ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಮಳೆ, ಸವಿ ಸಂಜೆ, ಜೊತೆಗೊಂದಿಷ್ಟು ಟೀ...

ರಸಸ್ವಾದ
Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಮಳೆಗೆ, ಒತ್ತಡಕ್ಕೆ, ನೆಮ್ಮದಿಗೆ ಟೀ ಉತ್ತಮ ‘ಮದ್ದು’. ಮದ್ದಾಗಿರುವ ಈ ‘ಟೀ’ಯನ್ನು ಉಚಿತವಾಗಿ ಸಂಜೆ ತಿಂಡಿಯೊಂದಿಗೆ ನೀಡುತ್ತದೆ ‘ಓಪನ್ ಬಾಕ್ಸ್’ ರೆಸ್ಟೊರೆಂಟ್. ‘ಮಾನ್ಸೂನ್ ಮೆನು’ ಎಂಬ ಉತ್ಸವವನ್ನು ರೆಸ್ಟೊರೆಂಟ್‌ ಆರಂಭಿಸಿದೆ. ಸುರಿವ ಮಳೆ ನಿಲ್ಲುವವರೆಗೂ ಉತ್ಸವ ಇರುವುದು ವಿಶೇಷ.

ನಮ್ಮ ಸಿಲಿಕಾನ್‌ ಸಿಟಿ ಮೇಲೆ ಮಳೆರಾಯ ಮೂರು ದಿನಗಳಿಂದ ದುಮುಗುಡುತ್ತಿದ್ದಾನೆ. ಚಳಿಯೊಂದಿಗೆ ಸುರಿವ ಸೋನೆ ಮಳೆಗೆ ಬೆಚ್ಚಗೆ ಹೊದ್ದು ಬಿಸಿಬಿಸಿ ಟೀ ಕುಡಿಯುತ್ತಾ, ಬಜ್ಜಿ ಬೋಂಡಾ ತಿನ್ನುತ್ತಾ ಇದ್ದರೆ ಆಹಾ... ಲೋಕದ ಚಿಂತೆ ಬಿಟ್ಟು ಮನಸು ಧ್ಯಾನಸ್ಥವಾಗುತ್ತದೆ.

ಸುರಿವ ಮಳೆಯ ನಡುವೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದಾಗ, ಬಸ್ಸಿಗೆ ಕಾಯುತ್ತಾ ಬೇಸತ್ತು ಮಳೆ ನಿಲ್ಲುವ ಸೂಚನೆ ಸಿಗದೆ ಆಟೊದವರು ಕೇಳಿದಷ್ಟು ಕೊಟ್ಟು ಮನೆ ತಲುಪಿ, ತಣ್ಣನೆ ವಾತಾವರಣದಲ್ಲಿ ಬೆಚ್ಚನೆ ಟೀ ಕುಡಿದೊಡನೆ, ‘ಚಾ ಸೊಪ್ಪು ಬೆಳೆದವರ ಹೊಟ್ಟೆ ತಣ್ಣಗಿರಲಿ’ ಅಂದುಕೊಳ್ಳುತ್ತೇವೆ.

ಮಳೆಗೆ, ಒತ್ತಡಕ್ಕೆ, ನೆಮ್ಮದಿಗೆ ಟೀ ಮದ್ದು. ‘ಓಪನ್ ಬಾಕ್ಸ್’ ರೆಸ್ಟೊರೆಂಟ್ ಸಂಜೆ ತಿಂಡಿಯೊಂದಿಗೆ ಮಸಾಲೆ ಟೀ ಉಚಿತವಾಗಿ ಕೊಡುತ್ತಿದೆ. ಇದಕ್ಕೆ ‘ಮಾನ್ಸೂನ್ ಮೆನು’ ಉತ್ಸವ  ಎಂಬ ಹೆಸರು. ಸುರಿವ ಮಳೆ ನಿಲ್ಲುವವರೆಗೂ ಉತ್ಸವ ಇರುವುದು ವಿಶೇಷ.

ಉತ್ಸವದಲ್ಲಿ ಮೇನ್‌ಕೋರ್ಸ್‌ ತಿನಿಸು ಇರುವುದಿಲ್ಲ. ‘ಮಾನ್ಸೂನ್ ಮೆನು’ ಹೆಸರಿಗೆ ತಕ್ಕಂತೆ ಸಂಜೆ ಹೊತ್ತು ಮಳೆಯಲ್ಲಿ ನೆನೆದ ಜೀವವನ್ನು ಒಂದಿಷ್ಟು ಬೆಚ್ಚಗೆ ಮಾಡುವ ಬಜ್ಜಿ, ಬೋಂಡಾ, ಆಲೂ ಟಿಕ್ಕಿ, ಹೆಸರು ಬೇಳೆ ಬಜ್ಜಿ ಹೀಗೆ ಹಲವು ಕುರುಕಲು ತಿಂಡಿಯೊಂದಿಗೆ ಟ್ವಿಸ್ಟ್‌ ಚಟ್ನಿಗಳು ಲಭ್ಯ. 

ಕಾರ್ನ್ ಮತ್ತು ಆಲೂ ಟಿಕ್ಕಿ
ಪುದೀನ ಮತ್ತು ಹಸಿಮೆಣಸಿನಕಾಯಿಯ ಹಸಿರು ಚಟ್ನಿಯೊಂದಿಗೆ ಕುರುಕಲು ಜೋಳ ಹಾಗೂ ಈರುಳ್ಳಿ ತುಂಡುಗಳೊಂದಿಗೆ ಮಸಾಲೆ ಸೇರಿಸಿ, ಬೇಯಿಸಿದ ಆಲೂಗಡ್ಡೆಯೊಂದಿಗೆ ಮಿಶ್ರಣ ಮಾಡಿ ಟಿಕ್ಕಿಯಂತೆ ಫ್ರೈ ಮಾಡಿದ ‘ಕಾರ್ನ್‌ ಮತ್ತು ಆಲೂ ಟಿಕ್ಕಿ’ ರುಚಿಕಟ್ಟಾಗಿದೆ.

ಹುರಿದ ಟಿಕ್ಕಿ ಹೊರಗೆ ಕ್ರಂಚಿಯಂತೆ ಇದ್ದರೂ ಒಳಗೆ ಮಸಾಲ ಪೂರಿತ ಆಲೂ ಚಪ್ಪರಿಸುವಂತಿದೆ. ಹಸಿರು ಚಟ್ನಿಯನ್ನು ನಂಚಿಕೊಂಡು ತಿನ್ನುತ್ತಿದ್ದರೆ, ತೆಳು ಮಸಾಲೆಯ ಟಿಕ್ಕಿಗೆ ಮತ್ತಷ್ಟು ಖಾರದ ಕಿಕ್‌ ಸಿಗುತ್ತದೆ. ಟಿಕ್ಕಿಯೊಂದಿಗೆ ಘಮಘಮಿಸುವ ಏಲಕ್ಕಿ, ಶುಂಠಿ ಹಾಗೂ ಇತರೆ ಮಸಾಲೆಗಳು ಹಾಕಿ ಮಾಡಿದ ಟೀ ಕುಡಿಯುತ್ತಿದ್ದರೆ ಮಳೆಯಲ್ಲಿ ನೆಂದಿದ್ದು ಸಾರ್ಥಕ.

ದಾಲ್‌ ಬಾಜಿಯಾ
ಈ ತಿನಿಸಿನಲ್ಲಿ ಹೆಸರು ಬೇಳೆ ಪಕೋಡ, ಪುದೀನ ಚಟ್ನಿ ಹಾಗೂ ಸಲಾಡ್‌ ಇರುತ್ತದೆ. ಹೆಸರು ಬೇಳೆಯಿಂದ ಮಾಡಿದ ಪಕೋಡ ಆದ್ದರಿಂದ ಒಂದು ವಿಶಿಷ್ಟ ರುಚಿ ಆವರಿಸಿರುತ್ತದೆ. ಟೀ ಜೊತೆಗೆ ತಿನ್ನುವಾಗ ನವಚೈತನ್ಯ  ನೀಡುತ್ತದೆ.

ಇತರೆ ಫ್ಲೇವರ್‌ಗಳು ಡಾಮಿನೇಟ್‌ ಆಗದಂತೆ ಹಸಿ ಪುದೀನ ಚಟ್ನಿ ತನ್ನ ತಾಜಾತನದಿಂದ ಹೆಸರುಬೇಳೆ ಪಕೋಡವನ್ನು ಇನ್ನೂ ರುಚಿಕಟ್ಟಾಗಿಸುತ್ತದೆ.
ಇದನ್ನು ತಯಾರಿಸುವ ವಿಧಾನವೂ ಭಿನ್ನ.

ಇಡೀ ರಾತ್ರಿ ಹೆಸರು ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ, ನೆನೆದ ಹೆಸರುಬೇಳೆಯನ್ನು ರುಬ್ಬಿ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಇತರೆ ಮಸಾಲೆ ಸೇರಿಸಲಾಗುತ್ತದೆ. ನಂತರ ಎಣ್ಣೆಯಲ್ಲಿ ಚೆನ್ನಾಗಿ ಕರಿಯಲಾಗುತ್ತದೆ.

ನೆನೆಹಾಕಿದ ಹೆಸರು ಬೇಳೆಯಾದ್ದರಿಂದ ಎಣ್ಣೆ ಅಂಶ ಈ ಪಕೋಡದಲ್ಲಿ ಹೆಚ್ಚಿದೆ. ಆದರೆ ರುಚಿಗೆ ಕುಂದಿಲ್ಲ. ಪಕೋಡವನ್ನು ಇನ್ನಷ್ಟು– ಮತ್ತಷ್ಟು ತಿನ್ನಬೇಕು ಎನಿಸುತ್ತದೆ.

ಪಕೋಡ ಜೊತೆಗೆ ಇರುವ ಸಲಾಡ್‌ ಸಹ ವಿಶಿಷ್ಟವಾಗಿದೆ. ಸಿಹಿ ಈರುಳ್ಳಿ, ದಾಳಿಂಬೆ, ಟೊಮೆಟೊ, ಕ್ಯಾರೆಟ್‌ಗಳಿಂದ ಕೂಡಿದೆ.  ಚಾಟ್‌ ಮಸಾಲ, ಪುದೀನ ಚಟ್ನಿಯನ್ನು ಡ್ರೆಸಿಂಗ್‌ ಸಾಸ್‌ ಆಗಿ ಬಳಸಲಾಗಿದೆ.

ಪಾರ್ಸಿ ಬಾಬಾ ಸ್ಪೆಷಲ್ ಮತ್ತು ಪುನೇರಿ ಮಿಸಲ್ ಪಾಲ್
ಪಪ್ಸ್‌ನಂತೆ ಇರುವ ಈ ತಿನಿಸಿಗೆ ಮಸಾಲಾ ಆಲೂ ಮತ್ತು ಮಂತ್ಯೆ ಸೊಪ್ಪಿನ ಹೂರಣವಿದೆ. ಹೆಚ್ಚು ಮಸಾಲೆಯಿಲ್ಲದ ಹಗುರ ತಿನಿಸು ಇದು. ಇದರೊಂದಿಗೆ ಕೊಡುವ ಸುಟ್ಟ ಕೆಂಪು ಮೆಣಸಿನಕಾಯಿಯನ್ನು ಖಾರ ಬೇಕು ಎನಿಸಿದರೆ ಪಪ್ಸ್‌ನೊಂದಿಗೆ ಸೇರಿಸಿ ತಿನ್ನಬಹುದು. ಪಪ್ಸ್‌ ತಿನ್ನುವಾಗ ಡ್ರೈ ಎನಿಸಿದರೆ ಜೊತೆಗೆ ಹುರಿದ ತಕ್ಕಾಳಿ ಚಟ್ನಿ ಇದೆ.

ಮತ್ತೊಂದು ಗರಿಗರಿ ತಿನಿಸು ಪುನೇರಿ ಮಿಶಲ್‌ ಪಾಲ್. ಸಾಂಪ್ರದಾಯಿಕ ಪಾವ್‌ನಂತೆ ಇದ್ದರೂ ಇದಕ್ಕೆ ಹುರಿದ ಈರುಳ್ಳಿ, ಗರಿಗರಿಯಾದ ಜೋಳ ಜೊತೆ ಸೇರಿಸಿ ವಿಶೇಷ ಟ್ವಿಸ್ಟ್‌ ನೀಡಿದ್ದಾರೆ. ಜೊತೆಗೊಂದು ಕರಿದ ಮೆಣಸಿನಕಾಯಿ. ಇದು ಪಾವ್‌ ರುಚಿಗೆ ಹೊಸ ಖಾರದ ಆಯಾಮ ನೀಡುತ್ತದೆ.

ವಿದೇಶಿ ಮ್ಯಾಗಿ
‘ಮಾನ್ಸೂನ್ ಮೆನು’ ಉತ್ಸವದ ವಿಶೇಷ ತಿನಿಸು ಈ ‘ವಿದೇಶಿ ಮ್ಯಾಗಿ’. ‘ಮಳೆಗಾಲದಲ್ಲಿ ಮ್ಯಾಗಿ ತಿನ್ನುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ‘ಮಾನ್ಸೂನ್ ಮೆನು’ ಉತ್ಸವ ಆಯೋಜನೆ ಮಾಡುವಾಗಲೇ ಮ್ಯಾಗಿ ತಿನಿಸನ್ನು ಸೇರಿಸಬೇಕು ಎಂದು ಕೊಂಡೆವು.

ಆದರೆ ಇದಕ್ಕೆ ಹೊಸ ಟ್ವಿಸ್ಟ್‌ ನೀಡುವುದಕ್ಕಾಗಿ ವಿದೇಶಿ ತರಕಾರಿಗಳನ್ನು ಬಳಸಿದ್ದೇವೆ. ಅಮೆರಿಕನ್ ಸಿಹಿ ಜೋಳ ಹೀಗೆ ಇಂಗ್ಲಿಷ್ ತರಕಾರಿ ಇಂಡಿಯನ್ ಮ್ಯಾಗಿ ರುಚಿ ಹೆಚ್ಚಿಸಿದೆ’ ಎನ್ನುತ್ತಾರೆ ಬಾಣಸಿಗ ಸೋಂಬಿರ್‌ ಚೌಧರಿ.

ತರಕಾರಿ ಮ್ಯಾಗಿಯೊಂದಿಗೆ ಮೊಟ್ಟೆ ಹಾಗೂ ಕೋಳಿಮಾಂಸದ ಮ್ಯಾಗಿಯೂ ಲಭ್ಯ. ಈ ಮಳೆಗಾಲದ ತಂಪಾದ ಸಂಜೆಯನ್ನು ಬೆಚ್ಚಗಾಗಿಸಲು ಓಪನ್‌ ಬಾಕ್ಸ್‌ ರೆಸ್ಟೊರೆಂಟ್‌ ಆಯೋಜನೆ ಮಾಡಿರುವ ಈ ‘ಮಾನ್ಸೂನ್ ಮೆನು’ಗಳಲ್ಲಿ ಇರುವ ಒಂದಾದರೂ ತಿನಿಸು ತಿನ್ನಬೇಕು.
ಜೊತೆಗೆ ಉಚಿತವಾಗಿ ನೀಡುವ ಮಸಾಲ ಟೀ ಈ ಎಲ್ಲಾ ಸ್ಪೈಸಿ ತಿನಿಸುಗಳೊಂದಿಗೆ ಹೊಂದಿಕೊಂಡು ಧನ್ಯತಾ ಭಾವ ಮೂಡಿಸುತ್ತದೆ.

ವಿಭಿನ್ನ ಬಗೆಯ ಪ್ರೆಸೆಂಟೇಷನ್
ಓಪನ್ ಬಾಕ್ಸ್ ರೆಸ್ಟೊರೆಂಟ್‌ ಆಯೋಜಿಸಿರುವ ‘ಮಾನ್ಸೂನ್ ಮೆನು’ ಉತ್ಸವದಲ್ಲಿ ಆಹಾರ ಪ್ರಸ್ತುತ ಪಡಿಸುವುದಕ್ಕೆ ವಿಶೇಷ ಕಾಳಜಿ ನೀಡಿದ್ದಾರೆ. ತಿನಿಸುಗಳ ರುಚಿ ಎಷ್ಟು ಮುಖ್ಯವೋ ಅವುಗಳನ್ನು ಕ್ರಿಯಾತ್ಮಕವಾಗಿ ಪ್ರೆಸೆಂಟ್‌ ಮಾಡುವುದು ಕೂಡ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಬಾಣಸಿಗ ಸೋಂಬಿರ್‌ ಚೌಧರಿ ಬಲು ಜಾಣ. ಸಣ್ಣ ಬಂಡಿಗಳು, ಬಣ್ಣಬಣ್ಣದ ಬೇಕಿಂಗ್‌ ಅಚ್ಚುಗಳು, ಸೈಕಲ್‌ ಕ್ಯಾರಿಯರ್‌ಗಳನ್ನು ಬಳಕೆ ಮಾಡಿಕೊಂಡಿದ್ದಾರೆ.

*ಪ್ರತಿ ತಿನಿಸಿನ ಬೆಲೆ ₹150
*ಸಮಯ: ಸಂಜೆ 4ರಿಂದ 7
*ಮಸಾಲಾ ಟೀ ಉಚಿತ
*ಸ್ಥಳ: ಓಪನ್ ಬಾಕ್ಸ್, ಪ್ರಶಾಂತ ಕಾಂಪ್ಲೆಕ್ಸ್, ಸೇಂಟ್ ಮಾರ್ಕ್ಸ್ ರಸ್ತೆ, ಎಂ.ಜಿ.ರಸ್ತೆ 
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT