ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದು ಬಂದ ಭಕ್ತ ಸಾಗರ

Last Updated 25 ಅಕ್ಟೋಬರ್ 2014, 8:57 IST
ಅಕ್ಷರ ಗಾತ್ರ

ಚಡಚಣ: ಹಾಲುಮತದ ಕಾಶಿ ಎಂದೇ ಖ್ಯಾತಿಯಾಗಿರುವ ಮಹಾರಾಷ್ಟ್ರ–ಕರ್ನಾಟಕದ ಗಡಿ ಅಂಚಿನಲ್ಲಿರುವ ಸಮೀಪದ ಹುಲಜಂತಿ ಗ್ರಾಮದ ಮಾಳಿಂಗರಾಯ ದೇವರ ಜಾತ್ರೆ ಗುರುವಾರ ಅದ್ಧೂರಿಯಾಗಿ ಆರಂಭಗೊಂಡಿದ್ದು, ರಾತ್ರಿ ದೇವರ ದೇವಾಲಯದ ಶಿಖರಕ್ಕೆ ಮುಂಡಾಸ್ ಸುತ್ತಿದ್ದನ್ನು ನೋಡಲು ಶುಕ್ರವಾರ ಜನಸಾಗರವೇ ಹರಿದು ಬಂದಿತು.

ಶುಕ್ರವಾರ ಮುಂಡಾಸ್ ಹಾಗೂ ಮಧ್ಯಾಹ್ನ ಜರುಗಿದ ಏಳು ದೇವರ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕ, ಮಹಾರಾಷ್ಟ್ರ, ಗೋವಾ  ಹಾಗೂ ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ಸಂಪ್ರದಾಯದಂತೆ ದೇವಾಲಯದ ಶಿಖರಕ್ಕೂ ಹಾಗೂ ಭೇಟಿ ಸಂದರ್ಭದಲ್ಲಿ ಪಲ್ಲಕ್ಕಿಗಳ ಮೇಲೆ ಭಕ್ತರು ಬಂಡಾರ, ಉತ್ತತ್ತಿ ತೂರಿ ಹರಿಕೆಗಳನ್ನು ಪೂರೈಸಿಕೊಂಡರು.

ಇಲ್ಲಿಗೆ ಬಂದ ಬಹುತೇಕ ಭಕ್ತರು ಬಂಡಾರದಲ್ಲಿ ಮಿಂದಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭೇಟಿ ಸಂದರ್ಭದಲ್ಲಿ ಭಕ್ತರು ಬಾನಲ್ಲಿ ತೂರಿದ ಬಂಡಾರದಿಂದ ಎಲ್ಲಡೆ ಪರಿಸರ ಹಳದಿಮಯವಾದಂತೆ ಕಂಡು ಬಂತು.

ದೇವಾಲಯಕ್ಕೆ ಸಾಕ್ಷಾತ್ ಪರಶಿವನೇ ಅದೃಶ್ಯ ರೂಪದಲ್ಲಿ ಬಂದು ಶಿಖರಕ್ಕೆ ಮುಂಡಾಸ್ ಸುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ. ಮುಂಡಾಸ್ ಯಾವ ಕಡೆ ವಾಲಿದೆಯೋ, ಯಾವ ಕಡೆಗೆ ಹೆಚ್ಚು ಜೋತು ಬಿದ್ದಿದೆಯೊ, ಯಾವ ಕಡೆಗೆ ಬಿಗಿಯಾಗಿ ಬಂಧಿಸಿದೆ ಎಂಬುದರ ಲೆಕ್ಕಾಚಾರದಿಂದ ಭಕ್ತರು ಮಳೆ, ಬೆಳೆ, ಸಮೃದ್ಧಿ, ಶಾಂತಿ ಹಾಗೂ ರಾಜಕೀಯ ವಿಶ್ಲೇಷಣೆ ಮಾಡುವುದು ಇಲ್ಲಿಗೆ ಬಂದ ಭಕ್ತರ ತರ್ಕಕ್ಕೆ ಬಿಟ್ಟಿದ್ದು.
ಇನ್ನು, ಜಾತ್ರೆಯಲ್ಲಿ ಮರಾಠಿ ತಮಾಷಾ, ಡೊಳ್ಳು ಕುಣಿತ, ಸರ್ಕಸ್, ನಾಟಕ ಸೇರಿದಂತೆ ಹಲವು ಬಗೆಯ ಮನರಂಜನೆಗಳು ಜಾತ್ರೆಯ ಆಕರ್ಷಣೆ ಹೆಚ್ಚಿಸಿವ.

ಹುಲಜಂತಿಯ ಮಾಳಿಂಗರಾಯ, ಶಿರಾಡೋಣದ ಬೀರಪ್ಪ ದೇವರ ದೇವಾಲಯಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿ, ಇಲ್ಲಿ ಹಾಲುಮತ ಪೀಠ ಸ್ಥಾಪಿಸಿಬೇಕು ಎಂಬುದು ಸಮಾಜದ ಪ್ರಮುಖ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT