ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಉಳಿತಾಯಕ್ಕೆ ಸೌರಶಕ್ತಿ ಸದ್ಬಳಕೆ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮನೆ ಕಟ್ಟುವಾಗ ‘ರವಿ’ಯನ್ನು ಮರೆಯದಿರಿ
‘ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು’...


ಪಂಜೆ ಮಂಗೇಶರಾಯರು ಬರೆದ ಈ ಶಿಶುಪ್ರಾಸವನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯದವರಿಲ್ಲ. ಸೂರ್ಯನ ಮಹತ್ವವನ್ನು ಪ್ರೌಢಶಾಲಾ ಹಂತದಲ್ಲಿ ‘ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು’ ಎಂಬ ಕುವೆಂಪು ಅವರ ಭವ್ಯವರ್ಣನೆಯು ನಮಗೆ ಮನದಟ್ಟು ಮಾಡಿಸದೇ ಇರದು.

ಹೌದು. ಸೃಷ್ಟಿಯ ಚರಾಚರ ವಸ್ತುಗಳಿಗೆ ಚೇತನವಾಗಿರುವ ಸೂರ್ಯನನ್ನು ಮನೆ ಕಟ್ಟುವ ವಿಚಾರದಲ್ಲಿ ಕೊಂಚ ಗಮನವಿಟ್ಟುಕೊಂಡು ಲೆಕ್ಕಾಚಾರ ಹಾಕಿ ಮನೆ ಕಟ್ಟಿದರೆ ಖಂಡಿತ ತಿಂಗಳ ವಿದ್ಯುತ್ ಬಿಲ್ ಕಟ್ಟುವ ಪಡಿಪಾಟಿಲು ಇರುವುದಿಲ್ಲ.

ಜ್ಯೋತಿಷ ನೋಡುವಾಗ ನವಗ್ರಹಗಳನ್ನು ನೋಡುತ್ತೀರೋ ಬಿಡುತ್ತೀರೋ. ಆದರೆ, ಸೂರ್ಯನನ್ನು ಮಾತ್ರ ಮನೆಯಿಂದ ದೂರ ಇಡಲೇ ಬಾರದು. ಸೂರ್ಯನ ಬೆಳಕಷ್ಟೇ ಅಲ್ಲ ಆತನಿಂದ ಹೊರಹೊಮ್ಮುವ ಶಕ್ತಿಯೂ ಸಹ ರಾತ್ರಿಯ ಕಗ್ಗತ್ತಲಲ್ಲಿ ಬೆಳಕಾಗುತ್ತದೆ.

ಮನೆ ಕಟ್ಟುವುದಕ್ಕೆ ಅಡಿಪಾಯಕ್ಕೆ ಇಷ್ಟು, ತಾರಸಿಗೆ ಇಷ್ಟು, ಗೋಡೆ, ಕಿಟಕಿಗಳಿಗೆ ಇಷ್ಟಿಷ್ಟು ಎಂದು ಲೆಕ್ಕವನ್ನು ಬರೆದು ಹಣ ಹೊಂದಿಸುವ ಯೋಚನೆಗೆ ಕೂತಾಗ ಹೆಚ್ಚಿನವರು ಸೌರಶಕ್ತಿಯ ಬಳಕೆಯ ಕುರಿತು ಯೋಜನೆ ರೂಪಿಸುವುದೇ ಇಲ್ಲ. ‘ಮೊದಲು ಮನೆಯಾಗಲಿ ಆಮೇಲೆ ನೋಡೋಣ’ ಎಂಬಂತಹ ಉದಾಸೀನ ಭಾವನೆ ಇರುತ್ತದೆ. ಆದರೆ, ಮನೆ ಕಟ್ಟಿದ ಮೇಲೆ ಆರ್ಥಿಕ ಸ್ಥಿತಿಯ ಮೇಲೆರಗುವ ಬಹುಭಾರದ ಒತ್ತಡವನ್ನು ನಿಭಾಯಿಸುವುದಕ್ಕೆ ಉಳಿದ ಜೀವನದ ಸಮಯವೇ ಬೇಕಾಗಬಹುದು. ‘ಬ್ಯಾಂಕ್‌ನಲ್ಲಿ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಮಾತ್ರವೇ ಜಮಾ ಆಗುತ್ತಿರುತ್ತದೆ. ಅಸಲು ಯಾವಾಗ ಮುಗಿಯುವುದೋ ಭಗವಂತ’? ಎಂದು ಹಲಬುವುದೇ ಆಗುತ್ತದೆ ಮಧ್ಯಮ ವರ್ಗದವರ ಪಾಡು.

ಹಾಗಾಗಿ, ಒಂದು ವ್ಯವಸ್ಥಿತ ಸೌರಶಕ್ತಿ ಬಳಕೆಗೆ ಮನೆ ಕಟ್ಟುವುದಕ್ಕೆ ಮುನ್ನವೇ ಯೋಜನೆ ತಯಾರಿಸಿದರೆ ಒಳ್ಳೆಯದು. ಮನೆ ಕಟ್ಟುವ ಲೆಕ್ಕದಲ್ಲಿ ಅದೂ ಸೇರಬೇಕು. ಅದು ಆದಾಗ ಮಾತ್ರ ಮನೆ ಕಟ್ಟಿದ ಮೇಲೆ ಮುಂದಿನ ಭವಿಷ್ಯದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯೂ ಇರದು. ಮಾಸಿಕ ವಿದ್ಯುತ್ ಬಿಲ್‌ನ ಕಿರಿಕಿರಿಯೂ ಇರದು. ಜತೆಗೆ ಪತ್ರಿಕೆಗಳಲ್ಲಿ ವಿದ್ಯುತ್ ದರ ಏರಿಕೆ ಎಂಬ ಬರಹ ನೋಡಿ ಆಗುವ ಆಘಾತವೂ ಆಗದು. ವಿದ್ಯುತ್‌ ನುಂಗಿ ಹಾಕುವ ಬಹುತೇಕ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಂದು  ಸೌರಶಕ್ತಿಯನ್ನು ಸರಾಗವಾಗಿ ಬಳಸಬಹುದು. ನೀರು ಬಿಸಿ ಮಾಡುವುದಕ್ಕೆ, ದೀಪ ಉರಿಸುವುದಕ್ಕೆ, ಮನೆ ಮುಂದೆ ಇರುವ ನೆಲದೊಳಗಿನ ಸಂಪಿನಿಂದ ಮೇಲ್ಗಡೆ ಇಟ್ಟಿರುವ ಟ್ಯಾಂಕಿಗೆ ನೀರನ್ನು ಏರಿಸುವ ಕಡಿಮೆ ಸಾಮರ್ಥ್ಯದ ಮೋಟಾರ್‌ಗಳಲ್ಲೂ ಸಹ ಬಳಸಬಹುದು. ನೀರು ಕಾಯಿಸುವುದಕ್ಕಾಗಿ ವಾಟರ್ ಹೀಟರ್ ಅಳವಡಿಸಿಕೊಂಡರೆ ವಿದ್ಯುತ್ ಬಿಲ್‌ನಲ್ಲಿ ಶೇ 30ರಷ್ಟು ಉಳಿಸಲೂ ಬಹುದು. 

ಆದರೆ, ಇವುಗಳನ್ನು ನಮಗೆ ಯಾವುದರ ಅಗತ್ಯ ಹೆಚ್ಚು ಇದೆಯೋ ಅದಕ್ಕೆ ತಕ್ಕಂತಹ ಸೌರಪರಿಕರಗಳನ್ನು ಅಳವಡಿಸುವುದು ಸೂಕ್ತ.
ಉದಾಹರಣೆಗೆ, ದೀಪ ಉರಿಸುವುದಕ್ಕೆ ಮಿತಿಗೊಳಿಸಿ ಅಳವಡಿಸಿದ ಸೌರಫಲಕಗಳಿಂದ ಟಿವಿ, ರೆಫಿಜಿರೇಟರ್, ಮೋಟಾರ್, ಮಿಕ್ಸಿ, ಫ್ಯಾನ್‌ಗಳಿಗೆ ವಿದ್ಯುತ್‌ ಪೂರೈಸಲು ಸಂಪರ್ಕ ಬೆಸೆದರೆ ಹೇಗೆ? ಆಗ ಸೌರಫಲಕದಿಂದ ಬರುವ ವಿದ್ಯುತ್‌ನ ಪ್ರಮಾಣ ತ್ವರಿತಗತಿಯಲ್ಲಿ ಖಾಲಿಯಾಗುತ್ತದೆ.

ಹಾಗಾಗಿ, ಬಳಕೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಿ ನಿರ್ದಿಷ್ಟ ಉದ್ದೇಶಕ್ಕಷ್ಟೇ ಬಳಸಿದರೆ ಒಳಿತು.
ಅಹಾರ ಸಿದ್ಧಪಡಿಸಲು ವಿದ್ಯುತ್‌, ಅಡುಗೆ ಅನಿಲದ ಮೇಲೆಯೇ ಅವಲಂಬಿಸಬೇಕಿಲ್ಲ. ಆಹಾರ ಬೇಯಿಸಿಕೊಳ್ಳಬೇಕೆಂದರೆ, ಬಿಸಿ ಮಾಡಿಕೊಳ್ಳಬೇಕಾಗಿದ್ದರೆ ಅದಕ್ಕಾಗಿ ಬಳಸಲು ಸೌರ ಒಲೆಗಳೂ ಸಹ ಇವೆ.

ಆದರೆ, ಇವುಗಳನ್ನು ನಗರ ಪ್ರದೇಶದಲ್ಲಿ ಬಳಸುವುದು ತುಸು ಕಷ್ಟಕರ ಎನಿಸಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಇದನ್ನು ಸರಾಗವಾಗಿ ಬಳಸಬಹುದಾಗಿದೆ.

ನಗರ ಪ್ರದೇಶದಲ್ಲಿ ಸ್ವಲ್ಪ ಶ್ರಮವಹಿಸಿದರೆ ಮನೆ ತಾರಸಿಯ ಮೇಲೆ ಅಥವಾ ಮುಂದಿನ ಅಂಗಳದಲ್ಲೂ ಸಹ ಸೌರ ಒಲೆಯಿಂದ ಅಡುಗೆ ತಯಾರಿಸಿಕೊಳ್ಳಬಹುದು. ಆದರೆ, ಇದಕ್ಕೆ ಸಹನೆ, ತಾಳ್ಮೆಯನ್ನು ಬೆನ್ನಿಗೆ ಕಟ್ಟಿಕೊಂಡಿರಬೇಕಷ್ಟೆ. ಇದರಿಂದ ಆಗುವ ಪ್ರಯೋಜನಗಳನ್ನು ನೆನೆದರೆ ಖಂಡಿತ ಇದು ಕಿರಿಕಿರಿ ಅನಿಸದೇ ಇರದು. ಅಡುಗೆ ಅನಿಲದ ಸಿಲಿಂಡರ್‌ಗಾಗಿ ಮಾಡುವ ವೆಚ್ಚದ ಹೊರೆ ಕಡಿಮೆಯಾಗಿ ಹಣವನ್ನೂ ಉಳಿಸಬಹುದು.

ಮೊದಲು ಮನೆ ಕಟ್ಟುವಾಗಲೇ ನಾವು ಪ್ಲಾನ್ ಮಾಡಿಕೊಂಡು ಸೌರಫಲಕಗಳನ್ನು ಅಳವಡಿಸಿದೆವು. ಇದರಿಂದ ವಿದ್ಯುತ್ ಉಳಿತಾಯವಂತೂ ಆಗುತ್ತದೆ. ಆದರೆ, ಒಮ್ಮೆ ಕೆಟ್ಟು ಹೋದರೆ ಅದನ್ನು ರಿಪೇರಿ ಮಾಡಿಸುವುದಕ್ಕೆ ಸ್ವಲ್ಪ ದುಬಾರಿಯಾಗುತ್ತದೆ. ಇಷ್ಟು ಬಿಟ್ಟರೆ, ಖಂಡಿತ ಇದು ಲಾಭಕರ.
- ಪ್ರಭುಪ್ರಸಾದ್‌, ರಾಜರಾಮ ಅಗ್ರಹಾರ ಮೈಸೂರು

‘ನಾವು ಮನೆ ಕಟ್ಟುವುದಕ್ಕೆ ಮೊದಲು ಸೌರಶಕ್ತಿ ಬಗೆಗೆ ಪ್ಲಾನ್‌ ಮಾಡಲೇ ಇಲ್ಲ. ಕಟ್ಟಿದ ಮೇಲೆ ಅನ್ನಿಸ್ತು ಅಳವಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು. ಅದೂ ನಮ್ಮ ಸ್ನೇಹಿತರ ಮನೆ ನೋಡಿದ ಮೇಲೆ. ಈಗ ಸಾಲ ಸಾಕಷ್ಟಿದೆ ಇನ್ನು ಅದಕ್ಕೆಲ್ಲಿ ಸಾಲ ಮಾಡೋದು. ಹಾಗಾಗಿ, ಮನೆ ಸಾಲ ತೀರಲಿ ಆಮೇಲೆ ಅಳವಡಿಸಿಕೊಳ್ಳಬೇಕು ಅಂತ ಇದ್ದೀವಿ.
- ಮಮತಾ ದೇಶಪಾಂಡೆ, ಸುಣ್ಣದಕೇರಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT