ಈ ಉತ್ತರಗಳು ‘ಗೆರೆ’ಯನ್ನು ನೋಡುವವರು ಮೆದುಳು ಯೋಚಿಸುವ, ಕಲ್ಪಿಸುವ ರೀತಿಯನ್ನು ನಮಗೆ ತಿಳಿಸುತ್ತದೆ. ಹಾಗೆಯೇ ಕನಸಿನ ವಿಷಯದಲ್ಲಿಯೂ ಇದು ನಿಜ.

ಕನಸುಗಳ ಬಗ್ಗೆಯೇ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ತಾಣವಾದರೂ ಹೇಳುವುದು ಎಲ್ಲರಿಗೂ ಬೀಳುವ ‘ಕೆಲವು’ ಕನಸುಗಳ ವಿಶ್ಲೇಷಣೆಯ ಬಗ್ಗೆ ಮಾತ್ರ. ಹಾಗಾಗಿ ನಿಮ್ಮ ಕನಸುಗಳನ್ನು ವಿಶ್ಲೇಷಿಸುವ ಯಾರೇ ಆದರೂ ಒಂದೋ ಜನಪ್ರಿಯ, ಸಾರ್ವಕಾಲಿಕ ಥಿಯರಿಗಳನ್ನು ನಿಮ್ಮ ಮುಂದಿಡುತ್ತಾರೆ ಅಥವಾ ಅವರ ಮನಸ್ಸಿನ ಯೋಚನೆಯ ರೀತಿಯನ್ನು  ನಿಮ್ಮ ಕನಸಿನ ಮೂಲಕ ತೆರೆದಿಡುತ್ತಾರೆ ಅಷ್ಟೇ!

ನಾವು ನಿಜವಾಗಿ ತಲೆಕೆಡಿಸಿಕೊಳ್ಳಬೇಕಾದ್ದು ನಾವು ‘ಏಕೆ’ ಕನಸು ಕಾಣಬೇಕು? ಎಂಬ ಬಗ್ಗೆ. ಅದರಿಂದ ಆರೋಗ್ಯಕ್ಕೆ ಏನು ಲಾಭವಿದೆ ಎಂಬ ಬಗ್ಗೆ. ‘ಖಿನ್ನತೆ’ ಯನ್ನು ನಾವು ಎಚ್ಚರವಾಗಿರುವಾಗಿನ ‘ಮನಸ್ಸಿ’ನ ಸ್ಥಿತಿ ಎಂದು ಭಾವಿಸುತ್ತೇವೆ. ಆದರೆ ಸಂಶೋಧನೆಗಳು ತೋರಿಸುವುದು ಖಿನ್ನತೆ ನಮ್ಮ ‘ರಾತ್ರಿ’ಗಳಿಗೆ, ‘ಮೆದುಳಿ’ಗೆ, ಮೆದುಳಿನ ‘ನಿದ್ದೆ’ಗೆ ಸಂಬಂಧಿಸಿದೆ ಎನ್ನುವುದನ್ನು.

ಜನರು ಸಾಮಾನ್ಯವಾಗಿ ಅಂದುಕೊಳ್ಳುವ ‘ಕನಸು ರಹಿತ’ ನಿದ್ದೆ ಎಂದರೆ ‘ಸುಖನಿದ್ರೆ’ ಎನ್ನುವುದು ನಿಜವಲ್ಲ. ಬದಲಿಗೆ ಭಾವನೆಗಳನ್ನು ಹೊರಹಾಕುವ ಒಳ್ಳೆ-ಕೆಟ್ಟ ಕನಸುಗಳನ್ನು ಹೊರಹಾಕುವ ನಿದ್ದೆ ‘ನಿದ್ರಾಚಕ್ರ’ದ ಪ್ರಮುಖ ಭಾಗ.

ಖಿನ್ನತೆಯಲ್ಲಿ ಇದು ಸರಿಯಾಗಿ ಕೆಲಸ ಮಾಡುವುದಿಲ್ಲ. ಕನಸುಗಳಿಲ್ಲದ ನಿದ್ರೆ ‘ಪುನಃಶ್ಚೇತನ’ ನೀಡುವುದಿಲ್ಲ, ಬದಲಾಗಿ ಮತ್ತಷ್ಟು ದಣಿವುಂಟು ಮಾಡುತ್ತದೆ. ದೇಹದ ಆರೋಗ್ಯಕ್ಕೆ  ‘ಕನಸು’ ಅಗತ್ಯ, ಹೇಗೆ?. ನಮ್ಮ ದೇಹದ ಉಷ್ಣ ತಾಪಮಾನ ಅತ್ಯಂತ ಕಡಿಮೆಯಿರುವುದು ನಿದ್ರೆಯಲ್ಲಿ. ಅದೂ ಕನಸಿನ ಅವಧಿಯಲ್ಲಿ. ಅಂದರೆ ಅದು ದೇಹದ ಬೇರೆಲ್ಲಾ ಪ್ರಕ್ರಿಯೆಗಳೂ ‘ವಿಶ್ರಾಂತಿ’ ಪಡೆಯುವ ಸಮಯ!

ಜನರು ಮನೋವೈದ್ಯರ ಬಳಿ ಬಂದು ಕೇಳುವುದುಂಟು ‘ಕೆಟ್ಟ ಕನಸು ಬಿದ್ದರೆ ಭಯವಾಗುತ್ತೆ, ಅದಕ್ಕೆ ಕನಸುಗಳಿಲ್ಲದಿರುವುದೇ ಒಳ್ಳೆಯದಲ್ವೆ?’. ನಮ್ಮ ಎಚ್ಚರದ ಜಗತ್ತಿನಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಉಂಟಷ್ಟೆ.

ಹೇಗೆ ಕೆಟ್ಟದ್ದು ಒಳ್ಳೆಯ ಜೀವನದ ಭಾಗವಾಗಿರಲು ಸಾಧ್ಯವೋ, ಕೆಟ್ಟ  ಕನಸುಗಳು ಒಳ್ಳೆಯ ನಿದ್ರೆಯ ಅಂಶವಾಗಿರಲೂ ಸಾಧ್ಯವಿದೆ. ಕೆಟ್ಟ ಕನಸುಗಳಿಗಾಗಲೀ, ಒಳ್ಳೆಯ ಕನಸುಗಳಿಗಾಗಲೀ ಭವಿಷ್ಯ ಸೂಚಕವೆಂಬ ಅಂಶಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ.

ಆದರೆ ಕನಸುಗಳು ಅರ್ಥಪೂರ್ಣ. ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ, ನೋವು-ಗೊಂದಲ-ಶೋಕ-ಭಯಗಳನ್ನು ಮೆದುಳು ವ್ಯವಸ್ಥಿತವಾಗಿ ಹೊರಹಾಕುವ, ಪರಿಹರಿಸಿಕೊಳ್ಳುವ ವಿಧಾನ.

ಮೆದುಳು ಅವುಗಳನ್ನು ಸೃಜನಶೀಲವಾಗಿ ಜೋಡಿಸುವ ರೀತಿ ಕನಸು, ಅದೊಂದು ಖಿನ್ನತೆ ನಿವಾರಕ ಔಷಧಿ ಎಂಬುದಕ್ಕೆ ಬಲವಾದ ವೈಜ್ಞಾನಿಕ ಆಧಾರವಿದೆ. ಹಾಗಾಗಿ ಕೆಟ್ಟ ಕನಸು ಬೀಳಲಿ, ಒಳ್ಳೆಯ ಕನಸೇ ಬೀಳಲಿ, ವಿಶ್ಲೇಷಿಸಿ ಭಯ ಪಡಬೇಡಿ!  ಭವಿಷ್ಯದಲ್ಲಿ ಏನನ್ನೋ ಅದು ಸೂಚಸುತ್ತದೆ ಎಂದು ಹೆದರಬೇಡಿ. ನಿಮ್ಮ ಮೆದುಳು ಕ್ರಿಯಾಶೀಲವಾಗಿದೆ ಎಂದು ಸಂತಸಪಡಿ!  ಕನಸು ಕಾಣುವುದನ್ನು ನಿಲ್ಲಿಸಬೇಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT