ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲಿರುಳು ಮುಂದುವರಿದ ರಸ್ತೆ ದುರಸ್ತಿ ಕಾರ್ಯ

Last Updated 8 ಫೆಬ್ರುವರಿ 2016, 10:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರೋತ್ಥಾನ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆದ ಸಂದರ್ಭದಲ್ಲಿ ನಗರದ ವಿವಿಧಡೆಗಳಲ್ಲಿ ರಸ್ತೆಗಳು ತಗ್ಗು – ಗುಂಡಿಗಳು ಬಿದ್ದು, ಹದಗೆಟ್ಟಿದ್ದವು. ಅವುಗಳ ದುರಸ್ತಿ ಕಾರ್ಯವೀಗ ಕೆಲವೆಡೆ ಭರದಿಂದ ಸಾಗಿದೆ.

ನಗರದ ಅನೇಕ ರಸ್ತೆಗಳು ಸಂಚರಿಸಲು ಯೋಗ್ಯವಲ್ಲದಂತ ಸ್ಥಿತಿಗೆ ತಲುಪಿ ಜನತೆ ಅಂಕು ಡೊಂಕಾದ ರಸ್ತೆಗಳಲ್ಲಿ ಸಂಚರಿಸುವಂತ ಪರಿಸ್ಥಿತಿ ಕೂಡ ಈ ಹಿಂದೆ ನಿರ್ಮಾಣವಾಗಿತ್ತು. ಜತೆಗೆ ನಗರವೇ ದೂಳು ಮಯವಾಗಿತ್ತು.

ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆ ಅನುಕೂಲ ಮಾಡಿಕೊಡುವಂತೆ ನಾಗರಿಕರು ಅನೇಕ ಬಾರಿ ಪ್ರತಿಭಟನೆ ಮತ್ತು ಮನವಿಗಳನ್ನು ಕೂಡ ನೀಡಿದ್ದರು. ನಂತರ ನಗರೋತ್ಥಾನ ಯೋಜನೆಯಡಿ ಕೆಲವೆಡೆಗಳಲ್ಲಿ ನೂತನ ರಸ್ತೆ ನಿರ್ಮಾಣ ಕಾರ್ಯವೂ ಆಯಿತು. ಆದರೆ, ಪ್ರಸ್ತುತ ಈಗಲೂ ನಗರದ ವಿವಿಧ ಬಡಾವಣೆಗಳಲ್ಲಿ ತಗ್ಗು – ಗುಂಡಿಗಳು ಮಾತ್ರ ಹಾಗೆಯೇ ಇವೆ. ಕೆಲವೆಡೆ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ನಾಗರಿಕರಿಗೆ ಅನುಕೂಲ ಕೂಡ ಆಗುತ್ತಿದೆ ಎನ್ನುತ್ತಾರೆ ಜೆಸಿಆರ್‌ ಬಡಾವಣೆ ನಿವಾಸಿ ಮಂಜುನಾಥ್‌.

ಉತ್ತಮ ರಸ್ತೆ ನಿರ್ಮಾಣವಾಗಲಿ: ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಸಂಚರಿಸಲು ಸಹ ಅಸಾಧ್ಯವಾದಂತ ರಸ್ತೆಗಳು ಸಹ ನಗರದ ವಿವಿಧ ಬಡಾವಣೆಗಳಲ್ಲಿ ಇವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಜೆಸಿಆರ್‌ ಬಡಾವಣೆ ನಿವಾಸಿ ಗಂಗಾಧರ್‌.

ದುರಸ್ತಿಗೆ ಕ್ರಮ ಕೈಗೊಂಡಿದ್ದೇವೆ: ತಗ್ಗು – ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯಕ್ಕೆ ನಗರಸಭೆ ಮುಂದಾಗಿದ್ದು, ಜೆಸಿಆರ್‌ ಬಡಾವಣೆ ಮಾರ್ಗದ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಕೊನೆಗೊಳ್ಳುವಂತೆ ರಾಜ್ಯ ಹಣಕಾಸು ಆಯೋಗದ ಅನುದಾನದಡಿಯಲ್ಲಿ ₨ 15 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ನಗರಸಭೆಯ ಸಹಾಯಕ ಎಂಜಿನಿಯರ್‌ ರಂಗನಾಥ್‌.

ಅದೇ ರೀತಿ ಜೋಗಿಮಟ್ಟಿ ರಸ್ತೆ ಐದನೇ ತಿರುವಿನಿಂದ ಜಿಲ್ಲಾ ಕ್ರೀಡಾಂಗಣದವರೆಗೂ ₹ 15 ಲಕ್ಷ ವೆಚ್ಚದಲ್ಲಿ, ಗಾಂಧಿ ವೃತ್ತದಿಂದ ಹೊಳಲ್ಕೆರೆ ರಸ್ತೆ ಮಾರ್ಗದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ₹ 15 ಲಕ್ಷ ವೆಚ್ಚದಲ್ಲಿ, ಮೆದೇಹಳ್ಳಿ ರಸ್ತೆ ಮಾರ್ಗ ₹ 49.56 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಭರದಿಂದ ಸಾಗಲಿದೆ. ನಾಗರಿಕರು ನಗರಸಭೆಯೊಂದಿಗೆ ಸಹಕರಿಸಿದರೆ, ಹಂತ – ಹಂತವಾಗಿ ರಸ್ತೆಗಳ ದುರಸ್ತಿ ಕಾರ್ಯ ನಡೆಯಲಿದೆ ಎಂದು ಪತ್ರಿಕೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT