ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಮಾಂಸದ ಸವಿರುಚಿ...

ನಮ್ಮೂರ ಊಟ
Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪದೇ ಪದೇ ಕೇಳಿಸಿದಪದ ‘ಪಂದಿ ಕರಿ’. ಹೌದು, ಕೊಡವರ ನೆಚ್ಚಿನ ಅಡುಗೆ ಪಂದಿಕರಿ. ಹಾಗಂತ ಕೊಡಗಿನಲ್ಲಿ ಮಾತ್ರ ಹಂದಿ ಮಾಂಸ ಪ್ರಿಯರು ಇದ್ದಾರೆ ಎಂದಲ್ಲ. ದಕ್ಷಿಣಕನ್ನಡದಲ್ಲೂ ಇದು ಬಳಕೆಯಲ್ಲಿದೆ.

ಕೊಡಗಿನ ಗೌಡರೊಂದಿಗೆ ಮದುವೆ ಸಂಬಂಧ ಬೆಸೆದ ಪರಿಣಾಮವೋ ಏನೋ ಸುಳ್ಯದ ಗೌಡರಲ್ಲಿ ಮದುವೆಯ ನಂತರ ನಡೆಯುವ ತುಪ್ಪ ತರುವ(ಆಗಷ್ಟೇ ಮದುವೆಯಾದ ಹೆಣ್ಣು ಗಂಡನ ಮನೆಯಿಂದ ತವರು ಮನೆಗೆ ತುಪ್ಪ ತರುವುದು) ಕಾರ್ಯಕ್ರಮದಲ್ಲಿ ಮತ್ತು ತಿಥಿಯ ಊಟದಲ್ಲೂ ಹಂದಿಮಾಂಸದ ಅಡುಗೆ ಜಾಗ ಪಡೆದುಕೊಂಡು ದಶಕಗಳೇ ಸಂದಿವೆ. ಹಂದಿ ಮಾಂಸದ ಅಡುಗೆ ಮಾಡುವ ವಿಧಾನ ಮಾತ್ರ ಒಂದೊಂದು ಕಡೆ ಒಂದೊಂದು ಬಗೆ. ಕೊಡಗಿನ ಮಗಳೂ, ಸುಳ್ಯದ ಸೊಸೆಯೂ ಆಗಿರುವ ಗಂಗಮ್ಮ ಅವರು ಎರಡೂ ಕಡೆಯ ಹಂದಿ ಮಾಂಸದ ಅಡುಗೆಯ ವಿಧಾನವನ್ನು ತಿಳಿಸಿದ್ದಾರೆ.


ಹಂದಿ ಮಾಂಸದ ಗ್ರೇವಿ: ವಿಧಾನ 1

ಬೇಕಾಗುವ ಸಾಮಗ್ರಿ: ಮಾಂಸ 1 ಕೆ.ಜಿ, ಈರುಳ್ಳಿ 240 ಗ್ರಾಂ, ಬೆಳ್ಳುಳ್ಳಿ 3 ಗೆಡ್ಡೆ, ಹಸಿಮೆಣಸು 5ರಿಂದ 6, ಶುಂಠಿ ಒಂದು ಗೆಡ್ಡೆ, ಕಾರದ ಪುಡಿ 3 ಚಮಚ, ಚಮಚ ಕಾಳು ಮೆಣಸಿನ ಪುಡಿ, ಧನಿಯಾ ಪುಡಿ 5 ಚಮಚ, ಚಮಚ ಅರಿಶಿಣ, ಚಮಚ ಓಮದ ಕಾಳು, ಚಕ್ಕೆ-ಲವಂಗ ಸ್ವಲ್ಪ, ಕಾಚಂಪುಳಿ ಒಂದು ಚಮಚ.

ಮಾಡುವ ವಿಧಾನ: ಮಾಂಸವನ್ನು ಶುಚಿ ಮಾಡಿ ಸಣ್ಣ ಗಾತ್ರದ ತುಂಡುಗಳಾಗಿ ಕತ್ತರಿಸಿಕಳ್ಳಬೇಕು. ನೀರು ಹಾಕದೆ ಮಣ್ಣಿನ ಪಾತ್ರದಲ್ಲಿ ಬೇಯಲು ಇಡಬೇಕು. ಹತ್ತರಿಂದ ಹದಿನೈದು ನಿಮಿಷ ಕೈಯಾಡಿಸುತ್ತಾ ಇರಿ. ಎಣ್ಣೆ ಬಿಟ್ಟುಕೊಳ್ಳುತ್ತದೆ. ಎಣ್ಣೆಯನ್ನು ಮಾಂಸದಿಂದ ಬೇರ್ಪಡಿಸಿ. ನಂತರ ಮಾಂಸಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹಸಿಮೆಣಸು ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿ ಹಾಕಬೇಕು (ಸಣ್ಣಗೆ ಹೆಚ್ಚಿಯೂ ಹಾಕಬಹುದು). ಅರಿಶಿಣ ಮತ್ತು ಮೆಣಸಿನ ಪುಡಿ, ಉಪ್ಪು ಹಾಕಿ. ಬೆಂದ ನಂತರ ಧನಿಯಾ, ಕಾಳುಮೆಣಸು, ಓಮ, ಚಕ್ಕೆ-ಲವಂಗದ ಪುಡಿಯನ್ನು ಸೇರಿಸಿ.  ಐದು ನಿಮಿಷದಲ್ಲಿ ಒಲೆಯಿಂದ ಇಳಿಸಿ ನಂತರ ಹುಳಿ ಹಾಕಿ ಮಗುಚಿ. 45 ನಿಮಿಷ ಬೇಯಿಸಬೇಕು.

ಹಂದಿ ಮಾಂಸದ ಗ್ರೇವಿ:ವಿಧಾನ 2
 

ಎಣ್ಣೆಯಿಲ್ಲದ ಹಂದಿ ಮಾಂಸದ ಫ್ರೈ

ಬೇಕಾಗುವ ಸಾಮಗ್ರಿ: ಹಂದಿ ಮಾಂಸ 1 ಕೆ.ಜಿ, ಈರುಳ್ಳಿ 3, ಮೆಣಸು ಕಾರಕ್ಕೆ ತಕ್ಕಷ್ಟು, ಬೆಳ್ಳುಳ್ಳಿ 2 ಗೆಡ್ಡೆ, ಧನಿಯಾ ಪುಡಿ 5 ಚಮಚ, ಚಮಚ ಕಳುಮೆಣಸಿನ ಪುಡಿ. ಚಮಚ ಕಾಚಂಪುಳಿ.

ಮಾಡುವ ವಿಧಾನ: ಮಾಂಸ ಮತ್ತು ಚರ್ಬಿಯನ್ನು (ಫ್ಯಾಟ್)ಬೇರ್ಪಡಿಸಿ. ಮೊದಲು ಮಣ್ಣಿನ ಪಾತ್ರೆಯಲ್ಲಿ ಚರ್ಬಿಯನ್ನು ಮಾತ್ರ ಬೇಯಲು ಇಡಿ. ಹತ್ತು ನಿಮಿಷದಲ್ಲಿ ಅದು ಎಣ್ಣೆ ಬಿಡುತ್ತದೆ. ಎಣ್ಣೆಯನ್ನು ತೆಗೆದು ಮಾಂಸವನ್ನು ಸೇರಿಸಿ ಮತ್ತೆ ಬೇಯಿಸಿ. ಆಗ ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಬೆರೆಸಿ. ಅರಿಶಿಣ ಪುಡಿ ಮತ್ತು ಉಪ್ಪು ಸೇರಿಸಿ. ಒಣ ಮೆಣಸನ್ನು ಚೆನ್ನಾಗಿ ಹುರಿದು ಸಣ್ಣಗೆ ಅರೆದು ಮಾಂಸಕ್ಕೆ ಸೇರಿಸಿ. ಅರ್ಧ ಗಂಟೆ ಬೇಯಿಸಿ. ನಂತರ ಧನಿಯಾ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಐದು ನಿಮಿಷ ಕೈಯಾಡಿಸಿ ಕಾಚಂಪುಳಿ ಬೆರೆಸಿದರೆ ಗ್ರೇವಿ ಸಿದ್ಧ. ಇದು ಸುಳ್ಯದಲ್ಲಿ ಹಂದಿ ಮಾಂಸದ ಅಡುಗೆ ಮಾಡುವ ರೀತಿ. ಒಳ ಮೆಣಸು ಅರೆದು ಹಾಕುವುದರಿಂದ ಹೆಚ್ಚು ಗ್ರೇವಿ ಇದ್ದು ಅನ್ನದ ಜೊತೆಗೂ, ಅಕ್ಕಿ ಕಡುಬು, ರೊಟ್ಟಿ, ಇಡ್ಲಿ ಎಲ್ಲಕ್ಕೂ ಸೈ ಎನಿಸಿಕೊಂಡಿದೆ. ಕ್ರಿಶ್ಚಿಯನ್ನರು ಇದನ್ನು ಬ್ರೆಡ್ ಜೊತೆಗೆ ಸೇವಿಸುತ್ತಾರೆ.

ಹಂದಿ ಮಾಂಸದ ಫ್ರೈ
ಬೇಕಾಗುವ ಸಾಮಗ್ರಿ: ಮಾಂಸ ಮಾತ್ರ 500 ಗ್ರಾಂ, 4 ಹಸಿಮೆಣಸು, ಚಮಚ ಕಾಳು ಮೆಣಸಿನ ಪುಡಿ, ಎಣ್ಣೆ , ನಿಂಬೆ , ಉಪ್ಪು.
ಮಾಡುವ ವಿಧಾನ: ಮಾಂಸವನ್ನು ಎಣ್ಣೆಯಲ್ಲಿ ಡೀಪ್‌ಫ್ರೈ ಮಾಡಿಕೊಳ್ಳಬೇಕು. ನಂತರ ಅದನ್ನು ಬಿಡಿಸಿ ಉದುರುದುರಾಗುವಂತೆ ಮಾಡಿಕೊಳ್ಳಬೇಕು. ಅದಕ್ಕೆ ಉಪ್ಪು, ಜಜ್ಜಿದ ಹಸಿಮೆಣಸು, ಕಾಳು ಮೆಣಸಿನ ಪುಡಿ ಉದುರಿಸಬೇಕು.

ಚಿಲ್ಲಿ ಪೋರ್ಕ್
 

ಖಾರ ಮಸಾಲೆಯ ಚಿಲ್ಲಿ ಪೋರ್ಕ್

ಬೇಕಾಗುವ ಸಾಮಗ್ರಿ: ಹಂದಿ ಮಾಂಸ 1 ಕೆ.ಜಿ(ಮಾಂಸ ಮಾತ್ರ), ಈರುಳ್ಳಿ 1 ಗೆಡ್ಡೆ ದೊಡ್ಡದು. ಬೆಳ್ಳುಳ್ಳಿ 1 ಗೆಡ್ಡೆ, ಶುಂಠಿ 50 ಗ್ರಾಂ. ಧನಿಯಾ ಪುಡಿ 4 ಚಮಚ, 4 ಹಸಿಮೆಣಸು, ಕಾರದಪುಡಿ 3 ಚಮಚ, ಅರಿಶಿಣ.

ಮಾಡುವ ವಿಧಾನ: ಮಂಸಕ್ಕೆ ಉಪ್ಪು, ಅರಿಶಿಣ, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ೫ ನಿಮಿಷ ಹಾಗೆ ಬಿಟ್ಟು ನಂತರ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಮಾಂಸವನ್ನು ಹಾಕಿ ದೊಡ್ಡ ಉರಿಯಲ್ಲಿ ಬೇಯಿಸಬೇಕು. ಆಗ ನೀರು ಬಿಟ್ಟುಕೊಳ್ಳುತ್ತದೆ. ಇಷ್ಟಾದರೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸಣ್ಣಗೆ ಹೆಚ್ಚಿ ಹಾಕಬೇಕು. ಎಣ್ಣೆ ಬಿಡುತ್ತಾ ಬಂದಾಗ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ. ಬೆಂದ ನಂತರ ಮಾಂಸವನ್ನು ಒಂದೇ ಬದಿಗೆ ಸರಿಸಿ ಸ್ವಲ್ಪ ಹೊತ್ತಿನಲ್ಲಿ ಎಣ್ಣೆ ಸಂಗ್ರಹವಾಗುತ್ತದೆ. ಅದನ್ನು ತೆಗೆದು ನಂತರ ನಿಂಬೆ, ದನಿಯಾ ಪುಡಿ, ಕಾಳು ಮೆಣಸಿನ ಪುಡಿ ಉದುರಿಸಿ ಚೆನ್ನಾಗಿ ಕೈಯಾಡಿಸಿದರೆ ಚಿಲ್ಲಿ ಪೋರ್ಕ್ ಸಿದ್ಧ.

ಹಂದಿಮಾಂಸದ ಆಯ್ಕೆ

ಅಡುಗೆ ಮಾಡುವಾಗ ಗಮನಿಸಲೇಬೇಕಾದ ಅಂಶಗಳು:
*60ರಿಂದ 150 ಕೇಜಿಯ ಹಂದಿಯ ಮಾಂಸ ಹೆಚ್ಚು ರುಚಿಯಾಗಿರುತ್ತದೆ. 
*1 ಕೆ.ಜಿ ಮಾಂಸದಲ್ಲಿ ಕಾಲು ಕೇಜಿಯಾದರೂ ಫ್ಯಾಟ್ ಅಂದರೆ ಚರ್ಮದ ಭಾಗವಿರಬೇಕು.
*ಮಾಂಸದಡುಗೆಗೆ ಮಣ್ಣಿನ ಪಾತ್ರೆ ಸೂಕ್ತ. ಅದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ತಳ ಹಿಡಿಯುವುದಿಲ್ಲ.
*ಅಡುಗೆಗೆ ಎಣ್ಣೆ ಸೇರಿಸಬೇಕಾಗಿಲ್ಲ. ಸಿದ್ಧ ಪುಡಿಗಳನ್ನು ಬಳಸುವವರು ಸ್ವಲ್ಪ ಹುರಿದುಕೊಳ್ಳಬೇಕು.
*ಧನಿಯಾ, ಕಾಳುಮೆಣಸು, ಕಾರದ ಪುಡಿಯನ್ನು ತಕ್ಷಣ ಸಿದ್ಧಪಡಿಸಿ ಬಳಸುವುದರಿಂದ ರುಚಿ ಇಮ್ಮಡಿಯಾಗುತ್ತದೆ. ಮಲೆನಾಡಿನಲ್ಲಿ ಸಿಗುವ ಕಾಚಂಪುಳಿ ಹಂದಿ ಮಾಂಸದ ಅಡುಗೆಗೆ ಸೂಕ್ತ.
*ಮೊದಲು ಫ್ಯಾಟ್ ಇರುವ ಮಾಂಸ ಬೇಯಿಸಿಕೊಂಡು ಹೆಚ್ಚುವರಿ ಎಣ್ಣೆ ತೆಗೆದು ನಂತರ ಉಳಿದ ಮಾಂಸ ಹಾಕಿ ಬೇಯಿಸಬೇಕು.
*ಹಂದಿ ಮಾಂಸದ ಅಡುಗೆ ಹಳೆಯದಾಗುತ್ತಿದ್ದಂತೆ ರುಚಿ ಹೆಚ್ಚುತ್ತದೆ. ಬಿಸಿ ಮಾಡುತ್ತಾ ಒಂದು ವಾರದವರೆಗೂ ಇಡಬಹುದು. ಫ್ರಿಜ್‌ನಲ್ಲಿ ಇಟ್ಟರೆ ರುಚಿ ಕೆಡುತ್ತದೆ.
*ಸೇವಿಸುವ ಮೊದಲು ನಿಂಬೆ ರಸ ಸೇರಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT