ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ನಿರ್ವಹಣೆ: ಮಹಿಳೆಯರ ಎಚ್ಚರ ಅಗತ್ಯ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ವೈಯಕ್ತಿಕ ಹಣಕಾಸು ನಿರ್ವಹಣೆ ವಿಚಾರದಲ್ಲಿ ಪುರುಷರು ವಹಿಸುವಷ್ಟು ಆಸಕ್ತಿಯನ್ನು ಮಹಿಳೆಯರು  ವಹಿಸುವುದಿಲ್ಲ ಎಂಬುದು ಭಾರತಕ್ಕಷ್ಟೇ ಸೀಮಿತ ವಿಚಾರವಲ್ಲ, ಅದು ಜಾಗತಿಕ ಸತ್ಯವೂ ಹೌದು.

ಭಾರತದಲ್ಲಂತೂ ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರ ಆಸಕ್ತಿ ಅತಿ ಕಡಿಮೆ. ಮ್ಯೂಚುವಲ್‌ ಫಂಡ್‌ ಇರಲಿ,  ಷೇರು ಪೇಟೆ ಹೂಡಿಕೆ ಇರಲಿ ಅಥವಾ ಜೀವ ವಿಮಾ ಕ್ಷೇತ್ರದ ಹೂಡಿಕೆಯೇ ಇರಲಿ ಮಹಿಳೆಯರ ಪಾಲು ಶೇ 25ಕ್ಕೂ ಕಡಿಮೆ ಇದೆ.

ನಮ್ಮಲ್ಲಿ ಕುಟುಂಬ ನಿರ್ವಹಣೆಗೆ ಬೇಕಾದ ಹಣ ಸಂಪಾದಿಸುವ ಹೊಣೆಯನ್ನು ಬಹುಪಾಲು ಪುರುಷರೇ ಹೊತ್ತಿದ್ದಾರೆ. ಇದು ಪಾರಂಪರಿಕವಾಗಿ ಬಂದಿರುವ ವ್ಯವಸ್ಥೆ. ಕುಟುಂಬದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿಯನ್ನೂ ಆವರೇ ಹೊತ್ತಿರುತ್ತಾರೆ. ಇದರ ಪರಿಣಾಮ ಎಂಬಂತೆ ನಮ್ಮಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ತೀರ ಕಡಿಮೆ ಇದೆ.

ಪರೋಕ್ಷವಾಗಿ ಹೇಳುವುದಾದರೆ, ಹಣಕಾಸು ನಿರ್ವಹಣೆಯಲ್ಲಿ ಮಹಿಳೆಯರು ಹೆಚ್ಚು ಮುತುವರ್ಜಿವಹಿಸುವುದಿಲ್ಲ, ಅವರು ಅಷ್ಟು ಸಮರ್ಥರಲ್ಲ ಎಂದು  ಪುರುಷರು ಭಾವಿಸಿರುವಂತಿದೆ. ಆದರೆ, ಇಂದು ಭಾರತದ ಸರ್ಕಾರಿ ಸ್ವಾಮ್ಯದ ಕ್ಷೇತ್ರದ ಐದು ಪ್ರಮುಖ ಬ್ಯಾಂಕ್‌ಗಳಲ್ಲಿ ಮೂರು ಬ್ಯಾಂಕ್‌ಗಳ ಮುಖ್ಯಸ್ಥರು ಮಹಿಳೆಯರು ಎಂಬುದನ್ನು ಮರೆಯುವಂತಿಲ್ಲ.

ವೈಯಕ್ತಿಕ ಹಣಕಾಸು ನಿರ್ವಹಣೆ ಕುರಿತಂತೆ ಮಹಿಳೆ ಮತ್ತು ಪುರುಷರ ಬಗ್ಗೆ ನಡೆಸಿದ ಅಧ್ಯಯನ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಯಲು ಮಾಡಿದೆ. ಅದರಲ್ಲಿ ಒಂದು ಪ್ರಮುಖ ಅಂಶವೆಂದರೆ ಹಣ ಹೂಡಿಕೆ ವಿಚಾರದಲ್ಲಿ ಮಹಿಳೆಯರು ಹೆಚ್ಚು ಎಚ್ಚರ ವಹಿಸುತ್ತಾರೆ. ಪಾರಂಪರಿಕ ಶೈಲಿಯ (ಕಡಿಮೆ ಅಪಾಯದ) ಹೂಡಿಕೆಯಲ್ಲೇ ಮಹಿಳೆಯರು ಹೆಚ್ಚು ಆಸಕ್ತಿ ತೋರಿಸುತ್ತಾರೆ ಎಂಬುದು.

ಮಹಿಳೆಯರು ಗೃಹಕೃತ್ಯಗಳಿಗೆ ಹೆಚ್ಚು ಗಮನ ನೀಡುವುದರಿಂದ ಹಣಕಾಸು ನಿರ್ವಹಣೆ ವಿಚಾರದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸ್ವಲ್ಪ ಜ್ಞಾನ ಕಡಿಮೆ ಇರುವುದು ನಿಜವಾದರೂ, ಕೆಲವರಿಗೆ ಹೆಚ್ಚಿನ ಜ್ಞಾನ ಇದ್ದರೂ ಅವರು ಅದನ್ನೂ ಕಡಿಮೆ ಎಂದೇ ಭಾವಿಸಿರುತ್ತಾರೆ.

ಆದ್ದರಿಂದ ಅವರು ಹೂಡಿಕೆಗೂ ಮುನ್ನ ಎರಡೆರಡು ಬಾರಿ ಯೋಚಿಸುತ್ತಾರೆ. ಆದರೆ ಪುರುಷರು ಕಡಿಮೆ ಜ್ಞಾನ ಹೊಂದಿದ್ದರೂ ತಮ್ಮಲ್ಲಿ ಹೆಚ್ಚಿನ ಜ್ಞಾನ ಇದೆ ಎಂದೇ ಭಾವಿಸಿರುತ್ತಾರೆ. ಇಬ್ಬರೂ ಕುಳಿತು ಈ ಬಗ್ಗೆ ಚರ್ಚೆ ನಡೆಸಿದರೆ ಈ ಕೊರತೆಯನ್ನು ನೀಗಿಸಬಹುದು.

ಮಹಿಳೆಯರ ಹಣ ಹೂಡಿಕೆಯ ವಿಧಾನವೇ ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ತಂದುಕೊಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಪುರುಷ ಮತ್ತು ಮಹಿಳಾ ಹೂಡಿಕೆದಾರರಲ್ಲಿ ಇನ್ನೂ ಎರಡು ಆಸಕ್ತಿದಾಯಕ ವ್ಯತ್ಯಾಸಗಳಿವೆ.

ನಿವೃತ್ತಿ ನಂತರದ ಆದಾಯ, ಮಕ್ಕಳ ಶಿಕ್ಷಣ ಮುಂತಾಗಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಹೂಡಿಕೆ ಮಾಡುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮರ್ಥರು. ತಾವು ಮಾಡಿದ ಹೂಡಿಕೆಯ ಗರಿಷ್ಠ ಲಾಭ ಪಡೆಯುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಪುರುಷರು ತಮ್ಮ ಹಣ ಬೇಗ ವೃದ್ಧಿಯಾಗಬೇಕೆಂಬ ಭಾವನೆಯಿಂದ ಚಂಚಲರಾಗಿ ಹೂಡಿಕೆಯಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತಾರೆ. ಅದರಿಂದಾಗಿ ಹೂಡಿಕೆಗೆ ನಿರೀಕ್ಷಿತ ಆದಾಯ ಬಂದೇ ಬರುತ್ತದೆ ಎಂಬ ಭರವಸೆ ಇರುವುದಿಲ್ಲ.

ಹೂಡಿಕೆ ವಿಚಾರದಲ್ಲಿ ಮಹಿಳೆಗೆ ಪುರುಷರಿಗಿಂತ ಭಿನ್ನವಾದ ದೃಷ್ಟಿಕೋನವಿರುತ್ತದೆ ಎಂಬುದು ನಿಜ. ಆದರೆ, ತಮ್ಮ ಹಣದ ನಿರ್ವಹಣೆ ವಿಚಾರದಲ್ಲಿ ಮಹಿಳೆಯರು ತಿಳಿದಿರಲೇ ಬೇಕಾದ ಕೆಲವು ವಿಚಾರಗಳಿವೆ. ತನ್ನ ವಯಸ್ಸು, ಕೌಟುಂಬಿಕ ಸ್ಥಾನಮಾನಗಳೇನೇ ಇರಬಹುದು, ಆರ್ಥಿಕ ಭದ್ರತೆ ಇದ್ದರೆ ಮಾತ್ರ ತಾನು ಸಂಪೂರ್ಣ ಸ್ವತಂತ್ರಳು ಎಂಬುದನ್ನು ಮಹಿಳೆ ಮೊದಲು ಮನವರಿಕೆ ಮಾಡಿಕೊಳ್ಳಬೇಕು.

ಆದ್ದರಿಂದ ಕೆಲವು ಪ್ರಾಥಮಿಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಅಥವಾ ಇಂಥ ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವುದು ಮಹಿಳೆಗೆ ಕಡ್ಡಾಯವೇ ವಿನಾ ಆಯ್ಕೆ ಅಲ್ಲ.

ಕುಟುಂಬದ ಆಸ್ತಿ, ಬ್ಯಾಂಕ್‌ ಖಾತೆಗಳು, ಲಾಕರ್‌, ಷೇರು ಹೂಡಿಕೆ ಖಾತೆ, ಪಿಪಿಎಫ್‌, ಮ್ಯೂಚುವಲ್‌ ಫಂಡ್‌ ಮುಂತಾದವು ಜಂಟಿ ಖಾತೆಯಲ್ಲಿರುವಂತೆ ಮಹಿಳೆ ಎಚ್ಚರವಹಿಸಬೇಕು ಅಥವಾ ಈ ಎಲ್ಲ ಕಡೆ ಸರಿಯಾದ ನಾಮನಿರ್ದೇಶನವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ಇಂದಿನ ಡಿಜಿಟಲ್‌ ಯುಗದಲ್ಲಿ ‘ಪಾಸ್‌ವರ್ಡ್‌’ಗಳ ಮೂಲಕವೇ ವ್ಯವಹಾರಗಳು ನಡೆಯುತ್ತಿರುವುದರಿಂದ ಪತಿ–ಪತ್ನಿ ಇಬ್ಬರೂ ಪರಸ್ಪರರ ಖಾತೆಗಳ ಪಾಸ್‌ವರ್ಡ್‌ಗಳನ್ನು ಅರಿತಿರುವುದು ಅಗತ್ಯ. ತಮ್ಮ ಆಸ್ತಿಪಾಸ್ತಿ, ಹೂಡಿಕೆ, ಪಾಸ್‌ವರ್ಡ್‌ ಮುಂತಾದ ವಿಚಾರಗಳ ಬಗ್ಗೆ ಸರಿಯಾದ ಲಿಖಿತ ಮಾಹಿತಿಯನ್ನು ಇಬ್ಬರೂ ಇಟ್ಟುಕೊಂಡಿರಬೇಕು.

ಇನ್ನೊಂದು ಮುಖ್ಯ ಅಂಶ ಏನೆಂದರೆ,  ಕುಟುಂಬದಲ್ಲಿ ಆದಾಯ ಇರುವ ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲೇ ಜೀವ ವಿಮೆ ಮಾಡಿಸಿಕೊಳ್ಳಬೇಕು. ಉದ್ಯೋಗಸ್ಥ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೆಚ್ಚದಲ್ಲಿ ಪಾಲಿಸಿಗಳು ಲಭ್ಯವಾಗುತ್ತಿವೆ ಎಂಬುದೂ ಇಲ್ಲಿ ಗಮನಾರ್ಹ.

ಪುರುಷ ಮತ್ತು ಮಹಿಳಾ ಹೂಡಿಕೆದಾರರ ಯೋಚನಾ ಲಹರಿಯಲ್ಲಿ ವ್ಯತ್ಯಾಸ ಇರುವುದರಿಂದ ಹೂಡಿಕೆಗೂ ಮೊದಲು ಪತಿ–ಪತ್ನಿಯರು ಒಮ್ಮೆ ಆ ವಿಚಾರವಾಗಿ ಚರ್ಚಿಸುವುದು ಹೆಚ್ಚು ಸೂಕ್ತ.

ಮಹಿಳೆ ತನ್ನ ಕುಟುಂಬದ ಗುರಿಯನ್ನು ನಿರ್ಧರಿಸಿಕೊಂಡು ಅದಕ್ಕೆ ಅನುಗುಣವಾಗಿ ಹೂಡಿಕೆಗೆ ಸಲಹೆ ನೀಡಬಲ್ಲಳು. ಹೆಚ್ಚಿನ ಆದಾಯದ ಆಮಿಷದಿಂದ ಹೆಚ್ಚು ಪ್ರಮಾಣದ ರಿಸ್ಕ್‌ ತೆಗೆದುಕೊಳ್ಳುವ ಪುರುಷರ ಯೋಚನಾ ಲಹರಿಗೂ ಇದರಿಂದ ಕಡಿವಾಣ ಹಾಕಲು ಸಾಧ್ಯ.

ಕುಟುಂಬದ ಹಣ ನಿರ್ವಹಣೆಯಲ್ಲಿ ಮಹಿಳೆಯೂ ಪುರುಷರಷ್ಟೇ ಆಸಕ್ತಿ ವಹಿಸಿದರೆ ಕುಟುಂಬದ ಒಟ್ಟಾರೆ ಆರ್ಥಿಕ ಸ್ಥಿತಿ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಇದರಿಂದ ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ವೆಚ್ಚವನ್ನು ನಿಯಂತ್ರಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಒಂದು ಕುಟುಂಬದ ಸುಸ್ಥಿರ ಅಭಿವೃದ್ಧಿಗೆ ಇದು ಮೂಲಮಂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT