ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ನುಂಗಿದ ಕೆರೆ ಮುಳುಗಡೆ ಪ್ರದೇಶ...

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಯಾವುದಕ್ಕೇ ಆದರೂ ಜನ ಸರ್ಕಾರವನ್ನು ನಂಬು­ತ್ತಾರೆ, ನಂಬಲೇಬೇಕು. ಆ ನಂಬಿ­ಕೆಯೇ ಜನ­ಸಮುದಾಯ ಮತ್ತು ಸರ್ಕಾರದ ಭಾಗವಾದ ಸಾರ್ವಜನಿಕ ಆಡಳಿತದ ನಡುವಿನ ಅಂತರ್‌ ಸಂಬಂಧದ ಮುಖ್ಯ ನೆಲೆ. ಈಗ ಆ ನೆಲೆಯೇ ಕುಸಿದ ಸನ್ನಿವೇಶ ಕೋಲಾರದಲ್ಲಿ ಸೃಷ್ಟಿಯಾಗಿದೆ.

ಇಲ್ಲಿನ ಅಂಬೇಡ್ಕರ್‌ ನಗರದ ಕೆರೆ ಮುಳುಗಡೆ ಪ್ರದೇಶ­ದಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ನೂರಾರು ದಲಿತರು ಈಗ ಸರ್ಕಾರ ತಮಗೆ ಮಾಡಿರುವ ‘ನಂಬಿಕೆ ದ್ರೋಹ’ವನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಏಕೆಂದರೆ, ‘1990ರ ಏಪ್ರಿಲ್‌ 14ರಂದು ಅಂದಿನ ಜಿಲ್ಲಾ­ಧಿ­ಕಾರಿ ಕೇಶವರಾಜು ಮತ್ತು ನಗರಸಭೆ ಪೌರಾಯುಕ್ತರು ಜಂಟಿಯಾಗಿ ಸಹಿ ಮಾಡಿರುವ ಹಕ್ಕುಪತ್ರಗಳಿಗೆ ಮಾನ್ಯತೆ ಇಲ್ಲ. ಹೀಗಾಗಿ ನೀವೆಲ್ಲ ಕೋಲಾರಮ್ಮ ಕೆರೆಯ 6.07 ಎಕರೆ ಮುಳುಗಡೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡವರು’ ಎನ್ನುತ್ತಿದೆ ಜಿಲ್ಲಾ ಆಡಳಿತ.

‘24 ವರ್ಷದ ಹಿಂದೆ ನೀವೇ ಕೊಟ್ಟ ಹಕ್ಕುಪತ್ರ ಸರಿ ಇಲ್ಲ ಎಂದು ಈಗ ಹೇಳಿ ಒಕ್ಕಲೆಬ್ಬಿಸುವುದು ಎಷ್ಟು ಸರಿ’ ಎಂಬುದು ಜನರ ಪ್ರಶ್ನೆ. ಆದರೆ ಆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಹಾಗೆ ನೋಡಿದರೆ, ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕೆರೆ ಮುಳುಗಡೆ ಪ್ರದೇಶವನ್ನು ಮೊದಲು ಒತ್ತು­ವರಿ ಮಾಡಿದ್ದು ಜಿಲ್ಲಾ ಆಡಳಿತ ಮತ್ತು ನಗರಸಭೆ. ಮತ್ತೆ ಅವು ನಿವೇಶನಗಳ ಹಕ್ಕುಪತ್ರದ ರೂಪದಲ್ಲಿ ಅದನ್ನು ನಿರ್ಗತಿಕ ದಲಿತರಿಗೆ ನೀಡಿ ಔದಾರ್ಯ ಪ್ರದರ್ಶಿಸಿವೆ. ಹಕ್ಕುಪತ್ರ ಪಡೆದು ಧನ್ಯತೆಯಲ್ಲಿ ಮಿಂದ ದಲಿತರು ಅಲ್ಲಿ ಸಾಲ ಸೋಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ.

2013ರಲ್ಲಿ ಸಮಾಜ ಪರಿವರ್ತನಾ ಸಮುದಾಯ, ಹೈಕೋರ್ಟ್‌­ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕ­ದ್ದಮೆಯು ಜಿಲ್ಲಾ ಆಡಳಿತ ಬಚ್ಚಿಟ್ಟಿದ್ದ ದೊಡ್ಡ ಸುಳ್ಳನ್ನು ಹೊರ­ತೆಗೆದಿದೆ. ಸಾರ್ವಜನಿಕ ಆಡಳಿತದ ಕೆಟ್ಟ ಮಾದರಿ­ಯೊಂದನ್ನು ಬಯಲಿಗೆಳೆದಿದೆ. ಏಕೆಂದರೆ, ಅದು ದಲಿತರನ್ನು ಓಲೈಸುವ ಸಲುವಾಗಿ ಸೃಷ್ಟಿಸಿದ ಒಂದು ಹುಸಿ ಕನಸಾಗಿದ್ದು, ಫಲಾನುಭವಿಗಳು ಮಾತ್ರ ಈಗ ಅತಂತ್ರರಾಗಿದ್ದಾರೆ.
ಕೋಲಾರ ರೂರಲ್‌ ಗ್ರಾಮದ ಸರ್ವೆ ನಂ.85ರ 6.07 ಎಕರೆ ಜಮೀನು ಕಂದಾಯ ದಾಖಲೆಗಳ ಪ್ರಕಾರ ಕೆರೆ ನೀರು ಮುಳುಗಡೆ ಪ್ರದೇಶ. ಆ ಜಮೀನನ್ನು ಇತರ ಉದ್ದೇಶಕ್ಕಾಗಿ ಮಂಜೂರು ಮಾಡಲು ನಿಷೇಧವಿದೆ.

ಅಲ್ಲದೆ, ಆಶ್ರಯ ಯೋಜನೆ ಅಡಿ ಹಕ್ಕುಪತ್ರ ವಿತರಿಸಲು ಈ ಜಮೀನನ್ನು ವರ್ಗಾ­ಯಿಸಿರುವ ಯಾವುದೇ ಸ್ಪಷ್ಟ ದಾಖಲೆಗಳೂ ಕಂಡುಬರುತ್ತಿಲ್ಲ. ಹೀಗಾಗಿ ಈ ಜಮೀನಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂಬ ಅಂಶ ದೃಢಪಟ್ಟಿಲ್ಲ. ಆದಕಾರಣ ಒತ್ತುವರಿಯಾಗಿರುವ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 39 (2), 94 (3), 104 ಮತ್ತು ನಿಯಮ 192 (ಎ) ಅಡಿಯಲ್ಲಿ ಖಚಿತಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳ­ಬೇಕು ಎಂದು ಈಗಿನ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಸೂಚಿ­ಸಿದ್ದಾರೆ. ಆದರೆ ಅಂದು ದಲಿತರಿಗೆ ಹಕ್ಕುಪತ್ರ ವಿತರಿಸುವಾಗ ಈ ಕಾನೂನು ಆಗಿನ ಜಿಲ್ಲಾಧಿಕಾರಿ ಕೇಶವರಾಜು ಅವರಿಗೆ ಗೊತ್ತಿರಲಿಲ್ಲವೇ ಎಂಬುದು ಈಗ ಪ್ರಮುಖ ಪ್ರಶ್ನೆ.

ಕೆರೆ ಮುಳುಗಡೆ ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಸಲು ನಿಷೇಧವಿದ್ದರೂ, ಆಗಿನ ಅಧಿಕಾರಿಗಳು ಹಕ್ಕುಪತ್ರದ ರೂಪದಲ್ಲಿ ಅದನ್ನು ದಲಿತರಿಗೆ ನೀಡಿದ್ದಾದರೂ ಹೇಗೆ? ಮುಳುಗಡೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುವುದು ಅಪರಾಧ ಎಂಬುದು ಅವರಿಗೆ ಗೊತ್ತಿರಲಿಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಹಕ್ಕುಪತ್ರ ವಿತರಿಸಿ 10 ವರ್ಷಗಳಾದ ಬಳಿಕ, 2000ದ ಡಿಸೆಂಬರ್‌ನಲ್ಲಿ ಅಂದಿನ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರು ಮತ್ತು ನಗರಸಭೆ ಪೌರಾಯುಕ್ತರು ಆಶ್ರಯ ಮನೆ ನಿರ್ಮಾಣ ಮಾಡಲು ಹಿಂಬರಹ ನೀಡಿದ್ದರು. ನಂತರ ಅಲ್ಲೊಂದು ಜನವಸತಿ ಪ್ರದೇಶ ಅಸ್ತಿತ್ವಕ್ಕೆ ಬಂದಿದೆ.

ಜನರಿದ್ದ ಮೇಲೆ ಅಲ್ಲಿ ವಿದ್ಯುತ್‌, ರಸ್ತೆ, ನೀರು, ಒಳಚರಂಡಿ ಮೊದಲಾದ ಮೂಲಸೌಕರ್ಯಗಳಿರಲೇಬೇಕು. ಅವೆಲ್ಲವನ್ನೂ ನಗರಸಭೆ, ಬೆಸ್ಕಾಂ ನೀಡಿದವು. ಅದೇ ವಿಳಾಸವನ್ನು ನಮೂ­ದಿಸಿ ಆಹಾರ ಇಲಾಖೆ ಪಡಿತರ ಚೀಟಿ, ತಹಶೀಲ್ದಾರರ ಕಚೇರಿ ಮತದಾರರ ಚೀಟಿಗಳನ್ನೂ ಜನರಿಗೆ ನೀಡಿದವು. ಆಧಾರ್‌ ಕಾರ್ಡ್ ಕೂಡ ಬಂತು. ನಗರಸಭೆ ಜನರಿಂದ ತೆರಿಗೆಯನ್ನೂ ಪಡೆಯುತ್ತಿದೆ. ಇದೇ ಅಂಶವನ್ನು ಅಂಬೇಡ್ಕರ್‌ ನಗರದ ಒತ್ತುವರಿ ಪ್ರದೇಶದ ಜನ, ತಮಗೆ ತಹಶೀಲ್ದಾರರು ನೀಡಿದ ನೋಟಿಸ್‌ಗೆ ಸಮಜಾಯಿಷಿ ರೂಪದಲ್ಲಿ ನೀಡಿದ್ದಾರೆ.

ಆದರೆ, ಅದು ಸಮಂಜಸವಾಗಿಲ್ಲ; ಸಾರ್ವಜನಿಕ ಹಿತದೃಷ್ಟಿ­ಯಿಂದ ಅವರನ್ನು ಒತ್ತುವರಿ ಮಾಡಿರುವ ಪ್ರದೇಶದಿಂದ ತೆರವುಗೊಳಿಸುವುದು ನ್ಯಾಯೋಚಿತವಾಗುತ್ತದೆ ಎಂದು ತಹ­ಶೀಲ್ದಾರರು ನಡಾವಳಿಯನ್ನು ಸಿದ್ಧಪಡಿಸಿದ್ದಾರೆ. ಕೆರೆ ಮುಳು­ಗಡೆ ಪ್ರದೇಶದಲ್ಲಿ ಮನೆ ಕಟ್ಟಿದವರನ್ನು ತೆರವುಗೊಳಿಸುವುದು ನ್ಯಾಯವಾದ ಕ್ರಮ ಎಂದು ತಾಲ್ಲೂಕು ಆಡಳಿತ ಹೇಳಿದೆ. ಹಾಗಿದ್ದರೆ ಕೆರೆ ಮುಳುಗಡೆ ಪ್ರದೇಶದಲ್ಲಿ ಮನೆ ಕಟ್ಟಲು ನಿವೇಶನ ನೀಡಿದ್ದು ನ್ಯಾಯವೇ ಎಂದು ಜನ ಕೇಳುತ್ತಿದ್ದಾರೆ. ‘ಅದಕ್ಕೆ ನಾವು ಜವಾಬ್ದಾರರಲ್ಲ’ ಎನ್ನುತ್ತಿದ್ದಾರೆ ಅಧಿಕಾರಿಗಳು.

ಇಂಥದ್ದೊಂದು ವಿಪರ್ಯಾಸಕ್ಕೆ ಅಂದಿನ ಅಧಿಕಾರಿ, ಜನ­ಪ್ರತಿ­ನಿಧಿಗಳು, ಅದನ್ನು ಮುಂದುವರಿಸಿಕೊಂಡು ಬಂದ ಇಲ್ಲಿ­ಯ­ವರೆಗಿನ ಎಲ್ಲ ಸರ್ಕಾರಗಳೂ ಹೊಣೆಯಲ್ಲವೇ? ಅವರೆಲ್ಲರ ವಿರುದ್ಧ ಕ್ರಮವೇನಾದರೂ ಇದೆಯೇ? ಮುಳುಗಡೆ ಪ್ರದೇಶ­ದ­ಲ್ಲಿರುವವರೆಲ್ಲರೂ ಭೂ ಕಂದಾಯ ಅಧಿನಿಯಮ 1964ರ ಕಲಂ ‘192ಎ’ಯಂತೆ ದಂಡನೆಗೆ ಅರ್ಹರು ಎನ್ನುವುದಾದರೆ ಮುಳುಗಡೆ ಪ್ರದೇಶದಲ್ಲಿ ಜಾಗ ಕೊಟ್ಟವರು ಯಾವ ದಂಡ­ನೆಗೆ ಅರ್ಹರು ಎಂದು ಜನ ಕೇಳುತ್ತಿದ್ದಾರೆ. ಆ ವಿಷಯದಲ್ಲಿ ಮಾತ್ರ ಜಿಲ್ಲಾ ಆಡಳಿತವು, ಅಲ್ಲಮ ಪ್ರಭುವಿನ ವಚನವೊಂದರಲ್ಲಿ ಹೇಳುವಂತೆ, ‘ತನ್ನ ಕಾಣದ ಕುರುಡನಂತೆ, ತನ್ನ ಕೇಳದ ಕಿವುಡನಂತೆ, ತನ್ನ ಮಾತನಾಡದ ಮೂಕನಂತೆ’ ವರ್ತಿಸುತ್ತಿದೆ.

ಪರ್ಯಾಯ ಹೇಗೆ?: ಇದು ಕೇವಲ ದಂಡನೆಯ ಪ್ರಶ್ನೆ ಅಲ್ಲ. ನೆಲೆ ಕಳೆದುಕೊಳ್ಳಲಿರುವವರಿಗೆ ಬಹುಮುಖ್ಯವಾಗಿ ಪರಿಹಾರ ಮತ್ತು ಪರ್ಯಾಯದ ಪ್ರಶ್ನೆ. ಪರ್ಯಾಯ ಸದ್ಯಕ್ಕೆ ಬಾಡಿಗೆ ಮನೆ. ದುರಂತ ಎಂದರೆ, ಮನೆ ಕಳೆದುಕೊಳ್ಳಲಿರುವ ಮನೆಗಳ ಬಹಳ ಮಂದಿಗೆ ದಲಿತರು ಎಂಬ ಕಾರಣಕ್ಕೆ ಬಾಡಿಗೆ ಮನೆ­ಗಳೂ ಸಿಗುತ್ತಿಲ್ಲ. ಕಸ ಬಳಿಯೋಕೆ, ರಸ್ತೆ ಗುಡಿಸೋಕೆ ದಲಿತರು ಬೇಕು. ಆದರೆ ಮನೆ ಬಾಡಿಗೆ ಕೊಡೋಕೆ ಮಾತ್ರ ಪರಿಶಿಷ್ಟರು ಬೇಡ ಎನ್ನುತ್ತಿದ್ದಾರೆ ಮೇಲ್ಜಾತಿಯ ಬಹಳಷ್ಟು ಜನ.

ದಶಕಗಳಿಂದ ಜತನ ಮಾಡಿಟ್ಟುಕೊಂಡಿದ್ದ ಹಕ್ಕುಪತ್ರದ ಅಸಲಿಯತ್ತು ಮುರಿದುಬಿದ್ದಿದೆ. ಕೂಲಿ, ಸಣ್ಣಪುಟ್ಟ ಕೆಲಸವನ್ನೇ ನಂಬಿದ ಬದುಕು ತೆವಳುತ್ತಿದೆ. ಮನೆ ಖಾಲಿ ಮಾಡಲು ಹೇಳಿ ತಹಶೀಲ್ದಾರರು ಕೊಟ್ಟಿರುವ ನೋಟಿಸ್‌ ಬಿಸಿ ಕೆಂಡದಂತೆ ಸುಡು­ತ್ತಿದೆ. ತೆರವು ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಸರ್ಕಾರದ ನಿಲುವು ‘ದಲಿತರಿಗೆ ಸಾಮಾಜಿಕ ನ್ಯಾಯ’ ಎಂಬ ಪರಿಕಲ್ಪನೆಯನ್ನು ಅಣಕಿಸುವಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT