ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನಾರು ರಾಜ್ಯಗಳಿಗೆ ದಕ್ಕದ ಪ್ರಾತಿನಿಧ್ಯ, ಉತ್ತರ ಪ್ರದೇಶಕ್ಕೆ ಸಿಂಹಪಾಲು...

ಸುದ್ದಿ ವಿಶ್ಲೇಷಣೆ
Last Updated 26 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮಂತ್ರಿ ಮಂಡಳದಲ್ಲಿ ರಾಜ್ಯವಾರು ಹಾಗೂ ಜಾತಿ­ವಾರು ಆಧಾರದಲ್ಲಿ ಪ್ರಾತಿನಿಧ್ಯ ಕಲ್ಪಿಸಿ, ಸಮ­ತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದರೂ ಹದಿನಾರು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸಚಿವ ಸ್ಥಾನ­ದಿಂದ ವಂಚಿತವಾಗಿವೆ. ಉತ್ತರ ಪ್ರದೇಶಕ್ಕೆ ಹೆಚ್ಚು ಸ್ಥಾನ­ಗಳನ್ನು ನೀಡಿ, ರಾಜಸ್ತಾನವನ್ನು ಕಡೆಗಣಿಸಿರುವ ಬಗ್ಗೆ ಅಪಸ್ವರ ಕೇಳಿಬಂದಿದೆ.

ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾ­ಲ್ಯಾಂಡ್‌, ಸಿಕ್ಕಿಂ, ತ್ರಿಪುರ, ಉತ್ತರಾಖಂಡ, ಅಂಡ­ಮಾನ್‌,ದಾದ್ರಾ,  ಚಂಡೀಗಡ, ದಮನ್‌, ಲಕ್ಷದ್ವೀಪ, ಪುದುಚೇರಿ ಒಳಗೊಂಡಂತೆ ಅನೇಕ ರಾಜ್ಯಗಳು ಮತ್ತು ಕೇಂದ್ರಾ­ಡಳಿತ ಪ್ರದೇಶಗಳು ಪ್ರಾತಿನಿಧ್ಯದಿಂದ ವಂಚಿತವಾಗಿವೆ.

ಕೇಂದ್ರದಲ್ಲಿ ಮೊದಲ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ನೆರವಾದ ಉತ್ತರ ಪ್ರದೇಶಕ್ಕೆ ಸಿಂಹಪಾಲು ಅಂದರೆ ಒಂಬತ್ತು ಸಚಿವ ಸ್ಥಾನಗಳನ್ನು ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲಿನ 80 ಲೋಕಸಭೆ ಸ್ಥಾನಗಳಲ್ಲಿ 71 ಬಿಜೆಪಿ, ಎರಡು ಅಪ್ನಾದಳದ (ಎನ್‌ಡಿಎ ಪಾಲುದಾರ ಪಕ್ಷ) ಪಾಲಾಗಿವೆ. ದೊಡ್ಡ ರಾಜ್ಯದ ಜನ ಎಸ್‌ಪಿ, ಬಿಎಸ್‌ಪಿಯನ್ನು ತಿರಸ್ಕರಿಸಿ ಮೋದಿ ಅವರನ್ನು ಅಭೂತ­ಪೂರ್ವ­ವಾಗಿ ಬೆಂಬಲಿಸಿದ್ದಾರೆ.

ಪ್ರಧಾನಿ ಮೋದಿ ಸ್ವತಃ ವಾರಾಣಸಿಯಿಂದ ಆಯ್ಕೆ­ಯಾಗಿ­ದ್ದಾರೆ. ಅಲ್ಲದೆ, ಲಖನೌದಿಂದ ಆಯ್ಕೆ­ಯಾ­ಗಿರುವ ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್‌, ಝಾನ್ಸಿ­ಯಿಂದ ಆರಿಸಿ ಬಂದಿರುವ ಉಮಾ ಭಾರತಿ, ಪಿಲಿ­ಭೀಟ್‌ನಿಂದ ಚುನಾಯಿತರಾದ ಮೇನಕಾ ಗಾಂಧಿ ಹಾಗೂ ದೆವೋರಿಯಾದಿಂದ ಗೆದ್ದಿರುವ ಕಲರಾಜ್‌ ಮಿಶ್ರ ಅವರಿಗೂ ಸಂಪುಟ ದರ್ಜೆ ಸಚಿವ ಸ್ಥಾನ ಕೊಡ­ಲಾ­ಗಿದೆ. ಇದಲ್ಲದೆ, ನಾಲ್ಕು ರಾಜ್ಯ ದರ್ಜೆ ಸಚಿವ ಸ್ಥಾನಗಳು ಸಿಕ್ಕಿವೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಹಿಂದು ಮತ­ಗಳನ್ನು ಒಗ್ಗೂಡಿಸಲು ನೆರವಾದ ಮುಜಫ್ಫರ್‌­ನಗರ ಮತೀಯ ಗಲಭೆ ಆರೋಪಿ ಸಂಜಯ್‌ ಬಲಿ­ಯಾನ್‌ ಅವರಿಗೆ ಸಚಿವ ಸ್ಥಾನದ ಕೊಡುಗೆ ನೀಡಲಾಗಿದೆ.

ರಾಜಸ್ತಾನದ ಮತದಾರರು ಎಲ್ಲ 25 ಸಂಸದ ಸ್ಥಾನಗಳನ್ನು ಬಿಜೆಪಿಗೆ ನೀಡುವ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದರೂ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಒಬ್ಬರಿಗೆ ಮಾತ್ರ. ಅದೂ ರಾಜ್ಯ ದರ್ಜೆ ಸಚಿವ ಸ್ಥಾನ. ಗಂಗಾ ನಗರದಿಂದ ಚುನಾಯಿತ­ರಾಗಿ­ರುವ ನಿಹಾಲ್‌ ಚಂದ್‌ ಅವರಿಗೆ ಮಂತ್ರಿ ಮಂಡಳದಲ್ಲಿ ಅವಕಾಶ ಕೊಡಲಾಗಿದೆ.

ಮೂರು ಸಂಪುಟ ದರ್ಜೆ ಮೂರು ರಾಜ್ಯ ದರ್ಜೆ ಸಚಿವ ಸ್ಥಾನ ಪಡೆದಿರುವ ಮಹಾರಾಷ್ಟ್ರ ಉತ್ತರ ಪ್ರದೇಶದ ನಂತರದ ಸ್ಥಾನದಲ್ಲಿದೆ. ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್‌ ಗಡ್ಕರಿ, ಹಿರಿಯ ನಾಯಕ ಗೋಪಿನಾಥ್‌ ಮುಂಡೆ, ಶಿವಸೇನೆಯ ಅನಂತ ಗೀತೆ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆತಿದೆ. ಬಿಜೆಪಿಯ ವಕ್ತಾರ ಪ್ರಕಾಶ್‌ ಜಾವಡೇಕರ್‌, ಪಿಯೂಷ್‌ ಗೋಯಲ್‌ ಮತ್ತು ರಾವ್‌ ಸಾಹೇಬ್‌ ದನ್ವೆ ಅವರಿಗೆ ರಾಜ್ಯ ದರ್ಜೆ ಮಂತ್ರಿ ಸ್ಥಾನದ ಅದೃಷ್ಟ ಒಲಿದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸದ್ಯದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಆರು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಇದರ ಜತೆ ಹರಿಯಾಣ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಹಿನ್ನೆಲೆಯಲ್ಲಿ ಇಬ್ಬರಿಗೆ ಮಂತ್ರಿ ಮಂಡಳದಲ್ಲಿ ಮೋದಿ ಅವಕಾಶ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ, ಅದರ ಮಿತ್ರ ಪಕ್ಷ ಶಿವಸೇನೆ 42 ಸ್ಥಾನಗಳನ್ನು ಗೆದ್ದುಕೊಂಡಿವೆ. ಕರ್ನಾಟಕಕ್ಕೆ ಮೂರು ಸಂಪುಟ ದರ್ಜೆ ಮತ್ತು ಒಂದು ರಾಜ್ಯ ದರ್ಜೆ ಸಚಿವ ಸ್ಥಾನ  ದೊರೆತಿದೆ.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಕೇಂದ್ರ ಸಚಿವರಾದ ಅನಂತ ಕುಮಾರ್‌, ವೆಂಕಯ್ಯ ನಾಯ್ಡು ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದೆ.

ವೆಂಕಯ್ಯ ನಾಯ್ಡು(ಮೂಲತಃ ಆಂಧ್ರ) ರಾಜ್ಯದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. ದಾವಣಗೆರೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ್‌ ಅವರಿಗೂ ರಾಜ್ಯ ಸಚಿವ ಸ್ಥಾನದ ಯೋಗ ಒಲಿದಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹದಿನಾಲ್ಕನೆ ಹೆಸರಾಗಿ ಅನಂತ ಕುಮಾರ್‌ ಅವರನ್ನು ಕರೆದ ಹಿನ್ನೆಲೆಯಲ್ಲಿ, ಅವರಿಗೆ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಲೋಕಸಭೆಗೆ 27 ಸದಸ್ಯರನ್ನು ಕಳುಹಿಸಿರುವ ಮಧ್ಯ ಪ್ರದೇಶಕ್ಕೆ ಸುಷ್ಮಾ ಸ್ವರಾಜ್‌ ಸೇರಿದಂತೆ ನಾಲ್ಕು ಸಂಪುಟ ದರ್ಜೆ ಸಚಿವ ಸ್ಥಾನಗಳು ಲಭಿಸಿವೆ. ಬಿಹಾರಕ್ಕೆ ಮೂರು  ಸಂಪುಟ ದರ್ಜೆ ಸ್ಥಾನ ದೊರೆತಿದೆ. ಇದರಲ್ಲಿ ಎಲ್‌ಜೆಪಿ ಮುಖಂಡ ರಾಂವಿಲಾಸ್‌ ಪಾಸ್ವಾನ್‌ ಅವರೂ ಸೇರಿದ್ದಾರೆ. ಮೋದಿ ತವರು ರಾಜ್ಯ ಗುಜರಾತಿನಿಂದ ಹಿರಿಯ ನಾಯಕ ಅರುಣ್‌ ಜೇಟ್ಲಿ ಮತ್ತು ರಾಹುಲ್‌ ವಿರುದ್ಧ ಸೋತ ಸ್ಮೃತಿ ಇರಾನಿ ಸೇರಿದಂತೆ ನಾಲ್ವರನ್ನು ಸಂಪುಟ ಸಚಿವರಾಗಿ ಮೋದಿ ನೇಮಿಸಿದ್ದಾರೆ.

ಉತ್ತರಾಖಂಡ, ಹಿಮಾಚಲ ಪ್ರದೇಶಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಪುಟ ಸೇರುವವರ ಹೆಸರಿನಲ್ಲಿ ಮೊದಲಿಗೆ ಶಾಂತಕುಮಾರ್ ಮತ್ತು ಬಿ.ಸಿ. ಖಂಡೂರಿ ಅವರ ಹೆಸರೂ ಕೇಳಿ ಬಂದಿತ್ತು.

ಲೋಕಸಭೆಯಲ್ಲಿ 282 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಲ್‍ಪಸಂಖ್ಯಾತ ಸಮುದಾಯದ ನಜ್ಮಾ ಅವರಿಗೆ ಮಾತ್ರ ಅವಕಾಶ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಏಳು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಆದರೂ ಒಬ್ಬರೂ ಆಯ್ಕೆಯಾಗಲಿಲ್ಲ. ರಾಜ್ಯಸಭೆ ಮತ್ತೊಬ್ಬ ಸದಸ್ಯ ಮುಖ್ತಾರ್‌ ಅಬ್ಬಾಸ್‌ ನಕ್ವಿ ಸಂಪುಟ ಸೇರುವರೆಂಬ ವದಂತಿ ಬಲವಾಗಿತ್ತು. ಆದರೆ, ಅವರ ನಿರೀಕ್ಷೆ ಕೈಗೂಡಲಿಲ್ಲ.

ಮೊದಲ ಕಂತಿನಲ್ಲಿ 45 ಸಚಿವರನ್ನು ಮೋದಿ ಸಂಪು­ಟಕ್ಕೆ ಸೇರಿಸಿಕೊಂಡಿದ್ದಾರೆ. ಇವರಲ್ಲಿ ಬ್ರಾಹ್ಮಣರು ಏಳು, ಐವರು ರಜಪೂತರು, ತಲಾ ಎರಡು ಕಾಯಸ್ಥ, ಖತ್ರಿಸ್‌, ತಲಾ ಒಂದು ಮರಾಠ, ಕಮ್ಮ, ರಾಜು, ಲಿಂಗಾ­ಯತ, ಒಕ್ಕಲಿಗ, ಜಾಟ್‌ ಸಿಖ್‌, ಐವರು ಆದಿ­ವಾಸಿ­ಗಳು, ಇಬ್ಬರು ಪರಿಶಿಷ್ಟರು ಮತ್ತು 12 ಹಿಂದು­ಳಿದ ವರ್ಗಗಳ ಸಮುದಾಯದ ಸದಸ್ಯರು ಸೇರಿದ್ದಾರೆ.

ರಾಜಸ್ತಾನ ಮುಖ್ಯಮಂತ್ರಿ ವಸುಂದರರಾಜೇ ದುಶ್ಯಂತ್‌ ಸಿಂಗ್‌, ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್‌­ಸಿಂಗ್ ಅವರ ಪುತ್ರ ಅಭಿಷೇಕ್‌ ಸಿಂಗ್‌ ಸೇರಿ­ದಂತೆ ಲೋಕಸಭೆಗೆ ಆಯ್ಕೆಯಾಗಿರುವ ಹಿರಿಯ ಬಿಜೆಪಿ ಮುಖಂ­ಡರ ಪುತ್ರರಿಗೆ ಮೋದಿ ಸಚಿವ ಸ್ಥಾನಗಳನ್ನು ನೀಡದೆ ಮೋದಿ ಅತ್ಯಂತ ನಿಷ್ಠುರವಾಗಿ ನಡೆದು­ಕೊಂಡಿ­ದ್ದಾರೆ. ಎರಡನೇ ಕಂತಿನಲ್ಲಿ ಪ್ರಧಾನಿ ಸಂಪುಟ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದು, ಎಲ್ಲ ರಾಜ್ಯಗಳು ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ನೀಡಲಿದ್ದಾರೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT