ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯ ಸಿರಿ ಉತ್ತುಂಗದ ನಿಲುಕಿನಲಿ...

ಚಿತ್ರಪಟ
Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹಂಪಿ ಮತ್ತೆ ಸುದ್ದಿಯಲ್ಲಿದೆ. ಹಂಪಿಯೂ ಸೇರಿದಂತೆ ವಿಶ್ವ ಪಾರಂಪರಿಕ ತಾಣಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದಾಗಿ 2015ರ ಕೇಂದ್ರ ಬಜೆಟ್‌ ಘೋಷಿಸಿದೆ. ಇದರಿಂದಾಗಿ ಪ್ರವಾಸೋದ್ಯಮ ಕೇಂದ್ರವಾಗಿ ಹಂಪಿ ಮತ್ತಷ್ಟು ಗರಿಗಟ್ಟಲಿದೆ. ಇದೆಲ್ಲವೂ ಸರಿ. ಅಂದಹಾಗೆ, ಈ ಚಾರಿತ್ರಿಕ ಹಂಪಿಯನ್ನು ನೋಡುವ ಬಗೆ ಯಾವುದು?

‘ಹಂಪಿಯನ್ನು ತಿರುಗಿ ನೋಡಬೇಕು’ ಎನ್ನುತ್ತಾರೆ ಊರಿನ ವಿಸ್ತಾರ ಬಲ್ಲವರು. ಹೇಗೆ ನೋಡಿದರೂ ಮಿಗುವ ಸಮೃದ್ಧಿ ಈ ಹಂಪಿಯದು. ಇಲ್ಲಿನ ಪ್ರತಿಯೊಂದು ಕಲ್ಲೂ ನಾಡಿನ ಚರಿತ್ರೆಯ ವೈಭವದ ಕಥೆಯನ್ನು ಹೇಳಲು ತವಕಿಸುತ್ತಿರುವಂತೆ ಕಾಣಿಸುತ್ತದೆ. ನಡೆದಷ್ಟೂ ಮಿಗುವ, ಕಂಡಷ್ಟೂ ಉಳಿವ ಬೆಡಗು–ಬೆರಗು ಈ ನೆಲದ್ದು. ಇಲ್ಲಿನ ಚರಿತ್ರೆ–ವೈಭವವನ್ನು ಕಥನಗಳ ಮೂಲಕ, ಸಂಗೀತದ ಮೂಲಕ, ಚಿತ್ರಕಲೆಯ ಮೂಲಕ, ದೃಶ್ಯ ಮಾಧ್ಯಮದ ಮೂಲಕ– ಹೀಗೆ ಹಲವು ಬಗೆಗಳಲ್ಲಿ ಸಹೃದಯರಿಗೆ ಕಾಣಿಸಲು ಪ್ರಯತ್ನಿಸಿದವರಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ, ಹಂಪಿಯ ಎತ್ತರದ ನೋಟವನ್ನು ನೀಡುವ ಪ್ರಯತ್ನ ಇಲ್ಲಿರುವ ಛಾಯಾಚಿತ್ರಗಳದು.

ಕಳೆದ ಜನವರಿಯಲ್ಲಿ ನಡೆದ ‘ಹಂಪಿ ಉತ್ಸವ’ದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ನಿಲುಕಿದ ಚಿತ್ರಗಳಿವು. ಕಿರು ವಿಮಾನದಲ್ಲಿ ಕುಳಿತು ಆಕಾಶದಿಂದ ಹಂಪಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದ್ದ ‘ಬೈ ಸ್ಕೈ’ ಯೋಜನೆ ಉತ್ಸವದ ಆಕರ್ಷಣೆಗಳಲ್ಲೊಂದಾಗಿತ್ತು. ಹೀಗೆ ಚಾರಿತ್ರಿಕ ಊರಿನ ನೆತ್ತಿಯ ಮೇಲೆ ಹಾರುತ್ತ, ಕೆಳಗೆ ನೋಡಿದರೆ ಈ ಮೊದಲು ಕಾಣಿಸಿದ ನೋಟಗಳೆಲ್ಲ ಹೊಸದಾಗಿ ಕಂಗೊಳಿಸತೊಡಗಿದವು. ಕಲಾಕಾರನೊಬ್ಬ ಬಿಡಿಸಿದ ಚಿತ್ರವೊಂದು ಜೀವ ಪಡೆದಂತೆ, ಹಸಿರಿನ ಸಖ್ಯದಲ್ಲಿ ಹಂಪಿಯ ಗುಡ್ಡಗಳು ಆರ್ದ್‍ರಗೊಂಡಂತೆ ಕಾಣಿಸುತ್ತಿದ್ದವು.

ವಿರೂಪಾಕ್ಷ ದೇಗುಲ, ಕಮಲ ಮಹಲ್‌, ಕಲ್ಲಿನ ರಥ, ಮಾತಂಗ ಪರ್ವತ, ಮಹಾನವಮಿ ದಿಬ್ಬ– ಹೀಗೆ ಆಗಸದಿಂದ ಕಾಣಿಸಿದ ಪ್ರತಿಯೊಂದು ಸ್ಮಾರಕವೂ ಹಂಪಿಯ ಚೆಲುವನ್ನು ಹೊಸ ವಿನ್ಯಾಸದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದಂತೆ ಭಾಸವಾಗಿ, ನೋಡುಗರಲ್ಲಿ ಪುಲಕ ಹುಟ್ಟಿಸುವಂತಿದ್ದವು. ತಾನು ಹರಿಯುವ ನೆಲವನ್ನೆಲ್ಲ ಜೀವಗೊಳಿಸುವ ಹಂಬಲದಿ ಹರಿಯುತ್ತಿರುವ ತುಂಗಭದ್ರಾ ನದಿ ವಿಶಿಷ್ಟ ಕಲಾಕೃತಿಯಂತೆ ಕಾಣಿಸುತ್ತಿತ್ತು.

ಬೇಸಿಗೆಯ ತಾರುಣ್ಯದ ದಿನಗಳಿವು. ಶಾಲಾ ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಗಳ ತಿಂಗಳಿದು. ಬೇಸಿಗೆ ರಜೆಯ ಕನಸುಗಳು ತೆರೆದುಕೊಳ್ಳುವ ಕಾಲ ಇದಲ್ಲವೇ? ಈ ರಜೆ ಅರ್ಥಪೂರ್ಣಗೊಳ್ಳಲು ಹಂಪಿಗಿಂತಲೂ ಮೋಹಕ ಒಡನಾಟ ಮತ್ತೊಂದಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT