ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ತರುವ ಹುಣಸೆ ಸಂಸ್ಕರಣೆ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಾವಿಗೆ ಖ್ಯಾತವಾಗಿರುವಂತೆ ಕೋಲಾರ ಜಿಲ್ಲೆಯು ಹುಣಿಸೆಹಣ್ಣಿಗೂ ಹೊರರಾಜ್ಯಗಳಲ್ಲಿ ಪ್ರಖ್ಯಾತ. ಆದರೆ ರಾಜ್ಯದೊಳಗೆ ತೋಟಗಾರಿಕೆ ಬೆಳೆಗಳ, ಅದರಲ್ಲೂ ಸಾಂಬಾರ ಪದಾರ್ಥಗಳ ಕುರಿತ ಚರ್ಚೆಯಲ್ಲಿ ಹಿಂದೆಯೇ ಉಳಿದಿದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ರಾಜ್ಯದ ಹೊರಗಿನ ಪ್ರದೇಶಗಳಿಗೆ ರಫ್ತು ಮಾಡುವಂಥ ಗುಣಮಟ್ಟದ ಹುಣಿಸೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದರೆ ಅದನ್ನು ದೊಡ್ಡ ಉದ್ಯಮದ ಸ್ವರೂಪದಲ್ಲಿ ಗ್ರಹಿಸುವ ಮತ್ತು ಜಾರಿಗೆ ತರುವ ಪ್ರಯತ್ನಗಳು ನಡೆದೇ ಇಲ್ಲ. ಹೀಗಾಗಿಯೇ ಜಿಲ್ಲೆಯಲ್ಲಿ ಹುಣಿಸೆ ಎಂಬುದು ಸಣ್ಣ ಕೈಗಾರಿಕೆಗಳ ಅಥವಾ ಕಿರು ಉದ್ಯಮದ ಸ್ವರೂಪದಲ್ಲಿ ಮಾತ್ರ ತನ್ನ ಅಸ್ತಿತ್ವನ್ನು ಗುರುತಿಸಿಕೊಂಡು ಹಾಗೆಯೇ ಮುಂದುವರಿಯುತ್ತಿದೆ. ಒಂದಷ್ಟು ಹುಣಿಸೆ ಮರಗಳನ್ನು ಒಟ್ಟಾಗಿ ಕೊಂಡು, ಅದರ ಹಣ್ಣನ್ನು ಸಿಪ್ಪೆಯಿಂದ ಬೇರ್ಪಡಿಸಿ ಮಾರುವ ಈ ಕಸುಬು ಗ್ರಾಮಾಂತರ ಪ್ರದೇಶಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಂಪ್ರದಾಯಿಕವಾಗಿ ಎಂಬಂತೆ ದಾಟಿ ಬರುತ್ತಿದೆ.

ಸ್ಥಳೀಯರಾಗಿರುವ ಎಲ್ಲ ವಯೋಮಾನದವರಿಗೆ ಕೆಲವು ತಿಂಗಳು ಕೆಲಸ ಕೊಡುತ್ತಾ, ಇಕ್ಕಟ್ಟಿನ ಮನೆಗಳಲ್ಲಿ ಕೆಲವು ತಿಂಗಳ ಕಾಲವಷ್ಟೇ ನಡೆಯುವ ಪುಟ್ಟ ಚೌಕಟ್ಟು ಇಲ್ಲಿನದು. ಅದನ್ನು ಮೀರಿದ ಮಾರುಕಟ್ಟೆಯ ಸ್ವರೂಪ ಇದುವರೆಗೂ ಹುಣಿಸೆಗೆ ದಕ್ಕದಿರುವುದು ಗಮನಿಸಬೇಕಾದ ಸಂಗತಿ.

ಹುಣಿಸೆ ಉಷ್ಣವಲಯದ ಬೆಳೆ. ಕಡಿಮೆ ಮಳೆ ಬೀಳುವ, ಕಡಿಮೆ ತೇವಾಂಶವಿರುವ ಪ್ರದೇಶದಲ್ಲಿ ಮತ್ತು ಬಂಜರು ಭೂಮಿಯಲ್ಲಿ ಸಾಮಾನ್ಯವಾಗಿ ಬೆಳೆಯಲಾಗುವ ಬೆಳೆ. ಮಳೆ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಲೇ ಕೃಷಿ ಜೀವನವನ್ನು ನಡೆಸುತ್ತಿರುವ ಕೋಲಾರ ಜಿಲ್ಲೆಯ ಹುಣಿಸೆ ಹಣ್ಣು ಎಂದರೆ ರಾಜ್ಯದೊಳಗೆ ಅಷ್ಟೇ ಅಲ್ಲದೆ, ರಾಜ್ಯದ ಹೊರಗೂ ಜನ ಬಾಯಿ ಚಪ್ಪರಿಸುತ್ತಾರೆ.

ಜನವರಿಯಿಂದ ಮಾರ್ಚ್, ಏಪ್ರಿಲ್‍ ತಿಂಗಳವರೆಗೆ ಹೂವು ಮತ್ತು ಕಾಯಿ ಬಿಡುವ ಹಂತ, ಕಾಯಿ ಬಲಿಯುವ ಮತ್ತು ಹಣ್ಣಾಗುವ ಹಂತ, ಕಟಾವು ಮಾಡಿದ ಬಳಿಕ ಹಣ್ಣಿನ ಸಿಪ್ಪೆಯನ್ನು ಬಿಡಿಸುವ ಹಂತದವರೆಗೂ ಗ್ರಾಮೀಣ ಪ್ರದೇಶದ ನೂರಾರು ಮಂದಿಗೆ ಹುಣಿಸೆ ಕೆಲಸವನ್ನು ನೀಡುತ್ತದೆ.

ಮರ ಖರೀದಿಯಿಂದ ಶುರು...
ಹುಣಿಸೆಯ ಕಿರು ಉದ್ದಿಮೆದಾರರಾಗಿ ಪರಿವರ್ತನೆಗೊಂಡಿರುವ ರೈತರು ಹುಣಿಸೆ ಮರಗಳನ್ನು ಹೂ ಬಿಡುವ ಕಾಲಕ್ಕೆ ಒಟ್ಟಾಗಿ ಖರೀದಿಸುವುದರಿಂದ ಉದ್ಯಮಕ್ಕೆ ಚಾಲನೆ ಕೊಡುತ್ತಾರೆ. ಮರ ಹತ್ತಿ ಹುಣಿಸೆಯನ್ನು ಉದುರಿಸುವುದು, ಸಂಗ್ರಹಿಸುವುದು, ಹುಣಿಸೆಯಿಂದ ಹೊಟ್ಟು ಮತ್ತು ನಾರನ್ನು ಬೇರ್ಪಡಿಸುವುದು... ಇವೆಲ್ಲಕ್ಕೂ ಮಾನವ ಶ್ರಮವೇ ಬೇಕು. ಈ ಕೆಲಸಗಳನ್ನು ಯಂತ್ರಗಳು ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೂಲಿಗಳಿಂದ ಕೆಲಸ ಮಾಡಿಸುವುದು ದೊಡ್ಡ ಸವಾಲು. ಹೀಗಾಗಿಯೇ ಬಹಳ ಮಂದಿಗೆ ಹುಣಿಸೆ ನಿಜವಾದ ಅರ್ಥದಲ್ಲಿ ಹುಳಿ. ಮೊದಲಿಗೆ ಹಳ್ಳಿಯಲ್ಲಿ ಕನಿಷ್ಠ 25 ಮಂದಿ ಹುಣಿಸೆ ಸಂಸ್ಕರಣೆ ವಹಿವಾಟಿನಲ್ಲಿ ತೊಡಗುತ್ತಿದ್ದರು. ಈಗ ಅವರ ಸಂಖ್ಯೆ 5–8ರ ಪ್ರಮಾಣಕ್ಕೆ ಇಳಿದಿದೆ.

ಎ ಗ್ರೇಡ್‍
ಮೂರು ಪ್ರಮುಖ ಜಿಲ್ಲೆಗಳ ಪೈಕಿ ಕೋಲಾರದ ಹುಣಿಸೆ ‘ಎ ಗ್ರೇಡ್‍’ ಎಂದೇ ಹೆಸರುವಾಸಿಯಾಗಿದೆ.
ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾರದ ಹುಣಿಸೆ ಎಂದರೆ ಹೊರರಾಜ್ಯಗಳ ಮಂದಿ ಕಣ್ಣುಮುಚ್ಚಿ ಖರೀದಿಸುತ್ತಾರೆ ಎನ್ನುತ್ತಾರೆ ಕೋಲಾರ ತಾಲ್ಲೂಕಿನ ಮಾರ್ಜೇನಹಳ್ಳಿಯ ರೈತರೂ ಆದ ಹುಣಸೆ ಸಂಸ್ಕರಣೆ ಉದ್ಯಮಿ ರಮೇಶ್‍.

ಬೃಹತ್‌ ಉದ್ಯೋಗ ಸೃಷ್ಟಿ
ಹುಣಿಸೆ ಮರದಿಂದ ಉದುರಿಸಿ ಮಾರುವವರೆಗಿನ ಲೆಕ್ಕಾಚಾರವೂ ಕುತೂಹಲಕಾರಿಯಾಗಿದೆ. ಮರದ ಫಸಲನ್ನು ಗಮನದಲ್ಲಿಟ್ಟುಕೊಂಡು, ಒಂದು ಮರಕ್ಕೆ ಕನಿಷ್ಠ ₨2 ಸಾವಿರದಿಂದ ಗರಿಷ್ಠ ₨8 ಸಾವಿರದವರೆಗೂ ಬೆಲೆ ಕಟ್ಟಿ ಖರೀದಿಸಲಾಗುತ್ತದೆ. ಮರ ಹತ್ತಿ ಹಣ್ಣನ್ನು ಉದುರಿಸಲು, ಪ್ರತಿ ಕೆಜಿಗೆ ₨5 ರೂಪಾಯಿ ಕೂಲಿ. ದಿನದ ಲೆಕ್ಕದಲ್ಲಿ ಆದರೆ ₨350. ಪೂರ್ಣ ಪಸಲಿದ್ದರೆ ಒಂದು ಮರದಲ್ಲಿ 250ರಿಂದ 260 ಕೆಜಿ ಹುಣಿಸೆಹಣ್ಣು ದೊರಕುತ್ತದೆ. ಒಂದು ಮರದಿಂದ ಹಣ್ಣನ್ನು ಉದುರಿಸಲು ಕನಿಷ್ಠ 8 ಮಂದಿಯಾದರೂ ಬೇಕು.

ನೆಲಕ್ಕೆ ಉದುರಿಸಿದ ಹಣ್ಣನ್ನು ಆಯ್ದು ಸಂಗ್ರಹಿಸಲು ಐದಾರು ಮಂದಿ ಬಂದರೆ, ಅವರಿಗೆ 1 ದಿನಕ್ಕೆ ₨ 130 ಕೂಲಿ.
ಹೀಗೆ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗವನ್ನು ಒದಗಿಸುತ್ತಿದೆ ಹುಣಸೆ ಹಣ್ಣು ಸಂಸ್ಕರಣೆ ಉದ್ಯಮ.

ಕಿರು ಉದ್ಯಮಿಗಳು..
ಒಟ್ಟು ಮಾಡಿದ ಹುಣಿಸೆಯನ್ನು ಬಿಸಿಲಿಗೆ ಹಾಕಿ ಸಿಪ್ಪೆ ತೆಗೆಯುವುದು ಬಹುತೇಕ ಮನೆಯವರ ಕೆಲಸವೇ ಆಗಿರುತ್ತದೆ, ನಂತರದ್ದು ಬೀಜ ಮತ್ತು ನಾರನ್ನು ಪ್ರತ್ಯೇಕಿಸುವುದು. ಆ ಕೆಲಸಕ್ಕೆ ಎಲ್ಲ ಜಾತಿಯ, ಎಲ್ಲ ವಯೋಮಾನದವರೂ ಬರುವುದು ವಿಶೇಷ. ಹುಣಿಸೆ ಹಣ್ಣನ್ನು ಒಡೆಯಲು ಒಂದು ಸುತ್ತಿಗೆ ಬೇಕಷ್ಟೆ, ನೆಲದ ಮೇಲೆ ಹರಡಿಕೊಂಡ ಹುಣಿಸೆಯ ಮೇಲೆ ಒಂದೇಟು ಹೊಡೆದರೆ ಒಳಗಿರು ಬೀಜ ಹೊರಗೆ ಬರುತ್ತದೆ. ಮತ್ತೊಂದು ಏಟಿಗೆ ನಾರು ಪ್ರತ್ಯೇಕಗೊಳ್ಳುತ್ತದೆ. ಬೀಜ, ನಾರು ಪ್ರತ್ಯೇಕಗೊಳಿಸಿದ ಒಂದು ಕೆಜಿ ಹುಣಿಸೆಹಣ್ಣಿನ್ನು ಸಿದ್ಧಪಡಿಸಿಕೊಟ್ಟರೆ ಸಿಗುವ ಕೂಲಿ ಮೂರು ರೂಪಾಯಿ!

ಇದು ಕಳೆದ ವರ್ಷದ್ದು. ಈ ಬಾರಿ ಮೂರೂವರೆ ರೂಪಾಯಿ ಕೊಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಕಿರು ಉದ್ಯಮಿಗಳು..
ಒಬ್ಬ ವ್ಯಕ್ತಿ ದಿನವೊಂದರಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಕನಿಷ್ಠ 25 ಕೆಜಿ ಹುಣಿಸೆಹಣ್ಣನ್ನ ಸಿದ್ಧಪಡಿಸಿಕೊಟ್ಟರೆ ದೊರಕುವ ಕೂಲಿ ಕೇವಲ ₨75.

ಕೆಜಿಗೆ ₨98
ಬಳಕೆಗೆ ಸಿದ್ಧಪಡಿಸಿದ ಕೋಲಾರದ ಹುಣಿಸೆಹಣ್ಣು ಮೂರು ವರ್ಷದ ಹಿಂದ ಪ್ರತಿ ಕೆಜಿಗೆ ₨98ರಂತೆ ಮಾರಾಟವಾಗಿದೆ. ಕಳೆದ ವರ್ಷ ₨29.50 ದರ ಇದ್ದುದು, ಈ ವರ್ಷ ₨ 33ಕ್ಕೇರಿದೆ. ಇದು ಹುಣಸೆ ಪರಿಷ್ಕರಣೆ ಉದ್ಯಮದವರು ನೀಡುವ ಮಾಹಿತಿ.

‘ಒಂದು ಕೆಜಿ ಹುಣಿಸೆಹಣ್ಣನ್ನು ಬಳಕೆಗೆ ಸಿದ್ಧಪಡಿಸಲು ಕನಿಷ್ಠ ₨22 ಖರ್ಚು ಮಾಡಬೇಕು. ಅದನ್ನು ಹೊರತುಪಡಿಸಿ ಲಾಭ–ನಷ್ಟದ ಲೆಕ್ಕಾಚಾರವನ್ನು ಹಾಕಬೇಕು’ ಎನ್ನುವ ಸಂಗ್ರಹಕಾರರು, ಹುಣಿಸೆ ಬೀಜವನ್ನು ಮಾರಿಯೂ ಹಣ ಸಂಪಾದಿಸುತ್ತಾರೆ. ಪ್ರತಿ ಕೆಜಿ ಹುಣಿಸೆ ಬೀಜದ ಬೆಲೆ ₨10ರಿಂದ 15.

ಪ್ರತಿ ಸಂಕ್ರಾಂತಿಗೆ ಶುರುವಾಗುವ ಈ ಕಿರು ಉದ್ಯಮ ಮೇ ತಿಂಗಳ ಮಧ್ಯಭಾಗದ ಹೊತ್ತಿಗೆ ಅಂತಿಮ ರೂಪವನ್ನು ಪಡೆಯುತ್ತದೆ. ಸಿದ್ಧಪಡಿಸಿದ ಹುಣಿಸೆಹಣ್ಣನ್ನು ಖರೀದಿಸಲು ತಮಿಳುನಾಡು, ಆಂಧ್ರಪ್ರದೇಶದಿಂದ ಹಲವರು ಜಿಲ್ಲೆಯ ಹಳ್ಳಿಗಳಿಗೆ ಬರುತ್ತಾರೆ. ಮನೆ ಬಳಕೆಯ ಸಾಂಬಾರ ಪದಾರ್ಥವಾದ ಹುಣಿಸೆಯ ಹೆಸರಲ್ಲಿ ಚೌಕಾಸಿ ವ್ಯಾಪಾರವೂ ನಡೆದು, ಲಕ್ಷಾಂತರ ರೂಪಾಯಿ ವಹಿವಾಟು ನಡೆದರೂ, ಅದರ ಲಾಭ ಸ್ಥಳೀಯ ಮಾರುಕಟ್ಟೆಗಾಗಲೀ, ಎಪಿಎಂಸಿಗಾಗಲೀ ದೊರಕುವುದಿಲ್ಲ. ಅಸಲಿಗೆ ಸ್ವಂತ ನೆಲದಲ್ಲೇ ಬೆಳೆದ ಹುಣಿಸೆಯು ಸ್ಥಳೀಯರ ಕೈಗೆಟಕುವ ಮೊದಲೇ ಸದ್ದಿಲ್ಲದೆ ಬೇರೆ ಊರಿಗೆ ರವಾನೆಯಾಗುತ್ತದೆ. ಇದು ಕೋಲಾರದ ಹುಣಿಸೆ ಹಣ್ಣಿನ ವಹಿವಾಟಿನ ಕತೆ...

ಕೋಲಾರದಲ್ಲೇ ಹೆಚ್ಚು
ತೋಟಗಾರಿಕೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಯನ್ನು ಹೊರತುಪಡಿಸಿದರೆ ಹುಣಿಸೆಯನ್ನು ರಾಜ್ಯದ 28 ಜಿಲ್ಲೆಗಳಲ್ಲಿ 14,924 ಹೆಕ್ಟೇರ್‍ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಆ ಪೈಕಿ ಕೋಲಾರದಲ್ಲಿ ಅತ್ಯಂತ ಹೆಚ್ಚು (3489 ಹೆ) ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಚಿಕ್ಕಬಳ್ಳಾಪುರ (2829 ಹೆ) ಮತ್ತು ಮೂರನೇ ಸ್ಥಾನದಲ್ಲಿ ತುಮಕೂರು ( 2798 ಹೆ) ಜಿಲ್ಲೆ ಇದೆ.

ಉತ್ಪಾದನೆ ಪ್ರಮಾಣದ ವಿಚಾರದಲ್ಲಿ ಮೂರು ಜಿಲ್ಲೆಗಳ ಸ್ಥಾನ ಕ್ರಮವಾಗಿ ಅವರೋಹಣ ಕ್ರಮಕ್ಕೆ ತಿರುಗುವುದು ವಿಶೇಷ. ಇಳುವರಿಯ ಪ್ರಮಾಣದಲ್ಲಿನ ವ್ಯತ್ಯಾಸವೇ ಇದಕ್ಕೆ ಕಾರಣ. ವಾರ್ಷಿಕವಾಗಿ ಕೋಲಾರದಲ್ಲಿ 14,656 ಲಕ್ಷ ಟನ್‍, ಚಿಕ್ಕಬಳ್ಳಾಪುರದಲ್ಲಿ 15,075 ಲಕ್ಷ ಟನ್‍ ಹಾಗೂ ತುಮಕೂರಿನಲ್ಲಿ 16573 ಮೆಟ್ರಿಕ್‍ ಟನ್‍ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ ₨19,22 ಕೋಟಿ ಮೌಲ್ಯದ 75,376 ಲಕ್ಷ ಟನ್‍ ಹುಣಿಸೆ ಉತ್ಪಾದನೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT