ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣುಗಳೊಂದಿಗೆ ಬೇಟ

Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಂಚತಾರಾ ಹೋಟೆಲ್‌ನ ಲಾಬಿಯೊಳಗೆ ಹೋಗಿ ಹುಡುಕಿದಾಗ, ‘ಕೆನ್ ಲವ್’ ಕಾಣಸಿಗಲಿಲ್ಲ. ಅಲ್ಲೇ ಇದ್ದ ಸುಂದರ ಯುವತಿಯೊಬ್ಬಳು ನಮ್ಮ ಹುಡುಕಾಟ ಗಮನಿಸಿ, ಏನೆಂದು ಪ್ರಶ್ನಿಸಿದಳು. ‘ಕೆನ್ ಲವ್...’ ಎನ್ನುತ್ತಿದ್ದಂತೆ, ‘...ಓಹ್! ದಟ್ ಸೈಡ್’ ಎಂದು ಅಡುಗೆ ಮನೆಯತ್ತ ದಾರಿ ತೋರಿದಳು. ಶುಭ್ರ ಬಿಳಿ ನಿಲುವಂಗಿ ಧರಿಸಿ ನಿಂತಿದ್ದರು, ಕೆನ್ ಲವ್. ಹಣ್ಣುಗಳನ್ನು ಹುಡುಕುತ್ತ ಜಗತ್ತಿನಾದ್ಯಂತ ಸುತ್ತುವ ಈ ರೈತ, ತನ್ನ ದಾರಿ ಕಂಡುಕೊಂಡಿದ್ದೇ ಹೋಟೆಲ್‌ಗಳ ಅಡುಗೆ ಮನೆಯಿಂದ. ಅವರಿಗದು ತವರು ಮನೆ ಇದ್ದಂತೆ!

ದೂರದ ಹವಾಯಿ ದ್ವೀಪದಲ್ಲಿನ ತನ್ನ ಪುಟ್ಟ ಜಮೀನನ್ನು ಕಾರ್ಯಕ್ಷೇತ್ರವಾಗಿಸಿಕೊಂಡು, ಇಡೀ ಜಗತ್ತಿಗೇ ಸುಸ್ಥಿರ ಕೃಷಿಯ ಪಾಠ ಕಲಿಸಿಕೊಡುತ್ತಿರುವ ಈ ರೈತನಿಗೆ ಹಣ್ಣುಗಳ ಮೇಲೆ ಇನ್ನಿಲ್ಲದ ವ್ಯಾಮೋಹ. ಸುತ್ತಲಿನ ಸಾವಿರಾರು ರೈತರಿಗೆ ಆರ್ಥಿಕ ಭದ್ರತೆ ಒದಗಿಸಿಕೊಟ್ಟ ಕೆನ್ ಲವ್, ಇದಕ್ಕಾಗಿ ಆಯ್ದುಕೊಂಡಿರುವುದು ಹಣ್ಣುಗಳ ವ್ಯವಸಾಯವನ್ನು. ಇನ್ನಷ್ಟು ಸರಳ ಭಾಷೆಯಲ್ಲಿ ಹೇಳಬೇಕೆಂದರೆ, ಅದು ತೋಟಗಾರಿಕೆ. ಆದರೆ ಸಿಕ್ಕ ಸಿಕ್ಕ ಹಣ್ಣು ಬೆಳೆದು ಮಾರುಕಟ್ಟೆ ಇಲ್ಲದೇ ಒದ್ದಾಡಿ ರಸ್ತೆಗೆ ಸುರಿಯುವ ಬದಲಿಗೆ ಅದಕ್ಕೊಂದು ವಿಶಿಷ್ಟ ಚೌಕಟ್ಟು ಕೊಟ್ಟು ವ್ಯವಸ್ಥಿತ ಯೋಜನೆ ರೂಪಿಸಿರುವುದು ಕೆನ್ ಲವ್ ಹೆಗ್ಗಳಿಕೆ.

ಅಷ್ಟಕ್ಕೂ ಇವರು ಹಳೆಯ ಅನುಭವಿ ರೈತರಲ್ಲ; ಹದಿನೈದು ವರ್ಷದಿಂದ ಈಚೆಗಷ್ಟೇ ಪೂರ್ಣ ಪ್ರಮಾಣದ ಕೃಷಿಕ. ತನ್ನ ಅನುಭವಗಳನ್ನು ಇತರ ರೈತರೊಡನೆ ಹಂಚಿಕೊಳ್ಳುವುದು ಹಾಗೂ ಆ ನೆಪದಲ್ಲಿ ದೇಶ ಸುತ್ತುತ್ತ ಅಲ್ಲಿನ ಇನ್ನಷ್ಟು ಮತ್ತಷ್ಟು ಹಣ್ಣುಗಳ ಮಾಹಿತಿ ಸಂಗ್ರಹಿಸುವುದು ಇವರ ಗುರಿ. ದೊಡ್ಡ ಹೋಟೆಲ್‌ನ ಬಾಣಸಿಗನಾಗಿದ್ದ ಕೆನ್ ಲವ್, ಎಲ್ಲೇ ಹೋದರೂ ಮೊದಲಿಗೆ ನುಗ್ಗುವುದು ತಾವು ಇಳಿದುಕೊಳ್ಳುವ ಹೋಟೆಲ್‌ನ ಕಿಚನ್‌ಗೆ!

ಬೆಂಗಳೂರಿನ ಆ ಐಷಾರಾಮಿ ಹೋಟೆಲ್‌ನ ಅಡುಗೆ ಮನೆಯಲ್ಲಿ ಬಾಣಸಿಗರ ಜತೆ ಮಾತುಕತೆ ನಡೆಸಿದ್ದ ಕೆನ್ ಲವ್, ನೇರಳೆ ಹಣ್ಣಿನ ಜಾಮ್ ಮಾಡುವುದು ಹೇಗೆಂಬುದನ್ನು ವಿವರಿಸುತ್ತಿದ್ದರು.  ‘ಹಣ್ಣುಗಳ ಅದ್ಭುತ ಜಗತ್ತು ನಿಮ್ಮ ಭಾರತದಲ್ಲಿದೆ. ಈ ನಾಡಿಗೆ ಇದು ನನ್ನ ಆರನೇ ಪ್ರವಾಸ. ಪ್ರತಿ ಸಲ ಬಂದಾಗಲೂ ನನ್ನ ಮಾಹಿತಿ ಬುಟ್ಟಿಯಲ್ಲಿ ಹತ್ತಾರು ಹಣ್ಣುಗಳು ಸೇರಿಕೊಂಡಿರುತ್ತವೆ’ ಎಂದರು ಕೆನ್ ಲವ್.

ಐವತ್ತು ದೇಶ ಪಯಣ
ಅಮೆರಿಕದ ಚಿಕಾಗೊದಲ್ಲಿ ಜನಿಸಿದ ಕೆನ್ ಲವ್, ಕೊಲಂಬಿಯದ ಕಾಲೇಜಿನಲ್ಲಿ ಛಾಯಾಚಿತ್ರಗ್ರಹಣ ಪದವಿ ಪಡೆದರು. ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ಭೂಗೋಳ ಕಲಿತರು. ವಿದ್ಯಾಭ್ಯಾಸದ ಬಳಿಕ ಮೊದಲು ಹೋಟೆಲ್‌ನ ಬಾಣಸಿಗನಾಗಿ ಕೆಲ ಕಾಲ ಕೆಲಸ ಮಾಡಿದರು. ಒಲೆಯ ಬೆಂಕಿ, ಶಾಖ, ಹೊಗೆಯಿಂದ ಬೇಸತ್ತು ಕೆಲಸ ಬಿಟ್ಟರು. ಒಂದಷ್ಟು ದಿನ ಕ್ಯಾಮೆರಾ ಹಿಡಿದುಕೊಂಡು ಫೋಟೋ ತೆಗೆದರು. ಅದೇ ಅವರಿಗೆ ‘ಅಸೋಸಿಯೇಟೆಡ್ ಪ್ರೆಸ್’ (ಎಪಿ) ಸುದ್ದಿಸಂಸ್ಥೆಗೆ ಸೇರಲು ನೆರವಾಯಿತು. ಕಿಲೋಗಟ್ಟಲೇ ತೂಕವುಳ್ಳ ಲೆನ್ಸ್, ಕ್ಯಾಮೆರಾ ಹೊತ್ತು ದೇಶ ವಿದೇಶ ಸುತ್ತಿದರು.

‘ಪ್ರೆಸ್ ಫೋಟೋಗ್ರಾಫರ್ ಆಗಿ ನನಗೆ ಸಿಕ್ಕ ಅನುಭವ ವಿಶಿಷ್ಟ. ಅಮೆರಿಕದ ಐವರು ಅಧ್ಯಕ್ಷರ ಅವಧಿಯಲ್ಲಿ ಮೂವತ್ತು ದೇಶಗಳಿಗೆ ಪ್ರವಾಸ ಹೋಗಿದ್ದೇನೆ. ಬಳಿಕವೂ ವಿಶೇಷ ವರದಿಗಳಿಗೆಂದು ಇಪ್ಪತ್ತು ದೇಶಗಳಿಗೆ ಹೋಗಿ ಬಂದಿದ್ದೇನೆ. ಈ ಅವಧಿಯಲ್ಲಿ ನಾನು ಅತ್ಯಂತ ಐಷಾರಾಮಿ ಜೀವನದಿಂದ ಹಿಡಿದು ಒಪ್ಪೊತ್ತು ಊಟಕ್ಕೆ ಗತಿಯಿಲ್ಲದ ಕಡುಬಡವರನ್ನು ಕಂಡೆ. ಎಲ್ಲಕ್ಕಿಂತ ಹೆಚ್ಚು ನನ್ನನ್ನು ಕಾಡಿದ ಸಂಗತಿಯೆಂದರೆ, ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರ ಎಂಥೆಂಥವರ ಕೈಯಲ್ಲಿ ಸಿಕ್ಕು ಆಯುಧವಾಗಿ ಪರಿಣಮಿಸಿದೆ­ಯಲ್ಲ ಎಂಬುದು. ಒಂದರ್ಥದಲ್ಲಿ, ಛಾಯಾಗ್ರಾಹಕನಾಗಿ ನಾನು ನೋಡಿದ ಪರಿಸ್ಥಿತಿಯು ನನ್ನನ್ನು ರೈತನಾಗುವಂತೆ ಪ್ರೇರೇಪಿಸಿತು’ ಎಂದು ನೆನಪಿಸಿಕೊಳ್ಳುತ್ತಾರೆ ಕೆನ್ ಲವ್.

ಮೆಕ್ಕೆಜೋಳ ಕೃಷಿ ಕುರಿತ ವರದಿಗೆ ಫೊಟೋ ತೆಗೆಯಲು ಕೆನ್ ಲವ್ ಮೊದಲ ಬಾರಿಗೆ ಹವಾಯಿ ದ್ವೀಪಕ್ಕೆ ಹೋದರು. ಮೊದಲ ನೋಟಕ್ಕೇ ಆ ದ್ವೀಪಗಳು ಅವರನ್ನು ಆಕರ್ಷಿಸಿದವು. ‘ಎರಡನೇ ಸಲ ಕಾಫಿ ಉದ್ಯಮದ ಸ್ಥಿತಿಗತಿಯ ವರದಿಗೆ ಪೂರಕ ಫೋಟೋ ತೆಗೆಯಲು ತೆರಳಿದೆ. ಆ ಪ್ರದೇಶ ಬಿಟ್ಟು ಬರಲು ಮನಸ್ಸೇ ಆಗಿರಲಿಲ್ಲ. ಅದಾದ ಬಳಿಕ ಸ್ವಲ್ಪ ದಿನಗಳಿಗೆ ಅಲ್ಲಿ ಹತ್ತು ಎಕರೆ ಕಾಫಿ ತೋಟ ಖರೀದಿಸಿದೆ. ವಾರಕ್ಕೊಮ್ಮೆ ಹೋಗುತ್ತಿದ್ದೆ. ಕೆಲಸ ಸಾಕೆನಿಸಿತು.

ರಾಜೀನಾಮೆ ಕೊಟ್ಟು ರೈತನಾದೆ’ ಎನ್ನುವ ಕೆನ್ ಲವ್‌ಗೆ, ಆಗ ಕೃಷಿ ಕಾರ್ಯದ ಪ್ರಾಥಮಿಕ ಅಂಶಗಳೂ ಗೊತ್ತಿರಲಿಲ್ಲ! ಕಾಫಿ ತೋಟ ಬೇಸರ ಮೂಡಿಸಿತು. ವರ್ಷವಿಡೀ ಏನಾದರೂ ಕೊಯ್ಲು ಮಾಡುತ್ತಲೇ ಇರುವ, ಸದಾ ಹೊಸತನದಿಂದ ಕೂಡಿರುವ ವ್ಯವಸಾಯವನ್ನು ಹುಡುಕತೊಡಗಿದರು. ಅದು ಅವರನ್ನು ಹಣ್ಣುಗಳ ಕಡೆ ಎಳೆಯಿತು.

ಫಲ ವ್ಯಾಮೋಹಿ
ಹಣ್ಣುಗಳನ್ನು ಹಾಗೆಯೇ ಮಾರುವ ಬದಲಿಗೆ ಮೌಲ್ಯವರ್ಧನೆ ಮಾಡಿದರೆ ರೈತನ ಆದಾಯ ಹೆಚ್ಚಬಹುದು ಎನ್ನುವ ಕೆನ್ ಲವ್, ಅದನ್ನು ಸಾಧಿಸಿ ತೋರಿಸಿದ್ದಾರೆ. ಹಳೆಯ ತೋಟವನ್ನು ಮಾರಿ, ಕ್ಯಾಪ್ಟನ್ ಕುಕ್ ಪಟ್ಟಣದ ಸಮೀಪ ಒಂದು ಎಕರೆ ಜಮೀನು ಖರೀದಿಸಿದರು. ಅಲ್ಲಿ ಮಕಡಾಮಿಯ, ಲೋಕಟ್, ಜಬಾಟಿಕಾಬಾ, ಹಲಸು, ಅಂಜೂರ, ಕಿತ್ತಲೆ, ನೇರಳೆ, ಬ್ರೆಡ್‌ಫ್ರೂಟ್, ರಂಬುಟಾನ್, ನಿಂಬೆ, ಮೈಸೂರು ಬೆರ್ರಿ, ಅವಕಾಡೊ ಸೇರಿದಂತೆ 25 ಬಗೆಯ ಹಣ್ಣಿನ ಮರ ಬೆಳೆಸಿದ್ದಾರೆ. ಹಣ್ಣುಗಳಿಂದ ಆದಾಯ ಪಡೆಯುವ ಬಗೆಯನ್ನು ರೈತರಿಗೆ ಮನದಟ್ಟು ಮಾಡಲು ತಮ್ಮ ತೋಟವನ್ನೇ ಪ್ರಾತ್ಯಕ್ಷಿಕೆ ತಾಣವನ್ನಾಗಿ ಮಾಡಿದ್ದಾರೆ.

ಪಕ್ಕದಲ್ಲಿರುವ ಹವಾಯಿ ವಿಶ್ವವಿದ್ಯಾಲಯದ 19 ಎಕರೆ ಜಾಗವನ್ನು ಒಪ್ಪಂದದ ಮೇರೆಗೆ ತೆಗೆದುಕೊಂಡು, ಅಲ್ಲೂ ಹಣ್ಣು ಬೆಳೆಯುತ್ತಿದ್ದಾರೆ; ಹವಾಯಿ ದ್ವೀಪಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ವಾರಾಂತ್ಯ ಅಥವಾ ಇತರ ರಜೆಗೆಂದು ಬೇರೆ ದೇಶಗಳಿಂದ ವರ್ಷವಿಡೀ ಪ್ರವಾಸಿಗರು ಬರುತ್ತಲೇ ಇರುವುದರಿಂದ ಪ್ರವಾಸೋದ್ಯಮ ಪ್ರಮುಖ ಆರ್ಥಿಕ ಚಟುವಟಿಕೆ. ನೂರಾರು ಹೋಟೆಲ್, ರೆಸಾರ್ಟ್‌ಗಳು ಅಲ್ಲಿವೆ. ಆ ಹೋಟೆಲ್‌ಗಳ ಬಾಣಸಿಗರಿಗೂ ರೈತರಿಗೂ ಹಣ್ಣಗಳ ಮೂಲಕ ನಂಟು ಕಲ್ಪಿಸಿರುವುದು ಕೆನ್ ಲವ್ ಹೆಗ್ಗಳಿಕೆ.

‘ನನ್ನ ತೋಟದ ಹಣ್ಣುಗಳಿಂದಲೇ 75 ಬಗೆಯ ಮೌಲ್ಯವರ್ಧಿತ ಉತ್ಪನ್ನ ತಯಾರಿಸುತ್ತಿದ್ದೇನೆ’ ಎನ್ನುತ್ತಾರೆ ಕೆನ್ ಲವ್. ಸ್ಥಳೀಯ ಹಣ್ಣುಗಳಿಂದ ಯಾವ ಬಗೆಯ ತಿನಿಸು ಮಾಡಬಹುದು ಎಂಬ ಪ್ರಯೋಗ ನಡೆಸುತ್ತಾರೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಆಧರಿಸಿ, ರೆಸಿಪಿ ಸೂತ್ರ ಸಿದ್ಧಪಡಿಸುತ್ತಾರೆ. ಹವಾಯಿಯಲ್ಲಿ ಪಾಕ ಕಲಿಕೆ ಕಾಲೇಜುಗಳು ಹತ್ತಾರು ಸಂಖ್ಯೆಯಲ್ಲಿವೆ. ಕಾಲೇಜಿನ ಆಹ್ವಾನದ ಮೇರೆಗೆ ತೆರಳಿ, ಪ್ರಾತ್ಯಕ್ಷಿಕೆ ನೀಡುತ್ತಾರೆ. ಹವಾಯಿ ರೈತರನ್ನು ಒಗ್ಗೂಡಿಸಿ ಪ್ರತಿ ವಾರ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಣ್ಣುಗಳ ಸಂತೆ ನಡೆಸುತ್ತಾರೆ. ‘ಅಲ್ಲಿ ನಮ್ಮ ಹಣ್ಣುಗಳಿಗೆ ಎಷ್ಟೊಂದು ಬೇಡಿಕೆ ಇದೆಯೆಂದರೆ, ಏನೇ ಮಾಡಿದರೂ ಅಷ್ಟನ್ನು ಪೂರೈಸಲಾಗುತ್ತಿಲ್ಲ’ ಎಂಬ ಅಸಹಾಯಕತೆ ಅವರದು.

ಹಣ್ಣುಗಳನ್ನು ಜನಪ್ರಿಯಗೊಳಿಸುವ ಕೆನ್ ಲವ್ ಅವರ ಇನ್ನೊಂದು ವಿಧಾನವೆಂದರೆ, ತಳಿ ವೈವಿಧ್ಯ ಸಂಗ್ರಹ ಹಾಗೂ ಪ್ರದರ್ಶನ. ದ್ರಾಕ್ಷಿ, ಅಂಜೂರ, ಬಾಳೆಯಲ್ಲಿ ಹತ್ತಾರು ತಳಿ ಸೇರಿದಂತೆ ಒಟ್ಟಾರೆ ಸಾವಿರಕ್ಕೂ ಅಧಿಕ ತಳಿ ಹಣ್ಣುಗಳನ್ನು ಹುಡುಕಿದ್ದಾರೆ. ಅವುಗಳ ಮಾಹಿತಿಯನ್ನು ಆಕರ್ಷಕ ಪೋಸ್ಟರ್‌ಗಳಲ್ಲಿ ಮುದ್ರಿಸಿ, ಆಸಕ್ತರಿಗೆ ಹಂಚುತ್ತಾರೆ. ಸಾವಿರಾರು ರೈತರನ್ನು ಒಗ್ಗೂಡಿಸಿ, ‘ಹವಾಯಿ ಟ್ರಾಪಿಕಲ್ ಫ್ರೂಟ್ ಗ್ರೋಯರ್ಸ್’ (www.hawaiitropicalfruitgrowers.org) ಸ್ಥಾಪಿಸಿದ ಕೆನ್ ಲವ್, ಹಣ್ಣುಗಳನ್ನು ಹುಡುಕಿಕೊಂಡು ಎಲ್ಲೆಲ್ಲೋ ಅಲೆಯುತ್ತಾರೆ. ಅವುಗಳ ಮಾಹಿತಿ ಅವರ ಮಿದುಳಿನಲ್ಲಿ ಹೇಗೆ ಅಚ್ಚೊತ್ತಿರುತ್ತದೆಂದರೆ, ವೈಜ್ಞಾನಿಕ ಹೆಸರು ಅಥವಾ ಫೋಟೋ ಇದ್ದರೆ ಸಾಕು; ಎದುರಿಗೆ ಕುಳಿತವರು ದಿಗ್ಭ್ರಮೆಗೊಳ್ಳುವಷ್ಟು ಅದರ ಜಾತಕವನ್ನು ವಿವರವಾಗಿ ಬಿಚ್ಚಿಡುತ್ತಾರೆ!

ಅಲ್ಲೂ ಅದೇ ದುಸ್ಥಿತಿ!
ಭಾರತದಂತೆಯೇ ಅಮೆರಿಕದಲ್ಲೂ ರೈತರ ವಲಸೆ ಇದೆಯಂತೆ. ಹವಾಯಿಯಲ್ಲಿ ನೂರಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿರುವ ಸಣ್ಣ ರೈತ ಕುಟುಂಬಗಳು ಮಕ್ಕಳನ್ನು ಕೃಷಿಯಲ್ಲಿ ಉಳಿಸಲು ಆಸಕ್ತಿ ತೋರುತ್ತಿಲ್ಲ. ಸಮೀಪದ ಹೊನಲುಲು ಅಥವಾ ಇನ್ನಾವುದೇ ಮಹಾನಗರಕ್ಕೆ ಉದ್ಯೋಗಕ್ಕೆಂದು ಮಕ್ಕಳನ್ನು ಕಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ‘ಎಲ್ಲಿಯವರೆಗೆ ಕೃಷಿಯಿಂದ ಲಾಭ ಸಾಧ್ಯ ಅಂತ ತೋರಿಸುವುದಿಲ್ಲವೋ, ಅಲ್ಲಿಯವರೆಗೆ ಈ ವಲಸೆ ಇದ್ದಿದ್ದೇ’ ಎನ್ನುವ ಕೆನ್ ಲವ್, ‘ಹಣ್ಣುಗಳ ಕೃಷಿ’ ಮೂಲಕ ಹಲವರು ತಮ್ಮ ಜಮೀನಿನ ಉಳಿಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಬಾಲ್ಯದಲ್ಲಿ ಕೆನ್ ಲವ್ ಕುಟುಂಬ ಚಿಕಾಗೋದಲ್ಲಿದ್ದಾಗ ಅಕ್ಕಪಕ್ಕ ಸಾಕಷ್ಟು ಭಾರತೀಯ ಕುಟುಂಬಗಳಿದ್ದವಂತೆ. ಹೀಗಾಗಿ ಭಾರತೀಯ ಊಟೋಪಚಾರ ಅವರಿಗೆ ಸಾಕಷ್ಟು ಪರಿಚಿತ. ‘ಭಾರತಕ್ಕೆ ಬರುವುದೆಂದರೆ ನನಗೆ ಬಹಳ ಖುಷಿ. ಇಲ್ಲಿರುವಷ್ಟು ಹಣ್ಣುಗಳ ವೈವಿಧ್ಯವನ್ನು ಜಗತ್ತಿನ ಇನ್ನಾವುದೇ ದೇಶದಲ್ಲಿ ನಾನು ಕಂಡಿಲ್ಲ. ಒಂದೊಂದು ಪ್ರದೇಶಕ್ಕೆ ಹೋದಾಗಲೂ ಅಲ್ಲಿನ ಹಣ್ಣುಗಳನ್ನು ಕಂಡು ಬೆರಗಾಗುತ್ತೇನೆ’ ಎನ್ನುತ್ತಾರೆ ಕೆನ್ ಲವ್.

ಕೆನ್ ಲವ್ ಓದಿಗೂ ಈಗ ಮಾಡುತ್ತಿರುವುದಕ್ಕೂ ಸಂಬಂಧವಿಲ್ಲ. ಒಂದೂವರೆ ದಶಕದಿಂದ ಇಷ್ಟಪಟ್ಟು ನಡೆಸಿರುವ ಕೃಷಿ ಕ್ಷೇತ್ರದಲ್ಲಿ ಅವರಿಗೆ ಹಲವು ಹೊಳಹುಗಳು ದಕ್ಕಿವೆ. ಅವುಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಅಮೆರಿಕ, ಜಪಾನ್‌ನ ಕೃಷಿ ವಿಶ್ವವಿದ್ಯಾಲಯಗಳು, ಮತ್ತಿತರ ಸಂಸ್ಥೆಗಳು ಕೆನ್ ಲವ್ ಅವರನ್ನು ಆಹ್ವಾನಿಸುತ್ತವೆ. ಹವಾಯಿ ವಿಶ್ವವಿದ್ಯಾಲಯದ ಅಡಿ ಬರುವ ಪಾಕಶಾಸ್ತ್ರ ಕಾಲೇಜುಗಳಲ್ಲಿ ಆಹಾರ ಸಂಸ್ಕರಣೆ, ಸುರಕ್ಷತೆ ಹಾಗೂ ಮೌಲ್ಯವರ್ಧನೆ ಕುರಿತು ಅವರು ಪ್ರತಿ ವರ್ಷವೂ ಉಪನ್ಯಾಸ ನೀಡುತ್ತಾರೆ.

‘ಒಂದು ದೇಶಕ್ಕೆ ಹೋದಾಗ, ಅಲ್ಲಿನ ಸ್ಥಳೀಯ ಹಣ್ಣುಗಳಿಗಾಗಿ ನನ್ನ ಹುಡುಕಾಟ ನಿರಂತರವಾಗಿರುತ್ತದೆ’ ಎಂದ ಕೆನ್ ಲವ್, ದೊಗಳೆ ಪ್ಯಾಂಟಿನ ಜೇಬಿನಿಂದ ಹಿಡಿಯಷ್ಟು ಹಣ್ಣುಗಳನ್ನು ತೆಗೆದು ಇದೇನು ಗೊತ್ತೇ ಎಂದು ಪ್ರಶ್ನಿಸಿದರು. ಈಗ ಹಳ್ಳಿಗಳಲ್ಲೂ ಮರೆಯಾಗುತ್ತಿರುವ ಕವಳೆ ಹಣ್ಣು ಅದು! ‘ಇಟ್ ಬಿಲಾಂಗ್ಸ್ ಟು... ಅಂಡ್ ಸೈಂಟಿಫಿಕ್ ನೇಮ್ ಈಸ್...’ ಎನ್ನುತ್ತ ಅದರ ಜಾತಕ ತೆರೆದಿಡಲು ಶುರು ಮಾಡಿದರು.

ಡಜನ್ ಮರಗಳ ಯೋಜನೆ
ಹವಾಯಿ ದ್ವೀಪದ 54 ಹೋಟೆಲ್‌ಗಳ ಮುಖ್ಯ ಬಾಣಸಿಗರು, ಹಣ್ಣುಗಳ ಖರೀದಿದಾರರು ಮತ್ತು ಬೆಳೆಗಾರರನ್ನು ಒಂದೆಡೆ ತಂದು, ಅಡುಗೆ- ತಿನಿಸುಗಳಿಗೆ ಸುಲಭ ಹಾಗೂ ರುಚಿಯಾದ ಹಣ್ಣುಗಳ ಆಯ್ಕೆ ಮಾಡಲು ಸೂಚಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಹಣ್ಣುಗಳ ಪೈಕಿ, ವರ್ಷವಿಡೀ ಸಿಗಬಹುದಾದ 12 ಹಣ್ಣುಗಳನ್ನು ಆಯ್ಕೆ ಮಾಡಲಾಯಿತು. ರೈತರ ಸಹಕಾರ ಸಂಸ್ಥೆಯ ಮಾರ್ಗದರ್ಶನದ ಮೇರೆಗೆ ರೈತರ ಜಮೀನಿನಲ್ಲಿ ಆ ಹಣ್ಣಿನ ಸಸಿಗಳ ನಾಟಿ ಕೈಗೊಳ್ಳಲಾಯಿತು.

‘ಸುಸ್ಥಿರ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಸಂಸ್ಥೆ’ ಕೈಗೊಂಡ ಮೂರು ವರ್ಷಗಳ ಅವಧಿಯ ಈ ಯೋಜನೆಯಲ್ಲಿ, ಇಲ್ಲಿ ಬೆಳೆಸಿದ ಹಣ್ಣುಗಳಿಂದ ಪಶ್ಚಿಮ ಹವಾಯಿಯ ಸಮುದಾಯ ಕಾಲೇಜಿನ ಪಾಕ ಶಾಸ್ತ್ರ ಕಾಲೇಜುಗಳಲ್ಲಿ ಬಗೆಬಗೆಯ ತಿನಿಸು ತಯಾರಿಸಲಾಯಿತು. ಹೋಟೆಲ್‌ನಲ್ಲಿ ಪರಿಚಯಿಸಿದ ಕೆಲ ದಿನಗಳಲ್ಲೇ ಇವು ಜನಪ್ರಿಯವಾದವು. ಇದು ಈ ಹಣ್ಣುಗಳ ಕೃಷಿಗೆ ಉತ್ತೇಜನ ನೀಡಿತು. ಸ್ಥಳೀಯ ಹಣ್ಣು ಬೆಳೆಸುವಿಕೆ ಹಾಗೂ ಬಳಸುವಿಕೆ ಮೂಲಕ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸಿಕೊಟ್ಟ ಈ ಯೋಜನೆ ‘12 ಟ್ರೀಸ್ ಪ್ರಾಜೆಕ್ಟ್’ ಎಂದೇ ಖ್ಯಾತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT