ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ: ಸಂಬಂಧಗಳ ಭಾವ-ಬೆಸುಗೆ

Last Updated 19 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜೇಷ್ಠ ಅಮಾವಾಸ್ಯೆ, ಮಣ್ಣೆತ್ತಿನ ಅಮಾವಾಸ್ಯೆ. ಅಂದಿನಿಂದ ಶುರು. ಬೆನ್ನಮೇಲೆ ಹಬ್ಬಗಳ ಸಾಲನ್ನು ಹೊತ್ತು ತರುವ ವೃಷಭ. ಭೀಮನ ಅಮಾವಾಸ್ಯೆ, ಮಂಗಳಗೌರಿ, ನಾಗರಪಂಚಮಿ, ಶುಕ್ರವಾರದ ಗೌರಿ, ಜ್ಯೇಷ್ಠಾಗೌರಿ, ವರಮಹಾಲಕ್ಷ್ಮೀ ವ್ರತ, ಗೋಕುಲಾಷ್ಠಮಿ, ಸ್ವರ್ಣಗೌರಿ, ಗಣೇಶಚತುರ್ಥಿ, ಅನಂತನ ವ್ರತ….. ಹೀಗೆ ಸಾಲು ಸಾಲು ಹಬ್ಬಗಳು.

ಒಂದೊಂದು ಹಬ್ಬಕ್ಕೆ ಒಂದೊಂದು ವಿಶೇಷತೆ. ಅವರವರ ಮನೆಯ ಸಂಪ್ರದಾಯಕ್ಕನುಗುಣವಾಗಿ ಒಂದೊಂದು ಬಗೆಯ ಆಚರಣೆ, ನಿಯಮ, ತಯಾರಿ. ಕೆಲಸ, ವ್ಯಾಪಾರ, ವಿದ್ಯಾಭ್ಯಾಸದ ನಿಮಿತ್ತ ಬೇರೆಬೇರೆ ಊರುಗಳಿಗೆ ತೆರಳಿರುವ ಅಕ್ಕ-ತಂಗಿ, ಅಣ್ಣ-ತಮ್ಮಂದಿರು, ಬಂಧುಗಳು ಸ್ನೇಹಿತರು ಒಂದೆಡೆ ಸೇರಬೇಕೆನ್ನುವ ಭಾವಕ್ಕೆ ಹಬ್ಬದ ಬೆಸುಗೆ.

ಹಬ್ಬ– ಅದೊಂದು ಸಂಭ್ರಮ. ಅದಕ್ಕೊಂದು ಆಧ್ಯಾತ್ಮಿಕತೆಯ ಸ್ಪರ್ಶ. ‘ದೇವರ ಪೂಜೆ’ ಕೇಂದ್ರ ಬಿಂದು. ಪೂಜೆಗೊಂದು ‘ಹಿನ್ನೆಲೆ’ಯ ರಂಗೋಲಿ. ಹಿನ್ನೆಲೆಗೊಂದು ಕಥೆಯ ತೋರಣ. ಕಥೆಗೊಂದು ನಿವೇದನೆಯ ಪರಿಮಳ, ಫಲಸ್ತುತಿಯ ಮಂಗಳಾರತಿ.

ಹಬ್ಬಕ್ಕೆ ತಯಾರಿ ಎರಡು ಬಗೆಯದು. ಮಾರುಕಟ್ಟೆಯಿಂದ ತರುವ ಸಾಮಾನುಗಳ ಪಟ್ಟಿ ಒಂದಾದರೆ, ಮನೆಯ ಒಳಗೆ ನಡೆಸುವ ತಯಾರಿ ಇನ್ನೊಂದು ಬಗೆಯದು.  ಹಬ್ಬದ ತಯಾರಿಯಲ್ಲಿ  ಸ್ತ್ರೀಯರದೇ ಹೆಚ್ಚಿನ ಒಳಗೊಳ್ಳುವಿಕೆ. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಕ್ಕೆ ತಿಂಗಳು ಮೊದಲು ಮನೆಗೆ ಸುಣ್ಣ-ಬಣ್ಣ ಹಚ್ಚುವ ವಾಡಿಕೆ ಇಂದಿಗೂ ಇದೆ.

ಹಬ್ಬಕ್ಕೆ ಮನೆಯ ಎಲ್ಲ ಸದಸ್ಯರಿಗೂ ಹೊಸ ಬಟ್ಟೆ ಕೊಳ್ಳುವ ಸಡಗರ. ಹಬ್ಬದ ಹಿಂದಿನ ದಿನ ಅಂಗಡಿ/ಮಾಲ್ ಗಳಿಗೆ ಹೋಗಿ ಸಿದ್ಧಉಡುಪುಗಳನ್ನು ಖರೀದಿ ಮಾಡುವವರು ಕೆಲವರಾದರೆ, ತಮ್ಮ ಆಯ್ಕೆಯ ಬಟ್ಟೆ ಖರೀದಿಸಿ, ತಮ್ಮ ಕಲ್ಪನೆಯ ವಿನ್ಯಾಸವನ್ನು ಹೊಲಿಸಿ ಧರಿಸುವ ಕುಶಾಲಿನವರು ಇನ್ನು ಕೆಲವರು. ಸ್ತ್ರೀಯರು ತಮ್ಮ ನೆಚ್ಚಿನ ಸೀರೆಗಳ ಆಯ್ಕೆಯನ್ನು ಆನ್‌ಲೈನ್ ಮುಖಾಂತರವೂ ಮಾಡುತ್ತಿರುವುದು ಕಂಡುಬರುತ್ತಿದೆಯಾದರೂ, ಹೆಚ್ಚಿನವರು ಸೀರೆ ಅಂಗಡಿಗೆ ಹೋಗಿ ಅದರ ಬಣ್ಣ, ನೇಯ್ಗೆಯ ರಚನೆ, ಎಲ್ಲವನ್ನೂ ಖುದ್ದು ಆಯ್ಕೆ ಮಾಡುತ್ತಾರೆ.

ಹಬ್ಬ ಎಂದೊಡನೆ ಎಷ್ಟೆಲ್ಲ ತಯಾರಿಗಳು. . .
ಹಬ್ಬದ ತಯಾರಿಗೆ ಬೇಕಾದ ಮನೆಯಲ್ಲಿ ಇರುವ ವಸ್ತುಗಳನ್ನು ಓರಣವಾಗಿ ಒಂದು ಕಡೆ ತೆಗೆದಿಟ್ಟುಕೊಂಡರೆ, ಮಾರುಕಟ್ಟೆಯಿಂದ ತರಬೇಕಾದ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳುವುದು ಸುಲಭವಾಗುತ್ತದೆ. ದೇವರನ್ನು ಪ್ರತಿಷ್ಠಾಪಿಸುವ ಮಂಟಪ ಅಥವಾ ಕುರ್ಚಿ/ಮೇಜು, ಮಣೆಗಳು, ದೀಪದ ಕಂಬಗಳನ್ನು ತೊಳೆದಿಟ್ಟುಕೊಳ್ಳಬೇಕು.ಮಂಟಪದ ಪಕ್ಕದಲ್ಲಿ  ಬಾಳೆಕಂದು ಇಡಲು ಬೇಕಾಗುವ ಸ್ಟ್ಯಾಂಡುಗಳು, ವಿದ್ಯುತ್ ಸಾಲುದೀಪಗಳಿಂದ ಅಲಂಕರಿಸಬೇಕೆಂದಿದ್ದರೆ ಎಲ್ಲ ಬಲ್ಬುಗಳೂ ಕಾರ್ಯನಿರ್ವಹಿಸುತ್ತಿವೆಯೇ ಎಂದು ಒಮ್ಮೆ ಪರೀಕ್ಷಿಸಿಟ್ಟುಕೊಳ್ಳಬೇಕು. ಹಬ್ಬಕ್ಕೆ ವಾರವಿರುವಾಗಲೇ ತಯಾರಿ ಆರಂಭವಾಗುತ್ತದೆ.

ಪೂಜೆಗೆ ಬೇಕಾಗುವ ಮಣೆಗಳು, ಬಣ್ಣದ ರಂಗೋಲಿ, ಹಣ್ಣು ಹೂ ಪತ್ರೆ ಜೋಡಿಸಿಟ್ಟುಕೊಳ್ಳಲು ಐದಾರು ತಟ್ಟೆಗಳು/ಬಿದಿರಿನ ಬುಟ್ಟಿಗಳು. ಆರತಿ ತಟ್ಟೆ, ಅರ್ಘ್ಯಪಾತ್ರೆ, ಪಂಚಪಾತ್ರೆ, ಉದ್ಧರಣೆ, ಮೀಸಲು ನೀರಿಗಾಗಿ ತಂಬಿಗೆ, ಹಬ್ಬದ ದಿನ ಮಾಡಬೇಕಾದ ಸಿಹಿ ತಿಂಡಿಗೆ (ಭಕ್ಷ್ಯ) ಬೇಕಾಗುವ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಂಡು, ಅದಕ್ಕಾಗಿ ವಿಶೇಷ ತಯಾರಿ ನಡೆಸಬೇಕಾಗುತ್ತದೆ.

ಮೊರದ ಬಾಗಿನದ ಸಾಮಾನುಗಳ ಖರೀದಿ: ಮೊರದ ಜೊತೆ( 2 ಮೊರ), ಅರಿಶಿನ, ಕುಂಕುಮ, ಅಕ್ಕಿ, ನಾಲ್ಕು ಬಗೆಯ ಬೇಳೆಗಳು, ರವೆ, ಉಪ್ಪು, ಹುಣಿಸೇ ಹಣ್ಣು, ಬೆಲ್ಲ, ಹತ್ತಿ, ಕನ್ನಡಿ, ಹಣಿಗೆ, ಕಪ್ಪಿನ ಡಬ್ಬಿ(ಕಾಡಿಗೆ), ಬಳೆ-ಬಿಚ್ಚೋಲೆ, ಕರಿಮಣಿ, ಗಾಜಿನ ಬಳೆಗಳು, ರವಿಕೆಕಣ,  ಅಡಿಕೆ, ಮುಂತಾದವುಗಳನ್ನು ಎಲ್ಲವನ್ನೂ ಖರೀದಿಸಿ ಜೋಡಿಸಿಟ್ಟುಕೊಳ್ಳಬೇಕು.

ಹಬ್ಬದ ಹಿಂದಿನ ದಿನ ವೀಳೆದೆಲೆ, ಹಣ್ಣು, ತೆಂಗಿನಕಾಯಿಯನ್ನು ಜೋಡಿಸಿಟ್ಟುಕೊಳ್ಳಬೇಕು. ಮುತ್ತೈದೆಗೆ ಬಿದಿರಿನ ಮೊರದ ಜೊತೆಯನ್ನು ದಾನವಾಗಿ ಕೊಡುವುದು; ಒಂದರೊಳಗೊಂದು ಹೆಣೆದುಕೊಂಡಿರುವ ಬಿದಿರಿನ ಪಟ್ಟಿಗಳು ವಂಶವನ್ನು ಮುಂದುವರೆಸಲು ಪಡೆವ ಅನುಗ್ರಹದ ಸಂಕೇತವಾದರೆ, ಆಹಾರ ಪದಾರ್ಥಗಳು, ಅಲಂಕಾರ ಸಾಮಗ್ರಿಗಳನ್ನು ದಾನ ಕೊಡುವುದು ಸಮೃದ್ಧಿಯನ್ನು ಸಂತೋಷದಿಂದ ಹಂಚಿಕೊಳ್ಳುವ ಸಂಕೇತ.

ಹಬ್ಬದ ಹಿಂದಿನ ದಿನದ ತಯಾರಿ: ಪೂಜೆಯ ತಟ್ಟೆಯಲ್ಲಿ  ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಚಂದ್ರ, ಬಟ್ಟಲು ಅಡಿಕೆ/ಅಡಿಕೆ ಚೂರು ಜೋಡಿಸಿಟ್ಟುಕೊಳ್ಳಬೇಕು. ಅಕ್ಕಿಗೆ ತುಪ್ಪ, ಅರಿಶಿನ/ಕುಂಕುಮ ಕಲೆಸಿ ಮಂತ್ರಾಕ್ಷತೆ ಮಾಡಿಟ್ಟುಕೊಳ್ಳಬೇಕು. ಹತ್ತಿಯಿಂದ ಮಾಡಿದ ಗಜ್ಜೆವಸ್ತ್ರಗಳನ್ನು ಹಾಲು ಮತ್ತು ಅರಿಶಿನ/ಕುಂಕುಮದಲ್ಲಿ ತೋಯಿಸಿಟ್ಟುಕೊಳ್ಳಬೇಕು.

ದೇವರಿಗೆ ಹಾಕುವ ಆಭರಣವೆಂದು ಹತ್ತಿಯಲ್ಲಿ ಮಾಡಿದ ವಿವಿಧ ನಮೂನೆಯ ಗೆಜ್ಜೆವಸ್ತ್ರಗಳನ್ನು ಬಣ್ಣ ಬಣ್ಣದ ವರ್ತಿತಗಡುಗಳಿಂದ ಅಲಂಕರಿಸಿ ಅಣಿ ಮಾಡಿಕೊಳ್ಳಬೇಕು.ಪೂಜೆಗೆ ಬೇಕಾಗುವ ಮಾವಿನೆಲೆ, ವೀಳ್ಯದೆಲೆ, ಅಡಿಕೆ, ಹೂವು, ಹಣ್ಣುಗಳನ್ನು ಹಬ್ಬದ ಹಿಂದಿನ ದಿನ ತಂದಿಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಹೂವುಗಳು ಸಿಗುತ್ತವೆಯಾದರೂ ಮನೆಯ ಅಂಗಳದಲ್ಲಿ ಬಿಡುವ ಗರಿಕೆ, ಹೂ, ಪತ್ರೆಗಳೇ ಪೂಜೆಗೆ ಉತ್ತಮ. ಪೂಜೆಗೆ ಪರಿಮಳವಿರುವ ಎಲ್ಲ ಹೂಗಳೂ ಶ್ರೇಷ್ಠ.

ಮಲ್ಲಿಗೆ, ಸೇವಂತಿಗೆ, ಕೇದಗೆ, ಕಮಲ, ಸಂಪಿಗೆ, ಗುಲಾಬಿ. ಪಾರಿಜಾತ. ಜಾಜಿ, ಪತ್ರೆ(ಎಲೆ)ಗಳನ್ನೂ ಪೂಜೆಗೆ ಸಂಗ್ರಹಿಸಿಟ್ಟುಕೊಳ್ಳಬೇಕು. ಹಣ್ಣಿನ ಮರದ ಎಲೆಗಳನ್ನೂ ಉದಾಹರಣೆಗೆ ಸೀಬೆ ಎಲೆ, ದಾಳಿಂಬೆ ಎಲೆ, ಸೀತಾಫಲದ ಎಲೆ, ಹಲಸಿನ ಎಲೆ, ಪರಿಮಳದ ಎಲೆಗಳಾದ ಮರುಗ, ಧವನ, ಪನ್ನೀರೆಲೆಗಳನ್ನೂ, ಹೂವಿನ ಗಿಡದ ಎಲೆಗಳನ್ನು ಒಂದು ತಟ್ಟೆಯಲ್ಲಿ ಜೋಡಿಸಿಟ್ಟುಕೊಳ್ಳಬೇಕು.

ದೀಪದ ಕಂಬಗಳಿಗೆ ಬತ್ತಿ ಹಾಕಿ, ಎಣ್ಣೆ ಹಾಕಿಟ್ಟುಕೊಳ್ಳಬೇಕು. ನೀಲಾಂಜನಗಳಿಗೆ ತುಪ್ಪದಲ್ಲಿ ತೋಯಿಸಿದ ಹೂಬತ್ತಿಗಳನ್ನು, ಮಂಗಳಾರತಿಗೆ ಬತ್ತಿಗಳನ್ನು/ಕರ್ಪೂರವನ್ನೂ ಜೋಡಿಸಿಟ್ಟುಕೊಂಡಿರಬೇಕು. ತಂಬಿಟ್ಟಿನ ಆರತಿಗೆ ಗೋಧಿಹಿಟ್ಟನ್ನು ಹುರಿದು, ಸಕ್ಕರೆ, ತುಪ್ಪ, ಹಾಲು ಸೇರಿಸಿ ಬಟ್ಟಲಿನಾಕಾರದ 5, 9, ಅಥವಾ 12 ತಂಬಿಟ್ಟುಗಳನ್ನು ಮಾಡಿ, ಅದರಲ್ಲಿ ತುಪ್ಪದಲ್ಲಿ ತೋಯಿಸಿದ ಹತ್ತಿ ಬತ್ತಿಗಳನ್ನಿಟ್ಟು ಅಣಿ ಮಾಡಿಕೊಳ್ಳಬೇಕು.

ಕೆಲವು ಮನೆಗಳಲ್ಲಿ ಹೂರಣದ ಆರತಿ ಮಾಡುವ ಸಂಪ್ರದಾಯವಿರುತ್ತದೆ. ಈ ಎಲ್ಲ ತಯಾರಿಗಳನ್ನು ಹಬ್ಬಕ್ಕೆ ಪೂರ್ವಭಾವಿಯಾಗಿ ಮಾಡಿಟ್ಟುಕೊಂಡರೆ, ಪೂಜಾ ವಿಧಾನಗಳು ಸುಸೂತ್ರವಾಗಿ ನಡೆದು ಹಬ್ಬದ ಸಂಭ್ರಮ ದ್ವಿಗುಣಗೊಳ್ಳುತ್ತದೆ.

ಮನೆಯ ಸದಸ್ಯರೆಲ್ಲರೂ ದಿನನಿತ್ಯದ ಏಕತಾನತೆಗಿಂತ ಭಿನ್ನವಾದ ಹಬ್ಬದ ತಯಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಒಬ್ಬರು ತೋರಣ ಕಟ್ಟಿದರೆ, ಮತ್ತೊಬ್ಬರು ಮಂಟಪದ ಅಲಂಕಾರದಲ್ಲಿ ತೊಡಗಬೇಕು. ಮೊರದ ಬಾಗಿನ ಜೋಡಿಸುವುದು, ಬತ್ತಿ ತೋಯಿಸುವುದು. ಒಬ್ಬರನ್ನೊಬ್ಬರು ತಿದ್ದುತ್ತ, ಹೇಗೆ ಮಾಡಿದರೆ ಚಂದ ಕಾಣುವುದೆಂದು ಒಬ್ಬರು ಇನ್ನೊಬ್ಬರ ದೃಷ್ಟಿಕೋನವನ್ನು ಒರೆಗೆ ಹಚ್ಚುತ್ತ ತೊಡಗುವ ಉತ್ಸಾಹದ ತಯಾರಿಯೇ ನಿಜವಾದ ಹಬ್ಬ. ಪೂಜೆ ಮಾಡುವುದೇ ಮುಖ್ಯವಲ್ಲ; ಹೇಗೆ ಮಾಡುತ್ತೇವೆ ಎನ್ನುವುದೂ ಮುಖ್ಯ.

ಒಳ್ಳೆಯ ಮನಸ್ಸಿನಿಂದ, ಮನೆಯವರೆಲ್ಲರ ಒಂದಾಗಿ ಹಬ್ಬದ ಸಡಗರದಲ್ಲಿ ಭಾಗವಹಿಸಬೇಕು. ಹೊರಗಿನ ಅಲಂಕಾರಗಳಿಗಿಂತಲೂ ಮನಸ್ಸಿನ ಭಾವನೆ ಮುಖ್ಯ. ಮನೆಮಂದಿ, ಬಂಧುಗಳು, ನೆರೆಹೊರೆಯವರು ಮತ್ತು ಸ್ನೇಹಿತರ ನಡುವೆ ಆತ್ಮೀಯತೆಯನ್ನು ಗಟ್ಟಿ ಮಾಡಿಕೊಳ್ಳಲು ಹಬ್ಬಗಳು ಕಾರಣವಾಗುತ್ತವೆ. ಮನೆಮಂದಿಯ ಮಾತು, ನಗು, ಗದ್ದಲದ ಜಾಗಟೆ, ಗಂಟೆಗಳು; ಪಾಯಸ ಹೋಳಿಗೆಯ ಮೆದ್ದ ತೇಗಿನೊಂದಿಗೆ ಮೇಳೈಸಿದರೆ ಅದೇ ಹಬ್ಬವಲ್ಲವೆ! 

ಹಬ್ಬದ ಆಚರಣೆಗೆ ಒಂದಿಷ್ಟು ಸೂತ್ರಗಳು

* ಹಬ್ಬದ ಆಚರಣೆಯಲ್ಲಿ ಆಡಂಬರಕ್ಕಿಂತಲೂ ಶ್ರದ್ಧೆ–ಸಂತಸಗಳೇ ಮುಖ್ಯವಾಗಿರಲಿ.

* ಹಬ್ಬದ ದಿನ ಬೆಳಿಗ್ಗೆ ಬೇಗ ಏಳುವುದರಿಂದ ಲವಲವಿಕೆಯೂ ಇರುತ್ತದೆ; ಕೆಲಸಗಳೂ ಬೇಗ ಆಗುತ್ತವೆ.

* ಹಬ್ಬದಲ್ಲಿ ಯಾರ್‍ಯಾರಿಗೆ ಯಾವ ಉಡುಪುಗಳನ್ನು ಕೊಡಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿ ಅವುಗಳನ್ನು ಒಂದೆಡೆ ಇರಿಸಿ.

* ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಯಾವ ಅಂಗಡಿಗಳಲ್ಲಿ ಕೊಂಡುಕೊಳ್ಳಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿ.

* ಹಬ್ಬಕ್ಕೆ ಎರಡು–ಮೂರು ದಿನಗಳ ಮೊದಲು ಮನೆಯವರೆಲ್ಲರೂ ಒಮ್ಮೆ ಸ್ವಲ್ಪ ಹೊತ್ತಾದರೂ ಒಂದೆಡೆ ಸೇರಬೇಕು; ಹಬ್ಬದ ಸಿದ್ಧತೆ–ಆಚರಣೆಗಳು ಹೇಗಿರಬೇಕು ಎಂದು ಸಮಾಲೋಚಿಸಿ ಒಂದು ತೀರ್ಮಾನಕ್ಕೆ ಬರಬೇಕು. ಎಲ್ಲರೂ ಆ ತೀರ್ಮಾನಕ್ಕೆ ಬದ್ಧರಾಗಿದ್ದುಕೊಂಡು ಹಬ್ಬ ಸಡಗರ–ಸಂಭ್ರಮದಿಂದ ಅರ್ಥವತ್ತಾಗಿ ನಡೆಯುವಂತೆ ಕ್ರಿಯಾಶೀಲರಾಗಬೇಕು.

* ತೋರಣಗಳನ್ನು ಕಟ್ಟುವುದು, ಮನೆಯ ಒಳಗೂ ಹೊರಗೂ ಸ್ವಚ್ಛ ಮಾಡುವುದು, ಹೊರಗೆ ರಂಗೋಲಿ ಹಾಕುವುದು, ದೇವರನ್ನು ಅಥವಾ ಕಳಶವನ್ನು ಕೂರಿಸಲು ಮಂಟಪವನ್ನು ಕಟ್ಟುವುದು, ಪೂಜೆಗೂ ಅಡುಗೆಗೂ ಬೇಕಾದ ಸಲಕರಣೆಗಳನ್ನು ಅಂಗಡಿಯಿಂದ ತರುವುದು – ಇಂಥ ಕೆಲಸಗಳನ್ನು ಹಬ್ಬದ ಹಿಂದಿನ ದಿನವೇ ಪೂರೈಸಿಕೊಂಡಿದ್ದರೆ ಹಬ್ಬದ ದಿನ ಗಡಿಬಿಡಿ ಇರುವುದಿಲ್ಲ.

* ತೆಂಗಿನ ಕಾಯಿ, ಕೆಲವೊಂದು ತರಕಾರಿಗಳನ್ನು ಹಬ್ಬದ ಮೊದಲೇ ತಂದಿಟ್ಟುಕೊಳ್ಳಬಹುದು; ಹಬ್ಬಕ್ಕೂ ಮೊದಲು ಅವುಗಳ ಬೆಲೆ ಕಡಿಮೆ ಇರುತ್ತವೆಯಾದ್ದರಿಂದ ಖರ್ಚು ತಗ್ಗುತ್ತದೆ.

* ಪೂಜೆಗೆ ಬೇಕಾದ ಹೂವು–ಪತ್ರೆ–ಹಣ್ಣುಗಳು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಸುತ್ತಮುತ್ತಲು ಸಿಗುವಂತಿದ್ದರೆ ಅವನ್ನೇ ಬಳಸಿ; ಹೀಗೆ ಮಾಡುವುದರಿಂದ ಕೇವಲ ಖರ್ಚು ಮಾತ್ರವೇ ಕಡಿಮೆಯಾಗದು; ಇದು ನಮ್ಮಲ್ಲಿಯೇ ಬೆಳೆದದ್ದು ಎಂಬ ಭಾವನೆಯೂ ಮುದ ನೀಡುತ್ತದೆ.

* ಹಬ್ಬದ ದಿನದ ಮೊದಲೇ ನಿಮ್ಮ ಬಂಧುಗಳನ್ನೂ ಸ್ನೇಹಿತರನ್ನೂ ಸಂಪರ್ಕಿಸಿ ಹಬ್ಬದ ದಿನದಂದು ಮನೆಗೆ ಬರುವಂತೆ ಆಹ್ವಾನ ನೀಡಿ. ಅವರು ನಮ್ಮ ಮನೆಗೆ ಬರಲಿ; ಆಮೇಲೆ ನಾವು ಅವರಲ್ಲಿಗೆ ಹೋಗೋಣ – ಎಂಬ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ನೀವೇ ಅವರಲ್ಲಿಗೆ ಹೋಗಿ ಬನ್ನಿ. ಬಾಂಧವ್ಯ ಗಟ್ಟಿಯಾಗಿ ಉಳಿಯಲು ಎರಡು ಕಡೆಯಿಂದಲೂ ಸ್ಪಂದನೆ ಮುಖ್ಯವಾಗುತ್ತದೆ.

* ಮನೆಯಲ್ಲಿ ಹಿರಿಯರಿದ್ದರೆ ಅವರಿಂದ ಸಲಹೆ–ಸೂಚನೆಗಳನ್ನು ಪಡೆದುಕೊಳ್ಳಿ; ಕಿರಿಯರಿದ್ದರೆ ಅವರನ್ನು ಕೆಲಸದಲ್ಲಿ ತೊಡಗಿಸಿ. ಇದರಿಂದ ಮನೆಯಲ್ಲಿ ಸೌಹಾರ್ದ–ಒಗ್ಗಟ್ಟುಗಳು ನೆಲೆಯಾಗುತ್ತವೆಯಲ್ಲದೆ, ಸಂತಸವೂ ಹೆಚ್ಚುತ್ತದೆ.

* ಖರ್ಚು–ವೆಚ್ಚಗಳ ಬಗ್ಗೆ ಮೊದಲೇ ಯೋಜನೆಯನ್ನು ಮಾಡಿಕೊಳ್ಳಿ. ಅನಗತ್ಯವಾಗಿ ಹಣ ಪೋಲಾಗದಂತೆ ಎಚ್ಚರವಹಿಸಿ.

* ಹಬ್ಬದ ಆಚರಣೆಯು ಮನೆಯ ವಾತಾವರಣವನ್ನು ನೆಮ್ಮದಿಯಲ್ಲೂ ಸಂತೋಷದಲ್ಲೂ ನೆಲೆಗೊಳಿಸಲು ಪೂರಕವಾಗಿರುವಂತೆ ಆಚರಿಸಬೇಕೆಂಬುದೇ ನಿಮ್ಮ ಸಂಕಲ್ಪವಾಗಲಿ. ಅಕ್ಕಪಕ್ಕದವರೊಂದಿಗೆ ಸೌಹಾರ್ದತೆಗೂ ಇದು ಮೂಲವಾಗಿರಲಿ. ಪರಿಸರಕ್ಕೂ ಸಮಾಜಕ್ಕೂ ತೊಂದರೆಯಾಗದಂತೆ ನಮ್ಮ ಆಚರಣೆಗಳು ನಡೆಯಲಿ.

* ಗಡಿಬಿಡಿ ಮಾಡಿಕೊಳ್ಳದೆ ಆರಾಮಾಗಿ ಅಡುಗೆ ತಯಾರಿಸಿ, ಪ್ರೀತಿ ತುಂಬಿದ ಅಡುಗೆಯಲ್ಲಿ ರುಚಿ ಕೂಡ ಹೆಚ್ಚಿರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT