ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರೂಪಿಣಿಯ ಸಿನಿಮಾ ಮೈತ್ರಿ

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ದೃಶ್ಯ’ ಸಿನಿಮಾದಲ್ಲಿ ರವಿಚಂದ್ರನ್‌ ಮಗಳ ಪಾತ್ರದಲ್ಲಿ ನಟಿಸಿರುವ ಸ್ವರೂಪಿಣಿ ಈಗ ಎರಡು ಚಿತ್ರಗಳಲ್ಲಿ ನಾಯಕಿ. ಕನ್ನಡದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರ್ತಿಸಿಕೊಳ್ಳಬೇಕು ಎನ್ನುವುದು ಅವರ ಮಹತ್ವಾಕಾಂಕ್ಷೆ. ಅಪ್ಪ ಅಮ್ಮನಿಗೆ ಮಗಳು ಗಾಯಕಿಯಾಗಲಿ ಎನ್ನುವ ಬಯಕೆ. ಮಗಳೂ ಕೂಡ ನಾಲ್ಕನೇ ವಯಸ್ಸಿನಿಂದಲೇ ಅವರ ಆಸೆಗೆ ಸ್ಪಂದಿಸತೊಡಗಿದ್ದಳು.

ಕಾಲೇಜು ಮೆಟ್ಟಿಲೇರುವಾಗಾಗಲೇ ರಾಜ್ಯಮಟ್ಟದ ಹಲವಾರು ಪ್ರಶಸ್ತಿ ಗರಿಗಳು ಆಕೆಯ ಮುಕುಟಕ್ಕೇರಿದ್ದವು. ಓದಿಗೂ ಅಷ್ಟೇ ಪ್ರಾಮುಖ್ಯ. ಆದರೆ ಗಾಯನಕ್ಕಿಂತಲೂ ಮಗಳ ಮನಸು ತುಡಿಯುತ್ತಿದ್ದದ್ದು ನಟನೆ ಮತ್ತು ನೃತ್ಯದತ್ತ. ಅದು ಮನೆಯವರಿಗೂ ತಿಳಿದ ವಿಷಯವೇ. ಇದೇ ಮಾರ್ಗದಲ್ಲಿ ಸಾಗಬೇಕು ಎಂಬ ಒತ್ತಾಯವೇನೂ ಇರಲಿಲ್ಲ. ಹೀಗಾಗಿಯೇ ಈಕೆಗೆ ‘ಕನಸುಗಾರನ ಕೂಸು’ ಆಗಲು ಸಾಧ್ಯವಾಗಿದ್ದು! ಈಗ ಈಕೆಯಲ್ಲಿ ನಾಯಕಿಯಾಗುವ ಕನಸಿಗೆ ರೆಕ್ಕೆಪುಕ್ಕ ಮೂಡಿದ ಸಂಭ್ರಮ.

ಪಿ. ವಾಸು ನಿರ್ದೇಶನದ ‘ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್‌ ಅವರ ಮೊದಲ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಸ್ವರೂಪಿಣಿ, ದೃಶ್ಯಲೋಕದೊಳಗೆ ವಿಹಾರಕ್ಕೆ ಅಡಿಯಿಟ್ಟಿದ್ದಾರೆ. ‘ಇಂಥ ಅವಕಾಶಕ್ಕೆ ಎಷ್ಟೊಂದು ಜನ ಕಾದಿರುತ್ತಾರೆ. ನೀನು ಅದೃಷ್ಟವಂತೆ’ ಎಂದು ರವಿಚಂದ್ರನ್‌ ಬೆನ್ನುತಟ್ಟಿದ್ದರು. ದೊಡ್ಡ ನಿರ್ದೇಶಕರ ಸಿನಿಮಾ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪ್ರವೇಶ ಪಡೆಯಬೇಕು ಎನ್ನುವುದು ಸ್ವರೂಪಿಣಿ ಬಯಕೆ. ಆದರೆ ‘ದೃಶ್ಯ’ದಲ್ಲಿ ರವಿಚಂದ್ರನ್‌ ಅವರ ಮಗಳಾಗಿ ಅಭಿನಯಿಸುವ ಅವಕಾಶ ಅದಕ್ಕಿಂತಲೂ ದೊಡ್ಡದು ಎಂದೆನಿಸಿತು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸ್ವರೂಪಿಣಿ, ಓದಿದ್ದು ಬಿಬಿಎಂ. ಈಗ ವೃತ್ತಿಯ ಜತೆಗೆ ದೂರಶಿಕ್ಷಣದಲ್ಲಿ ಎಂಬಿಎ ಕಲಿಕೆಯೂ ಸಾಗಿದೆ. ಮನೆಯಲ್ಲಿ ಸಾಂಪ್ರದಾಯಿಕ ವಾತಾವರಣ. ಸಂಗೀತದ ಮೇಲೆ ಎಲ್ಲರಿಗೂ ಪ್ರೀತಿ. ಹೀಗಾಗಿ ಬಾಲ್ಯದಲ್ಲಿಯೇ ನಾಗಭೂಷಣ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆ ಪ್ರಾರಂಭಿಸಿದರು. ಬಳಿಕ ಆರ್‌.ಕೆ. ಸೂರ್ಯನಾರಾಯಣ ಅವರ ಶಿಷ್ಯತ್ವದಲ್ಲಿ ಮುಂದುವರಿಯಿತು. ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡರು. ನಟನೆಯತ್ತ ಒಲವೂ ಮೂಡಿತು.

ವಿನಯ್ ರಾಜ್‌ಕುಮಾರ್‌ ಜತೆ ನಾಟಕವೊಂದರಲ್ಲಿ ನಟಿಸಿದಾಗ ‘ಜಟ್ಟ‘ ಖ್ಯಾತಿಯ ನಿರ್ದೇಶಕ ಗಿರಿರಾಜ್‌ ಕಣ್ಣಿಗೆ ಬಿದ್ದರು. ‘ಸಿನಿಮಾ ಉದ್ಯಮಕ್ಕೆ ಬಾ’ ಎಂದು ಪ್ರೋತ್ಸಾಹಿಸಿದರು. ಗಿರಿರಾಜ್‌ ‘ಮೈತ್ರಿ’ ಚಿತ್ರೀಕರಣ ಪ್ರಾರಂಭಿಸಿದ್ದರು. ಅದರಲ್ಲಿ ಕಲಿಕೆಗೆ ಅವಕಾಶ ಕೋರಿದ ಸ್ವರೂಪಿಣಿ ಅವರಿಗೆ ಗಿರಿರಾಜ್‌ ಇಲ್ಲ ಎನ್ನಲಿಲ್ಲ. ‘ಮೈತ್ರಿ’ಯಲ್ಲಿ ಸ್ವರೂಪಿಣಿಗೆ ಸಿಕ್ಕಿದ್ದು ನಟಿಯ ಪಾತ್ರವಲ್ಲ, ಸಹಾಯಕ ನಿರ್ದೇಶಕಿಯ ಪಾತ್ರ!

ಗಿರಿರಾಜ್‌ ಅವರ ಸಹನೆ, ಪಾಠದ ಜತೆಗೆ ಪುನೀತ್‌ ರಾಜ್‌ಕುಮಾರ್‌ ಅವರ ವಿನಯಶೀಲತೆ, ನಟ ಅತುಲ್‌ ಕುಲಕರ್ಣಿ ಅವರ ಸಲಹೆ– ಇವೆಲ್ಲವೂ ನಟಿಯಾಗಿ ಅವರಲ್ಲಿ ಪ್ರಬುದ್ಧತೆ ಬೆಳೆಸತೊಡಗಿದವು. ‘ನಿರ್ದೇಶನ ವಿಭಾಗದಲ್ಲಿ ಮಹಿಳಾ ಸಹಾಯಕಿಯರನ್ನು ನೋಡುವುದೇ ಅಪರೂಪ. ನೀವು ಧೈರ್ಯ ಮಾಡಿ ಬಂದಿದ್ದೀರಿ’ ಎಂಬ ಪುನೀತ್‌ ಹೊಗಳಿಕೆ ಆತ್ಮವಿಶ್ವಾಸ ಮೂಡಿಸಿತು.

‘ಮೈತ್ರಿ’ಯಲ್ಲಿ ತಾಂತ್ರಿಕ ಜ್ಞಾನದೊಂದಿಗೆ ಅಭಿನಯದ ಪಟ್ಟುಗಳನ್ನು ನೋಡಿ ಕಲಿಯುವ ಹೊತ್ತಿಗೆ ‘ದೃಶ್ಯ’ದಲ್ಲಿ ಅವಕಾಶವೂ ಸಿಕ್ಕಿತು. ಸ್ವತಃ ಪಿ. ವಾಸು ಮತ್ತು ರವಿಚಂದ್ರನ್‌ ಆಡಿಷನ್ ನಡೆಸಿದರು. ಆಡಿಷನ್‌ ಎಂದರೆ ಹೇಗಿರುತ್ತದೆ ಎನ್ನುವುದೇ ಆಗ ತಿಳಿದಿರಲಿಲ್ಲ. ಆಗಲೇ ಗುರ್ತಿಸಿಕೊಂಡ ನಟಿಯರೂ ಪೈಪೋಟಿಯಲ್ಲಿದ್ದರು. ಆದರೆ ಹೊಸ ಮುಖದ ಅವಶ್ಯಕತೆ ಇದ್ದಿದ್ದರಿಂದ ಸ್ವರೂಪಿಣಿ ಹಾದಿ ಸುಗಮವಾಯಿತು. ‘ದೃಶ್ಯ’ದ ಪಾತ್ರ ಅವರಿಗೆ ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿತು. ಪ್ರತಿ ಸನ್ನಿವೇಶವನ್ನೂ ನಿರ್ದೇಶಕ ಪಿ. ವಾಸು ಸ್ವತಃ ನಟಿಸಿ ತೋರಿಸುತ್ತಿದ್ದರಿಂದ ಅದು ಕಷ್ಟವೆನಿಸಲಿಲ್ಲ.

ಪ್ರಸ್ತುತ ‘ಪ್ಲೇಯರ್ಸ್‌’ ಚಿತ್ರವನ್ನು ಸ್ವರೂಪಿಣಿ ಒಪ್ಪಿಕೊಂಡಿದ್ದಾರೆ. ಇದು ನಾಯಕ–ನಾಯಕಿ ಪ್ರಧಾನ ಚಿತ್ರವಲ್ಲ. ಇಂಗ್ಲಿಷ್‌ ಸಿನಿಮಾವೊಂದರಿಂದ ಸ್ಫೂರ್ತಿ ಪಡೆದ ಈ ಚಿತ್ರದ ಕಥೆ ಅವರಿಗೆ ಆಸಕ್ತಿಕರ ಎನಿಸಿದೆ. ‘ಮಸ್ತ್‌ಕಲಂದರ್’ ಸಹ ಹೊಸಬರ ಚಿತ್ರ. ನಾಯಕನಷ್ಟೇ ನಾಯಕಿಯೂ ಆದ್ಯತೆ ಇದೆ ಎಂಬ ಕಾರಣಕ್ಕೆ ಅವರು ಚಿತ್ರದ ಭಾಗವಾದರು.

ಸ್ವರೂಪಿಣಿ ಚಿತ್ರಗಳ ಆಯ್ಕೆಯಲ್ಲಿ ಈಗಾಗಲೇ ಸಾಕಷ್ಟು ಚೂಸಿಯಾಗಿದ್ದಾರಂತೆ. ಯಾರು ಬೇಕಾದರೂ ಮಾಡಬಹುದು ಎನ್ನುವಂತಹ ಪಾತ್ರ ಇರಬಾರದು. ಏಕತಾನತೆಗೆ ಸಿಲುಕಿದರೆ ಉಳಿದವರಂತೆ ಆರೇಳು ಸಿನಿಮಾಗಳಲ್ಲಿ ನಟಿಸಿ ಮಾಯವಾಗುವ ಅಪಾಯವಿದೆ ಎನ್ನುತ್ತಾರೆ. ಹೊಸ ತಂಡದಿಂದ ಅವಕಾಶಗಳು ಸಾಲು ಎದುರಿಗಿದ್ದರೂ ಅವರಲ್ಲಿ ಅವಸರವಿಲ್ಲ. ಬಂದದ್ದನ್ನೆಲ್ಲ ಬಾಚಿಕೊಳ್ಳುವ ಹಪಹಪಿಯೂ ಇಲ್ಲ. ‘ವಯಸ್ಸಿನ್ನೂ 22. ಸಾಗಬೇಕಾದ ಹಾದಿ ದೂರವಿದೆ. ನಡಿಗೆ ನಿಧಾನವಾದರೂ ಬೇಸರವಿಲ್ಲ’ ಎಂದು ಹೇಳುತ್ತಾರೆ ಅವರು.

ನಾಯಕಿಯರು ಎದುರಿಸುವ ಸಮಸ್ಯೆಗಳ ಕುರಿತು ಅವರಿಗೆ ಅರಿವಿದೆ. ಹಾಗಾಗಿಯೇ ಸವಾಲಿನ ಪಾತ್ರಗಳಿಗೆ ಅವರು ಕಾದಿರುವುದು. ‘ಸವಾಲು ಎನಿಸಬೇಕು ಮತ್ತು ಅದು ಕಷ್ಟಕರವಾಗಿದ್ದರೂ ನಿಭಾಯಿಸಿ ಗೆಲ್ಲಬೇಕು’ ಎನ್ನುವ ಛಲ ಅವರದು. ಯೋಗರಾಜ್‌ ಭಟ್‌, ಸೂರಿ, ಸುನಿ, ಎ.ಪಿ. ಅರ್ಜುನ್‌ ಮುಂತಾದ ಖ್ಯಾತನಾಮರ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎನ್ನುವುದು ಅವರ ಪರಮಗುರಿ. ‘ಮೈತ್ರಿ’, ‘ಕಡ್ಡಿಪುಡಿ’ ಮುಂತಾದ ಕಲಾತ್ಮಕ ಹಾಗೂ ವ್ಯಾಪಾರಿ ಅಂಶಗಳ ಮಿಶ್ರಣವಿರುವ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಬಯಕೆ ಅವರದು.

‘ಕನ್ನಡದ ಟಾಪ್‌ ನಟಿಯರಲ್ಲಿ ನಾನೂ ಒಬ್ಬಳಾಗಬೇಕು. ಅದಕ್ಕಿಂತ ಮುಖ್ಯವಾಗಿ ಉತ್ತಮ ನಟಿ ಎಂದು ಜನ ಮೆಚ್ಚುವಂತಾಗಬೇಕು’ ಎನ್ನುತ್ತಾರೆ ಸ್ವರೂಪಿಣಿ. ಸ್ವರೂಪಿಣಿ ಹಿನ್ನೆಲೆ ಗಾಯಕಿಯಾಗಿಯೂ ಹೆಸರು ಮಾಡುವ ಸಿದ್ಧತೆ ನಡೆಸಿದ್ದಾರೆ. ಬಿಡುವಿನ ವೇಳೆ ಕೆಲ ಸಂಗೀತ ನಿರ್ದೇಶಕರ ಬಳಿ ಟ್ರ್ಯಾಕ್ ಹಾಡುತ್ತಿರುವ ಅವರು, ನಟನೆ ಮತ್ತು ಗಾಯನ ಎರಡರಲ್ಲಿಯೂ ಗಮನ ಸೆಳೆಯುವ ಉತ್ಸಾಹದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT