ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ನಿರಾಕರಣೆಯ ‘ಮಾರ್ಕ್‌’ ದಾರಿ!

Last Updated 16 ಜನವರಿ 2016, 19:40 IST
ಅಕ್ಷರ ಗಾತ್ರ

ಹಣ ಇಲ್ಲದೆ ಹೋದರೆ ಬದುಕಲು ಸಾಧ್ಯವಿಲ್ಲವೇ? ಇಂಥ ಪ್ರಶ್ನೆಯೊಂದಕ್ಕೆ ಮುಖಾಮುಖಿಯಾದ ಐರ್ಲೆಂಡಿನ ಮಾರ್ಕ್ ಬಾಯ್ಲ್ ‘ಇರುವುದೆಲ್ಲವನ್ನು ಬಿಟ್ಟು’ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದ ರೋಚಕ ಕಥೆ ಇದು. ಹೊಸ ಬದುಕಿನ ಮೂಲಕ ‘ಬ್ಯಾಂಕ್‌ ಠೇವಣಿ ಹಾಗೂ ಹಲವು ರೋಗಗಳನ್ನು ಕಳೆದುಕೊಂಡಿದ್ದೇನೆ’ ಎನ್ನುವ ಮಾರ್ಕ್‌, ಬಿಟ್ಟುಕೊಟ್ಟಿದ್ದರ ಪ್ರತಿಯಾಗಿ ಆರೋಗ್ಯ, ಖುಷಿ, ಅಪರಿಮಿತ ಸ್ವಾತಂತ್ರ್ಯ ಪಡೆದಿದ್ದಾರಂತೆ. ಆಧುನಿಕ ಸಂದರ್ಭದ ಹಲವು ಒತ್ತಡಗಳಿಗೆ ಉತ್ತರದ ರೂಪದಂತೆ ಕಾಣಿಸುವ ಮಾರ್ಕ್‌ ಅವರ ಈ ಪ್ರಯೋಗದ ಹಿನ್ನೆಲೆಯಲ್ಲಿ ಇರುವುದು ಗಾಂಧಿಯ ಪ್ರೇರಣೆ.

ಪಶ್ಚಿಮ ಐರ್ಲೆಂಡಿನ ಲೌಗ್ರಿಯಾ ಪಟ್ಟಣದ ಹೊರವಲಯದಲ್ಲಿನ ತೋಟದ ಮೂಲೆಯಲ್ಲಿ ಮನೆಯೊಂದಿದೆ. ಅದು ಮಾರ್ಕ್‌ ಬಾಯ್ಲ್‌ಗೆ ಯಾರೋ ಕೊಡುಗೆಯಾಗಿ ಕೊಟ್ಟಿದ್ದು. ಸರಳ ತಂತ್ರದ ‘ರಾಕೆಟ್ ಸ್ಟೋವ್’ ಮುಂದಿಟ್ಟುಕೊಂಡು, ರಾತ್ರಿಯೂಟ ಮಾಡುವ ಮಾರ್ಕ್‌ಗೆ ಇಂಥದ್ದೇ ತಿಂಡಿ–ತಿನಿಸು ತಯಾರಿಸಬೇಕೆಂಬ ಹಂಬಲವೇನಿಲ್ಲ. ಅವತ್ತು ಆ ತೋಟದಲ್ಲಿ ಸಿಕ್ಕಿದ್ದನ್ನು ಅಡುಗೆಯಾಗಿ ಪರಿವರ್ತಿಸುವುದಷ್ಟೇ ಆತನ ಕೆಲಸ. ಈ ಮಧ್ಯೆ ಸೌರಶಕ್ತಿಯಿಂದ ನಡೆಯುವ ಲ್ಯಾಪ್‌ಟಾಪ್‌ನಲ್ಲಿ ಇ–ಮೇಲ್ ಕಳಿಸುತ್ತಾನೆ. ಬರೀ ಒಳಬರುವ ಕರೆಗಳಿಗೆ ಮಾತ್ರ ಇಟ್ಟುಕೊಂಡಿರುವ ಮೊಬೈಲಿನಲ್ಲಿ ಇಷ್ಟವಿದ್ದರೆ ಮಾತ್ರ ಮಾತಾಡುತ್ತಾನೆ. ಬೆಳಿಗ್ಗೆಯಿಂದಲೂ ಆತ ದುಡಿದಿರುವುದರಿಂದ ನೆಮ್ಮದಿಯ ನಿದ್ರೆ! ನಾಳಿನ ಚಿಂತೆಯಿಲ್ಲದವನಿಗೆ ಈ ಪ್ರಪಂಚವೆಂಬ ಸಂತೆಯಲ್ಲೂ ಸುಖ ನಿದ್ದೆ, ಅಲ್ಲವೇ?

ನಾಳೆಯ ಚಿಂತೆ ಮಾಡದವರ ಸಂಖ್ಯೆ ಸಾಕಷ್ಟಿದೆ. ಅದರೆ ಅದು ಅವರವರ ಸಂಪತ್ತನ್ನು ಅವಲಂಬಿಸಿರುವಂಥದು. ಕೈತುಂಬ ಕಾಸು ಎಣಿಸುತ್ತಿದ್ದ ಮಾರ್ಕ್ ಬಾಯ್ಲ್, ಅವೆಲ್ಲವನ್ನೂ ತೊರೆದು ಏನೂ ಇಲ್ಲದವನಂತೆ ಬದುಕುತ್ತಿರುವುದರ ಹಿಂದೆ ಕುತೂಹಲದ ಕಥೆಯಿದೆ. ಜಗತ್ತು ಹಣದ ಹಿಂದೆ ಭರದಿಂದ ಓಡುವಾಗ, ಅದಕ್ಕೆ ಬೆನ್ನು ತಿರುಗಿಸಿ ‘ಹಣ ಬೇಡವೇ ಬೇಡ’ ಎಂದು ಸಾಗುತ್ತಿರುವ ಮಾರ್ಕ್ ಮೇಲ್ನೋಟಕ್ಕೆ ವಿಲಕ್ಷಣ ಯುವಕ. ಆದರೆ ಆತನ ಮೋಹಕ ಗಾನ – ವಾದಕ್ಕೆ ತಲೆದೂಗಿ, ಆತನದೇ ದಾರಿಯಲ್ಲಿ ಹೆಜ್ಜೆ ಹಾಕಲು ಯತ್ನಿಸುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ.

ಏನೆಲ್ಲ ಇದ್ದೂ ಇಲ್ಲದಂತೆ ಬದುಕುತ್ತಿರುವ ಮಾರ್ಕ್, ಜಗತ್ತು ನಡೆಯುವ ಹಾದಿಗೆ ವಿರುದ್ಧವಾಗಿ ಹೆಜ್ಜೆ ಹಾಕುತ್ತಿದ್ದಾನೆ. ಇದು ಆತನೇ ಆಯ್ದುಕೊಂಡ ದಾರಿಯಾದ್ದರಿಂದ, ಯಾರೂ ಆಕ್ಷೇಪಿಸುವಂತೆಯೂ ಇಲ್ಲ. ‘ಜನರು ನನ್ನನ್ನು ವಿಚಿತ್ರ ವ್ಯಕ್ತಿ ಅನ್ನುತ್ತಾರೆ. ತೊಂದರೆ ಇಲ್ಲ. ಹಣವೇ ಸರ್ವಸ್ವ ಎಂದಾಗಿರುವ ಈಗಿನ ಕಾಲದಲ್ಲಿ ಹಣದ ಹಂಗಿಲ್ಲದೇ ಬದುಕುವ ದಾರಿಯನ್ನು ನಾನು ಕಂಡುಕೊಂಡಿದ್ದೇನೆ ಎಂಬುದಷ್ಟೇ ನನಗೆ ತೃಪ್ತಿ’ ಎನ್ನುತ್ತಾನೆ ಬಾಯ್ಲ್.

ದಾರಿ ತೋರಿದ ಆ ಸಂಜೆ
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ (1979) ಮಾರ್ಕ್, ಇಂಥದೊಂದು ಹಾದಿಗೆ ಹೊರಳಿದ್ದೇ ಆಕಸ್ಮಿಕ. ವಾಣಿಜ್ಯ ಪದವಿ ಪಡೆದ ಬಳಿಕ, ಇಂಗ್ಲೆಂಡಿನಲ್ಲಿ ಸಾವಯವ ಉತ್ಪಾದನಾ ಕಂಪೆನಿಯೊಂದರ ಆಡಳಿತದ ಚುಕ್ಕಾಣಿ ಹಿಡಿದ. ಅದರಲ್ಲಿ ಯಶಸ್ವಿಯೂ ಆದ. ಸಾಕಷ್ಟು ಹಣ, ಸುತ್ತಲೂ ಗೆಳೆಯ–ಗೆಳತಿಯರು. ಹದಿಹರೆಯದ ಕನಸುಗಳನ್ನೆಲ್ಲ ಸವಿಯುವ ತವಕಕ್ಕೆ ಅಡ್ಡಿಯೆಂಬುದೇ ಇರಲಿಲ್ಲ.

ಅದು 2008ರ ಆಸುಪಾಸು. ಆರ್ಥಿಕ ಕುಸಿತಕ್ಕೆ ಸಿಲುಕಿ ಎಷ್ಟೋ ಕಂಪೆನಿಗಳು ನೌಕಕರಿಗೆ ‘ಪಿಂಕ್ ಸ್ಲಿಪ್’ ಕೊಟ್ಟು ಕಳಿಸುತ್ತಿದ್ದವು. ದಿನನಿತ್ಯ ಅದರ ಬಗ್ಗೆ ಪ್ರಕಟವಾಗುತ್ತಿದ್ದ ವರದಿಗಳನ್ನು ಮಾರ್ಕ್ ಗಮನಿಸುತ್ತಿದ್ದ. ಒಂದು ಸಂಜೆ ಪಬ್‌ನಲ್ಲಿ ಕುಳಿತು ಸ್ನೇಹಿತನೊಂದಿಗೆ ಹರಟೆ ಹೊಡೆಯುತ್ತಿದ್ದ. ಪರಿಸರ ಧ್ವಂಸ, ಒಪ್ಪಂದ ಕೃಷಿ, ವಿಷಯುಕ್ತ ಆಹಾರ, ಸಂಪನ್ಮೂಲಗಳಿಗಾಗಿ ಸಮರ... ಒಂದೇ ಎರಡೇ? ಎಲ್ಲ ವಿಷಯಗಳೂ ಮಾತುಕತೆಯಲ್ಲಿ ಬಂದುಹೋದವು.

ಕ್ರಮೇಣ ಚರ್ಚೆ ತಾರಕಕ್ಕೇರಿತು. ‘ಇದನ್ನೆಲ್ಲ ನೋಡುತ್ತಿದ್ದರೆ, ಹಣವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದಾಯಿತು. ಆದರೆ ಅದು ಸರಿಯಾದ ದಾರಿಯಲ್ಲ’ ಎಂಬ ಮಾರ್ಕ್‌ನ ಮಾತಿಗೆ ಆತನ ಸ್ನೇಹಿತ, ‘ಹಾಗಿದ್ದರೆ ನೀನು ಎಲ್ಲವನ್ನೂ ಬಿಟ್ಟುಬಿಡಬಹುದಲ್ಲ?’ ಎಂದು ಸವಾಲು ಹಾಕಿದ. ಅದಾಗಿ ಅರ್ಧ ತಾಸಿನೊಳಗೆ, ಮಾರ್ಕ್‌ ತನ್ನ ಮನೆ ಮುಂದೆ ‘ಮಾರಾಟಕ್ಕಿದೆ’ ಎಂಬ ಫಲಕ ತೂಗು ಹಾಕಿದ.

ಮನೆ ಮಾರಿ ಬಂದ ಹಣದಲ್ಲಿ ‘ಫ್ರೀಇಕಾನಮಿ’ ಎಂಬ ವೆಬ್‌ಸೈಟ್ ಶುರು ಮಾಡಿದ. ಅದು ಸಮಾನಮನಸ್ಕರ ಜತೆ ಸೇರಿ, ಹಣಮುಕ್ತ ದಾರಿಯನ್ನು ಹುಡುಕುವ ಪ್ರಯತ್ನವಾಗಿತ್ತು.

ಅದರ ಜತೆಗೆ ಮಾರ್ಕ್‌ ಗಟ್ಟಿಯಾದ ನಿರ್ಧಾರವನ್ನೂ ತಳೆದಿದ್ದ– ‘ಒಂದು ವರ್ಷದ ಕಾಲ ಹಣವಿಲ್ಲದೇ ಬದುಕಬೇಕು’ ಎಂದು. ಅದಕ್ಕಾಗಿ ಒಂದಷ್ಟು ತಯಾರಿಯನ್ನು ಮಾಡಿಕೊಂಡ. ಇಂದಿನ ಜಗತ್ತಿನಲ್ಲಿ ಹಣ ಇಲ್ಲದೇ ಜೀವನ ನಡೆಸುವುದು ಪ್ರಾಯಶಃ ಅಸಾಧ್ಯ ಎಂಬುದು ಆತನಿಗೆ ಗೊತ್ತಿತ್ತು. ಆದರೆ ದೃಢ ನಿಶ್ಚಯ ಮಾಡಿಬಿಟ್ಟಿದ್ದ.

‘ಫ್ರೀಸೈಕಲ್’ ಪರಿಸರಾಸಕ್ತರ ಗುಂಪು ಆತನಿಗೆ ಕಡಿಮೆ ವೆಚ್ಚದ ಸಿದ್ಧ ಮನೆಯನ್ನು ಕೊಡುಗೆಯಾಗಿ ನೀಡಿತು. ಸೌರಶಕ್ತಿಯಿಂದ ಚಾರ್ಜ್ ಆಗುವ ಲ್ಯಾಪ್‌ಟಾಪ್ ಹಾಗೂ ಕೇವಲ ಒಳಬರುವ ಕರೆ ಸೌಲಭ್ಯದ ಮೊಬೈಲ್‌ನೊಂದಿಗೆ ಪಶ್ಚಿಮ ಐರ್ಲೆಂಡಿನ ಲೌಗ್ರಿಯಾ ನಗರಕ್ಕೆ ಸಮೀಪವಿದ್ದ ತೋಟಕ್ಕೆ ಬಂದಿಳಿದ. ಅಲ್ಲಿ ಕೆಲಸ ಮಾಡುತ್ತ, ಹಣವಿಲ್ಲದೇ ಬದುಕುವುದು ಆತನ ಉದ್ದೇಶವಾಗಿತ್ತು.

ಆರಂಭದ ದಿನಗಳು ಆತನಿಗೆ ನಿಜಕ್ಕೂ ಸವಾಲು ಅನಿಸುವಂತಿದ್ದವು. ನಿತ್ಯದ ಕಾರ್ಯಗಳನ್ನು ಪೂರೈಸುವುದೇ ದೊಡ್ಡ ಸಮಸ್ಯೆ ಎಂಬಂಥ ಸ್ಥಿತಿ. ತೋಟದಲ್ಲಿ ಸಿಗುತ್ತಿದ್ದ ಹಣ್ಣು–ಗಡ್ಡೆ ಸೇವಿಸಿದ. ಅಲ್ಲಲ್ಲಿ ಅಲೆದು ಕಟ್ಟಿಗೆ ತಂದು, ಆಹಾರ ಬೇಯಿಸಿಕೊಂಡ. ತರಕಾರಿ, ಆಹಾರಧಾನ್ಯ ಬೆಳೆಯಲು ಶುರುಮಾಡಿದ. ‘ಹಲ್ಲುಜ್ಜಲು ಟೂತ್‌ಬ್ರಶ್..? ಹೀಗೆ ಯೋಚಿಸುವುದೇ ಸಾಧ್ಯವಿರಲಿಲ್ಲ. ಬೀಜಗಳನ್ನು ಮೀನಿನ ಎಲುಬಿನೊಂದಿಗೆ ಕುಟ್ಟಿ ಪುಡಿ ಮಾಡಿ ಹಲ್ಲುಜ್ಜಲು ಬಳಸಿದೆ.

ಸ್ನಾನಕ್ಕೆ ಸಮೀಪದಲ್ಲೇ ನದಿ ಇತ್ತು. ಬಟ್ಟೆ ತೊಳೆಯಲು ಗಿಡಗಳ ಅಂಟು ಬಳಸಿಕೊಂಡೆ. ಶೌಚಾಲಯಕ್ಕೆ ಬೇಕಾದ ಟಿಶ್ಯೂ ಪೇಪರ್‌ನದೂ ಒಂದು ಸಮಸ್ಯೆ. ತೋಟದ ಸಮೀಪದಲ್ಲಿ ತಂದು ಸುರಿಯುತ್ತಿದ್ದ ರದ್ದಿ ಪತ್ರಿಕೆಗಳನ್ನೇ ಬಳಸಿದೆ. ಅದು ಇಂದಿಗೂ ನಡೆಯತ್ತಿದೆ. ಕೆಲವೊಮ್ಮೆ ಹೀಗೆ ಬಳಸುವಾಗ, ನನ್ನ ಭಾಷಣದ ಫೋಟೋ–ವರದಿಗಳು ಅದರಲ್ಲಿ ಕಾಣಿಸುತ್ತವೆ’ ಎಂದು ಗಹಗಹಿಸಿ ನಗುತ್ತಾನೆ ಮಾರ್ಕ್!

ಬರೀ ಒಂದು ವರ್ಷದ ಅವಧಿಗೆ ಹೀಗೆ ಬದುಕಿ, ವಾಪಸು ಬರಬೇಕು ಎನ್ನುವುದು ಮಾರ್ಕ್ ಯೋಚನೆಯಾಗಿತ್ತು. ಆದರೆ ಆ ಜೀವನ ಅದೇಕೋ ಆತನಿಗೆ ಇಷ್ಟವಾಗತೊಡಗಿತು. ಆರಂಭದ ಕೆಲವು ತಿಂಗಳು ನಾನಾ ತರಹದ ಸಮಸ್ಯೆಗಳು ಎದುರಾದವು. ಅವುಗಳೆಲ್ಲ ಅಷ್ಟೇ ಸುಲಭವಾಗಿ ಪರಿಹಾರವಾಗಿದ್ದು ಆತನಿಗೆ ಸೋಜಿಗ ಅನಿಸಿತು. ಭವಿಷ್ಯದ ನೆಮ್ಮದಿಗೆ ಎಂಥೆಂಥದೋ ಸರ್ಕಸ್ ಮಾಡುವುದರ ಜತೆಗೆ ವರ್ತಮಾನದಲ್ಲಿ ಬಿಕ್ಕಟ್ಟು ಎದುರಿಸುತ್ತ ಬದುಕುವುದರ ಮುಂದೆ ಏನೂ ಇಲ್ಲದ ಈ ಜೀವನವೇ ಸುಂದರ ಎಂದು ಭಾಸವಾಗತೊಡಗಿತು. ಹೀಗಾಗಿ ‘ಪ್ರಯೋಗ’  ಅಲ್ಲಿಗೇ ಬಿಟ್ಟು, ಇದೇ ಶಾಶ್ವತ ದಾರಿ ಎಂದು ಮಾರ್ಕ್ ನಿರ್ಧರಿಸಿದ.

ಯುವಕರ ಹುಡುಗಾಟಗಳಲ್ಲಿ ಈ ಪ್ರಯೋಗವೂ ಒಂದು ಎಂದು ಭಾವಿಸಿದ್ದ ಆತನ ಪಾಲಕರು, ‘ಇನ್ನು ಮುಂದೆ ನಾನು ಹೀಗೆಯೇ ಬದುಕುತ್ತೇನೆ’ ಎಂಬ ಮಾರ್ಕ್ ತೀರ್ಮಾನ ಕಂಡು ಆತಂಕ ಗೊಂಡರು. ‘ನಾನು ಒಳ್ಳೆ ಉದ್ಯೋಗ ಮಾಡುತ್ತ, ಹಣಗಳಿಸಬೇಕು ಎಂಬುದು ಪಾಲಕರ ಆಸೆ. ನನ್ನ ನಿರ್ಧಾರದ ಬಗ್ಗೆ ಅವರಿಗೆ ಮನವರಿಕೆ ಮಾಡಿ ಕೊಟ್ಟೆ. ಕೊನೆಗೂ ಒಪ್ಪಿದರು. ಆಗಾಗ ನನ್ನ ತಂದೆ ಇಲ್ಲಿಗೆ ಬರುತ್ತಾರೆ. ನನ್ನ ಜತೆ ಕೃಷಿ ಕೆಲಸಗಳಿಗೆ ಕೈಜೋಡಿಸುತ್ತಾರೆ’ ಎನ್ನುತ್ತಾನೆ ಮಾರ್ಕ್.

ಸಿಕ್ಕಿದ್ದೇನು?
ಹಣದ ಮೇಲೆ ನಿಂತಿರುವ ವ್ಯವಸ್ಥೆಯನ್ನು ಧಿಕ್ಕರಿಸಿ ಅದಕ್ಕೆ ವಿರುದ್ಧವಾಗಿ ನಡೆಸುತ್ತಿರುವ ಜೀವನದಿಂದ ಸಿಕ್ಕಿದ್ದೇನು?
ಯಾರಾದರೂ ಈ ಪ್ರಶ್ನೆ ಕೇಳಿದರೆ, ಮಾರ್ಕ್ ಅದಕ್ಕೆ ನೇರ ಉತ್ತರವನ್ನೇನೂ ಕೊಡುವುದಿಲ್ಲ! ಬದಲಾಗಿ, ‘ಒತ್ತಡದ ಬದುಕು, ಬ್ಯಾಂಕ್‌ ಠೇವಣಿ ಹಾಗೂ ಹಲವು ರೋಗಗಳನ್ನು ಕಳೆದು ಕೊಂಡಿದ್ದೇನೆ. ಅದಕ್ಕೆ ಪ್ರತಿಯಾಗಿ ಆರೋಗ್ಯ, ಖುಷಿ ಪಡೆದಿದ್ದೇನೆ. ಅದೆಲ್ಲಕ್ಕಿಂತ ದೊಡ್ಡ ಲಾಭವೆಂದರೆ, ನನಗೆ ಸಿಕ್ಕ ಸ್ವಾತಂತ್ರ್ಯ’ ಎನ್ನುತ್ತಾನೆ.

ಸ್ವತಂತ್ರನಾಗಿ ಬದುಕುವ ದಾರಿಯಲ್ಲಿ ಮಾರ್ಕ್‌ಗೆ ಹಲವು ಅನುಭವಗಳು ಸಿಕ್ಕಿವೆ. ಅವುಗಳ ಪೈಕಿ ಕಹಿಗಿಂತ ಸಿಹಿಯೇ ಹೆಚ್ಚು ಎಂದು ನಗುತ್ತಾನೆ ಮಾರ್ಕ್. ಹಣವನ್ನು ದೂರವಿಟ್ಟು ಬದುಕಲು ಬಂದ ತಾನು ಈ ಸಮಾಜದಿಂದ ದೂರವಾಗುತ್ತೇನೆಂಬ ಭಾವನೆಯಿತ್ತು. ಆದರೆ ಅದೆಲ್ಲ ಸುಳ್ಳು ಎಂದು ಅರಿವಾಗಲು ಹೆಚ್ಚು ದಿನ ಬೇಕಾಗಲಿಲ್ಲ. ನಗರದ ಒತ್ತಡದ ಬದುಕಿನಲ್ಲಿ ಬೇಯುತ್ತಿರುವ ಎಷ್ಟೋ ಜನರಿಗೆ ಈ ದಾರಿ ಬಿಡುಗಡೆಯ ಮಾರ್ಗವಾಗಿ ತೋರಿತು.

‘ವಾಸ್ತವವಾಗಿ ಮೊದಲಿಗಿಂತಲೂ ಈಗ ನನ್ನ ಸ್ನೇಹಿತರ ವಲಯ ದೊಡ್ಡದಾಗಿದೆ. ಹಣವಿಲ್ಲದೇ ಒಬ್ಬರನ್ನೊಬ್ಬರು ಅವಲಂಬಿಸುವ ಬಗೆ ಹೇಗೆಂದು ಈಗ ಅರ್ಥವಾಗುತ್ತಿದೆ’ ಎನ್ನುತ್ತಾನೆ. ಪ್ರತಿ ವಾರ ನಿರ್ದಿಷ್ಟ ದಿನದಂದು ಆಸಕ್ತರ ಜತೆ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮಾರ್ಕ್, ತನ್ನಂತೆಯೇ ಹೆಜ್ಜೆ ಹಾಕುತ್ತಿರುವ ಜನರಿಂದ ಕಲಿಯುತ್ತಾನೆ; ತನಗೆ ಗೊತ್ತಿರುವುದನ್ನು ಕಲಿಸಿಕೊಡುತ್ತಾನೆ. ಇಲ್ಲೆಲ್ಲೂ ಹಣದ ವಹಿವಾಟು ಕಾಣುವುದೇ ಇಲ್ಲ.

ಅವಲಂಬನೆ ಕಡಿಮೆಯಾಗಲಿ
ಎಲ್ಲರೂ ಇದೇ ದಾರಿಯಲ್ಲಿ ನಡೆದರೆ, ಕೋಟ್ಯಂತರ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭ ಪರಿಹಾರ ಸಿಕ್ಕೀತಲ್ಲವೇ?

‘ಇಲ್ಲ. ಅದೊಂದು ಭೀಕರ ಅನಾಹುತಕ್ಕೆ ಎಡೆ ಮಾಡಿಕೊಟ್ಟೀತು!’ ಎಂದು ಆತಂಕದಿಂದ ಉದ್ಗರಿಸುತ್ತಾನೆ ಮಾರ್ಕ್.
ಜಗತ್ತು ನಿಂತಿರುವುದೇ ಹಣದ ಮೇಲೆ. ಅದು ನೂರಾರು ವರ್ಷಗಳಿಂದ ನಾವೇ ಸೃಷ್ಟಿಸಿಕೊಂಡ ಮಾರ್ಗ. ದಿಢೀರೆಂದು ಅದನ್ನು ತ್ಯಜಿಸುವುದು ಸಾಧ್ಯವಿಲ್ಲ; ಅದು ಸಾಧುವೂ ಅಲ್ಲ ಎಂದು ಪ್ರತಿಪಾದಿಸುವ ಮಾರ್ಕ್, ಆದಷ್ಟು ಮಟ್ಟಿಗೆ ಹಣದ ಮೇಲಿನ ಅವಲಂಬನೆ ಕಡಿಮೆ ಮಾಡುತ್ತ ಸಾಗಬೇಕು ಎನ್ನುತ್ತಾನೆ.

ಏಳು ವರ್ಷಗಳಿಂದ ಹೀಗೆ ಬದುಕುತ್ತಿರುವ ಮಾರ್ಕ್, ಆಸಕ್ತರ ಜತೆ ಸೇರಿಕೊಂಡು ‘ಫ್ರೀಹೌಸ್’ ಎಂಬ ಯೋಜನೆಗೆ ಚಾಲನೆ ನೀಡಿದ್ದಾನೆ. ನಮ್ಮ ಸುತ್ತಮುತ್ತಲೂ ಸಿಗುವ ಸಂಪನ್ಮೂಲ ಬಳಸಿಕೊಂಡು, ಅಗತ್ಯ ಪೂರೈಸಿಕೊಳ್ಳುವ ದಾರಿ ಹುಡುಕುವುದು ಅದರ ಗುರಿ. ‘ಭೂಮಂಡಲದ ಮೇಲೆ ಆಗುತ್ತಿರುವ ಒತ್ತಡವನ್ನು ಆದಷ್ಟು ಕಡಿಮೆ ಮಾಡಿ, ಮುಂದಿನ ಪೀಳಿಗೆಗೆ ಒಳ್ಳೆಯ ಪ್ರಕೃತಿಯನ್ನು ಬಿಟ್ಟುಕೊಟ್ಟು ಹೋಗೋಣ ಎಂಬ ಉದ್ದೇಶವಷ್ಟೇ ಇದರ ಹಿಂದಿನದು’ ಎಂದು ಸ್ಪಷ್ಟಪಡಿಸುವ ಮಾರ್ಕ್, ಆ ಕುರಿತ ಕೋರ್ಸ್‌, ತರಬೇತಿಯಲ್ಲಿ ಭಾಗವಹಿಸಿ ಅನುಭವ ಹಂಚಿಕೊಳ್ಳುತ್ತಾನೆ.

ಅಂದಹಾಗೆ,  ದೂರದೂರಿಗೆ ಇಂಥ ಕಾರ್ಯಕ್ರಮಕ್ಕೆಂದು ಹೋಗುವಾಗ, ಸೈಕಲ್, ನಡಿಗೆ ಅಥವಾ ಸಾರ್ವಜನಿಕ ಸಾರಿಗೆ ಆಶ್ರಯಿಸುತ್ತಾನೆ. ತನ್ನ ಅನುಭವಗಳನ್ನು ಸಂಗ್ರಹಿಸಿ ಬರೆದ ಪುಸ್ತಕಗಳ ಮಾರಾಟದಿಂದ ದೊರಕುವ ಹಣವನ್ನು ‘ಫ್ರೀಹೌಸ್‌ ಕಮ್ಯುನಿಟಿ’ಗೆ ಕೊಡುತ್ತಿದ್ದಾನೆ.

ನಾನೇನೂ ಈ ದಾರಿ ಹುಡುಕಿಕೊಂಡ ಮೊದಲ ವ್ಯಕ್ತಿಯಲ್ಲ ಎನ್ನುವ ಮಾರ್ಕ್‌ಗೆ, ಹಣವನ್ನು ಅವಲಂಬಿಸಿರುವವರ ಕಷ್ಟ–ಸುಖಗಳ ಅರಿವು  ಇದೆ. ‘ಹಣಕ್ಕೆ ಸವಾಲು ಹಾಕುವು ದೆಂದರೆ, ಅದು ಕೇವಲ ನಾಣ್ಯ–ನೋಟುಗಳಿಗೆ ಹಾಕುವ ಸವಾಲು ಅಲ್ಲ; ಜಗತ್ತು ನಡೆಯುತ್ತಿರುವ ವ್ಯವಸ್ಥೆಗೇ ಸವಾಲು ಹಾಕಿದಂತೆ. ಭೂಮಂಡಲದ ಮೇಲೆ ಬದುಕುತ್ತಿರುವ ಕೋಟ್ಯಂತರ ಜೀವ ಪ್ರಭೇದಗಳ ಪೈಕಿ ಸಣ್ಣದೊಂದು ವರ್ಗವು ತನ್ನ ಬದುಕಿಗಾಗಿ ಮಾಡಿಕೊಂಡಿರುವ ವ್ಯವಸ್ಥೆ ಹಣದ ವಹಿವಾಟು, ಅಷ್ಟೇ’ ಎನ್ನುತ್ತಾನೆ.

ಮಾರ್ಕ್ ಅನುಸರಿಸುವ ಹಾದಿ ಅತಿರೇಕದ್ದು ಎಂಬ ಟೀಕೆಗಳೂ ಕೇಳಿಬಂದಿವೆ. ಅದಕ್ಕೆಲ್ಲ ಆತ ತಲೆ ಕೆಡಿಸಿಕೊಂಡಿಲ್ಲ. ತಾನು ಕಂಡುಕೊಂಡ ದಾರಿಯತ್ತ ಬರುವವರ ಸಂಖ್ಯೆ ನಿಧಾನವಾಗಿ ಯಾದರೂ ಏರಿಕೆ ಕಾಣುತ್ತಿದೆ ಎಂಬ ಖುಷಿ ಆತನದು. ‘ಇಲ್ಲಿಗೆ ನನ್ನನ್ನು ಹುಡುಕಿಕೊಂಡು ಬಂದವರ ಪೈಕಿ ಬಹುತೇಕ ಮಂದಿ ಆಧುನಿಕ ಬದುಕಿನ ಸುಳಿಗೆ ಸಿಕ್ಕವರೇ ಆಗಿರುತ್ತಾರೆ. ಅವರಿಗೆ ಎದುರಾಗುವ ಸಂಕಟಗಳ ಒಂದಂಶವನ್ನೂ ನಾನು ಇಲ್ಲಿ ಅನುಭವಿಸುತ್ತಿಲ್ಲ ಎಂಬುದು ಗೊತ್ತಾದ ಬಳಿಕ, ಈ ದಾರಿ ಒಳ್ಳೆಯದೆಂದು ಅವರಿಗೆ ಮನವರಿಕೆಯಾಗುತ್ತದೆ. ಹಾಗೆಂದು ಅವರು ಸಂಪೂರ್ಣವಾಗಿ ಹಣ ತ್ಯಜಿಸುವ ಸ್ಥಿತಿಯಲ್ಲೂ ಇರುವುದಿಲ್ಲ. ಆ ಸತ್ಯ ನನಗೂ ಗೊತ್ತು. ಆದರೆ ನೆಮ್ಮದಿ ಪಡೆಯಲು ಸಣ್ಣಪುಟ್ಟ ಮಾರ್ಗಗಳೂ ಇವೆಯಲ್ಲ’ ಎನ್ನುತ್ತಾನೆ ಮಾರ್ಕ್‌.

ಏಳು ವರ್ಷಗಳಿಂದ ಈ ಮಾರ್ಗದಲ್ಲಿ ನಡೆಯುತ್ತಿರುವ ಆತ, ಮಹಾತ್ಮ ಗಾಂಧಿ ಹೇಳಿದ್ದ ‘ಜಗತ್ತಿನಲ್ಲಿ ನೀನು ಕಾಣಬೇಕೆನಿಸಿದ ಬದಲಾವಣೆ ನೀನೇ ಆಗು’ ಎಂಬ ಮಾತನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾನೆ.

***
ಗಾಂಧೀಜಿ ಪ್ರಭಾವ
ಮಾರ್ಕ್ ಬಾಯ್ಲ್ ಇಂಥದೊಂದು ವಿಭಿನ್ನ ದಾರಿಗೆ ಅಂಟಿಕೊಂಡಿದ್ದರ ಹಿಂದೆ ಮಹಾತ್ಮ ಗಾಂಧೀಜಿ ಪ್ರೇರಣೆ ಇದೆಯಂತೆ. ಪದವಿ ಅಧ್ಯಯನ ಮಾಡುತ್ತಿದ್ದಾಗ, ‘ಗಾಂಧಿ’ ಸಿನಿಮಾವನ್ನು ಮಾರ್ಕ್ ನೋಡಿದ್ದ. ತನ್ನ ಜೀವನ ಬದಲಾಗಲು ಅದು ಪ್ರೇರೇಪಿಸಿತು ಎಂದು ಹಲವು ಸಲ ಹೇಳಿಕೊಂಡಿದ್ದಾನೆ.

ಪರಿಸರವನ್ನು ಧ್ವಂಸ ಮಾಡಿ, ಹಣದ ಹಿಂದೆ ಜಗತ್ತು ಓಡಿದರೆ ಪರಿಣಾಮ ಏನಾದೀತು ಎಂಬುದರ ಬಗ್ಗೆ ಗಾಂಧೀಜಿ ಮಾತುಗಳು ಮಾರ್ಕ್‌ ಮೇಲೆ ಪ್ರಭಾವ ಬೀರಿವೆ. ಹಣ ಇಲ್ಲದೇ ಕೆಲವೇ ಅಗತ್ಯ ಸಾಮಗ್ರಿಗಳ ಜತೆ ಇಂಗ್ಲೆಂಡಿನಿಂದ ಗುಜರಾತ್‌ನ ಪೋರ್‌ಬಂದರ್‌ಗೆ ಟ್ರೆಕ್ಕಿಂಗ್ ಮಾಡಲು ಆತ ಯತ್ನಿಸಿದ್ದ. ಆದರೆ ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ.

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟುಗಳು ಹಾಗೂ ಅದರ ಪರಿಹಾರದ ಸಾಧ್ಯತೆಗಳ ಬಗ್ಗೆ ಮಾರ್ಕ್‌ ತನ್ನ ‘ಡ್ರಿಂಕಿಂಗ್ ಮಾಲ್ಟೋವ್ ಕಾಕ್‌ಟೇಲ್ ವಿತ್ ಗಾಂಧಿ’ ಕೃತಿಯಲ್ಲಿ ಚರ್ಚಿಸಿದ್ದಾನೆ. ತನ್ನ ಬದುಕಿನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು, ‘ಮನಿಲೆಸ್ ಮ್ಯಾನ್’, ‘ಮನಿಲೆಸ್ ಮ್ಯಾನಿಫೆಸ್ಟೊ’ ಪುಸ್ತಕಗಳನ್ನೂ ಬರೆದಿದ್ದಾನೆ.

ಪ್ರಚಾರ, ಟೀಕೆ, ಚರ್ಚೆ...
ಮಾರ್ಕ್ ಮಾಡುತ್ತಿರುವುದು ಪ್ರಚಾರಕ್ಕಾಗಿ ಎಂಬ ಟೀಕೆಗಳೂ ಇವೆ. ಆತ ತನ್ನ ನಿರ್ಧಾ ರವನ್ನು ಮಾಧ್ಯಮಗಳಲ್ಲಿ ಪ್ರಕಟಿ ಸಿದಾಗ, ಪರ– ವಿರೋಧ ಚರ್ಚೆ ನಡೆಯಿತು. ಅಷ್ಟಕ್ಕೂ ಇದು ಹೊಸ ದಾರಿ ಯೇನೂ ಆಗಿರಲಿಲ್ಲ. ಆತನೇ ಸ್ವಷ್ಟ ವಾಗಿ ಹೇಳಿ ಕೊಂಡಿದ್ದಾನೆ: ‘ನನಗಿಂತಲೂ ಮೊದಲು ಸಾಕಷ್ಟು ಜನರು ಈ ಹಾದಿಯ ಲ್ಲಿ ನಡೆದಿ ದ್ದಾರೆ. ನಾನೂ ಅವರಲ್ಲೊಬ್ಬ, ಅಷ್ಟೇ’.

ಹಣವಿಲ್ಲದೇ ಬದುಕುವ ಮಾರ್ಗಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ‘ಫ್ರೀಇಕಾನಮಿ ಕಮ್ಯುನಿಟಿ’ಗೆ ಸದಸ್ಯರಾದ ವರ ಸಂಖ್ಯೆ ಸಾವಿರಾರು. ಆದಷ್ಟು ಮಟ್ಟಿಗೆ ಹಣದ ವಹಿವಾಟನ್ನು ಕಡಿಮೆ ಮಾಡುವ ಫ್ರೀಸೈಕಲ್ ನೆಟ್‌ವರ್ಕ್‌, ಫ್ರೀಗಲ್, ಸ್ಟ್ರೀಟ್‌ ಬ್ಯಾಂಕ್‌ ವೆಬ್‌ಸೈಟ್‌ಗಳ  ಜತೆ ಸೇರಿ ‘ಫ್ರೀಇಕಾನಮಿ’ ಆಸಕ್ತರಿಗೆ ಸಲಹೆ ನೀಡುತ್ತದೆ.

(ಆಕರ: ಇ–ಮೇಲ್‌ ಸಂದರ್ಶನ ಹಾಗೂ ವಿವಿಧ ಮೂಲಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT