ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ದಕ್ಕಿಸಿಕೊಳ್ಳಲಾಗದ ಅಮಾಯಕರು

Last Updated 28 ಮೇ 2016, 5:48 IST
ಅಕ್ಷರ ಗಾತ್ರ

ಆರ್.ಟಿ.ಇ.ಗೆ ಸಂಬಂಧಿಸಿ ಸರ್ಕಾರವು ಖಾಸಗಿ ಶಾಲೆಗಳ ಶುಲ್ಕ ಭರಿಸುವಾಗ ಬಹಳಷ್ಟು ತಾರತಮ್ಯ ಕಂಡುಬರುತ್ತದೆ. ಇದರ ನಿವಾರಣೆ ಆಗಬೇಕೆಂದರೆ, ಖಾಸಗಿ ಶಾಲೆಗಳೇ ಸಾಮಾಜಿಕ ಜವಾಬ್ದಾರಿ ಅರಿತು ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತೆ ಆಗಬೇಕು.

ತಮ್ಮ ಶಾಲಾ ವ್ಯಾಪ್ತಿಯಲ್ಲಿ ಬರುವ ಬಡ ಮಕ್ಕಳನ್ನು ಶಾಲೆಯವರೇ ಆಯ್ಕೆ ಮಾಡಲಿ. ಪಾರದರ್ಶಕತೆ ಕಾಯ್ದುಕೊಳ್ಳಲು ಆಯ್ಕೆ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯವರೂ ಇರಲಿ. ಸರ್ಕಾರ ಆರ್‌.ಟಿ.ಇ. ಬಾಬ್ತು ನೀಡಬೇಕಾದ ಮರುಪಾವತಿ ಶುಲ್ಕದ ಮೊತ್ತವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಿ.

2010ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಸ್ವರೂಪ, ಚಿಂತನೆ ಮತ್ತು ಅನುಷ್ಠಾನದಲ್ಲಿ ದೇಶದ ಅಭಿವೃದ್ಧಿಯ ಆಶಯವಿದೆ. ದೂರದರ್ಶಿತ್ವವುಳ್ಳ ಸಶಕ್ತ ಸಮಾಜವನ್ನು ಕಟ್ಟುವ ಉದ್ದೇಶವಿರುವ ಈ ಶಾಸನವನ್ನು ಹೇಗೆ ವಿಫಲಗೊಳಿಸಲಾಯಿತು ಎಂಬುದಕ್ಕೆ ಉತ್ತರ ಕರ್ನಾಟಕದ ಸದ್ಯದ ಶಿಕ್ಷಣದ ಪರಿಸ್ಥಿತಿಯೇ ಸಾಕ್ಷಿ.

ಏಕೆಂದರೆ ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದ ಬಳಿಕ  ‘ನಮ್ಮ ಉತ್ತರ ಕರ್ನಾಟಕದ ಶಾಲೆಗಳನ್ನೊಂದಿಷ್ಟು ಸುಧಾರಿಸಿ’ ಎಂದು ಅಲ್ಲಿನ ಶಾಸಕರೊಬ್ಬರು ಹೇಳಿದ್ದಾರೆ. ಇಲ್ಲಿ ನಿಜವಾದ ಅರ್ಥದಲ್ಲಿ ಆರ್.ಟಿ.ಇ. ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ.

ಪ್ರಸ್ತುತ ಆರ್‌.ಟಿ.ಇ. ಗುಲ್ಲು ಇರುವುದು ದಕ್ಷಿಣ ಕರ್ನಾಟಕದಲ್ಲಿ. ಅದರಲ್ಲೂ ನಗರ ಕೇಂದ್ರಿತ ಆಂಗ್ಲ ಮಾಧ್ಯಮ ಶಾಲೆಗಳ ವಲಯದಲ್ಲಿ. ಆರ್.ಟಿ.ಇ. ಎಂಬುದು ರಾಷ್ಟ್ರದ ಸಂವಿಧಾನಕ್ಕೆ 86ನೇ ತಿದ್ದುಪಡಿ ತರುವ ಮೂಲಕ ಜಾರಿಗೊಳಿಸಲಾದ ‘ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯ್ದೆ’.

ಇದರ ಪ್ರಕಾರ, ಮಗುವನ್ನು ಶಾಲೆಗೆ ಸೇರ್ಪಡೆಗೊಳಿಸುವಲ್ಲಿಂದ ಪರಿಪೂರ್ಣ ಕಲಿಕೆಯ ಉಸ್ತುವಾರಿವರೆಗಿನ ಹೊಣೆ ಸರ್ಕಾರದ್ದು. ಸರ್ವ ಶಿಕ್ಷಾ ಅಭಿಯಾನದಡಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ನಿರ್ಮಾಣಕ್ಕೆ ಬೇಕಾದ ಎಲ್ಲಾ ಅನುದಾನ ಬಂದಿರುವಾಗ ಈ ಕಾಯ್ದೆ ಅನುಷ್ಠಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದು ಕಷ್ಟವಿರಲಿಲ್ಲ. ನಮ್ಮ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನಸ್ಸಿರಬೇಕು.

ಆದರೆ ಅವರು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 25% ಸೀಟುಗಳನ್ನು ಕೊಡಿಸುವುದೇ ತಮ್ಮ ಪ್ರಧಾನ ಕರ್ತವ್ಯವೆಂದು ತಿಳಿದರು. ವಾಸ್ತವದಲ್ಲಿ ಇದು ಕಾಯ್ದೆಯ ಒಂದು ಭಾಗ ಮಾತ್ರ. ಆದರೆ ಅದೇ ಪ್ರಧಾನವಾಗಿ ಕಂಡದ್ದರಿಂದ ಅವರು ಈ ಕುರಿತಾಗಿ ಮುತುವರ್ಜಿ ವಹಿಸಿದರು.

ಅರ್ಜಿ ಹಾಕುವವರ ವಾರ್ಷಿಕ ಆದಾಯ ಮಿತಿ ಗರಿಷ್ಠ ₹ 3.5 ಲಕ್ಷ ಇದ್ದುದರಿಂದ ತಿಂಗಳಿಗೆ 30 ಸಾವಿರದಷ್ಟು ವರಮಾನ ಇದ್ದವರೂ ಅರ್ಜಿ ಹಾಕಬಹುದಿತ್ತು. ಅಲ್ಲದೆ ಆದಾಯ ಸರ್ಟಿಫಿಕೇಟನ್ನು ನಿಗದಿಪಡಿಸಿದ್ದಕ್ಕಿಂತ ಕಡಿಮೆಗೆ ಮಾಡಿಸಿಕೊಳ್ಳುವುದೇನೂ ಕಷ್ಟವಲ್ಲ.

ಇನ್ನು, ಖಾಸಗಿ ಶಾಲೆಯೆಂದರೆ ಅದು ಇಂಗ್ಲಿಷ್ ಮಾಧ್ಯಮದಲ್ಲೇ ನಡೆಯುತ್ತದೆ. ಸರ್ಕಾರ ಶುಲ್ಕ ಭರಿಸುವುದಿದ್ದರೆ, ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಸಿಕ್ಕುವುದಾದರೆ ಯಾರಿಗೆ ಬೇಡ? ಹಾಗಾಗಿ ಬೆಂಗಳೂರು ಹಾಗೂ ಇತರ ನಗರ ಕೇಂದ್ರಗಳಲ್ಲಿ ಆರ್‌.ಟಿ.ಇ. ಸೀಟು ವಿತರಣೆಯ ಗುಲ್ಲು ಜೋರಾಗಿ ಕೇಳುತ್ತಿದೆ.

ಒಂದು ವಾಸ್ತವಿಕ ಉದಾಹರಣೆ ಇಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದ ಬಡ ಪೋಷಕರೊಬ್ಬರು ಕೇಳುತ್ತಾರೆ, ‘ನಾನು ನಮ್ಮ ನಗರದ ಶ್ರೀ ಶ್ರೀ ಶಾಲೆಗೆ ಆರ್.ಟಿ.ಇ. ಅರ್ಜಿ ಹಾಕಬೇಕೆಂದಿದ್ದೇನೆ. ನನ್ನ ಮಗನಿಗೆ ಅಲ್ಲಿ ಸೀಟು ಸಿಗಬಹುದಾ?’ ಆಗ ಬಿ.ಇ.ಒ. ಕೇಳುತ್ತಾರೆ,

‘ನಿಮ್ಮ ವಾರ್ಡ್ ಯಾವುದು?’ ಆ ಪೋಷಕರು, ‘14ನೇ ವಾರ್ಡ್’ ಎನ್ನುತ್ತಾರೆ. ‘ಶ್ರೀ ಶ್ರೀ ಶಾಲೆ ಇರುವುದು 10ನೇ ವಾರ್ಡ್‌ನಲ್ಲಿ. ಅಲ್ಲಿಗೆ ನೀವು ಪ್ರವೇಶ ಕೇಳುವಂತಿಲ್ಲ’ ಎಂದು ನಿಯಮದ ಪ್ರಕಾರವೇ ಬಿ.ಇ.ಒ. ಹೇಳುತ್ತಾರೆ. ‘ಆಗಲಿ ಸಾರ್. ಹಾಗಿದ್ರೆ ನಾನು ಬರುತ್ತೇನೆ’ ಎಂದು ಆ ಪೋಷಕರು ಹಿಂದಿರುಗುತ್ತಾರೆ. ಮತ್ತೆ ಮಗುವನ್ನು ಅವರು ಎಲ್ಲಿ ಸೇರಿಸಿದರೆಂದು ವಿಚಾರಿಸುವವರಿಲ್ಲ.

ಆದರೆ 14ನೇ ವಾರ್ಡಿನ ಇನ್ನೊಬ್ಬ ಪೋಷಕರು ಸೈಬರ್ ಸೆಂಟರ್‌ಗೆ ಹೋಗಿ ಆನ್‌ಲೈನ್‌ನಲ್ಲಿ ಶ್ರೀ ಶ್ರೀ ಶಾಲೆಯಲ್ಲಿ ಸೀಟಿಗಾಗಿ ಅರ್ಜಿ ಹಾಕುತ್ತಾರೆ. ಅವರ ವಾರ್ಡನ್ನು 10 ಎಂದೇ ಬರೆಸುತ್ತಾರೆ. ಅವರಿಗೆ ಶಾಲೆಗೆ ಹೋಗಿ ಸೇರಲು ಕರೆ ಬರುತ್ತದೆ. ಅಲ್ಲಿ ಹೋದಾಗ ಆಧಾರ್ ಕಾರ್ಡ್ ಪ್ರಕಾರ ಆ ಪೋಷಕರ ವಾಸ್ತವ್ಯ ಶಾಲೆ ವ್ಯಾಪ್ತಿಯ ವಾರ್ಡಿನಲ್ಲಿ ಇರುವುದಿಲ್ಲ. ಶಾಲೆಯವರು ನಿರಾಕರಿಸುತ್ತಾರೆ.

ಮಾಧ್ಯಮಗಳಲ್ಲಿ ಶಾಲೆಯವರನ್ನು ದುಷ್ಟರೆಂದು ಚಿತ್ರಿಸುವಷ್ಟು ಆ ಪೋಷಕರು ರಾದ್ಧಾಂತ ಮಾಡುತ್ತಾರೆ. ರಾಜಕೀಯವಾಗಿ ಸಂಪರ್ಕ ಹೊಂದಿದ್ದುದರಿಂದ ಸೀಟನ್ನು ದಕ್ಕಿಸಿಕೊಳ್ಳುತ್ತಾರೆ. ಅಂದರೆ ಸುಳ್ಳು ಹೇಳಿಯೂ ಆರ್.ಟಿ.ಇ. ಸೀಟು ಪಡೆಯಬಹುದಾಗಿದೆ. ವಾಸ್ತವ ಸಂಗತಿಯೆಂದರೆ ಸೈಬರ್ ಸೆಂಟರಿಗೆ ಹೋಗಲಾಗದ, ಆದರೆ ಸತ್ಯಕ್ಕೆ ಬೆಲೆ ಕೊಟ್ಟ ಪೋಷಕರು ವಂಚಿತರಾದರು. ಸತ್ಯ ಮರೆಮಾಚಿದ ಪೋಷಕರು ಕಾಯ್ದೆಯ ಲಾಭ ಪಡೆದರು.

ಕತೆ ಇಷ್ಟೆ. ಆನ್‌ಲೈನ್ ಮಾಡಲಾಗದ, ಅದರ ಬಗ್ಗೆ ತಿಳಿವಳಿಕೆ ಇಲ್ಲದ ಬಡ ಅಮಾಯಕ ಪೋಷಕರಿಗೆ ಸಿಗಬೇಕಾದ್ದು ಸಿಕ್ಕಿಲ್ಲ. ಶಾಲೆಗಳ ನಿರಾಕರಣೆಯಿಂದ ಸೀಟಿಗಾಗಿ ಪರದಾಡಿದ ಪೋಷಕರೆಲ್ಲ ಅಮಾಯಕರಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಆರ್.ಟಿ.ಇ. ಸೀಟು ದಕ್ಕಿಸಿಕೊಂಡವರೆಲ್ಲ ಬಡವರಲ್ಲ. ಅವರಿಗೆ ಸೀಟು ವಿತರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಇದು ಗೊತ್ತಿಲ್ಲದ ವಿಷಯವಲ್ಲ.

ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕೆಂದಿರುವುದು, ಲಾಟರಿ ಮೂಲಕ ಬೆಂಗಳೂರಿನಲ್ಲೇ ಕೇಂದ್ರೀಕೃತ ಆಯ್ಕೆ, ಶಾಲೆಗಳಿಗೆ ಲಾಗ್‌ಇನ್ ಐಡಿ ಹಾಗೂ ಪಾಸ್‌ವರ್ಡ್ ನೀಡುವಲ್ಲಿ ಗೊಂದಲ ಮತ್ತು ವಿಳಂಬ, ಹೆತ್ತವರನ್ನು ಶಾಲೆಯವರೇ ಕರೆಸಿ ಸೇರ್ಪಡೆ ಮಾಡಬೇಕೆಂಬ ನಿರ್ದೇಶನ, ಕರೆ ಮಾಡಿದರೆ ಹೆತ್ತವರಿಂದ ತಮ್ಮ ಆಯ್ಕೆ ಬೇರೆ ಶಾಲೆ ಎಂಬ ಉತ್ತರ,

ಅದು ಖಾಸಗಿ ಶಾಲೆಗಳಿಗೆ ಇಷ್ಟವಾಗುವುದು ಇತ್ಯಾದಿ ಕಾರಣಗಳಿಂದ ಮೊದಲನೇ ಹಂತದ ಸೀಟು ಹಂಚಿಕೆಯಾದ ಸುಮಾರು 1.01 ಲಕ್ಷ ಮಕ್ಕಳಲ್ಲಿ ಸೇರ್ಪಡೆಯಾದವರು ಸುಮಾರು 33 ಸಾವಿರ ಮಂದಿ ಮಾತ್ರ. ಇದು ಆರ್.ಟಿ.ಇ.ಯ ವೈಫಲ್ಯವಲ್ಲ, ಅದನ್ನು ಅನ್ವಯಿಸುವಲ್ಲಿ ತಪ್ಪು ಮಾಡಿ, ಸರ್ಕಾರಿ  ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಅವಜ್ಞೆ ತೋರಿದ್ದರ ಪರಿಣಾಮ.

ಈ ವರ್ಷ ಒಂದು ಹೊಸ ನಿಯಮವನ್ನು ನ್ಯಾಯಬದ್ಧವಾಗಿಯೇ ರೂಪಿಸಿದರು. ಅದರ ಪ್ರಕಾರ ವಿದ್ಯಾರ್ಥಿಯ ಮನೆಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ  ಶಾಲೆಯಿಲ್ಲದಿದ್ದರೆ ಮನೆಗೆ ಅತ್ಯಂತ ಸಮೀಪದ ಖಾಸಗಿ ಶಾಲೆಯನ್ನು ಆಯ್ದುಕೊಳ್ಳಬೇಕು. ಹೆತ್ತವರ ಇಷ್ಟದ (ಪ್ರತಿಷ್ಠಿತ?) ಶಾಲೆಯನ್ನಲ್ಲ. ಈ ನಿಯಮವು ಅನೇಕರ ಅಭಿಲಾಷೆಗಳನ್ನು ಚಿವುಟಿ ಹಾಕಿತು.

ಅಲ್ಲದೆ ಮೊದಲೇ ನೆಪಗಳಿಗಾಗಿ ಕಾಯುತ್ತಿದ್ದ ಶಾಲೆಗಳಿಗೆ ವಾಸ್ತವ್ಯದ ಆಧಾರದಲ್ಲಿ, ಸೇರ್ಪಡೆಗಾಗಿ ಬಂದವರನ್ನು ಹಿಂದೆ ಕಳುಹಿಸಲು ಸುಲಭವಾಯಿತು. ಆರ್.ಟಿ.ಇ. ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ತಾರತಮ್ಯ ಮಾಡುತ್ತಾರೆ ಎಂಬ ಆಪಾದನೆಗೆ ಅನೇಕ ಸಾಕ್ಷ್ಯಗಳನ್ನು ಒದಗಿಸಿದ ಖಾಸಗಿ ಶಾಲೆಯವರು, ಸೇರ್ಪಡೆಗಾಗಿ ಬಂದ ಮಕ್ಕಳನ್ನು ‘ಹಿಂದೆ ಕಳುಹಿಸಿದ  ಕ್ರಮ’ ಚರ್ಚೆಗೆ ಗ್ರಾಸವಾಯಿತು.

ಆರ್‌.ಟಿ.ಇ. ಅನ್ನು ಅನುಷ್ಠಾನಗೊಳಿಸಿ ನಾಲ್ಕು ವರ್ಷಗಳಾದವು.   ಪ್ರತಿ ವಿದ್ಯಾರ್ಥಿಯ ಬಾಬ್ತು ಶಾಲೆಗಳಿಗೆ ₹ 11,848 ನೀಡುವುದಾಗಿ ಶಾಸನದಲ್ಲಿ ಇರುವುದನ್ನು ನಿಯಮಾವಳಿಗಳ ಮೂಲಕ ತಡೆಹಿಡಿದು ಶಾಲೆಗಳ ಆಡಿಟ್ ರಿಪೋರ್ಟನ್ನು ನೋಡಿ ಇಲಾಖೆಯೇ ನಿರ್ಧರಿಸುತ್ತದೆ.

ಅದರಂತೆ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು ₹ 2000ದಷ್ಟು ಸಿಕ್ಕುತ್ತದೆ. ಆದರೆ ಆಂಗ್ಲ ಮಾಧ್ಯಮದ ‘ಕನ್ನಡ ಕಲಿಸದ’ ಇಂಟರ್‌ನ್ಯಾಶನಲ್ ಶಾಲೆಗಳಿಗೆ ಗರಿಷ್ಠ ಮೊತ್ತದ ಮರುಪಾವತಿ ನೀಡುತ್ತಾರೆ. ಇದರಿಂದಾಗಿ ನಮ್ಮ ಕನ್ನಡಿಗರ ತೆರಿಗೆ ಹಣ ಆಂಗ್ಲ ಶಿಕ್ಷಣಕ್ಕೆ ಸಲ್ಲುತ್ತದೆ.

ಏನಿದ್ದರೂ ಕಳೆದ ನಾಲ್ಕು ವರ್ಷಗಳಲ್ಲಿ ಆರ್.ಟಿ.ಇ. ಮಕ್ಕಳ ಬಾಬ್ತು ಸುಮಾರು ₹ 350 ಕೋಟಿ ಖಾಸಗಿ ವಲಯಕ್ಕೆ ಸಂದಿದೆ. ಇನ್ನು ನಾಲ್ಕು ವರ್ಷಗಳಲ್ಲಿ, ಅಂದರೆ ಮೊದಲ ವರ್ಷದ ಮಗುವಿಗೆ 14 ವರ್ಷಗಳಾದಾಗ, ವರ್ಷಂಪ್ರತಿ ಸೇರ್ಪಡೆಯಾಗುವ ಹೊಸ ಮಕ್ಕಳನ್ನು ಒಳಗೊಂಡು ಸರ್ಕಾರ ಭರಿಸಬೇಕಾದ ಒಟ್ಟು ಮೊತ್ತ ಸುಮಾರು ₹ 1,500 ಕೋಟಿಯಷ್ಟಾಗಬಹುದು. ಈ ವೆಚ್ಚ ವಾಸ್ತವದಲ್ಲಿ ಶೈಕ್ಷಣಿಕ ಅಸಮಾನತೆಗೆ ಸರ್ಕಾರದ ದೇಣಿಗೆಯೇ ಆಗುತ್ತದೆ.

ಮಕ್ಕಳ ಶಿಕ್ಷಣ ಹಕ್ಕಿಗೆ ಸಂಬಂಧಿಸಿ ಶಾಸನದ ನಿರ್ದೇಶನಗಳನ್ನು ಶಿಕ್ಷಣ ಇಲಾಖೆ ಸರಿಯಾಗಿ ಪಾಲಿಸಿದರೆ ನಮ್ಮ ಸರ್ಕಾರಿ ಶಾಲೆಗಳು ಇಷ್ಟೊಂದು ಸೊರಗುತ್ತಿರಲಿಲ್ಲ. ವಿದ್ಯಾರ್ಹತೆ ಹೊಂದಿದ ಶಿಕ್ಷಕರು ಶಾಲೆಗಳಲ್ಲಿ ಸಾಕಷ್ಟು ಮಂದಿ ಇರಲೇ ಬೇಕೆಂಬುದಾಗಿ ಕಾಯ್ದೆಯಲ್ಲಿ ಒತ್ತು ನೀಡಲಾಗಿದೆ.

ಇತ್ತೀಚೆಗೆ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ತಿಂಗಳಿಗೆ ₹ 5,500 ಹಾಗೂ ಪ್ರೌಢಶಾಲೆಗಳಲ್ಲಿ ₹ 6,500 ವೇತನ ನೀಡಿ  ಗೌರವ ಶಿಕ್ಷಕರೆಂದು ನೇಮಿಸಿಕೊಂಡವರ ಒಟ್ಟು ವೇತನವು ಆರ್.ಟಿ.ಇ. ಮಕ್ಕಳಿಗೆ ಸರ್ಕಾರ ಭರಿಸುವ ಒಟ್ಟಾರೆ ಶುಲ್ಕಕ್ಕಿಂತಲೂ ಕಡಿಮೆ ಆಗುತ್ತದೆ.

ಹಾಗಿದ್ದ ಮೇಲೆ ಸರ್ಕಾರಿ  ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಿ ಕಡ್ಡಾಯ ಶಿಕ್ಷಣದ ಅನುಷ್ಠಾನವನ್ನು ಅರ್ಥಪೂರ್ಣವಾಗಿಸುವುದು ಒಳ್ಳೆಯದಲ್ಲವೇ? ಈ ಬೆಳವಣಿಗೆ ಆಗುತ್ತಿದ್ದರೆ ಆರ್.ಟಿ.ಇ. ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT