ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಲಿ: ಅಕ್ರಮ ಮರಳು ಸಾಗಣೆಗಿಲ್ಲ ತಡೆ

ಚಾಲನೆ ಸಿಗದ ಅಂತರ ಜಿಲ್ಲಾ ಗಡಿ ಸಮೀಕ್ಷೆ; ಹಾವೇರಿ ಭಾಗಕ್ಕೆ ರವಾನೆ
Last Updated 13 ಏಪ್ರಿಲ್ 2016, 10:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹಿರೇ ಬನ್ನಿಮಟ್ಟಿ ಬಳಿಯ ತುಂಗಭದ್ರಾ ನದಿ ಯಲ್ಲಿ ತೆಪ್ಪಗಳ ಮೂಲಕ ಅಕ್ರಮವಾಗಿ ಮರಳು ಸಾಗಾಟ ದಂಧೆ ಯಾವುದೇ ಅಡೆತಡೆಯಿಲ್ಲದೇ ನಡೆದಿದೆ. ಎಡ ದಂಡೆ ಭಾಗದವರು ತಾಲ್ಲೂ ಕಿನ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ನಿತ್ಯ ಮರಳು ದೋಚು ತ್ತಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೂವಿನಹಡಗಲಿ ತಾಲ್ಲೂಕಿನ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿ ಗಾವಿ ಬಳಿಯಲ್ಲಿ ತೆಪ್ಪ ಮತ್ತು ತಗಡಿನ ಅಡ್ಡೆಗಳಲ್ಲಿ ಮರಳು ತುಂಬಿಸಿಕೊಂಡು ನದಿ ಮೂಲಕವೇ ಹಾವೇರಿ ಜಿಲ್ಲೆಯ ತೆರದಹಳ್ಳಿ ಮತ್ತು ಮೇವುಂಡಿ ಗ್ರಾಮದ ತೀರಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿಂದ ಲಾರಿ, ಟ್ರ್ಯಾಕ್ಟರ್‌ಗಳಿಗೆ ತುಂಬಿಸಿ ದೂರದ ನಗರಗಳಿಗೆ ಕೊಂಡೊಯ್ಯಲಾಗುತ್ತಿದೆ. ನಿತ್ಯ 20–30 ಮರಳು ತುಂಬಿದ ತೆಪ್ಪ ಗಳು ನದಿಯಲ್ಲಿ ತಿರುಗಾಟ ನಡೆಸಿ ದರೂ ಅಕ್ರಮ ಸಾಗಾಟಕ್ಕೆ ತಡೆ ಇಲ್ಲದಂತಾಗಿದೆ.

ಮರಳುಚೋರರು ಮೀನುಗಾರ ರನ್ನು ಬಳಸಿಕೊಂಡು ಈ ಅಕ್ರಮದಲ್ಲಿ ತೊಡಗಿದ್ದಾರೆ. ಮೀನುಗಾರರ ತೆಪ್ಪ, ನದಿಯಲ್ಲಿ ಸುಲಭವಾಗಿ ತೇಲುವ ಹಗುರ ವಸ್ತುಗಳಿಂದ ತಯಾರಿಸಿದ ತಗಡಿನ ಅಡ್ಡೆಗಳಲ್ಲಿ ಮರಳು ತುಂಬಿಸಿಕೊಂಡು ನದಿಯ ಈ ದಂಡೆಯಿಂದ ಆ ದಂಡೆಗೆ ಹಗ್ಗದ ಸಹಾಯದಿಂದ ಸಾಗಿಸುತ್ತಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ಅಕ್ರಮ ತಡೆಯಲು ತಾಲ್ಲೂಕು ಆಡಳಿತ ಬಿಗಿ ಕ್ರಮ ಕೈ ಗೊಂಡಿದೆ. ಈ ಕಡೆ ಅಕ್ರಮ ಚಟುವಟಿಕೆ ಸಂಪೂರ್ಣ ನಿಲ್ಲದಿದ್ದರೂ ನಿಯಂತ್ರಣ ದಲ್ಲಿದೆ. ಆದರೆ, ಗಡಿ ದಾಟಿ ಬರುವ ಬಲದಂಡೆ ಭಾಗದವರನ್ನು ತಡೆಯುವಲ್ಲಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎನ್ನುವುದು ಸ್ಥಳೀಯರ ದೂರು.

‘ಅಕ್ರಮವಾಗಿ ಮರಳು ಸಾಗಿಸು ವವರ ಮೇಲೆ ಕ್ರಮ ಜರುಗಿಸುವಂತೆ ಗದಗ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನ ವಾಗಿಲ್ಲ. ಇದೆಲ್ಲ ಸಾಮಾನ್ಯ ವಿಷಯ ಎಂದು ಉದಾಸೀನ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಶಾಮಿಲಾಗಿರ ಬಹುದು’ ಎಂದು ಸ್ಥಳೀಯರಾದ ಲಕ್ಷ್ಮಣ ಬಾರ್ಕಿ ಶಂಕೆ ವ್ಯಕ್ತಪಡಿಸುತ್ತಾರೆ.

2013ರಲ್ಲಿ ತಾಲ್ಲೂಕಿನ ಹರವಿ ಬಳಿ ಅಕ್ರಮ ಚಟುವಟಿಕೆ ಗಡಿ ಮೀರಿರು ವುದನ್ನು ಪ್ರತ್ಯಕ್ಷ ಕಂಡಿದ್ದ ಹಿಂದಿನ ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್, ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಗಳ ಗಡಿ ಸಮೀಕ್ಷೆ ನಡೆಸದ ಹೊರತು ಒಂದು ಪುಟ್ಟಿ ಮರಳು ಎತ್ತಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಆದರೆ, ಮೂರು ವರ್ಷ ಕಳೆದರೂ ಅಂತರ್ ಜಿಲ್ಲಾ ಗಡಿ ಸಮೀಕ್ಷೆಗೆ ಇನ್ನೂ ಚಾಲನೆ ಸಿಕ್ಕಿಲ್ಲ.ಇನ್ನೊಂದೆಡೆ ಯಾವುದೇ ಗಡಿಯ ಹಂಗಿಲ್ಲದೇ ಮರಳು ದೋಚುವುದು ನಡೆದೇ ಎನ್ನುತ್ತಾರೆ ಸ್ಥಳೀಯರು.

ಸ್ಟಾಕ್‌ಯಾರ್ಡ್‌ಗೆ ಸಾಗಿಸಲು ನಿರಾಸಕ್ತಿ
ತಾಲ್ಲೂಕಿನ ಹರವಿ, ಹಿರೇಬನ್ನಿಮಟ್ಟಿ ಮತ್ತು ಹೊನ್ನೂರು ಬಳಿಯ ಸ್ಟಾಕ್‌ಯಾರ್ಡ್‌ಗಳಿಗೆ ಗುರುತಿಸಲಾದ ಬ್ಲಾಕ್‌ಗಳಿಂದ ಮರಳು ಸಾಗಿಸಲು ಟೆಂಡರ್ ಪೂರ್ಣಗೊಳಿಸಲಾಗಿದೆ. ಬೇನಾಮಿ ಗುತ್ತಿಗೆದಾರರ ಹೆಸರಲ್ಲಿ ಕೆಲ ಪ್ರಭಾವಿಗಳು ಮರಳು ವ್ಯವಹಾರದ ಮೇಲೆ ಹಿಡಿತ ಸಾಧಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸ್ಟಾಕ್‌ಯಾರ್ಡ್‌ಗೆ ಮರಳು ಸಾಗಿಸಲು ಇಲ್ಲದ ನೆಪ ಹೇಳುವ ದಂಧೆಕೋರರು, ಅವಕಾಶ ಬಳಸಿಕೊಂಡು ನೇರವಾಗಿ ನಗರ ಪ್ರದೇಶಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ಸ್ಟಾಕ್‌ಯಾರ್ಡ್‌ಗಳು ಖಾಲಿಯಾಗಿದ್ದು, ಮರಳಿನ ಅಭಾವ ಉಂಟಾಗಿದೆ.

ತಾಲ್ಲೂಕಿನ ನವಲಿ ಮತ್ತು ಬ್ಯಾಲಹುಣ್ಸಿ ಬಳಿಯ ನದಿ ದಂಡೆಯಲ್ಲಿ ತಾಲ್ಲೂಕು ಆಡಳಿತ ತಾತ್ಕಾಲಿಕ ಯಾರ್ಡ್‌ಗಳನ್ನು ತೆರೆದು ಮಾರಾಟ ವ್ಯವಸ್ಥೆ ಮಾಡಿತ್ತು. ಇಲ್ಲಿ ದಂಧೆಕೋರರ ಹಿಡಿತ ತಪ್ಪಿದ್ದರಿಂದ ಗ್ರಾಹಕರಿಗೆ ಸುಲಭ ದರದಲ್ಲಿ ಮರಳು ದೊರೆಯುತಿತ್ತು. ಜಿಲ್ಲಾಡಳಿತದ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಚುನಾವಣೆ ನೆಪ ಹೇಳಿ ತಾತ್ಕಾಲಿಕವಾಗಿ   ಮರಳು ಯಾರ್ಡ್‌ಗಳನ್ನು ಮುಚ್ಚಲಾಯಿತು.

ಕೂಡಲೇ ಸರ್ಕಾರ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿ, ಸ್ಟಾಕ್ ಯಾರ್ಡ್‌ ಮೂಲಕ  ಜನಸಾಮಾನ್ಯರಿಗೆ ಸುಲಭವಾಗಿ ಮರಳು ದೊರೆಯುವಂತೆ ಮಾಡ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

* * *
ತುಂಗಭದ್ರಾ ನದಿ ತೀರದಲ್ಲಿ 24X7 ಕಣ್ಗಾವಲು ಹಾಕಿದ್ದೇವೆ. ಅಂತರ್‌ ಜಿಲ್ಲಾ ಗಡಿ ಸಮೀಕ್ಷೆಯ ಅನಿವಾರ್ಯತೆಯನ್ನು ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಡಿ.ಸಿ. ಗಮನಕ್ಕೆ ತರಲಾಗುವುದು.
-ಎಚ್.ವಿಶ್ವನಾಥ,
ತಹಶೀಲ್ದಾರ್‌, ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT