ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಟ್ಜರ್‌ಲೆಂಡ್‌ನಿಂದ ಬಾರದ ಕಪ್ಪು ಹಣದ ವಿವರ

ಸ್ವಿಟ್ಜರ್‌ಲೆಂಡ್‌ನಿಂದ ಬಾರದ ಕಪ್ಪು ಹಣದ ವಿವರ
Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಭಾರತೀಯರ ಮಾಹಿತಿ­ಯನ್ನು  ಶೀಘ್ರವೇ   ಭಾರತ­­ದೊಂದಿಗೆ ಹಂಚಿಕೊ­ಳ್ಳು­ವಂತೆ ಸ್ವಿಟ್ಜರ್‌ಲೆಂಡ್‌ ಸರ್ಕಾ­ರಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ಹಣ­ಕಾಸು ಸಚಿವ ಅರುಣ್‌ ಜೇಟ್ಲಿ ಸೋಮವಾರ ಹೇಳಿದ್ದಾರೆ.

‘ಈ ಸಂಬಂಧ ಸಚಿವಾಲಯವು ಅಧಿಕೃತ ಮಾಹಿತಿ­ಯನ್ನು ಇನ್ನಷ್ಟೇ ಪಡೆಯ­ಬೇಕಿದೆ. ಆದ್ದರಿಂದ ಸ್ವಿಟ್ಜರ್‌­ಲೆಂಡ್‌ ಅಧಿಕಾರಿಗಳಿಗೆ ನಾವೇ ಖುದ್ದಾಗಿ ಪತ್ರ ಬರೆಯುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ತನ್ನ ದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟ ಭಾರತೀ­­ಯರ ಪಟ್ಟಿ ಸಿದ್ಧಪಡಿಸ­ಲಾಗಿದ್ದು, ಅದನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧ  ಎಂದು ಭಾನುವಾರ ಸ್ವಿಟ್ಜರ್‌ಲೆಂಡ್‌ ಹೇಳಿತ್ತು.

‘ಹಣಕಾಸು ಸಚಿವಾಲಯ ಅಲ್ಲಿನ ಅಧಿಕಾರಿಗಳ ಸಂಪರ್ಕದಲ್ಲಿದೆ. ಕಪ್ಪು ಹಣಕ್ಕೆ ಸಂಬಂಧಿಸಿ ಅವರ ಬಳಿ ಏನೆಲ್ಲ ಮಾಹಿತಿ ಇದೆಯೋ ಅದನ್ನು ಶೀಘ್ರವೇ ಅವರು ನಮ್ಮೊಂದಿಗೆ ಹಂಚಿಕೊಳ್ಳ­ಬಹುದು. ಈ ಸಂಬಂಧ ಸ್ವಿಟ್ಜರ್‌­ಲೆಂಡ್‌ ಅಧಿಕಾರಿಗಳು ಹಾಗೂ ಭಾರತ ಸರ್ಕಾ­ರದ ನಡುವಣ ಸಹಕಾರವು ಫಲದಾಯಕ ಫಲಿತಾಂಶ ಕೊಡಬಲ್ಲದು’ ಎಂದು ಜೇಟ್ಲಿ ನುಡಿದರು.

ಸ್ವಿಟ್ಜರ್‌ಲೆಂಡ್‌ ಸೆಂಟ್ರಲ್‌ ಬ್ಯಾಂಕ್‌ ಎಸ್‌ಎನ್‌ಬಿ ಪ್ರಕಾರ, ಆ ದೇಶದ ವಿವಿಧ ಬ್ಯಾಂಕು­ಗಳಲ್ಲಿ ಭಾರತೀ­ಯರ  ಕಪ್ಪು ಹಣ 2013ರಲ್ಲಿ ಶೇ 43ರಷ್ಟು ಹೆಚ್ಚಾ­ಗಿದ್ದು, ₨ 14,000 ಕೋಟಿ ತಲುಪಿದೆ.

ವಿದೇಶಗಳಲ್ಲಿನ ಕಪ್ಪು ಹಣ­ವನ್ನು ಭಾರತಕ್ಕೆ ವಾಪಸ್‌ ತರುವ ಪ್ರಯತ್ನ­ವಾಗಿ ಮೋದಿ ಅವರು ತಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ವಿಶೇಷ ತನಿಖಾ ತಂಡ ರಚಿಸಿದ್ದರು.

ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ನೇತೃತ್ವದ ತಂಡವು ಜೂನ್ 2ರಂದು ಮೊದಲ ಸಭೆ ನಡೆಸಿತ್ತು.

ಸಹಕರಿಸಲು ಸಿದ್ಧ (ಜೂರಿಚ್‌ ವರದಿ): ತೆರಿಗೆ ವಂಚನೆ ವಿರುದ್ಧದ ಭಾರತದ  ಹೋರಾಟದಲ್ಲಿ ಅಲ್ಲಿನ ಹೊಸ ಸರ್ಕಾರದ ಜತೆ ಕೈಜೋ­ಡಿ­ಸಲು ಸಿದ್ಧ ಎಂದು ಸ್ವಿಟ್ಜರ್‌­ಲೆಂಡ್‌ ಸೋಮವಾರ ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿ ಅಂತರ­ರಾಷ್ಟ್ರೀಯ ಮಾನ­­ದಂಡಗಳಿಗೆ ಅನು­ಸಾರ­ವಾಗಿ ಕೆಲಸ ಮಾಡಲು ಬದ್ಧವಾಗಿ­ರುವುದಾಗಿ ಸ್ವಿಟ್ಜರ್‌ಲೆಂಡ್‌ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸ­ಲಾಗಿದೆ.

‘ತೆರಿಗೆ ವಿಷಯವಾಗಿ ಉಭಯ ದೇಶಗಳ ನಡುವೆ ಫೆಬ್ರುವರಿಯಿಂದ ಅಧಿಕೃತ ಸಭೆ ನಡೆದಿಲ್ಲ’ ಎಂದೂ ಸಚಿವಾಲಯ ತಿಳಿಸಿದೆ.

ಕಾಯ್ದೆಗೆ ತಿದ್ದುಪಡಿ:  ತೆರಿಗೆ  ವಂಚನೆಗೆ ಸಂಬಂಧಿಸಿದ ಪ್ರಕರಣ­ಗಳ ತನಿಖೆಯಲ್ಲಿ  ಭಾರತ ಸೇರಿದಂತೆ ವಿದೇಶ­ಗಳಿಗೆ ಸುಲಭವಾಗಿ ನೆರವು ನೀಡುವ ಸಂಬಂಧ  ‘ತೆರಿಗೆ ಆಡಳಿತ ನೆರವು ಕಾಯ್ದೆ’ಗೆ ಗಮನಾರ್ಹ ತಿದ್ದುಪಡಿ ತರಲು ಸ್ವಿಟ್ಜರ್‌ಲೆಂಡ್‌ ನಿರ್ಧರಿಸಿದೆ. ಸ್ವಿಸ್‌ ಬ್ಯಾಂಕು­ಗಳಲ್ಲಿ ಹಣ ಇಟ್ಟಿರು­ವವರ ಮಾಹಿತಿ ಹಂಚಿ­ಕೊಳ್ಳು­ವಂತೆ ವಿವಿಧ ದೇಶಗಳು ಒತ್ತಡ ತಂಡ ಹಿನ್ನೆ­ಲೆ­ಯಲ್ಲಿ ಸ್ವಿಟ್ಜರ್‌ಲೆಂಡ್‌ ಈ ನಿರ್ಧಾರಕ್ಕೆ ಬಂದಿದೆ. ಪರಿಷ್ಕೃತ ಕಾಯ್ದೆ ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ.

ಮುಂಬೈ ವರದಿ: ಕಪ್ಪು ಹಣದ ಪತ್ತೆಗೆ ನೇಮಕ ಮಾಡಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಅಗತ್ಯವಿರುವ ಮಾಹಿತಿ­ಗಳು ಹಾಗೂ ದಾಖಲೆಗಳನ್ನು ನೀಡುವಂತೆ   ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆ­ಗಳಿಗೆ ಆರ್‌ಬಿಐ ಸೋಮವಾರ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT