ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹರಿದರೂ ಹಳ್ಳಿಗಳಿಗೆ ನೀರು ಹರಿಯಲಿಲ್ಲ !

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ದಾವಣಗೆರೆ: ಬೋರ್‌ವೆಲ್‌ ನೀರು ಬಿಟ್ರೆ ನಮ್ಮೂರಿಗೆ ಯಾವ ನೀರೂ ಬರಲ್ರಿ. ಜನ–ಜಾನುವಾರು ಗಡಸು ನೀರೇ ಕುಡಿಯಬೇಕು. ಶುದ್ಧ ನೀರು ಕುಡಿಯುವ ಭಾಗ್ಯ ನಮ್ಮ ಗ್ರಾಮದ ಜನರಿಗಿಲ್ಲ..

ಹರಪನಹಳ್ಳಿ ತಾಲ್ಲೂಕಿನ ಶಾಂತಿನಗರ ಗ್ರಾಮದ ಮಂಜಮ್ಮ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯ (ಎಂವಿಎಸ್) ದುಸ್ಥಿತಿಯನ್ನು ತೆರೆದಿಟ್ಟಿದ್ದು ಹೀಗೆ. ಕೇವಲ ಶಾಂತಿನಗರ ಮಾತ್ರವಲ್ಲ, ದಾವಣಗೆರೆ ಜಿಲ್ಲೆಯಲ್ಲೇ ಸರ್ಕಾರದ ಮಹತ್ವಾಕಾಂಕ್ಷಿ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂಬ ಆರೋಪಗಳಿವೆ.

ಜಿಲ್ಲೆಯಲ್ಲಿ 2008–09ನೇ ಸಾಲಿನಲ್ಲಿ ಎಂವಿಎಸ್ ಕಾಮಗಾರಿ ಆರಂಭವಾಗಿದ್ದು, 40 ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ₹ 101.32 ಕೋಟಿ ವೆಚ್ಚದಲ್ಲಿ 18 ಯೋಜನೆಗಳು ಪೂರ್ಣಗೊಂಡಿವೆ. ನಾಲ್ಕು ಅಂತಿಮ ಹಂತದಲ್ಲಿದ್ದು, 10 ಪ್ರಗತಿಯಲ್ಲಿವೆ. 8 ಪ್ರಸ್ತಾವಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಬೇಕಿದೆ. ಸುಮಾರು  ₹445 ಕೋಟಿ ವೆಚ್ಚದ ಈ ಬೃಹತ್‌ ಯೋಜನೆಯಡಿ 807 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ.

ಕಡತಗಳಲ್ಲಷ್ಟೇ ಅನುದಾನ: ಜಿಲ್ಲಾ ಪಂಚಾಯ್ತಿಯ ಕಡತಗಳಲ್ಲಿ ಮಾತ್ರ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಪ್ರಾಮಾಣಿಕವಾಗಿ ಅನುಷ್ಠಾನವಾಗಿದ್ದು, ವಾಸ್ತವವಾಗಿ ಜನರನ್ನು ತಲುಪಿಲ್ಲ ಎಂಬ ಆರೋಪಗಳಿವೆ. ಯೋಜನೆ ಜಾರಿ ಸಂಬಂಧ ಹರಪನಹಳ್ಳಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಭೇಟಿನೀಡಿದಾಗ ಗ್ರಾಮಸ್ಥರು ಸಮಸ್ಯೆಗಳನ್ನು ತೆರೆದಿಟ್ಟರು.

ಮೊದಲ ಹಂತದಲ್ಲಿ ಹರಪನಹಳ್ಳಿಯ 25 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ₹ 7.63 ಕೋಟಿ ವೆಚ್ಚ ಮಾಡಲಾಗಿದೆ. ಕುಂಚೂರು, ಅರಸನಾಳು, ಕಲ್ಲಹಳ್ಳಿ, ಇಟ್ಟಿಗುಡಿ, ಕಣವಿ, ಗಿರಿಯಾಪುರ ತಾಂಡಾ, ಹಂಪಾಪುರ, ಅರ ಮಜ್ಜಿಗೆರೆ, ಕಲ ಮಜ್ಜಿಗೆರೆ, ಭೀಮಾಳ ತಾಂಡ, ವ್ಯಾಸನ ತಾಂಡ, ಬೇವಿನಹಳ್ಳಿ, ಹಲವಾಗಲು, ಮುತ್ತೂರು, ಅಲಗಿಲವಾಲ ತಾಂಡ, ಕಂಡಿಕೆರೆ ತಾಂಡ, ಯರಬಾಳು, ಶಾಂತಿನಗರ, ಕಣವಿ ತಾಂಡ, ಕುಂಚೂರು ತಾಂಡ, ಗರ್ಭಗುಡಿ, ಅಲಗಿಲವಾಡ, ನಿಟ್ಟೂರು, ಹುಚ್ಚಂಗಿದುರ್ಗ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.

ತುಂಗಭದ್ರಾ ನದಿ ನೀರನ್ನು ಸಮೀಪದ ಹಲವಾಗಲು ಗ್ರಾಮದಲ್ಲಿ ನಿರ್ಮಿಸಲಾಗಿರುವ ಬೃಹತ್ ನೀರಿನ ಟ್ಯಾಂಕ್‌ಗೆ ಸರಬರಾಜು ಮಾಡಿ, ಶುದ್ಧೀಕರಣ ಘಟಕದಲ್ಲಿ ಶುದ್ದೀಕರಿಸಿ, ಗುರುತ್ವಾಕರ್ಷಣ ಬಲದಿಂದ ಸುತ್ತಮುತ್ತಲಿನ ಹಳ್ಳಿಗೆ ನೀರು ಪೂರೈಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ವಾಸ್ತವ ಸ್ಥಿತಿ ಭಿನ್ನ.

ತಾಲ್ಲೂಕಿನ ಗಡಿಗ್ರಾಮ ಶಾಂತಿನಗರದಲ್ಲಿ ಯೋಜನೆ ಅನುಷ್ಠಾನಗೊಂಡಿದೆ ಎನ್ನುತ್ತವೆ ದಾಖಲೆಗಳು. ಆದರೆ, ಇದುವರೆಗೂ ಈ ಹಳ್ಳಿಗೆ ನೀರು ಸಿಕ್ಕಿಲ್ಲ. ಗ್ರಾಮದಲ್ಲಿ ಪೈಪ್‌ಲೈನ್‌ ಕಾಮಗಾರಿಯೇ ಆರಂಭವಾಗಿಲ್ಲ. ನೀರು ಎಲ್ಲಿಂದ ಬರಬೇಕು ಎನ್ನುತ್ತಾರೆ ಗ್ರಾಮದ ಗಣೇಶ್‌.

ಹಲವು ವರ್ಷಗಳಿಂದಲೂ ಜನ ಬೋರ್‌ವೆಲ್‌ ನೀರೇ ಕುಡಿಯುತ್ತಿದ್ದಾರೆ. ಗಡಸು ನೀರು ಕುಡಿದು ಹಲವರಿಗೆ ಆರೋಗ್ಯ ಹದಗೆಟ್ಟಿದೆ. ಆದರೂ, ಕೊಳವೆಬಾವಿ ನೀರು ಬಿಟ್ಟರೆ ವಿಧಿಯಿಲ್ಲ. ವಿದ್ಯುತ್ ಸಮಸ್ಯೆ ಮಧ್ಯೆ, ಕೆಲಸಕಾರ್ಯ ಬದಿಗಿಟ್ಟು ನೀರು ಹಿಡಿಯಬೇಕು. ನೀರು ಬಾರದಿದ್ದರೆ, ನಾಲ್ಕೈದು ಕಿಲೋಮೀಟರ್‌ ನಡೆದು ಅಕ್ಕಪಕ್ಕದ ಹಳ್ಳಿಗಳಿಂದ ನೀರು ತರಬೇಕು. ನೀರು ಹೊಂದಿಸುವುದೇ ಚಿಂತೆ ಎನ್ನುವಾಗ ಸುಶೀಲಾಬಾಯಿ ಮಾತಿಗೆ ಗ್ರಾಮದ ಮಹಿಳೆಯರರೆಲ್ಲಾ ದನಿಗೂಡಿಸಿದರು.

ನೆರೆಯ ಕಂಡಿಕೆರೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡರೂ ಪ್ರಯೋಜನವಾಗಿಲ್ಲ. ನಲ್ಲಿಗಳಲ್ಲಿ ನೀರು ಬಂದು ತಿಂಗಳಾಯ್ತು. ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಹತ್ತುತ್ತಿಲ್ಲ. ಕಾಮಗಾರಿಯೂ ಕಳಪೆಯಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಬೋಲ್ಯಾನಾಯ್ಕ.

ಇಡೀ ಹಳ್ಳಿಗೆ ಆಧಾರವಾಗಿದ್ದ ಶುದ್ಧ ಕುಡಿಯುವ ನೀರು ಘಟಕ ಕೆಟ್ಟು 20 ದಿನಗಳಾಗಿವೆ. ದುರಸ್ತಿ ಮಾಡಿಸಿ ಎಂದು ಪಿಡಿಒ ಬಳಿ ಕೇಳಿದ್ರೆ, ಶಾಸಕರನ್ನು ಕೇಳಿ ಅಂತಾರೆ. ಗಡಸು ನೀರು ಕುಡಿದು ಹಲ್ಲುಗಳೆಲ್ಲಾ ಹಳದಿಗಟ್ಟಿವೆ. ಮಕ್ಕಳು, ಮಹಿಳೆಯರು, ವಯಸ್ಸಾದವರಲ್ಲಿ ಮೂಳೆ ನೋವು ಕಾಣಿಸಿಕೊಂಡಿದೆ. ಈಚೆಗಷ್ಟೆ ಮಂಡಿನೋವಿಗೆ ಇಂಜೆಕ್ಷನ್‌ ಹಾಕಿಸಿಕೊಂಡಿದ್ದಿನಿ ಎಂದು ನೋವಿನಿಂದ ನುಡಿಯುತ್ತಾರೆ ಗ್ರಾಮದ ರಾಮಾನಾಯ್ಕ.

ಪಕ್ಕದ ಕುಂಚೂರಿನಲ್ಲಿ ಗ್ರಾಮಕ್ಕೆ ಪೈಪ್‌ಲೈನ್‌ ಸಂಪರ್ಕ ಕೊಟ್ಟಿದ್ದರೂ ಹುಣ್ಣಿಮೆ, ಅಮಾವಾಸ್ಯೆಗೆ ನೀರು ಬರುತ್ತದೆ. ಊರಿನ ಹೊರಗೆ ಇರೋ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ಏರದೇ ಇದ್ದೂ ಇಲ್ಲದಂತಾಗಿದೆ. ಕೆರೆ ಕಟ್ಟೆಗಳೆಲ್ಲಾ ಒಣಗಿಹೋಗಿವೆ. ಜನಜಾನುವಾರುಗಳಿಗೆ ಜಲವಿಲ್ಲ. ಕೆಲದಿನಗಳ ಹಿಂದೆ ಮೇಯಲು ಗುಡ್ಡಕ್ಕೆ ಹೋಗಿದ್ದ ಎರಡು ದನಗಳು ನೀರಿಲ್ಲದೆ ಸತ್ತುಹೋದವು ಎನ್ನುತ್ತಾರೆ ಕುಂಚೂರಿನ ಹಸನ್‌ಮಿಯಾ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಒಳಪಡುವ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ತುಂಗಭದ್ರಾ ನದಿ ಪಾತ್ರದ ಹಳ್ಳಿಗಳಲ್ಲೇ ನೀರಿಗೆ ಹಾಹಾಕಾರ ಸೃಷ್ಟಿಯಾಗಿದ್ದು, ಮಳೆಯಾಶ್ರಿತ ಪ್ರದೇಶಗಳ ಸ್ಥಿತಿಯಂತೂ ಹೇಳತೀರದು.

ನೀರಿಗೆ ಹಾಹಾಕಾರ: ದಾವಣಗೆರೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈ ಬಾರಿ ಬರದ ಛಾಯೆ ಆವರಿಸಿದೆ. ನೀರಿನ ಮೂಲಗಳಾದ ತುಂಗಭದ್ರಾ ನದಿ, ಶಾಂತಿಸಾಗರ (ಸೂಳೆಕೆರೆ) ಬತ್ತುತ್ತಿದೆ. ಚನ್ನಗಿರಿ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತ ನೀರಿನ ಬವಣೆ ನೀಗಿಸಲು ಸಾಲುಸಾಲು ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ.

ಅಂತರ್ಜಲ ಕುಸಿತ: ಈ ಬಾರಿ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ನೀರು ಬಿಡದ ಪರಿಣಾಮ, ರೈತರು ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಎಗ್ಗಿಲ್ಲದೆ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು 700 ಅಡಿ ಕೊರೆದರೂ ಜಲವಿಲ್ಲ. ದಾವಣಗೆರೆ ತಾಲ್ಲೂಕಿನ ಕಿತ್ತೂರು ಗ್ರಾಮದಲ್ಲಿ ನೂರು ಬೋರ್‌ ಹಾಕಿಸಿದರೂ ಹನಿ ನೀರು ಸಿಕ್ಕಿಲ್ಲ !

ಫ್ಲೋರೈಡ್‌ ಹೆಚ್ಚು: ಜಿಲ್ಲೆಯ ಅಂತರ್ಜಲದಲ್ಲಿ ಅತಿಹೆಚ್ಚು ಫ್ಲೋರೈಡ್‌ ಅಂಶವಿದ್ದು, ಹರಪನಹಳ್ಳಿ, ಜಗಳೂರು, ತಾಲ್ಲೂಕಿನಲ್ಲಿ ಈ ಪ್ರಮಾಣ ಹೆಚ್ಚು. ಹರಪನಹಳ್ಳಿಯ ಶೇ 75ಕ್ಕೂ ಹೆಚ್ಚು ಭೂಭಾಗದಲ್ಲಿ ಎಲ್ಲೇ ಕೊಳವೆ ಬಾವಿ ಕೊರೆದರೂ ಸಿಗುವುದು ಫ್ಲೋರೈಡ್‌ ನೀರು.

ಕುಡಿಯುವ ನೀರಿನಲ್ಲಿ 0.5 ರಿಂದ 1.5 ಪಿಪಿಎಂ ಅಂಶವಿದ್ದರೆ ಆರೋಗ್ಯಕ್ಕೆ ತೊಂದರೆ ಇಲ್ಲ. ಆದರೆ, ಜಗಳೂರು ಹಾಗೂ ಹರಪನಹಳ್ಳಿಯ ಅಂತರ್ಜಲದಲ್ಲಿ 3.5 ಪಿಪಿಎಂ ಅಂಶವಿದೆ. ಹಾಗಾಗಿ, ಈ ಭಾಗದಲ್ಲಿ ಹಲ್ಲಿನ ಸಮಸ್ಯೆ, ಮೂಳೆ ಸವೆತ ಹೆಚ್ಚು ಎನ್ನುತ್ತಾರೆ ಜಲತಜ್ಞ ದೇವರಾಜ ರೆಡ್ಡಿ.

ಶುದ್ಧ ನೀರಿನ ಘಟಕಗಳಿಲ್ಲ: ಬೇಡಿಕೆಗಳಿಗೆ ಅನುಗುಣವಾಗಿ ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳಿಲ್ಲ. ಈವರೆಗೂ ಸರ್ಕಾರ 600 ಘಟಕಗಳನ್ನು ಮಂಜೂರು ಮಾಡಿದ್ದರೂ, 170 ಮಾತ್ರ ಕಾರ್ಯಾರಂಭ ಮಾಡಿವೆ. ಅಸಮರ್ಪಕ ನಿರ್ವಹಣೆ, ವಿದ್ಯುತ್ ಸಮಸ್ಯೆ, ನೀರಿನ ಅಲಭ್ಯತೆ ಹಾಗೂ ಇತರ ತಾಂತ್ರಿಕ ದೋಷಗಳಿಂದ ಅರ್ಧದಷ್ಟು ಘಟಕಗಳು ಸ್ಥಗಿತಗೊಂಡಿವೆ.

ಎಂವಿಎಸ್‌ ಯೋಜನೆ ವೈಫಲ್ಯ? ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವೈಫಲ್ಯಕ್ಕೆ ಹಲವು ಕಾರಣಗಳು ಸಿಗುತ್ತವೆ. ಯೋಜನೆಯ ದೂರದೃಷ್ಟಿಯ ಕೊರತೆ, ನೀರಿನ ಒತ್ತಡ ತಾಳಲಾರದ ಕಳಪೆ ಗುಣಮಟ್ಟದ ಪೈಪ್‌ ಬಳಕೆಯಿಂದ ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಪೈಪ್‌ಗಳು ಒಡೆದು ಹೋಗುತ್ತವೆ ಎನ್ನುತ್ತಾರೆ ಹಸನ್‌ಮಿಯಾ.

ಸರ್ಕಾರದ ಕಡಿಮೆ ಅನುದಾನ, ತಾಂತ್ರಿಕ ಸಮಸ್ಯೆಗಳು, ನದಿ ನೀರಿನ ಹರಿವಿನಲ್ಲಿ ಇಳಿಮುಖ, ಹೀಗೆ ಹಲವು ಅಂಶಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ತೊಡಕಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ನೀರಾವರಿ ಇಲಾಖೆ ಎಂಜಿನಿಯರ್‌.

ಗರ್ಭಗುಡಿ ಬ್ಯಾರೆಜ್‌ ನಿರ್ಮಿಸಿ
ಮಳೆಗಾಲದಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿದರೂ ಹೆಚ್ಚುವರಿ ನೀರು ಸದ್ಬಳಕೆಯಾಗದೆ ವ್ಯರ್ಥವಾಗಿ ಹರಿದು ಹೋಗುತ್ತದೆ. ಹರಪನಹಳ್ಳಿ ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಗರ್ಭಗುಡಿ ಬ್ರಿಜ್‌ ಕಮ್‌ ಬ್ಯಾರೇಜ್‌ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ.  ₹ 256 ಕೋಟಿ ವೆಚ್ಚದ ಈ ಬ್ಯಾರೇಜ್‌ ನಿರ್ಮಾಣವಾದರೆ ತಾಲ್ಲೂಕಿನ 60 ಕೆರೆಗಳಿಗೆ ನೀರು ತುಂಬಿಸಬಹುದು.

* ಆಂಧ್ರಪ್ರದೇಶಕ್ಕೂ ತುಂಗಭದ್ರಾ ನದಿ ನೀರೇ ಹರಿಯುತ್ತದೆ. ಅಲ್ಲಿ ‘ಸತ್ಯಸಾಯಿ ಟ್ರಸ್ಟ್‌’ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಅಲ್ಲಿನ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಬೇಕಿದೆ.
-ದೇವರಾಜ ರೆಡ್ಡಿ,  
ಜಲತಜ್ಞ

* ಹರಪನಹಳ್ಳಿಯಲ್ಲಿ ‘ಎಂವಿಎಸ್‌’ ಯೋಜನೆ ಅನುಷ್ಠಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಶಾಂತಿನಗರ ಗಡಿಗ್ರಾಮವಾಗಿದ್ದು, ಕುಡಿಯುವ ನೀರು ಪೂರೈಕೆಗೆ ತೊಡಕಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು.
-ಸುಧೀರ್‌, 
ಕಾರ್ಯಪಾಲಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT