ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದಾಸೆಗೆ ತಹಶೀಲ್ದಾರ್ ತಾಯಿ ಹತ್ಯೆ

Last Updated 6 ಜುಲೈ 2016, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ತಹಶೀಲ್ದಾರ್ ಕೆ.ರಮೇಶ್ ಅವರ ತಾಯಿಯನ್ನು ತಹಶೀಲ್ದಾರ್ ಅವರ ಪಟ್ಟಣದ ಅಧಿಕೃತ ಸರ್ಕಾರಿ ನಿವಾಸದಲ್ಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ತಾಯಮ್ಮ ಆಲಿಯಾಸ್ ಪುಟ್ಟತಾಯಮ್ಮ (60) ಕೊಲೆಯಾದವರು. ಇವರು ಮಧ್ಯಾಹ್ನ ಪಟ್ಟಣದ ಬಿ.ಎಂ.ರಸ್ತೆಯ ತಹಶೀಲ್ದಾರ್ ನಿವಾಸದಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ಸಿದ್ದಪಡಿಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ.

ಕೊಲೆಗೆ ಕಬ್ಬಿಣದ ಸಲಾಕೆ, ಚಾಕುವನ್ನು ಬಳಸಲಾಗಿದೆ. ತಾಯಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ದೋಚಲಾಗಿದೆ.

ಅಡುಗೆ ಮನೆಯಲ್ಲಿ ಬೇಳೆ ಚೆಲ್ಲಾಡಿದ್ದ ಕಾರಣ ಮೊದಲು ಪ್ರೆಷರ್ ಕುಕ್ಕರ್ ಸಿಡಿದು ತಾಯಮ್ಮ ಅವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಅಡುಗೆ ಮನೆ ತುಂಬ ರಕ್ತ ಚೆಲ್ಲಾಡಿದ್ದು, ಪಕ್ಕದ ಕೋಣೆಯಲ್ಲೂ ರಕ್ತದ ಕಲೆಗಳು ಬಿದ್ದಿರುವುದು ಅನುಮಾನ ಮೂಡಿಸಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್.)  ತಂಡ ತಲೆಯ ಮೇಲೆ ಬಿದ್ದಿರುವ ಬಲವಾದ ಹೊಡೆತವನ್ನು ಪತ್ತೆ ಹಚ್ಚಿ ಇದನ್ನು ಕೊಲೆ ಎಂದು ದೃಢಪಡಿಸಿದ್ದಾರೆ.

ಬುಧವಾರ ಬೆಳಿಗ್ಗೆ ತಮ್ಮ ಕಚೇರಿಗೆ ತೆರಳಿದ್ದ ತಹಶೀಲ್ದಾರ್ ರಮೇಶ್ ಅವರು ಮಧ್ಯಾಹ್ನ 1.30ರ ಸಮಯದಲ್ಲಿ ಮನೆಗೆ ಊಟಕ್ಕಾಗಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಮುಂದಿನ ಬಾಗಿಲು ಚಿಲಕ ಹಾಕಿದ್ದು, ಎಷ್ಟು ಕರೆದರೂ ಬಾಗಿಲು ತೆರೆಯದಿದ್ದಾಗ ಹಿಂದಿನ ಬಾಗಿಲಿನಿಂದ ಅವರ ವಾಹನ ಚಾಲಕ ಒಳಗೆ ಹೋಗಿ ನೋಡಿದಾಗ ತಾಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ವಿಷಯ ತಿಳಿದು ತಹಶೀಲ್ದಾರ್ ರಮೇಶ್ ಅಡುಗೆ ಮನೆ ಪ್ರವೇಶಿಸಿದಾಗ ತಾಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಂಬುಲೆನ್ಸ್ ಕರೆಸಲು ಮುಂದಾದರಾದರೂ ಅಷ್ಟರಲ್ಲಿ ತಾಯಮ್ಮ ಸಾವನ್ನಪ್ಪಿರುವುದು ಖಚಿತವಾಗಿದೆ. ಮನೆಯ ಹಿಂದಿನ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು ಹಾಗೂ ಅಡುಗೆ ಮನೆ ಹಾಗೂ ಪಕ್ಕದ ಕೊಠಡಿಯಲ್ಲಿ ರಕ್ತದ ಕಲೆಗಳು ಇರುವುದು, ಕಬ್ಬಿಣದ ಸಲಾಖೆ ಮತ್ತು ಚಾಕು ಕೋಣೆಯ ಹೊರಗೆ ಬಿದ್ದಿರುವುದು ಹಲವಾರು ಅನುಮಾನ ಮೂಡಿಸಿತ್ತು.

ಪ್ರತಿದಿನ ತಹಶೀಲ್ದಾರ್ ಮನೆಗೆ ಅವರ ಸಹೋದರಿ ಬಂದು ಹೋಗುತ್ತಿದ್ದರು, ಆದರೆ ಬುಧವಾರ ಅವರು ಬಂದಿರಲಿಲ್ಲ. ಮಧ್ಯಾಹ್ನ 1ರ ಸುಮಾರಿನಲ್ಲಿ ಕಡತ ತೆಗೆದುಕೊಂಡು ಹೋಗಲು ಸಿಬ್ಬಂದಿಯೊಬ್ಬರು ಬಂದು ತಾಯಮ್ಮ ಅವರಿಂದಲೇ ಕಡತ ಪಡೆದು ತೆರಳಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೆ ತಾಯಮ್ಮನವರು ಕೊಲೆಯಾಗಿದ್ದಾರೆ.

ವಿಷಯ ತಿಳಿದು ಡಿವೈಎಸ್ಪಿ ಧನಂಜಯ, ವೃತ್ತ ನಿರೀಕ್ಷಕ ನಾರಾಯಣಸ್ವಾಮಿ, ಪುರ ಠಾಣೆ ಎಸೈ ಪ್ರಕಾಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಮಮತಾ, ಉಪವಿಭಾಗಾಧಿಕಾರಿ ಪ್ರಶಾಂತ್, ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದರು. ಹಾಗೆಯೇ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಸಂಜೆ ವೇಳೆಗೆ ಬಂದ ಎಫ್.ಎಸ್.ಎಲ್. ತಂಡ ಪರಿಶೀಲನೆ ನಡೆಸಿ ಇದನ್ನು ಕೊಲೆ ಎಂದು ದೃಢಪಡಿಸಿತು.

ಹಾಡಹಗಲೇ ನಡೆದಿರುವ ಈ ಕೊಲೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT