ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಟಿಸಿಲುಗಳ ನೃತ್ಯಪ್ರೀತಿ

Last Updated 31 ಜನವರಿ 2015, 19:35 IST
ಅಕ್ಷರ ಗಾತ್ರ

‘ಭರತನಾಟ್ಯ ಒಂದು ಪರಿಪೂರ್ಣ ಕಲೆ. ನಮ್ಮ ಜೀವನವನ್ನು ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಸಮೃದ್ಧಗೊಳಿಸಬಹುದಾದ ಭರತನಾಟ್ಯ ನನ್ನ ಅಂತರಂಗವನ್ನು ಅರಳಿಸುವ ಕಲೆ...’ಹೀಗೆನ್ನುತ್ತಾ ಕುಳಿತಲ್ಲಿಯೇ ನೃತ್ಯದ ಗುಂಗಿನಲ್ಲಿ ಅಂತರ್ಮುಖಿಯಾಗುತ್ತಾರೆ ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಗಾಯತ್ರಿ ಶ್ರೀರಾಮ್‌.

ಮೂಲತಃ ಕೇರಳದವರಾದ ಗಾಯತ್ರಿ ಅವರು ಹುಟ್ಟಿ ಬೆಳೆದಿದ್ದು ಮುಂಬಯಿಯಲ್ಲಿ. ಪ್ರಸ್ತುತ ನೆಲೆಸಿರುವುದು ಸಿಂಗಪುರದಲ್ಲಿ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಸಿಂಗಪುರದ ಸರ್ಕಾರ ಲಲಿತಕಲೆಗಳಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದೆಯಂತೆ.

‘ಸಿಂಗಪುರ ಸರ್ಕಾರದ ಪ್ರೋತ್ಸಾಹದ ಕಾರಣದಿಂದಲೇ ಕಳೆದ 17 ವರ್ಷಗಳಿಂದಲೂ ಅಲ್ಲಿದ್ದುಕೊಂಡು ವಿಶ್ವವಿಖ್ಯಾತ ಭರತನಾಟ್ಯ ಕಲಾವಿದರೊಂದಿಗೆ ನೃತ್ಯ ಮಾಡುವ, ಅವರಿಂದ ಕಲಿಯುವ ಬೆಳೆಯುವ ಅವಕಾಶ ನನಗೆ ಸಿಕ್ಕಿದೆ’ ಎನ್ನುವ ಅವರು ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಕಲಾಕ್ಷೇತ್ರ ಶೈಲಿಯ ವಿದ್ಯಾರ್ಥಿನಿಯಾದ ಅವರು ‘ಮುಕ್ತಿಮಾರ್ಗ’ ಎಂಬ ಪ್ರಸ್ತುತಿ ನೀಡಿದರು. 

‘ಮುಕ್ತಿಮಾರ್ಗ’ ಭಕ್ತಿಪ್ರಧಾನವಾದ ಪ್ರಸ್ತುತಿ. ಕೃಷ್ಣನಿಗೆ ಸಂಪೂರ್ಣವಾಗಿ ಶರಣಾದ ಸುಧಾಮ, ದ್ರೌಪದಿಯನ್ನು ಕೃಷ್ಣ ರಕ್ಷಿಸಿದ ಪರಿ, ತನ್ನ ಅಂತರಂಗದ ಗೊಂದಲವನ್ನೇ ತೋಡಿ ಕೊಳ್ಳುವ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಗೀತಾಚಾರ್ಯ– ಹೀಗೆ ಭಕ್ತಿ ಮತ್ತು ಅನುಗ್ರಹದ ಹಲವು ರೂಪಕಗಳು ರಾಗಮಾಲಿಕೆಯಲ್ಲಿ ಅನಾವರಣಗೊಳ್ಳುತ್ತವೆ.
‘ಕುರುಯದುನಂದನ...’ ಎಂಬ ಜಯದೇವ ಅಷ್ಟಪದಿಯನ್ನು ಕುಳಿತೇ ನಿರ್ವಹಿಸಿದ ಗಾಯತ್ರಿ ಯಾವುದೇ ಸೀಮಿತ ಚೌಕಟ್ಟಿನಲ್ಲಿಯೂ ಪ್ರೇಕ್ಷಕರ ಗಮನವನ್ನು ಸೆಳೆದಿಡಬಲ್ಲೆ ಎಂಬುದನ್ನು ಸಾಬೀತುಪಡಿಸಿದರು. ಈ ಕೃತಿಯಲ್ಲಿ ರಾಧೆ ಮತ್ತು ಕೃಷ್ಣನ ನಡುವೆ ಒಂದು ರಾತ್ರಿ ನಡೆಯುವ ಸಂವಾದ  ಸಂಚಾರಿಯಲ್ಲಿಯೇ ಅನಾವರಣವಾಗುತ್ತದೆ. ಬಳಿಕ ಅವರ ಪ್ರಸ್ತುತಪಡಿಸಿದ ಮೀರಾ ಭಜನ್‌ ಕೂಡ ಭಕ್ತಿಯ ಸವಾಲನ್ನೇ ಕೃಷ್ಣನಿಗೆ ಒಡ್ಡುವ ಮೀರಾಳ ಭಾವದಲ್ಲಿ ನೃತ್ಯಗಾತಿಯ ಪರಿಣತಿ ಎದ್ದುಕಾಣುತ್ತಿತ್ತು. ದ್ರೌಪದಿಯು ಶರಣಾಗತಿಯಿಂದ ಕರೆದ ತಕ್ಷಣ ಓಡಿ ಬರುವ ನೀನು, ಜೀವನ ಪೂರ್ತಿ ನಿನ್ನ ಆರಾಧನೆಯಲ್ಲಿ ಮುಳುಗಿದರೂ ನನಗೆ ಏಕೆ ಒಲಿಯುವುದಿಲ್ಲ ಎಂದು ಪ್ರಶ್ನಿಸುತ್ತಾಳೆ ಮೀರಾ..

ಗಾಯತ್ರಿ ಅವರನ್ನು ಮಾತನಾಡಿಸಿದರೆ, ನೃತ್ಯ ಅವರ ಬದುಕನ್ನು ಚೆಲುವುಗೊಳಿಸಿರುವ ಮಾರ್ಗವಾಗಿರುವುದು ಸ್ಪಷ್ಟವಾಗುತ್ತದೆ. ನೃತ್ಯದ ಅವರ ಸಂಗ ಪ್ರದರ್ಶನಗಳಿಗಷ್ಟೇ ಸೀಮಿತವಾಗಿಲ್ಲ. ಸಿಂಗಪುರದಲ್ಲಿ ‘ಶ್ರುತಿಲಯ ನೃತ್ಯ ವಿದ್ಯಾಲಯ’ ಆರಂಭಿಸಿ ಅಲ್ಲಿನ ಮಕ್ಕಳಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ‘ದಿ ಏಷ್ಯನ್‌ ಫೆಸ್ಟಿವಲ್‌ ಆಫ್‌ ಕ್ಲಾಸಿಕಲ್‌ ಡಾನ್ಸ್‌’ ಎಂಬ ಉತ್ಸವ ನಡೆಸುವ ಮೂಲಕ ನೃತ್ಯ ಕಲಾಕ್ಷೇತ್ರದಲ್ಲಿನ ಹಲವು ಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸುತ್ತ ಬಂದಿದ್ದಾರೆ.

‘ಉತ್ಸವಗಳನ್ನು ಆಯೋಜಿಸುವ ಮೂಲಕ ನೃತ್ಯಕ್ಷೇತ್ರದ ಮತ್ತೊಂದು ಆಯಾಮವನ್ನು ಅರಿತುಕೊಳ್ಳುವುದು ಸಾಧ್ಯವಾಗಿದೆ. ಸಮಕಾಲೀನ ಕಲಾಕ್ಷೇತ್ರದ ದಿಗ್ಗಜರು ವಿವಿಧ ದೇಶಗಳಿಂದ ಸಿಂಗಪುರಕ್ಕೆ ಬಂದು ನರ್ತಿಸಿದ್ದಾರೆ. ಅವರ ಒಡನಾಟ, ಅವರ ನೃತ್ಯವನ್ನು ನೋಡುವುದು, ಕೆಲವೊಂದು ಪ್ರಕಾರಗಳ ಜೊತೆಗೆ ನನ್ನ ನಾಟ್ಯವನ್ನೂ ಅಳವಡಿಸಿಕೊಂಡು ಬೆಳೆಯುವುದು ಸಾಧ್ಯವಾಗಿದೆ. ಔಚಿತ್ಯವನ್ನು ಗಮನಿಸಿಕೊಂಡು ಹೊಸದನ್ನು ಭರತನಾಟ್ಯಕ್ಕೆ ಸೇರಿಸುವ ಪ್ರಯತ್ನವನ್ನೂ ಮಾಡಿದ್ದೇನೆ ಎನ್ನುವ ಈ ಕಲಾವಿದೆಗೆ ‘ಮಾರ್ಗ’ ಶೈಲಿಯೇ ಇಷ್ಟ.

ದ್ರೌಪದಿ ಅವರಿಗಿಷ್ಟವಾದ ಪಾತ್ರ. ಪಂಚಕನ್ಯಾ, ಯಾಜ್ಞಸೇನಿ– ಹೀಗೆ ಪುರಾಣಗಳಲ್ಲಿ ವಿಭಿನ್ನವಾಗಿ ಕಾಣಿಸುವ ಸ್ತ್ರೀ ಪಾತ್ರಗಳನ್ನು ಗಮನಿಸಿ ಹೊಸ ಪರಿಕಲ್ಪನೆಗಳನ್ನು ಅವರು ಪ್ರಸ್ತುತಪಡಿಸಿದ್ದಾರೆ. ಇಡೀ ರಾಮಾಯಣವನ್ನೇ ಸೀತೆಯ ದೃಷ್ಟಿಕೋನದಿಂದ ನೋಡುವ ‘ಸೀತಾ ಸ್ವಾಗತಂ’ ಹೆಚ್ಚು ಪ್ರಶಂಸೆಗೆ ಒಳಗಾದ ಅವರ ಪ್ರಸ್ತುತಿ.

ಯಾವುದೇ ಕಲಾಪ್ರಕಾರದ ಬೆಳವಣಿಗೆಗೆ ಸಾಹಿತ್ಯವೇ ಅಡಿಗಲ್ಲು ಎಂದು ಗಾಯತ್ರಿ ನಂಬುತ್ತಾರೆ. ಅವರ ಎಲ್ಲ ಕಾರ್ಯಕ್ರಮಗಳಲ್ಲಿಯೂ ಅವರ ಜೊತೆಗೇ ಇರುವ ಗುರು ಮಿನಾಲ್‌ ಪ್ರಭು ಅವರು ಕೂಡ ಈ ಮಾತನ್ನು ಒಪ್ಪುತ್ತಾರೆ. ಅಧ್ಯಯನ, ಸಂಶೋಧನೆಯಿದ್ದಾಗ ಯಾವುದೇ ಕಲಾಪ್ರಕಾರ ಅತ್ಯುತ್ತಮವಾಗಿ ಬೆಳೆಯುವುದು ಸಾಧ್ಯ ಎನ್ನುವ ಮಿನಲ್‌ ಪ್ರಭು ಮತ್ತು ಗಾಯತ್ರಿ ಇಬ್ಬರ ಓದು ವಿಸ್ತಾರವಾದುದು. ಆ ಓದು ಅವರ ಪ್ರಸ್ತುತಿಗಳಲ್ಲಿ ಎದ್ದು ಕಾಣುತ್ತದೆ.

ಗಾಯತ್ರಿ ಅವರು ಶ್ರುತಿ ಲಯ ತರಗತಿಯ ಬಗ್ಗೆ ಮಾತನಾಡುತ್ತ– ಪ್ರಸ್ತುತ ಸಂದರ್ಭದಲ್ಲಿ ನೃತ್ಯಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದುವುದು, ಕತೆ ಹೇಳುವುದನ್ನೂ ಮಾಡಬೇಕಾಗುತ್ತದೆ. ಅವರಿಗೆ ಭಾರತೀಯ ಕೃತಿಗಳನ್ನು ವಿಭಿನ್ನವಾದ ದೃಷ್ಟಿಕೋನದಲ್ಲಿ ಓದುವುದನ್ನು, ಅವುಗಳನ್ನು ಪ್ರಶ್ನಿಸಿ ಅರ್ಥ ಮಾಡಿಕೊಳ್ಳುವುದನ್ನು ಹೇಳಿಕೊಡಬೇಕಾಗಿದೆ. ನೃತ್ಯ ತರಗತಿ ಎಂದರೆ ಬರೀ ಅಡವುಗಳನ್ನು, ತಾಳ ಲಯ, ಹೆಜ್ಜೆಗಾರಿಕೆಯನ್ನು ಹೇಳಿಕೊಡುವುದಷ್ಟೇ ಪ್ರಸ್ತುತ ಸಂದರ್ಭದಲ್ಲಿ ಸಾಕಾಗದು. ಇಂದಿನ ಮಕ್ಕಳಂತೂ ತುಂಬಾ ಚುರುಕಾಗಿದ್ದಾರೆ. ಅವರ ಚುರುಕುತನದಲ್ಲಿ ಆಸಕ್ತಿಯನ್ನು ಅರಳಿಸುವ ಜವಾಬ್ದಾರಿ ಇಂದಿನ ಎಲ್ಲ ಹಿರಿಯ ಕಲಾವಿದರ ಮೇಲಿದೆ ಎನ್ನುತ್ತಾರೆ.

‘ನರ್ತಿಸುವುದಷ್ಟೇ ನನ್ನ ಜೀವನದ ಉದ್ದೇಶ. ಪ್ರತಿಯೊಂದು ಪ್ರಸ್ತುತಿಯಲ್ಲಿಯೂ ಭರತನಾಟ್ಯ ಎಂಬ ಕಲಾಪ್ರಕಾರಕ್ಕೆ ಪ್ರಾಮಾಣಿಕವಾಗುತ್ತಾ ಹೋಗುವುದು... ಆ ಮೂಲಕ ಅಂತರಂಗವನ್ನು ಪರಿಶುದ್ಧಗೊಳಿಸಿಕೊಳ್ಳುವುದೇ ಈ ಜೀವನದ ಆಸೆ’ ಎನ್ನುವ ಗಾಯತ್ರಿ ಅವರ ಎಲ್ಲ ಚಟುವಟಿಕೆಗಳ ಹಿಂದೆ ಬೆಂಬಲದ ರೂಪದಲ್ಲಿ ಅವರ ಪತಿ ರಾಜ್‌ ಶ್ರೀರಾಮ್‌ ಇದ್ದಾರೆ. ಹದಿನಾರರ ಮಗಳ ಅಮ್ಮನಾದ ಗಾಯತ್ರಿ ನೋಡಲಿಕ್ಕೆ ಇಪ್ಪತ್ತೊಂದರ ತರುಣಿಯಂತೆ ಕಾಣಿಸುತ್ತಾರೆ. ಕಲಾವಿದರಿಗೆ ವಯಸ್ಸಾಗುವುದುಂಟೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT