ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ನುಡಿಸಂಗಮದ ‘ಕನ್ನಡ ನದಿ’

Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ವಿವಿಧ ಭಾಷೆಗಳ ಪದಗಳು ಕನ್ನಡದಲ್ಲಿ ಸೇರಿಕೊಂಡಿವೆ. ಅವು ಕನ್ನಡದ ಬದುಕು ಹಾಗೂ ಭಾಷೆಯನ್ನು ಪೋಷಿಸಿವೆ. ಬಹುಭಾಷಾ ಬಾಂಧವ್ಯ ಕನ್ನಡವನ್ನು ನಿರಂತರ ಪೋಷಿಸಿದೆ ಹಾಗೂ ಕನ್ನಡ ನುಡಿಗೆ ಹೊಸ ಆಯಾಮಗಳನ್ನು ನೀಡುವಲ್ಲಿಯೂ ದಾರಿ ತೋರಿದೆ. ಕನ್ನಡ ಸಾಹಿತ್ಯ ಅನ್ಯಸಂಪರ್ಕಕ್ಕೆ ಮುಕ್ತವಾಗಿ ತೆರೆದುಕೊಂಡ ಕಾರಣದಿಂದಲೇ ವಿನೂತನ ಬೆಳವಣಿಗೆಯನ್ನು ತನ್ನದಾಗಿಸಿಕೊಂಡಿದೆ.

"ನಾವು ಪೊನ್ನಾನಿಯಲ್ಲಿ ಹುಟ್ಟಿತು. ಪೊನ್ನಾನಿ ಅಂದರೆ ಕೇರಳದಲ್ಲಿ. ನಾನು ಜಾತಿಯಲ್ಲಿ ಇಸ್ಲಾಂ. ಅಂದರೆ ನೀವೆಲ್ಲ ಇಲ್ಲಿ ಬ್ಯಾರಿಗಳು, ಬ್ಯಾರಿಗಳು ಅಂತೀರಿ. ಹಿಂದೆ ಒಂದು ಸಣ್ಣ  ಹಡಗಿನಲ್ಲಿ ಕೆಲಸಕ್ಕೆ ಸೇರಿತು. ದುಡಿದವನಿಗಲ್ಲವೆ ಅನ್ನ. ನನ್ನ ಅಪ್ಪ ಏನು ಗಂಟು ಕಟ್ಟಿಡಲಿಲ್ಲ. ಹಡಗಿನಲ್ಲಿ ಹತ್ತಿತಯ್ಯ. ಇಲ್ಲಿಗೆ ಬಂತು. ಇದೀಗ ಮೂಲ್ಕಿ ಊರಲ್ಲವೆ? ಈ ಊರಿಗೆ ಸರಿ ಪಡುವಣಕ್ಕೆ ತಲುಪುವಾಗ ಕಡಲಿನಲ್ಲಿ ನಮ್ಮ ಹಡಗು ಮಗುಚಿತು. ಮಗುಚಿದ್ದೆಂದರೆ ಹೇಗೆ ಹೇಳಿ? ನಮ್ಮ ಭಾಷೆಯಲ್ಲಿ ಹೇಳುವುದಾದರೆ ಕುಟ್ಟಿಚೋರಾಯಿ, ತೌಡುಪುಡಿಯಾಯಿ...’’– ‘ಬಪ್ಪನಾಡು ಕ್ಷೇತ್ರಮಹಾತ್ಮೆ’ ಎಂಬ ಕನ್ನಡ ಯಕ್ಷಗಾನದಲ್ಲಿ ಬಪ್ಪಬ್ಯಾರಿ ಎಂಬ ಕಲ್ಪಿತ ಪಾತ್ರ ನಿರ್ವಹಿಸುತ್ತಾ ಕಲಾವಿದರೊಬ್ಬರು ಮಲಯಾಳಂ ಮಿಶ್ರಿತ ತುಳುಭಾಷೆಯಲ್ಲಿ ಹೇಳಿದ ಮಾತುಗಳಿವು.

ಮಲಯಾಳಿ ಮುಸಲ್ಮಾನನೊಬ್ಬ ತನ್ನ ಭಾಷೆಯ ಲಯದಲ್ಲಿ ಕನ್ನಡವನ್ನು ರೂಢಿಸಿ ಮಾತನಾಡುವ ರೀತಿಯನ್ನು ಇಲ್ಲಿ ಗುರುತಿಸಬಹುದು. ಮಿಶ್ರಭಾಷಾ ಪ್ರಯೋಗಕ್ಕೆ ಇದೊಂದು ಉದಾಹರಣೆ. ಕಲೆಯಾಗಲಿ, ವ್ಯವಹಾರವೇ ಆಗಲಿ ಜಾತಿಗೊಂದು ಭಾಷೆ, ಅದು ಕನ್ನಡವೇ ಆಗಿರಲಿ. ಕನ್ನಡದೊಳಗೆ ಹಲವು ಕನ್ನಡಗಳು ಜಾತಿಸಮುದಾಯಗಳಲ್ಲಿ ಕಲಾರೂಪಗಳಲ್ಲಿ ಜೀವಂತವಾಗಿವೆ ಎಂಬುದಕ್ಕೆ ಇದೊಂದು ನಿದರ್ಶನ. ಅನ್ಯಭಾಷಾ ಸಂಪರ್ಕಕ್ಕೆ ಬಂದಾಗ ವ್ಯಕ್ತಿಭಾಷೆ ಬದಲಾಗುತ್ತದೆ, ಸಾಹಿತ್ಯವೂ ಬದಲಾಗುತ್ತದೆ ಎಂಬ ತಾತ್ವಿಕ ತಳಹದಿಯಲ್ಲಿ ಕಲಾವಿದರ ಈ ಮಾತುಗಳು ರೂಪುಗೊಂಡಿವೆ. ಬಹುಭಾಷಾ ಪ್ರದೇಶದ ಭಾವಸೌಹಾರ್ದದ ಪ್ರತೀಕವಾಗಿಯೂ ಇಂತಹ ಕಲಾಭಿವ್ಯಕ್ತಿಗಳು ಮುಖ್ಯವಾಗುತ್ತವೆ.

ಯಾವುದೇ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಅನ್ಯಭಾಷಾ ಸಂಪರ್ಕ ಅಗತ್ಯ. ಅನ್ಯ ಸಂಪರ್ಕವಿಲ್ಲದೇ ಯಾವುದೇ ಬೆಳವಣಿಗೆ ಇಲ್ಲ. ಕನ್ನಡವೂ ಇದಕ್ಕೆ ಹೊರತಲ್ಲ. ಕನ್ನಡ ಭಾಷೆಯಾಗಿ – ಸಂಸ್ಕೃತಿಯಾಗಿ ಹಲವು ಬಗೆಗಳಲ್ಲಿ ಅನ್ಯಸಂಪರ್ಕದಿಂದ ಸಂಕರಗೊಂಡು ಬೆಳೆದುಬಂದಿದೆ. ಸಂಸ್ಕೃತದ ಪಡಿನೆರಳಾಗಿ ಬೆಳೆದ ಕನ್ನಡ ಸಾಹಿತ್ಯ ಪ್ರಾಕೃತವೇ ಮೊದಲಾದ ಭಾಷೆಗಳ ಸಂಸರ್ಗದಿಂದ ಶ್ರೀಮಂತಗೊಂಡಿದೆ. ಭಾಷೆಯೊಂದು ತನ್ನ ಒಡಲು ತುಂಬಿಕೊಳ್ಳಲು ಅನ್ಯಭಾಷೆಗಳನ್ನು ಆಶ್ರಯಿಸುವುದು ಸ್ವಾಭಾವಿಕ. ಫ್ರೆಂಚ್, ಜರ್ಮನ್, ಇಂಗ್ಲಿಷ್ ಮೊದಲಾದ ಜಗತ್ತಿನ ಯಾವುದೇ ಭಾಷೆಗಳು ಇದಕ್ಕೆ ಅತೀತವಲ್ಲ. ಹೊಸತನ್ನು ಸೇರಿಸಿಕೊಂಡು ಬೆಳೆಯುವುದು ಜೀವಂತ ಭಾಷೆಯ ಲಕ್ಷಣ. ಕಾಲದ ಅಗತ್ಯಕ್ಕೆ ಅನುಗುಣವಾಗಿ ನಿರಂತರವಾದ ಅನ್ಯಭಾಷಾ ಸಂಸರ್ಗವು ಯಾವುದೇ ಭಾಷೆಗೆ ವರದಾನವಾಗಿ ಪರಿಣಮಿಸಬಲ್ಲದು.

ಬಹುಭಾಷಾ ಸಂದರ್ಭದ ಭಾರತದಲ್ಲಿಯಂತೂ ದೇಶ ಭಾಷೆಗಳಾಗಿಯೂ ವಿದೇಶಿ ಭಾಷೆಗಳಾಗಿಯೂ ಸಾಹಿತ್ಯವನ್ನು ಪೋಷಿಸಿ ಪ್ರಭಾವಿಸಿವೆ. ಇಂದಿನ ಕನ್ನಡ ಹಲವು ಭಾಷೆಗಳ ಸಂಸರ್ಗದಿಂದ ಶ್ರೀಮಂತವಾಗಿದೆ. ತನ್ನ ಭಾಷಾಕೋಶವನ್ನು ವಿಸ್ತರಿಸುತ್ತಲೇ ಸಾಗಿ ಬಂದಿದೆ. ರಾಜ್ಯದ ಗಡಿಭಾಗಗಳಲ್ಲಿ ಮರಾಠಿ, ತೆಲುಗು, ತಮಿಳು, ಮಲಯಾಳಂ, ಕೊಂಕಣಿ ಮೊದಲಾದ ಭಾಷೆಗಳು ಕನ್ನಡದೊಡನೆ ನಿರಂತರ ಸಹವಾಸ ಮಾಡಿವೆ. ಹಾಗೆಯೇ ರಾಜ್ಯದ ಒಳಗಡೆ ತುಳು, ಕೊಡವ, ಉರ್ದು, ಬ್ಯಾರಿ ಮೊದಲಾದ ಭಾಷೆಗಳೂ ಕನ್ನಡದ ಜೊತೆಗಿವೆ. ಹಿಂದಿ, ಇಂಗ್ಲಿಷ್ ಭಾಷೆಗಳು ಕನ್ನಡ ವ್ಯಾವಹಾರಿಕ ಜಗತ್ತಿನಲ್ಲಿ ಪ್ರಭಾವವನ್ನು ಮೂಡಿಸಿವೆ. ‘ಇಂದಿನ ಕನ್ನಡ’ ಎಂಬುದು ಬಹುಭಾಷಾ ಸಂಸರ್ಗದಲ್ಲಿ ರೂಪುಗೊಂಡ ಬಹುಶ್ರುತ ಸಂಸ್ಕೃತಿಯ ಪರಿಣಾಮ.

ಕನ್ನಡ ಭಾಷೆ, ಸಾಹಿತ್ಯಗಳ ಇತಿಹಾಸವನ್ನು ಗಮನಿಸಿದರೆ ಅದು ಎಲ್ಲಾ ಕಾಲದಲ್ಲಿಯೂ ಬೇರೆ ಬೇರೆ ಭಾಷೆಗಳ ಸಂಪರ್ಕ ಪಡೆದು ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ. ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಪ್ರಾಚೀನ ಕನ್ನಡ ಕವಿಗಳಿಗೆ ಮಾದರಿಯಾಗಿ ಒದಗಿತ್ತು. ಕನ್ನಡ ಕಾವ್ಯ ಜಗತ್ತಿನ ಚಂಪೂ ಮೊದಲಾದ ಸಾಹಿತ್ಯ ಪ್ರಕಾರಗಳ ರಚನೆಯ ಹಿಂದೆ ಸಂಸ್ಕೃತವಿತ್ತು. ಕನ್ನಡ ವ್ಯಾಕರಣವನ್ನು ಸಂಸ್ಕೃತದ ಮಾದರಿಯಲ್ಲಿಯೇ ಕಟ್ಟಿಕೊಡುವ ಪ್ರಯತ್ನದವರೆಗೂ ಅದರ ಪ್ರಭಾವ ನಿಚ್ಚಳವಾಗಿತ್ತು. ಜೈನ ಸಂಬಂಧಿ ಕಾವ್ಯ ಕೃತಿಗಳಿಗೆ ಪ್ರಾಕೃತ ಗ್ರಂಥಗಳ ಪ್ರೇರಣೆಗಳೂ ಸ್ಪಷ್ಟವಾಗಿದ್ದವು.

ಕನ್ನಡ ಕವಿಗಳು ಉಭಯ ಭಾಷಾ– ಕನ್ನಡ, ಸಂಸ್ಕೃತ– ಪರಿಣತರಿದ್ದರು. ಉಭಯಭಾಷಾ ತಜ್ಞತೆ ಎನ್ನುವುದು ಕವಿಗಳಿಗೆ ಹೆಮ್ಮೆಯ ವಿಚಾರವಾಗಿತ್ತು. ಪಂಪನಿಗಿದ್ದ ತೆಲುಗು ಪರಿಸರ, ತೆಲುಗು ಕವಿ ನನ್ನಯನಿಗಿದ್ದ ಕನ್ನಡ ಪರಿಸರ ಭಾಷಾ ಬೆಳವಣಿಗೆ ಹಾಗೂ ಸಂಸ್ಕೃತಿ ವಿನಿಮಯಕ್ಕೆ ಪೂರಕವಾಗಿ ಒದಗಿವೆ. ಪ್ರಾಕೃತ, ಸಂಸ್ಕೃತಗಳ ಪ್ರಭಾವದಲ್ಲಿ ರೂಪುಗೊಳ್ಳುತ್ತಿದ್ದ ಕನ್ನಡಸಾಹಿತ್ಯ ಪರಂಪರೆಗೆ ಹರಿಹರನಂತಹ ಕವಿ ಹೊಸ ಆಯಾಮವನ್ನು ನೀಡಿದ. ತಮಿಳುನಾಡಿನ ಶೈವ ನಾಯನ್ಮಾರರ ಚರಿತ್ರೆಯನ್ನು ಒಳಗೊಂಡ ಶೇಕ್ಕಿಳಾರ್ ಕವಿಯ ‘ಪೆರಿಯ ಪುರಾಣ’ವು ಹರಿಹರನ ರಗಳೆಗಳಿಗೆ ಪ್ರೇರಕವಾಯಿತು. ತೆಲುಗು ಭಾಷೆಯ ‘ಬಸವ ಪುರಾಣ’ವು ಕನ್ನಡದಲ್ಲಿ ಮರು ಹುಟ್ಟು ಪಡೆಯಿತು. ಕುಮಾರವ್ಯಾಸನ ‘ಕರ್ಣಾಟಭಾರತ ಕಥಾಮಂಜರಿ’ಯಲ್ಲಿ ಅನೇಕ ಮರಾಠಿ ಪದಗಳು ಜಾಗ ಪಡೆದಿವೆ. ಹೀಗೆ ಕನ್ನಡ ಕಾವ್ಯ ಕೃತಿಗಳು ಅನ್ಯಭಾಷಾ ಸಂಸರ್ಗದಲ್ಲಿ ಬೆಳೆದುಬಂದಿವೆ.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಹಾಗೂ ಇಪ್ಪತ್ತನೆಯ ಶತಮಾನದ ಆರಂಭದ ದಿನಗಳ ಕನ್ನಡವು ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದುಬಂತು. ಇಂಗ್ಲಿಷ್ ಶಿಕ್ಷಣದ ಪರಿಣಾಮ ಕನ್ನಡ ಸಾಹಿತ್ಯ ತನ್ನ ಆಶಯ ಮತ್ತು ಆಕೃತಿಗಳಲ್ಲಿ ಹೊಸತನವನ್ನು ರೂಪಿಸಿಕೊಂಡಿತು. ಕಾದಂಬರಿ, ಸಣ್ಣಕತೆ, ಪ್ರಬಂಧ, ವಿಮರ್ಶೆ ಎಂಬಿತ್ಯಾದಿ ಹೊಸ ಪ್ರಕಾರಗಳು ಕನ್ನಡದಲ್ಲಿ ಜನ್ಮತಳೆದವು. ಆಧುನಿಕತೆಯ ಹೊಸಗಾಳಿ ಇಂಗ್ಲಿಷ್‌ನ ಮೂಲಕ ಬಂಗಾಳಿ ಭಾಷೆಯನ್ನು ಮೊದಲು ಪ್ರವೇಶಿಸಿತು. ಅಲ್ಲಿ ಕಾದಂಬರಿಯಂತಹ ಪ್ರಕಾರಗಳು ಸ್ಪಷ್ಟ ರೂಪ ತಾಳಿದ್ದಲ್ಲದೆ ಕನ್ನಡದಲ್ಲಿ ಅನುವಾದವಾದವು. ಬಂಗಾಳಿ, ಮರಾಠಿ ಕಾದಂಬರಿಗಳ ಅನುವಾದದ ಮೂಲಕ ಕನ್ನಡ ಕಾದಂಬರಿಯು ತನ್ನ ಸ್ವರೂಪವನ್ನು ಖಚಿತಗೊಳಿಸಿಕೊಂಡಿತು.

ಷೇಕ್ಸ್‌ಪಿಯರ್‌ನ ನಾಟಕಗಳು ಕನ್ನಡದಲ್ಲಿ ಕಥೆ, ಕಾದಂಬರಿಗಳ ರೂಪ ಪಡೆದು ಆಧುನಿಕ ಗದ್ಯ ಬರವಣಿಗೆಯೊಂದನ್ನು ತೋರಿಕೊಟ್ಟವು. ಪಾಶ್ಚಾತ್ಯ ನಾಟಕಗಳು ಅನುವಾದಗಳ ಮೂಲಕ ಕನ್ನಡ ನಾಟಕ ಸಾಹಿತ್ಯ ಹಾಗೂ ರಂಗಭೂಮಿಗೆ ಹೊಸ ವ್ಯಾಖ್ಯೆಯನ್ನು ಬರೆದುವು. ಈ ದಿನಗಳಲ್ಲಿ ಸಂಸ್ಕೃತ ನಾಟಕಗಳು ಇಂಗ್ಲಿಷ್ ಮಾದರಿಯಲ್ಲಿ ಹೊಸ ರೂಪು ಪಡೆದವು. ಕನ್ನಡದಲ್ಲಿ ಭಾಷಾಶುದ್ಧಿ ಎಂದರೆ ಪಂಡಿತಶೈಲಿ ಎಂಬ ತಿಳಿವಳಿಕೆಯಿಂದ ಬಿಡುಗಡೆ ದೊರೆತುದು ಇಂಗ್ಲಿಷ್‌ನ ಪ್ರಭಾವದಿಂದಲೇ. ಪಾಂಡಿತ್ಯದಿಂದ ಪೋಷಿತವಾದ ಸಂಸ್ಕೃತ ಸಾಹಿತ್ಯ ಸರಳವಾಗಿ ಸಾಮಾನ್ಯ ಓದುಗರಿಗೂ ನಿಲುಕುವಂತಾಗಬೇಕು ಎಂಬ ಆಲೋಚನೆಗೆ ಇದು ದಾರಿಯಾಯಿತು.

ಕನ್ನಡ ಸಾಹಿತ್ಯವನ್ನು ಸಂಸ್ಕೃತದ ಹಿಡಿತದಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ರೂಪಿಸಬೇಕೆಂಬ ಹಂಬಲ ಅಂದಿನ ಬರಹಗಾರರಲ್ಲಿ ಇತ್ತು. ಇಂಗ್ಲಿಷ್ ಕವಿತೆಗಳ ಮಾದರಿಯಿಂದ ಹೊಸಗನ್ನಡ ಕವಿತೆಯು ಹೊಸ ಆಕಾರದಲ್ಲಿ ಕಾಣಿಸಿಕೊಂಡಿತು. ಬಿ.ಎಂ. ಶ್ರೀಕಂಠಯ್ಯನವರು ‘ಇಂಗ್ಲಿಷ್ ಗೀತಗಳು’ ಮೂಲಕವೇ ಕನ್ನಡ ಕಾವ್ಯದ ಹೊಸ ಪರಂಪರೆಗೆ ನಾಂದಿ ಹಾಡಿದರು. ಹೊಸಗನ್ನಡ ಕಾವ್ಯ ಪರಂಪರೆ ಮುಂದೆ ಶ್ರೀಯವರ ಮಾದರಿಯನ್ನು ಮಾರ್ಗವಾಗಿ ಅನುಸರಿಸಿ ಬೆಳೆದುಬಂತು. ಗ್ರೀಕ್ ಭಾಷೆಯ ದುರಂತ ನಾಟಕಗಳು ಕನ್ನಡದಲ್ಲಿ ಶ್ರೀಯವರಿಂದಲೇ ಪರಿಚಯವಾದುವು. ಇಟಲಿ ಮೂಲದ ಸಾನೆಟ್ ಇಂಗ್ಲಿಷ್‌ನ ಮೂಲಕ ಕನ್ನಡಕ್ಕೆ ಬಂದು ನೆಲೆಯಾಯಿತು. ಇಂಗ್ಲಿಷ್‌ನ ‘ಓಡ್‌’ಗೆ ಪರ್ಯಾಯವಾಗಿ ‘ಪ್ರಗಾಥ’ಗಳು ಕನ್ನಡದಲ್ಲಿ ಮೈದಳೆದುವು. ಛಾಸರನ ‘ಕ್ಯಾಂಟರ್‌ಬರಿ ಕಥೆ’ಗಳನ್ನು ಮಾದರಿಯಾಗಿಸಿ ‘ಕಥನ ಕವನಗಳು’ ಕನ್ನಡದಲ್ಲಿ ರೂಪುಗೊಂಡವು. ಸೊಹ್ರಾಬ್‌ರುಸ್ತುಂ ಪಾಶ್ಚಾತ್ಯರ ಮಹೋಪಮೆಯನ್ನು ಕನ್ನಡಿಗರಿಗೆ ಪರಿಚಯಿಸಿತು.

ಕನ್ನಡದ ಲಲಿತರಗಳೆಯನ್ನು ಆಧರಿಸಿ ಸರಳರಗಳೆ ರಚಿಸಿದಂತೆ ಭಾಸವಾದರೂ ಅದು ಇನ್ನಷ್ಟು ಶಕ್ತವಾದುದು ಇಂಗ್ಲಿಷ್‌ನ ಪ್ರಭಾವದಿಂದ. ಈ ಸರಳರಗಳೆಯನ್ನು ಆಧರಿಸಿ ಮಿಲ್ಟನ್‌ನ ‘ಗ್ರಾಂಡ್‌ಸ್ಟೈಲ್‌’ಗೆ ಸಂವಾದಿಯಾಗಿ ಕನ್ನಡದಲ್ಲಿ ‘ಮಹಾಛಂದಸ್ಸು’ ರೂಪುಗೊಂಡಿತು. ಆಂಗ್ಲ ರೊಮ್ಯಾಂಟಿಕ್ ಕಾವ್ಯದ ಪ್ರಭಾವದಿಂದಲೇ ಕನ್ನಡ ನವೋದಯ ಕಾವ್ಯ ಕಾಣಿಸಿಕೊಂಡಿತು. ನವೋದಯ ಕವಿಗಳನೇಕರು ಇಂಗ್ಲಿಷ್ ಕಾವ್ಯದ ಮಾದರಿಯಲ್ಲಿಯೇ ಕನ್ನಡದಲ್ಲಿ ರಚನೆಗಳನ್ನು ಮಾಡಿದರು. ಕುವೆಂಪು ಅವರು ತಮ್ಮ ಕಾವ್ಯಪ್ರಜ್ಞೆ ಇಂಗ್ಲಿಷ್‌ನ ಮೂಲಕ ಪಾಶ್ಚಾತ್ಯ ಸಾಹಿತ್ಯ ಕ್ಷೇತ್ರದಲ್ಲಿ ವಿಕಾಸಗೊಂಡಿರುವುದನ್ನು ನೆನಪಿಸಿಕೊಂಡಿದ್ದಾರೆ. ಕನ್ನಡ ನವ್ಯಕಾವ್ಯವಂತೂ ಪೂರ್ಣ ಪಾಶ್ಚಾತ್ಯ ಪ್ರೇರಿತ. ನವ್ಯಕವಿಗಳನೇಕರು ಇಂಗ್ಲಿಷ್ ಪ್ರಾಧ್ಯಾಪಕರೇ ಆಗಿದ್ದು ಪಾಶ್ಚಾತ್ಯ ಕೃತಿಗಳ ಓದಿನ ಮೂಲಕ ಸ್ಫೂರ್ತಿ ಪಡೆದವರು. ಕಾಫ್ಕಾ, ಕಮೂ ಮೊದಲಾದವರ ಚಿಂತನೆಗಳೂ ಈ ಅವಧಿಯಲ್ಲಿ ಕನ್ನಡ ಬೌದ್ಧಿಕವಲಯವನ್ನು ಪ್ರಭಾವಿಸಿವೆ.

ಮಹಾತ್ಮಗಾಂಧಿಯವರು ರಷ್ಯನ್ ಬರಹಗಾರ ಟಾಲ್‌ಸ್ಟಾಯ್‌ ಪ್ರಭಾವಕ್ಕೆ ಒಳಗಾಗಿದ್ದರು. ಕುವೆಂಪು ಅವರ ಕಾದಂಬರಿ ರಚನೆಯ ಹಿಂದೆ ಟಾಲ್‌ಸ್ಟಾಯ್, ಥಾಮಸ್ ಹಾರ್ಡಿಯರ ಪ್ರೇರಣೆ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಷ್ಯನ್ ಬರಹಗಾರರ ಮಾನವತಾವಾದ, ಸ್ವಾತಂತ್ರ್ಯಪೇಮ ಕನ್ನಡ ಚಿಂತನೆಯನ್ನು ಪ್ರೇರಿಸಿವೆ. ಮಾರ್ಕ್ಸಿಂ ಗಾರ್ಕಿಯಂತಹ ಲೇಖಕರು ಕನ್ನಡ ಪ್ರಗತಿಶೀಲ ಚಳವಳಿಗೆ ದಾರಿಮಾಡಿಕೊಟ್ಟವರಲ್ಲಿ ಪ್ರಮುಖರು. ರಷ್ಯನ್ ದೇಶದ ರಾಜಕೀಯ, ಕ್ರಾಂತಿಕಾರಿ ಮನೋಭಾವ, ಕಮ್ಯುನಿಸಂ ತತ್ವ ಸಿದ್ಧಾಂತಗಳು ಕನ್ನಡ ಲೇಖಕರನ್ನು ಆಕರ್ಷಿಸಿವೆ. ಕನ್ನಡದ ಶಾಯಿರಿ, ಗಝಲ್ ಮೊದಲಾದ ಪ್ರಕಾರಗಳು ಪರ್ಶಿಯನ್ ಹಾಗೂ ಉರ್ದು ಕಾವ್ಯಗಳಿಂದ ಸ್ಫೂರ್ತಿ ಪಡೆದಿವೆ. ಕನ್ನಡದ ಹನಿಗವನಗಳು ಜಪಾನಿನ ಹಾಯ್ಕುಗಳನ್ನು, ಝೆನ್ ಕಾವ್ಯಗಳ ಮಾದರಿಗಳನ್ನು ಹೋಲುತ್ತವೆ. ‘ಬುದ್ಧನ ಜಾತಕ ಕಥೆಗಳು’, ರಮ್ಯ, ಸಾಹಸ, ಶೃಂಗಾರಗಳಿಂದ ಕೂಡಿದ ‘ಅರೇಬಿಯನ್ ನೈಟ್ಸ್ ಕಥೆಗಳು’ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದ ಮುದ್ರೆಯೊತ್ತಿವೆ. ಕನ್ನಡದ ‘ಕಾರ್ಡು ಕಥೆಗಳು’ ನ್ಯಾನೋ ಹಾಗೂ ಝೆನ್ ಕಥೆಗಳ ಮಾದರಿಗಳನ್ನು ನೆನಪಿಗೆ ತರುತ್ತವೆ.

ಆಫ್ರಿಕನ್ ಕಪ್ಪು ಸಾಹಿತ್ಯ ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ಬರಹಗಾರರ ಮೇಲೆ ಪ್ರಭಾವ ಬೀರಿವೆ. ಅಮೆರಿಕನ್, ಇಟಾಲಿಯನ್, ಜರ್ಮನ್, ಫ್ರೆಂಚ್ ಭಾಷೆಯ ವಿಚಾರಧಾರೆಗಳು ಕನ್ನಡದಲ್ಲಿ ಸಂವಾದಗಳನ್ನು ಸೃಷ್ಟಿಸಿವೆ. ಬೋದಿಲೇರ, ನೆರೂಡರು ಕನ್ನಡ ಚಿಂತನೆಯ ಭಾಗವಾಗಿದ್ದಾರೆ. ಲೋಹಿಯಾ, ಅಂಬೇಡ್ಕರ್, ತಮಿಳಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಕೇರಳದ ನಾರಾಯಣ ಗುರು ಮೊದಲಾದವರ ಚಿಂತನೆಗಳು ಕನ್ನಡ ಸಾಮಾಜಿಕ ಚಿಂತಕರ ಮೇಲೆ ಪ್ರಭಾವ ಬೀರಿವೆ. ಜಡವ್ಯವಸ್ಥೆಯನ್ನು ಕಿತ್ತೊಗೆದು ಹೊಸ ಸಮಾಜದ ರಚನೆಗಾಗಿ ಪರಿತಪಿಸುವ ತೆಲುಗು ದಿಗಂಬರ ಕವಿಗಳು ಕನ್ನಡದ ಸಾಂಸ್ಕೃತಿಕ ವಲಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ದಲಿತ, ಬಂಡಾಯ ಚಳವಳಿಯ ಸ್ಫೂರ್ತಿಯ ಸೆಲೆಗಳಾಗಿ ಕನ್ನಡ ಬರಹಗಾರರ ಗಮನ ಸೆಳೆದಿದ್ದಾರೆ. ಜನಪ್ರಿಯ ತೆಲುಗು ಕಾದಂಬರಿಗಳು ಕನ್ನಡದ ಸಾಮಾನ್ಯ ಓದುಗರನ್ನು ಹಿಂದಿಲ್ಲದಂತೆ ಆಕರ್ಷಿಸಿವೆ.

ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಗಳ ರೂಪದಲ್ಲಿಯೂ ಅಲ್ಲದೆ ಪುಸ್ತಕ ರೂಪದಲ್ಲಿಯೂ ಬಂದ ಕಾದಂಬರಿಗಳು ನಿರ್ದಿಷ್ಟ ಓದುಗ ವರ್ಗವನ್ನು ಅದರಲ್ಲಿಯೂ ಮುಖ್ಯವಾಗಿ ಗೃಹಿಣಿಯರನ್ನು, ವಿದ್ಯಾರ್ಥಿಗಳನ್ನು ಓದುವ ಹವ್ಯಾಸಕ್ಕೆ ಒಗ್ಗುವಂತೆ ಮಾಡಿವೆ. ಬಂಗಾಳಿ ಭಾಷೆಯ ಸಂಪರ್ಕದಿಂದ ಕನ್ನಡ ಕೃತಿಗಳಲ್ಲಿ ದೇಶಪ್ರೇಮದ ಪ್ರಚೋದನೆ, ಸ್ತ್ರೀಶಿಕ್ಷಣದ ಬಗೆಗೆ ಪ್ರೋತ್ಸಾಹ, ಉದಾತ್ತ ನೈತಿಕತೆ ಮೊದಲಾದುವು ಕಾಣಿಸಿಕೊಂಡುವು. ಕುವೆಂಪು, ಬೇಂದ್ರೆ, ಮಧುರಚೆನ್ನ  ಮೊದಲಾದ ಕವಿಗಳಿಗೆ ಟ್ಯಾಗೋರರು ಸ್ಫೂರ್ತಿ ನೀಡಿದ್ದಲ್ಲದೇ ನವೋದಯದ ಸತ್ವವನ್ನು ಕನ್ನಡದಲ್ಲಿ ಕಟ್ಟಿಕೊಡಲು ಪ್ರೇರಣೆ ಒದಗಿಸಿದ್ದಾರೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ ಮೊದಲಾದ ಮಹನೀಯರ ವಿಚಾರಧಾರೆಗಳನ್ನು ಕನ್ನಡ ಮನಸ್ಸುಗಳು ಸದಾ ಪಠಿಸುತ್ತಲೇ ಬಂದಿವೆ. ಅರವಿಂದರ ಪೂರ್ಣತತ್ವ, ಸಮನ್ವಯದೃಷ್ಟಿ, ಸಾಮಾನ್ಯರಲ್ಲಿ ಅಸಮಾನ್ಯರ ದರ್ಶನಗಳು ಕನ್ನಡ ಕವಿಗಳಿಗೆ ಪ್ರೇರಣೆಯಾಗಿವೆ.

ಕನ್ನಡ ಎಡಪಂಥೀಯ ಚಿಂತನೆಗಳನ್ನು ಬಹುವಾಗಿ ಪ್ರಚೋದಿಸಿದವರಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಸಹ ಒಬ್ಬರು. ದಲಿತ, ಬಂಡಾಯ ಚಳವಳಿಯ ಹಿಂದೆ ಚಟ್ಟೋಪಾಧ್ಯಾಯರ ಮಾರ್ಕ್ಸ್‌ವಾದೀ ಚಿಂತನೆಯ ಪ್ರಭಾವವನ್ನು ಅಲ್ಲಗಳೆಯಲಾಗದು. ಕನ್ನಡ ಸ್ತ್ರೀವಾದಿ ಬರಹಗಾರರಿಗೆ ಮಹಾಶ್ವೇತಾದೇವಿಯವರ ಬರವಣಿಗೆಗಳು ಸ್ಫೂರ್ತಿಯನ್ನು ಒದಗಿಸಿದುವು. ಪಾರ್ಥ ಚಟರ್ಜಿಯಂತಹ ಬರಹಗಾರರು ಕನ್ನಡದ ಸ್ತ್ರೀವಾದವನ್ನು ಹೊಸಜಾಡಿನಲ್ಲಿ ಮುನ್ನಡೆಯುವಂತೆ ಮಾಡಿದರು. ಕನ್ನಡ ಬರಹಗಾರರಿಗೆ ಭಾವಪುಷ್ಟಿಯನ್ನು ನೀಡುವಲ್ಲಿ ಬಂಗಾಳಿ ಭಾಷೆಯ ಕೃತಿಗಳು ಹಲವು ವಿಧದಲ್ಲಿ ನೆರವಾದವು. ಮರಾಠಿ ಭಾಷೆಯ ದಲಿತ ಆತ್ಮಕತೆಗಳು ಕನ್ನಡದಲ್ಲಿ ಹೊಸ ಅಲೆಯನ್ನು ಎಬ್ಬಿಸಿದುವು. ದಲಿತಲೋಕದ ದಾರುಣತೆಯನ್ನು ತೆರೆದಿಡುವ ಮೂಲಕ ಹೊಸ ವಾಸ್ತವಲೋಕವನ್ನು ಕನ್ನಡದಲ್ಲಿ ಅನಾವರಣ ಮಾಡಿದುವು. ಇವುಗಳ ಸಂಪರ್ಕದಿಂದ ಕನ್ನಡ ಆತ್ಮಕತೆ ಪ್ರಕಾರವು ವಿನೂತನ ಶಕ್ತಿಯನ್ನು ಪಡೆದುಕೊಂಡಿತು.

ಮಲಯಾಳಂ ಭಾಷೆಯ ಸಂಸರ್ಗದಿಂದ ಪಾರ್ತಿಸುಬ್ಬ ಕವಿಯು ಯಕ್ಷಗಾನ ಪ್ರಸಂಗಗಳನ್ನು ರಚನೆ ಮಾಡಿದ. ಮುಂದೆ ಸಾವಿರಾರು ಸಂಖ್ಯೆಯ ಕನ್ನಡ ಯಕ್ಷಗಾನ ಪ್ರಸಂಗಗಳ ರಚನೆಗೆ ಇದು ಕಾರಣವಾಯಿತು. ವೈಕಂ ಮುಹಮ್ಮದ್ ಬಷೀರರ ಬರವಣಿಗೆಯಿಂದ ಪ್ರೇರಣೆ ಪಡೆದ ಬರಹಗಾರರು ಮುಸಲ್ಮಾನ ಸಾಂಸ್ಕೃತಿಕಲೋಕವನ್ನು ಕನ್ನಡದಲ್ಲಿ ತೆರೆದಿಟ್ಟರು. ಕನ್ನಡದಲ್ಲಿ ಅಪರಿಚಿತವಾಗಿದ್ದ ಮುಸ್ಲಿಂ ಸಂವೇದನೆ  ಕಾಣಿಸಿಕೊಳ್ಳಲು ಇದರಿಂದ ಸಾಧ್ಯವಾಯಿತು. ಹೀಗೆ ಕನ್ನಡ ಸಾಹಿತ್ಯ ಅಪರಿಚಿತಲೋಕವನ್ನು ಹಾಗೂ ಜ್ಞಾನವಲಯವನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳುವಲ್ಲಿ ಅನ್ಯಭಾಷಾ ಬಾಂಧವ್ಯ ನೆರವಾಯಿತು. ಪರಿಣಾಮವಾಗಿ ಕನ್ನಡದಲ್ಲಿ ಹೊಸ ಸಾಂಸ್ಕೃತಿಕ ಪರಿಭಾಷೆಗಳು  ಅನನ್ಯವಾಗಿ ರೂಪುಗೊಂಡುವು. ಪ್ರಾದೇಶಿಕ ಭಾಷಾಕೋಶಗಳು ವಿಸ್ತರಿಸಿದುವು.

ಅನ್ಯ ಭಾಷೆಗಳ ಸಂಪರ್ಕ ಉಳಿಸಿಕೊಂಡು ಅನನ್ಯವಾಗಿ ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆ ಇದು. ಮೌಖಿಕ ನೆಲೆಯ ಬಹುಭಾಷಿಕ ಸಂದರ್ಭ ಇದಕ್ಕಿಂತ ಭಿನ್ನವಾಗಿದೆ. ಅದು ಭಾಷೆಗಳ ಬಹುತ್ವದ ನಡುವೆಯೂ ಏಕಮುಖವಾಗುವ ಹಂಬಲದಲ್ಲಿದೆ. ಕನ್ನಡ ನಾಡಿನಲ್ಲಿ ದೊರೆಯುವ ವಿವಿಧ ಭಾಷೆಯ ಶಾಸನಗಳು ನಾಡಿನ ಬಹುತ್ವದ ಕುರುಹುಗಳು. ಕನ್ನಡ ಜನಪದವಂತೂ ಬಹುಭಾಷಿಕ ಪರಿಸರವನ್ನು ಅತ್ಯಂತ ಶ್ರೀಮಂತವಾಗಿಯೇ ಕಟ್ಟಿಕೊಟ್ಟಿದೆ. ಕನ್ನಡ ನಾಡಿನಲ್ಲಿ ತೆಲುಗು, ಕನ್ನಡ ಬುರ್ರಕತೆಗಳನ್ನು ಹಾಡುವ ಕಲಾವಿದರಿದ್ದಾರೆ. ‘ಎನ್ನವೀಟ್ಟುಕ್ಕು ವಾಂಗೋ ಜೋಗಿ’ ಎಂಬ ಜನಪದ ಕಾವ್ಯದ ಸಾಲುಗಳು ಹೀಗಿವೆ.

ರಾವಮ್ಮ ಮೋಹನಾಂಗಿ – ಜೋಗೀನೀ
ಭಾವಮುಲು ಚೂಡುರಾವೆ
ರಾಜೀವಲೋಚನುಡೊ ರತಿ ವಲ್ಲಭುಡೊ ಇತಡು
ಸೋಜಿಗಮು ಚೂಡುರಾವೆ – ಅಮ್ಮಮ್ಮ
ಸೋಜಿಗಮು ಚೂಡುರಾವೆ
ಸುಲ್ತಾನ್ ಬೀ ಜಲ್ದಿ ಆಕೋ – ಜೋಗೀಕೇ
ಹೈಸೊ ತಮಾಷ ದೇಖೋ


ಹೀಗೆ ಭಾಷೆಗಳು ಸಂಗಮಿಸಿ ಜನಪದ ಅಭಿವ್ಯಕ್ತಿ ಸಾಗುತ್ತದೆ. ಭಾಷಾ ಮಿಶ್ರಣವನ್ನು ಯಥೇಚ್ಛವಾಗಿ ಮಾಡುವ ಟಿ.ಪಿ. ಕೈಲಾಸಂ ಕೂಡ ಇಲ್ಲಿ ಸ್ಮರಣ ಯೋಗ್ಯರು.  ಆಯಾ ಭಾಷೆಗಳ ಪರಿಸರದಲ್ಲಿ ಬದುಕುವ ಜನರ ನುಡಿಗಳಲ್ಲಿ ಅಪ್ರಜ್ಞಾಪೂರ್ವಕವಾಗಿಯೇ ಇತರೆ ಭಾಷೆಗಳ ಪದಗಳು ನುಸುಳುತ್ತವೆ. ಅವು ಅನ್ಯಭಾಷೆ ಪದವೆಂಬ ಸಂದೇಹಕ್ಕೂ ಎಡೆಯಿಲ್ಲದಂತೆ  ಕನ್ನಡಿಗರ ಬದುಕಿನ ಭಾಗವೇ ಆಗಿವೆ. ಬಸ್ಸು, ಕಾರು, ಆಸ್ಪತ್ರೆ, ರೈಲು, ದೀಡ್‌ರೂಪಾಯಿ, ತರವಾಡು, ಪೊಂಗಲ್ ಮೊದಲಾದ ಎಷ್ಟೋ ಪದಗಳನ್ನು ಕನ್ನಡದಿಂದ ಬೇರೆಯಾಗಿ ಕಾಣಲು ಸಾಧ್ಯವಾಗದು. ಹಾಗೆಯೇ ಆಯಾ ಭಾಷಿಕ ಪರಿಸರದಲ್ಲಿ ಆಯಾ ಭಾಷೆಯ ಎಷ್ಟೋ ಪದಗಳು ಕನ್ನಡದಲ್ಲಿ ಸೇರಿಕೊಂಡಿವೆ. ಅವು ಕನ್ನಡದ ಬದುಕು ಹಾಗೂ ಭಾಷೆಯನ್ನು ಪೋಷಿಸಿವೆ. ಕನ್ನಡಿಗರ ಮನೆಮಾತಿನಲ್ಲಿ ಸೇರಿಕೊಂಡಿವೆ. ಸಂಸ್ಕೃತದ ಸಂಬಂಧವನ್ನು ಕಳಚಿಕೊಂಡು ಕನ್ನಡದ ಅಸ್ತಿತ್ವವನ್ನು ಸಾರುವ ಪ್ರಯತ್ನಗಳು ಭಾಷಾತಜ್ಞರಿಂದ ನಡೆದಿದೆ. ಈ ಎಲ್ಲದರಿಂದ ಭಾಷೆಯ ಅಭಿವ್ಯಕ್ತಿ ಸಾಧ್ಯತೆಗಳು ಹೆಚ್ಚಿವೆ, ಸಂವಹನ ಸುಲಭವಾಗಿದೆ.

ಕನ್ನಡವನ್ನು ‘ತಿರುಳುಗನ್ನಡ’, ‘ಅಚ್ಚಗನ್ನಡ’, ‘ಶುದ್ಧಗನ್ನಡ’ ಎಂಬಿತ್ಯಾದಿಗಳ ಮೂಲಕ ಅನನ್ಯವಾಗುಳಿಸುವ ಪ್ರಯತ್ನಗಳು ಎಲ್ಲಾ ಕಾಲದಲ್ಲೂ ಆಗಿವೆ. ಹಾಗಿದ್ದೂ ಅವುಗಳನ್ನು ಮೀರಿಯೂ ಕನ್ನಡ ಬೆಳೆದಿದೆ. ಶುದ್ಧ–ಅಶುದ್ಧಗಳ ಮಡಿವಂತಿಕೆಯನ್ನು ಬದಿಗೊತ್ತಿ ಭಾಷೆ ವ್ಯವಹಾರದ ಜಗತ್ತಿನಲ್ಲಿ ತನ್ನ ವ್ಯಾಪ್ತಿಗೆ ಬಂದ ಎಲ್ಲ ತಿಳಿವಳಿಕೆಗಳನ್ನು, ಸೊಗಡುಗಳನ್ನು ಸೇರಿಸಿಕೊಂಡೇ ಬೆಳೆದಿದೆ. ಬೆಳೆಯುವ ಭಾಷೆಗೆ ಮಡಿವಂತಿಕೆಯ ಹಂಗಿಲ್ಲ. ಶುದ್ಧ ಅಶುದ್ಧಗಳ ಪರಿವೇ ಇರುವುದಿಲ್ಲ. ನದಿಯೊಂದು ತನಗೆ ಎದುರಾದ ಬೆಟ್ಟಗುಡ್ಡಗಳನ್ನು ಕೊರೆದು ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುವಂತೆ ಭಾಷೆಯು ಅನ್ಯಭಾಷಾ ಸಂಪರ್ಕದಲ್ಲಿ ಪ್ರವಹಿಸುತ್ತಿರುತ್ತದೆ.

ಬಹುಭಾಷಾ ಬಾಂಧವ್ಯ ಕನ್ನಡವನ್ನು ನಿರಂತರ ಪೋಷಿಸಿದೆ. ಹೊಸ ಹೊಸ ಆಯಾಮವನ್ನು ನೀಡುವಲ್ಲಿಯೂ ದಾರಿ ತೋರಿದೆ. ಕನ್ನಡ ಸಾಹಿತ್ಯ ಅನ್ಯಸಂಪರ್ಕಕ್ಕೆ ಮುಕ್ತವಾಗಿ ತೆರೆದುಕೊಂಡುದರ ಪರಿಣಾಮದಿಂದಲೇ ವಿನೂತನ ಬೆಳವಣಿಗೆಯನ್ನು ಸಾಧ್ಯವಾಗಿಸಿಕೊಂಡಿದೆ. ಯಾವುದೇ ಭಾಷೆಯಿರಲಿ, ಯಾವುದೇ ಜ್ಞಾನವಿರಲಿ ಅದು ಯಾವುದೇ ದೇಶದ, ಭಾಷೆಯ ಸೊತ್ತಾಗಿ ಉಳಿಯಬಾರದು. ಅದು ಹಲವು ಭಾಷಿಕರ, ದೇಶದವರ ಜ್ಞಾನದಾಹವನ್ನು ಇಂಗಿಸುವಲ್ಲಿ ನೆರವಾಗಬೇಕು. ಈ ನೆಲೆಯಲ್ಲಿ ಕನ್ನಡ ಅನ್ಯಭಾಷೆಯಿಂದ ಸ್ವೀಕರಿಸಲು ಹಿಂಜರಿಯಲಿಲ್ಲ. ತನ್ನ ನೆಲದ ಸಂಸ್ಕೃತಿಯೊಡನೆ ಬಹುಭಾಷಿಕ ಅಸ್ಮಿತೆಗೂ ಜಾಗಮಾಡಿಕೊಟ್ಟಿದೆ. ಇದು ಸಾಮಾಜಿಕ ಸಹಬಾಳ್ವೆಯನ್ನು ಆಗು ಮಾಡಿದೆ. ಕನ್ನಡದ ಬಹುತ್ವವನ್ನು ಕಟ್ಟಿಕೊಡುವಲ್ಲಿ ನೆರವಾಗಿದೆ.

ಅನ್ಯಭಾಷೆಯನ್ನು ಬಾಂಧವ್ಯದ ನೆಲೆಯಲ್ಲಿ ಕಾಣುವ ಕನ್ನಡದ ಈ ಸ್ವಭಾವ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಅನ್ಯಭಾಷಿಕರು ಕನ್ನಡ ಸಮಾಜದತ್ತ ಹಿತನೋಟವನ್ನು ಬೀರಲು ಕಾರಣವಾಗಿದೆ. ಇದು ಅಸ್ತಿತ್ವಕ್ಕೆ ಮಾರಕವಾಗಬಾರದು ಎಂಬ ಪ್ರಜ್ಞೆ ಕನ್ನಡದಲ್ಲಿ ಇನ್ನಷ್ಟು ಖಚಿತವಾಗಬೇಕಾಗಿದೆ. ಅನ್ಯಭಾಷಾ ಮೋಹವೇ ಸ್ವಭಾಷೆಗೆ ಮುಳುವಾಗುವ ಅಪಾಯವನ್ನು ಎಚ್ಚರಿಕೆಯಿಂದ ಮನನ ಮಾಡಬೇಕು. ಶಿಕ್ಷಣದಲ್ಲಿನ ಇಂಗ್ಲಿಷ್ ಮಾಧ್ಯಮವು ಕನ್ನಡಕ್ಕೆ ಮುಳುವಾಗುವ ಆತಂಕವನ್ನು ನಿವಾರಿಸುವ ಇಚ್ಛಾಶಕ್ತಿ ಕನ್ನಡದಲ್ಲಿ ರೂಪುಗೊಳ್ಳಬೇಕಾಗಿದೆ. ಕನ್ನಡದ ಸತ್ವ ಸದೃಢಗೊಳ್ಳುವಂತೆ ಅನ್ಯಭಾಷಾ ಸಂಸರ್ಗ ಅಪೇಕ್ಷಣೀಯ. ಇದಕ್ಕಾಗಿ ಕನ್ನಡದ ಮನಸ್ಸುಗಳು ಜಾಗೃತಗೊಳ್ಳಬೇಕಾಗಿದೆ.

ಅನ್ಯವನ್ನು ಲಯವಾಗಿಸುವ ಶಕ್ತಿಗಿಂತ ಅನ್ಯವನ್ನು ಪ್ರತಿಫಲಿಸುವುದೇ ಕನ್ನಡದ ಶಕ್ತಿಯಾಗಬೇಕು. ಅದುವೇ ಕನ್ನಡದ ನಿತ್ಯ ಚೈತನ್ಯವಾಗಬೇಕು. ಆದರೆ ಭಾಷೆಗಳು ರಾಜಕೀಯ ಕೈಗೊಂಬೆಗಳಾಗುತ್ತಿವೆ. ಅನ್ಯ ಭಾಷೆಗಳನ್ನು ಕಲಿತು ಎ.ಆರ್. ಕೃಷ್ಣಶಾಸ್ತ್ರಿ, ಅಹೋಬಲ ಶಂಕರ, ಶಾ. ಬಾಲುರಾವ್, ಬಿ.ಕೆ. ತಿಮ್ಮಪ್ಪರಂತಹ ಅನೇಕ ಹಿರಿಯರು ಆಯಾ ಭಾಷೆಗಳಿಂದ ನೇರ ಅನುವಾದಗಳನ್ನು ಮಾಡಿ ಸಂಸ್ಕೃತಿಯ ಸಂರಚನೆಗೆ ನೆರವಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಇಂದಿನ ತಲೆಮಾರು ಸ್ಥಳೀಯ ಭಾಷೆಯಲ್ಲಿ ಅನಕ್ಷರಸ್ಥರೇ ಆಗುತ್ತಿರುವುದು ಭಾಷಿಕ ದುರಂತ. 

ಹಿಂದೆ ಬಹುಭಾಷಾ ಕಲಿಕೆ ಎಂಬುದು ಮನಸ್ಸುಗಳನ್ನು ಬೆಸೆಯುವ ಕೊಂಡಿಯಾಗಿತ್ತು. ಇಂದು ವ್ಯಾವಹಾರಿಕ ಬದುಕಿನಲ್ಲಿ ಏಕಭಾಷಾ ಕಲಿಕೆ ಎಂಬುದೇ ಮುಖ್ಯವೆನಿಸಿವೆ. ಅದು ಭಾಷೆಯ ಬಹುತ್ವಗಳ ಕತ್ತು ಹಿಸುಕುತ್ತಿದೆ. ಇಂಗ್ಲಿಷ್‌ ಕಲಿತರೆ ಇತರೆ ಯಾವುದೇ ಭಾಷೆಗಳ ಹಂಗಿಲ್ಲ ಎಂಬ ಧೋರಣೆ ಇಂದು ಹೆಚ್ಚಾಗುತ್ತಿದೆ. ಜಾಗತೀಕರಣದ ಈ ದಿನಗಳಲ್ಲಿ ಇಂಗ್ಲಿಷ್ ಉದ್ಯೋಗ ಸೃಷ್ಟಿಸುವ ಭಾಷೆ, ಅನ್ನ ನೀಡುವ ಭಾಷೆ ಎಂಬೀ ತಿಳಿವಳಿಕೆಯ ಮುಂದೆ ಕನ್ನಡದಂತಹ ದೇಶೀಯ ಭಾಷೆಗಳು ಜೀವ ಹಿಡಿದುಕೊಳ್ಳುವ ಬಗೆ ಹೇಗೆ? ಎಂಬುದೇ ನಮ್ಮ ಮುಂದಿರುವ ಬಹುದೊಡ್ಡ ಸವಾಲು.

***
ಬಾಪು ಮಾದರಿ

ನಮ್ಮ ಭರತವರ್ಷದ ಜನಜೀವನದಲ್ಲಿ ಬೇರೆ ಬೇರೆ ಭಾಷೆಗಳ ಸ್ಥಾನ ಹೇಗೆ ಇರಬೇಕು ಎಂಬುದನ್ನು ಅನೇಕ ವರ್ಷಗಳ ಹಿಂದೆಯೇ ನಮ್ಮ ಸ್ವಾತಂತ್ರ್ಯಶಿಲ್ಪಿ ಪೂಜ್ಯ ಮಹಾತ್ಮಾ ಗಾಂಧೀಜಿಯೆ ಉಳಿದವರಿಗೆ ಸಾಧ್ಯವಾಗದಿರಬಹುದಾದ ನಿಷ್ಪಕ್ಷಪಾತ ದೃಷ್ಟಿಯಿಂದಲೂ ವಿವಿಧ ಭಾಷಾ ಪ್ರದೇಶಗಳ ಮತ್ತು ಪೂರ್ಣರಾಷ್ಟ್ರದ ಸರ್ವಹಿತ ದೃಷ್ಟಿಯಿಂದಲೂ ಸ್ಪಷ್ಟವಾಗಿ ಸಾರಿದ್ದಾರೆ. ಅವರು ಇಡಿಯ ರಾಷ್ಟ್ರದ ವ್ಯವಹಾರಕ್ಕೆ ಹಿಂದಿಯನ್ನೂ ಪ್ರದೇಶಗಳ ವ್ಯಾವಹಾರಿಕ ಸಾಹಿತ್ಯಿಕ ವೈಜ್ಞಾನಿಕ ಆಧ್ಯಾತ್ಮಿಕಾದಿ ಸಕಲಕ್ಕೂ ಆಯಾ ದೇಶಭಾಷೆಗಳನ್ನೂ, ಅವಶ್ಯಕವಾಗಿ ಕೆಲವರಿಗೆ ಮಾತ್ರ ಬೇಕಾಗಿರುವ ರಾಯಭಾರ ಮೊದಲಾದ ಅಂತರರಾಷ್ಟ್ರೀಯ ವ್ಯವಹಾರ ಮತ್ತು ವೈಜ್ಞಾನಿಕ ವ್ಯಾಸಂಗಾದಿ ವಿಷಯಗಳಿಗಾಗಿ ಇಂಗ್ಲಿಷನ್ನು ನಿರ್ದೇಶಿಸಿದ್ದಾರೆ. ಅದು ಸರ್ವಸಮರ್ಪಕವೂ ಬಹುಜನಸಮ್ಮತವೂ ಆಗಿದೆ. ನಾವು ಆ ಮಾರ್ಗದರ್ಶನದಲ್ಲಿಯೆ ಮುಂದುವರಿಯುವುದು ಲೇಸು.

***
...ನಾನಿಂದು ಸರ್ವಾಧಿಕಾರಿಯಾಗಿದ್ದರೆ ಈ ಕೂಡಲೆ ಪರಭಾಷೆಯ ಮೂಲಕದ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಿದ್ದೆ. ಹೊಸ ಸುಧಾರಣೆಗಳನ್ನು ಜಾರಿಗೆ ತರುವಂತೆ ಅಧ್ಯಾಪಕರಿಗೆ ಆಜ್ಞೆ ಮಾಡುತ್ತಿದ್ದೆ. ಇಷ್ಟವಿಲ್ಲದವರು ಕೆಲಸ ಕಳೆದುಕೊಳ್ಳುತ್ತಿದ್ದರು. ಪಠ್ಯಪುಸ್ತಕಗಳಿಗಾಗಿ ಕಾಯಬೇಕಾಗಿಲ್ಲ. ಅವು ನಂತರ ತಾವಾಗಿಯೆ ಬೆಳಕಿಗೆ ಬರುತ್ತವೆ... ಅಂತರರಾಷ್ಟ್ರೀಯ ರಾಜಕೀಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಆಂಗ್ಲ ಭಾಷೆ ಅತ್ಯವಶ್ಯಕ ಎಂದು ನನಗೆ ಗೊತ್ತು. ಆದ್ದರಿಂದ ಅದನ್ನು ಕೆಲವರು ಕಲಿತರೆ ಸಾಕು. ಅದು ಉತ್ತಮ ಆಲೋಚನೆಗಳ ಮತ್ತು ಉತ್ತಮ ಸಾಹಿತ್ಯದ ಅಕ್ಷಯ ನಿಧಿಯೂ ನಿಜ. ಹೆಚ್ಚು ಭಾಷೆಗಳನ್ನು ಕಲಿಯಲು ಸಾಮರ್ಥ್ಯ ಮತ್ತು ಅವಕಾಶ ಇರುವವರು, ಅದನ್ನು ಕಲಿತು, ಅದರಲ್ಲಿರುವ ಸಾರಸರ್ವಸ್ವವನ್ನು ದೇಶಭಾಷೆಗಳಿಗೆ ಇಳಿಸಲಿ... ಪರಭಾಷೆಯ ಮೂಲಕದ ಶಿಕ್ಷಣದಿಂದ ರಾಷ್ಟ್ರಕ್ಕೆ ಆಗುತ್ತಿರುವ ಜ್ಞಾನಹಾನಿ ಮತ್ತು ನೈತಿಕ ನಷ್ಟ ಅಷ್ಟಿಷ್ಟಲ್ಲ.
–ಕುವೆಂಪು (39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಿಂದ. 1957, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT