ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಕ್ಕೆ ಹಣ್ಣಿನ ಸವಿ

ನಮ್ಮೂರ ಊಟ
Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಹಲಸಿನ ಬೀಜದ ವಡೆ
ಸಾಮಗ್ರಿ: ಹಲಸಿನ ಬೀಜಗಳು 25, ತೆಂಗಿನಕಾಯಿ ತುರಿ ಒಂದೂವರೆ ಬಟ್ಟಲು, ಅಕ್ಕಿ 2 ಚಿಕ್ಕ ಲೋಟ, ಸ್ವಲ್ಪ ಜೀರಿಗೆ, ಸ್ವಲ್ಪ ಖಾರದ ಪುಡಿ, ಕರಿಯಲು ಎಣ್ಣೆ , ರುಚಿಗೆ ಉಪ್ಪು.

ವಿಧಾನ: ಮೊದಲು ಹಲಸಿನ ಹಲಸಿನ ಹಣ್ಣಿನ ಬೀಜಗಳನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ಸುಲಿಯಬೇಕು, ಇದರ ಜೊತೆಗೆ ಅಕ್ಕಿಯನ್ನು 2-3 ಗಂಟೆ ನೀರಿನಲ್ಲಿ ನೆನೆಸಬೇಕು. ನೆನೆಸಿಟ್ಟ ಅಕ್ಕಿಗೆ ತೆಂಗಿನಕಾಯಿ ತುರಿಯನ್ನು ಸೇರಿಸಿ ರುಬ್ಬಬೇಕು.  ಬೆಂದ ಹಲಸಿನ ಬೀಜಗಳನ್ನು ಪುಡಿಪುಡಿ ಮಾಡಿ ರುಬ್ಬಿಕೊಂಡ ಅಕ್ಕಿ, ಕಾಯಿತುರಿ ಮಿಶ್ರಣಕ್ಕೆ ಸೇರಿಸಿಕೊಳ್ಳಬೇಕು. ಇದಕ್ಕೆ ಜೀರಿಗೆ, ಖಾರದ ಪುಡಿ ಮತ್ತು ಉಪ್ಪನ್ನು ಗಟ್ಟಿಯಾಗಿ ಕಲಸಬೇಕು. ಈ ಮಿಶ್ರಣವನ್ನು ಕೈಯಲ್ಲಿ ಮಸಾಲ ವಡೆ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಹಲಸಿನ ಬೀಜದ ಒಡೆ ರೆಡಿ
*
ಸೇಬಿನ ಕಡುಬು
ಸಾಮಗ್ರಿ: ಸೇಬುಹಣ್ಣು 2, ರವೆ (ಚಿರೋಟಿ) 1 ಕಪ್, ಸಕ್ಕರೆ 1ಕಪ್, ಮೈದಾಹಿಟ್ಟು 1ಕಪ್, ತೆಂಗಿನ ತುರಿ 1ಕಪ್, ಪುಟಾಣಿ (ಹುರಿಗಡಲೆ) 2ಕಪ್, ತುಪ್ಪ ಸ್ವಲ್ಪ, ಏಲಕ್ಕಿ ಪುಡಿ ಅರ್ಧ ಚಮಚ, ಕರಿಯಲು ತಕ್ಕಷ್ಟು ಎಣ್ಣೆ, ಉಪ್ಪು ರುಚಿಗೆ.

ವಿಧಾನ: ಮೊದಲು ಸೇಬು ಹಣ್ಣನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಪುಟಾಣಿ (ಹುರಿಗಡಲೆ )ಯನ್ನು ಪುಡಿ ಮಾಡಿಕೊಳ್ಳಿ. ಪ್ಯಾನ್‌ನಲ್ಲಿ ತೆಂಗಿನ ತುರಿ, ಸಕ್ಕರೆ ಹಾಗೂ ಕತ್ತರಿಸಿಟ್ಟುಕೊಂಡ ಸೇಬನ್ನು ಕಾಯಿಸಿ. ಇದರಲ್ಲಿರುವ ನೀರು ಬತ್ತಿದ ಮೇಲೆ ಪುಟಾಣಿ ಪುಡಿ ಹಾಗೂ ಏಲಕ್ಕಿ ಸೇರಿಸಿ ಗ್ಯಾಸ್‌ನಿಂದ ಕೆಳಕ್ಕಿಳಿಸಿ.
ಮೈದಾಹಿಟ್ಟಿಗೆ ರವೆ, ಉಪ್ಪು, ತುಪ್ಪ ಹಾಗೂ ನೀರನ್ನು ಸೇರಿಸಿ ಕಲಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಮಿಕ್ಸ್‌ ಮಾಡಿ. ಚಪಾತಿ ಹಿಟ್ಟಿನ ಹದಕ್ಕೆ ಎಲ್ಲವನ್ನೂ ಮಿಶ್ರಣ ಮಾಡಿಕೊಳ್ಳಿ. ಪೂರಿಗೆ ಮಾಡುವ ಹಾಗೆ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಚಿಕ್ಕದಾಗಿ ಲಟ್ಟಿಸಿ. ತಯಾರು ಮಾಡಿಟ್ಟ ಸೇಬು ಹಣ್ಣಿನ ಮಿಶ್ರಣವನ್ನು ಇದರಲ್ಲಿ ತುಂಬಿ ಎಣ್ಣೆಯಲ್ಲಿ ಕರಿಯಿರಿ.
*
ಬಾಳೆ ಹಣ್ಣಿನ ದೋಸೆ
ಸಾಮಗ್ರಿ: ಕಳಿತಿರುವ 2 ಪಚ್ಚ ಬಾಳೆ ಹಣ್ಣು , ಅಕ್ಕಿ ಒಂದೂವರೆ ಕಪ್, ಉದ್ದಿನ ಬೇಳೆ 4 ಚಮಚ, ಸಿಹಿಗೆ ಅಗತ್ಯ ಇರುವಷ್ಟು ಬೆಲ್ಲ, ರುಚಿಗೆ  ಉಪ್ಪು.

ವಿಧಾನ: ಅಕ್ಕಿ, ಉದ್ದಿನ ಬೇಳೆಯನ್ನು  ರಾತ್ರಿಪೂರ್ತಿ ನೆನೆಸಿಡಿ. ಬೆಳಿಗ್ಗೆ ರುಬ್ಬಿ. ಒಂದು ಪಾತ್ರೆಗೆ ಬಾಳೆ ಹಣ್ಣು, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕಿವುಚಿ ಕಲಸಿ. ಈ ಮಿಶ್ರಣವನ್ನು ಮಿಕ್ಸಿ ಮಾಡಿರುವ ಅಕ್ಕಿಗೆ ಹಾಕಿ ಸರಿಯಾಗಿ ಕಲಸಬೇಕು. ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿಕೊಳ್ಳಬೇಕು. ರಾತ್ರಿ ಈ ಹಿಟ್ಟನ್ನು ಹೀಗೆಯೇ ಇಟ್ಟು ಬೆಳಿಗ್ಗೆ ತವಾಕ್ಕೆ ಚೆನ್ನಾಗಿ ಎಣ್ಣೆ ಸವರಿ ದೋಸೆ ಮಾಡಿ ಮುಚ್ಚಿ ಎರಡೂ ಕಡೆ ಬೇಯಿಸಿದರೆ ಆಯಿತು.
*
ಹಲಸಿನ ಬಾಳೆ ಎಲೆ ಹಬೆ
ಸಾಮಗ್ರಿ: 5-6 ಬಾಳೆ ಹಣ್ಣು, ಬಾಳೆ ಎಲೆ 6, 2 ಕಪ್ ಅಕ್ಕಿ, ಒಂದು ಅಚ್ಚು ಬೆಲ್ಲ, ರುಚಿಗೆ ಉಪ್ಪು.

ವಿಧಾನ: ಅಕ್ಕಿಯನ್ನು ನಾಲ್ಕೈದು ಗಂಟೆ ನೆನೆಸಿಕೊಳ್ಳಬೇಕು. ಬಾಳೆ ಎಲೆಗಳನ್ನು ಬಾಡಿಸಿ ಇಟ್ಟುಕೊಳ್ಳಿ,  ಗ್ಯಾಸ್‌ ಮೇಲೆ ಅಥವಾ ಮೈಕ್ರೋ ಓವನ್‌ನಲ್ಲಿ ಇದನ್ನು ಬಾಡಿಸಿಕೊಳ್ಳಬಹುದು. ಬಾಳೆ ಹಣ್ಣನ್ನು ರುಬ್ಬಿಕೊಳ್ಳಬೇಕು. ಈ ಮಿಶ್ರಣಕ್ಕೆ ಬೆಲ್ಲದ ಪುಡಿ, ಉಪ್ಪು, ನೆನೆಸಿಟ್ಟ ಅಕ್ಕಿ ಸೇರಿಸಿ ರುಬ್ಬಬೇಕು. ಕಡಿಮೆ ನೀರು ಸೇರಿಸಿ ತರಿತರಿಯಾಗಿ ರುಬ್ಬಬೇಕು. ಬಾಡಿಸಿದ ಬಾಳೆಎಲೆಯೊಳಗೆ ಚಿಕ್ಕ ಸೌಟಿನಲ್ಲಿ ಹಿಟ್ಟು ತುಂಬಿ,  ಚೆನ್ನಾಗಿ ಮಡಚಿ ಉಗಿಯಲ್ಲಿ 20-25 ನಿಮಿಷ ಬೇಯಿಸಿದರೆ ಬಾಳೆ ಹಣ್ಣಿನ ಹಬೆಯ ತಿಂಡಿ ರೆಡಿ.
*
ಹಲಸು ಹಣ್ಣಿನ ಕಡುಬು
ಸಾಮಾಗ್ರಿ: ಹಲಸಿನ ಹಣ್ಣಿನ ಹೋಳು- 3 ಕಪ್, ಅಕ್ಕಿ ಕಡಿ - ಒಂದೂವರೆ ಕಪ್,  ತೆ೦ಗಿನಕಾಯಿತುರಿ - 3 ಚಮಚ, ಬೆಲ್ಲ ಅರ್ಧ ಕಪ್‌, ಉಪ್ಪು ಒಂದು ಚಿಟಿಕೆ, ಏಲಕ್ಕಿ ಪುಡಿ - ಒಂದು ಚಿಟಿಕೆ.

ವಿಧಾನ: ಇವೆಲ್ಲವನ್ನೂ ನೀರು ಹಾಕದೇ ಮಿಕ್ಸಿಯಲ್ಲಿ ರುಬ್ಬಿ. ಇಡ್ಲಿ ತಟ್ಟೆಗೆ ಸಲ್ಪ ಎಣ್ಣೆ ಅಥವಾ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ಇಡ್ಲಿ ಮಾಡುವ ಪಾತ್ರೆಯಲ್ಲಿ ಇಟ್ಟು 45 ನಿಮಿಷ ಬೇಯಿಸಿದರೆ ಘಮಘಮಿಸುವ ಹಲಸಿನ ಹಣ್ಣಿನ ಕಡುಬು ಸಿದ್ಧ.
*
ಬಾಳೆಹಣ್ಣಿನ ಒತ್ತು ಶ್ಯಾವಿಗೆ
ಸಾಮಾಗ್ರಿ: ಅಕ್ಕಿ ಮೂರು ಕಪ್, ಕಳಿತ ಬಾಳೇಹಣ್ಣು 14, ರುಚಿಗೆ ಬೆಲ್ಲ, ರುಚಿಗೆ ಉಪ್ಪು, ಏಲಕ್ಕಿ ಪುಡಿ.

ವಿಧಾನ: ಅಕ್ಕಿಯನ್ನು ರಾತ್ರಿ ಇಡೀ ನೆನೆಸಿಟ್ಟು ಮಾರನೆಯ ದಿನ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊ೦ಡ ಅಕ್ಕಿ ಜೊತೆ ಮತ್ತೆ ಬಾಳೇಹಣ್ಣು ಹಾಕಿ, ಏಲಕ್ಕಿ ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿಕೊ೦ಡು ಅದಕ್ಕೆ ಸಿಹಿ ಅಗುವಷ್ಟು ಬೆಲ್ಲ ಮತ್ತು ಒಂದು ಚಮಚ ಉಪ್ಪು ಸೇರಿಸಿ. ಈ ಮಿಶ್ರಣವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಕಡುಬು ಅಥವಾ ಇಡ್ಲಿ ಮಾಡುವ ಪಾತ್ರೆಯಲ್ಲಿ ಅರ್ಧ ಗಂಟೆ ಬೇಯಿಸಿ. ಇದು ಬಿಸಿಯಿರುವಾಗಲೇ ಶ್ಯಾವಿಗೆ ಮಟ್ಟಿನಿ೦ದ ಒತ್ತಿರಿ. ಇಷ್ಟಾದರೆ ಬಾಳೇಹಣ್ಣಿನ ಶ್ಯಾವಿಗೆ ಒತ್ತು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT