ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳದಿ ಎಲೆ, ಬೇರುಹುಳಕ್ಕೆ ಸವಾಲು ಕೊಟ್ಟ ರೈತ

Last Updated 6 ಜೂನ್ 2016, 19:31 IST
ಅಕ್ಷರ ಗಾತ್ರ

ಅಡಿಕೆಗೆ ಕಾಡಿದ ಹಳದಿ ಎಲೆ ರೋಗ ಮತ್ತು ಬೇರುಹುಳ ಬಾಧೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ನೂರಾರು ರೈತರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಎಷ್ಟೋ ಕೃಷಿಕರು ತೋಟದ ಕೃಷಿ ಮಾಡಲಾರದೆ ಊರುಬಿಟ್ಟು ಹೋಗಿದ್ದಾರೆ.

ಆದರೆ ಈ ಎರಡೂ ರೋಗಕ್ಕೆ ಸಡ್ಡು ಹೊಡೆದಿದ್ದಾರೆ ಕೊಪ್ಪ ತಾಲ್ಲೂಕಿನ ಗುಡ್ಡೇತೋಟದ ಅರಳೀಕಟ್ಟೆ ಕೃಷಿಕ ಪ್ರಭಾಕರ. ಹಳದಿ ಎಲೆರೋಗ ನಿರ್ವಹಣೆ ಮಾಡಿದ ಯಶಸ್ವಿ ಕೃಷಿಕ ಎಂದು ಕೃಷಿ ಇಲಾಖೆಯಿಂದ ಪ್ರಶಸ್ತಿ ಪಡೆದಿದ್ದಾರೆ.

ಅಡಿಕೆಗೆ ಬಾಧಿಸಿದ ‘ಹಳದಿ ಎಲೆ ರೋಗ  ಮತ್ತು ಬೇರು ಹುಳ’ ತೋಟ ನಂಬಿಕೊಂಡು ಕೃಷಿಯಲ್ಲಿ ತೊಡಗಿದ ರೈತ ಸಮುದಾಯದ ಜೀವನದ ಬೇರಿಗೆ ಬೆಂಕಿ ಇಟ್ಟಿದೆ. ಈ ಎರಡು ರೋಗಗಳು ಇಡೀ ರೈತ ಕುಟುಂಬವನ್ನು ಬೀದಿ ಪಾಲು ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿಯಂತೆಯೇ ಅಡಿಕೆಯೂ ಪ್ರಮುಖ ವಾಣಿಜ್ಯ ಬೆಳೆ. ಈ ಅವಳಿ ರೋಗದಿಂದ ನೂರಾರು ರೈತರು ಜಮೀನು ಮಾರಿ ಊರು ಬಿಟ್ಟು ಹೋಗಿದ್ದಾರೆ. ಸಾಲ ಮಾಡಿದ ರೈತರು ತೋಟದೊಂದಿಗೆ ಆಸರೆಯಾಗಿದ್ದ ಮನೆಯನ್ನೂ ಮಾರಿ ದಾರಿ ಕಾಣದಂತಾಗಿದ್ದಾರೆ.

ಕೊಪ್ಪ ತಾಲ್ಲೂಕಿನಲ್ಲೂ ಈ ಎರಡು ರೋಗಕ್ಕೆ ತುತ್ತಾಗಿ ನೂರಾರು ಎಕರೆ ತೋಟ ನೆಲಕಚ್ಚಿದೆ. ಇದು ರೈತರ ಜಂಘಾಬಲವೇ ಉಡುಗಿಸಿದೆ. ಈ ರೋಗಕ್ಕೆ ಹೆದರದೆ ತೋಟದ ಕಾಯಿಲೆಗೆ ಏನಾದರೂ ಉಪಚಾರ ಮಾಡಿ ಉಳಿಸಿಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕರೊಬ್ಬರು ಯತ್ನಿಸಿ ಯಶಸ್ವಿಯಾಗಿದ್ದಾರೆ. ಪ್ರಗತಿಪರ ಕೃಷಿಕರಲ್ಲದೆ ವಿಜ್ಞಾನಿಯಾಗಿ ಆಲೋಚನೆ ಮಾಡಿ ತಮ್ಮ ತೋಟವನ್ನು ರಕ್ಷಿಸಿಕೊಂಡಿದ್ದಾರೆ.

ಅವರೇ ಕೊಪ್ಪ ತಾಲ್ಲೂಕಿನ ಗುಡ್ಡೇತೋಟದ ಕೃಷಿಕ ಪ್ರಭಾಕರ. ತುಮಕೂರಿನ ಸಿದ್ಧಗಂಗಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನ ಎರಡು ಸೆಮಿಸ್ಟರ್‌ ಅಧ್ಯಯನ ಮಾಡಿ ಅನಿವಾರ್ಯ ಕಾರಣಗಳಿಂದ ಊರಿಗೆ ಮರಳಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಪ್ರಯೋಗವನ್ನು ಮಾಡಿದ್ದಾರೆ.
‘ಅಡಿಕೆ ಮರದ ಹಳದಿ ಎಲೆ ರೋಗವನ್ನು ಪೂರ್ಣ ನಿಯಂತ್ರಿಸಿದ ಎರಡು  ಕೃಷಿ ಪದ್ಧತಿಗಳು ಇಲ್ಲಿವೆ.

ಮೊದಲನೆಯದು, ಮಣ್ಣಿನಲ್ಲಿ ನೀರಿನ ಜತೆ ಸೂಕ್ಷ್ಮ ಪೋಷಕಾಂಶಗಳನ್ನು ಅಡಿಕೆ ಮರದ ತಳದ ಬೇರುಗಳಿಗೆ ಪದೇ ಪದೇ ಬಿಟ್ಟು ಬಿಟ್ಟು ಇಂಗುವಿಕೆ ಮುಖಾಂತರ ಆಳದ ಬೇರುಗಳನ್ನು ಪುಷ್ಟಿಗೊಳಿಸುವುದು. ಕಡಿಮೆ ನೀರಾವರಿ ಜಾಗಗಳಲ್ಲಿ ಈ ಪದ್ಧತಿ ಸೂಕ್ತ.

ಎರಡನೇಯದು ಅತಿ ಸೂಕ್ಷ್ಮ ನೀರಿನ ಹನಿ ಜತೆ ಲಘು ಪೋಷಕಾಂಶಗಳನ್ನು ಹೆಚ್ಚುವಂತೆ ಮಾಡುವ ಕ್ರಮ. ನೀರಾವರಿ  ಇರುವಲ್ಲಿ ಈ ಕ್ರಮ ಸೂಕ್ತ.
ಈ ಮೇಲ್ಕಂಡ ಎರಡು ಕೃಷಿ ಪದ್ಧತಿಗಳನ್ನು ಪ್ರಭಾಕರ ಅವರು ಅಡಿಕೆ ತೋಟದಲ್ಲಿ ಐದು ವರ್ಷಗಳಿಂದ ಪ್ರಯೋಗಿಸಿದ್ದಾರೆ.  

ಇದರ ಜೊತೆಗೆ ಅಡಿಕೆ ಮರದ ಬೇರುಗಳಲ್ಲಿ ಇನ್ನೂ ಉಳಿದಿರುವ ಹಾನಿಕಾರಕ ನೆಮಟೋಡ್ ಹಾಗೂ ವೈರಲ್ ಸೋಂಕು ಅನ್ನು ವಿಕಿರಣ ತಂತ್ರಜ್ಞಾನದ ಮೂಲಕ  ಅಂದರೆ Electric Radiation ಪ್ರಯೋಗ ಮಾಡಿ ಒಂದೂವರೆ ವರ್ಷದಿಂದ ರೋಗ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.

ವಿಕಿರಣ ತಂತ್ರಜ್ಞಾನ ಎಂದರೆ ವಿಕಿರಣ ಹೊರಸೂಸುವ ಮೂಲಧಾತು ವಸ್ತುವನ್ನು ಪುನರುಜ್ಜೀವಗೊಳಿಸಿ ಸಸ್ಯದ ಬೇರಿನಲ್ಲಿ ಅಡಗಿರುವ ಸೋಂಕು ವೃದ್ಧಿಗೊಳ್ಳದ ಹಾಗೆ ತಡೆಯುವ ಒಂದು ಚಿಕಿತ್ಸೆ.

ವಿದೇಶಗಳಲ್ಲಿ ಈಗಾಗಲೇ ‘ರೇಡಿಯೊ ಆಕ್ಟಿವ್’  ರಸಗೊಬ್ಬರ ದೊರೆಯುತ್ತಿದ್ದು, ಹಟಮಾರಿ ಕಾಯಿಲೆಗಳನ್ನು ಗುಣಪಡಿಸಲು ಅಲ್ಲಿನ ಕೃಷಿಕರು ಇದನ್ನು ಉಪಯೋಗಿಸಿ ಯಶಸ್ವಿಯಾಗಿದ್ದಾರೆ. ಆದರೆ ಭಾರತದಲ್ಲಿ ಇದು ಇನ್ನೂ ಪ್ರಯೋಗಗಳ ಹಂತದಲ್ಲಿದೆ. ಮಹಾರಾಷ್ಟ್ರದ ಟ್ರಾಂಬೆಯಲ್ಲಿರುವ ಬಾಬಾ ಅಣುಸಂಶೋಧನಾ ಕೇಂದ್ರದಲ್ಲಿ ಈ ತಂತ್ರಜ್ಞಾನ ಇನ್ನೂ  ಪ್ರಯೋಗದ ಹಂತದಲ್ಲಿದೆ.

ವಿಕಿರಣ ತಂತ್ರಜ್ಞಾನವನ್ನು ಇವರು ತಮ್ಮ ಕೃಷಿ ಕ್ಷೇತ್ರದಲ್ಲಿ ಸುಮಾರು ಒಂದೂವರೆ ವರ್ಷದ ಹಿಂದೆಯೇ ಪ್ರಯೋಗಿಸಿದ್ದು,  ರೋಗ ನಿಯಂತ್ರಣ ಉತ್ತಮವಾಗಿದೆ. 

‘ರೇಡಿಯೊ ಐಸೋಟೋಪ್’ ಅನ್ನು ಕೃಷಿಯಲ್ಲಿ ಅಳವಡಿಕೆ ಮಾಡಿಕೊಂಡರೆ ಅಡಿಕೆ ಮರದ ಬೇರುಗಳು ಕೊಳೆಯುವ ಹಂತ ತಲುಪಿದಾಗ ಅವುಗಳು ಕೊಳೆಯದ ಹಾಗೆ ಕಾಪಾಡಿ ಬೇರುಗಳನ್ನು ಪುಷ್ಟಿಗೊಳಿಸುತ್ತದೆ. 

ಪ್ರಾಥಮಿಕ ಹಂತದಲ್ಲಿ ಹಳದಿ ಎಲೆ ರೋಗಗ್ರಸ್ತ ಮರಗಳನ್ನು  ಈ ಹಿಂದಿನ ಕೃಷಿ ಪದ್ಧತಿ ಪ್ರಕಾರ ಕೆಪೆಲರೈಜ್ ಹಾಗೂ ವಾಟರ್ ಡ್ಯಾಂಪಿಂಗ್ ಎಫೆಕ್ಟ್ ಮುಖಾಂತರ ಇವರು ತೋಟದಲ್ಲಿ ಶೇ 25ರಿಂದ ಶೇ 5ರವರೆಗೆ ರೋಗಗ್ರಸ್ತ ಮರಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಶೇ5 ಅಡಿಕೆ ಮರಗಳನ್ನು ಬ್ಯಾಕ್ಟೀರಿಯಾ  ಮತ್ತು ವೈರಲ್ ಸೋಂಕಿನಿಂದ ರಕ್ಷಿಸಲು ರೇಡಿಯೊ ಐಸೋಟೋಪ್ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ರೇಡಿಯೊ ಆಕ್ಟಿವ್ ಸಾಮಗ್ರಿ ಅವಶ್ಯಕತೆ ಇದ್ದು, ಇ–ವೇಸ್ಟ್‌ನಿಂದ ಬರುವ ರೇಡಿಯಂ ಅನ್ನು ಪುನರ್ಜೀವಗೊಳಿಸಿ ಹೊರಸೂಸುವ ವಿಕಿರಣಗಳಿಂದ ಪ್ರಯೋಗ ಮಾಡುತ್ತಾ ಇದ್ದಾರೆ. ಇದನ್ನು ಹಲವು ಸುರಕ್ಷಾ ವಿಧಾನಗಳಿಂದಲೇ ಪ್ರಯೋಗಿಸಬೇಕಾಗಿರುವುದರಿಂದ ಸ್ಟೀಲ್‌ಪ್ಲೇಟ್‌ ಅನ್ನು ಸಮರ್ಥವಾಗಿ ಬಳಸಿ ಕ್ರಮಬದ್ಧವಾಗಿ ತಡೆಯುವುದು ಅತ್ಯವಶ್ಯ.

ಈ ವೇಸ್ಟ್‌ನಿಂದ ಬರುವ ‘ರೇಡಿಯಂ ದೂಳು’ ಮುಖಾಂತರ ಐಸೋಟೋಪ್‌ ಅನ್ನು ಸಂರಕ್ಷಿಸಿ ಈಗ ಐದು ಅಡಿಕೆ ಮರಗಳಿಗೆ ಪ್ರಾಯೋಗಿಕವಾಗಿ ಲೋ ವೋಲ್ಟೇಜ್ , ಹೈ ವ್ಯಾಟೇಜ್‌, ಪಲ್ಸ್ ವಿದ್ಯುತ್‌ ಅನ್ನು ಆಸಿಲೇಷನ್ ಮುಖಾಂತರ ಒಂದೂವರೆ ವರ್ಷದಿಂದ ಪ್ರಯೋಗಿಸಿದ್ದಾರೆ. ಈಗ ರೋಗಗ್ರಸ್ತ ಮರಗಳಲ್ಲಿ ಚೇತರಿಕೆ ಕಂಡುಬಂದಿದೆ. 

‘ಮೂರು ಋತುಗಳಲ್ಲಿ ಮಣ್ಣಿನಲ್ಲಿ ರಸಸಾರ, ಸಿ.ಇ.ಸಿ, ತೇವಾಂಶ, ಉಷ್ಣ, ಆರ್ಗಾನಿಕ್ ಮ್ಯಾಟರ್ ನಿಯಂತ್ರಣದಲ್ಲಿರುವಾಗ ಮಾತ್ರ ಉಪಯೋಗಿಸಿದ್ದು, ಮಣ್ಣಿನ ರಸಸಾರ, ವಿದ್ಯುತ್ ವಾಹಕ ಶಕ್ತಿ, ಸಾಂದ್ರತೆ ಇವುಗಳನ್ನು ಹತೋಟಿಯಲ್ಲಿಟ್ಟು ಪ್ರಯೋಗವನ್ನು ಮಾಡುವುದು ಅತ್ಯವಶ್ಯಕ. ಇದರಲ್ಲಿ ಯಾವುದೇ ಒಂದು ಅಂಶ ತಪ್ಪಿದರೂ ತೋಟ ನಾಶವಾಗುವ ಸಂಭವ ಇರುತ್ತದೆ’ ಎನ್ನುತ್ತಾರೆ.

ಐಸೋಟೋಪ್ ವಿಧಾನದಿಂದ ತೋಟದಲ್ಲಿನ ಮಣ್ಣಿನ ಗುಣಮಟ್ಟ, ಸಾಂದ್ರತೆ, ವಿದ್ಯುತ್ ವಾಹಕ ಶಕ್ತಿ, ಉಷ್ಣತೆ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ರಸಸಾರ ಮತ್ತು ರೋಗನಿರೋಧಕ ಶಕ್ತಿ ಎಲ್ಲವನ್ನೂ ನಿಯಂತ್ರಿಸಬಹುದಾಗಿದೆ.

ಇದಕ್ಕೆ ಪೂರಕವಾಗಿ ಇವರ ತೋಟದಲ್ಲಿರುವ ಎಲ್ಲ ಅಡಿಕೆ ಮರಗಳನ್ನು ಗಣಕೀಕರಣ ಮಾಡಲಾಗಿದೆ. ಇದರಲ್ಲಿ ಪ್ರತೀ ಮರದ ವರ್ಷದ ಉತ್ಪತ್ತಿ, ರೋಗದ ಇತಿಹಾಸ, ತೇವಾಂಶ, ಉಷ್ಣತೆ, ಸಾಂದ್ರತೆ, ವಿದ್ಯುತ್‌ ವಾಹಕ ಶಕ್ತಿ, ರಸಸಾರ ಕುರಿತ 5 ವರ್ಷದ ಮಾಹಿತಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಈ ಮೇಲ್ಕಂಡ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರಯೋಗ ಮಾಡುತ್ತಾ ಈಗ ಐದು ವರ್ಷಗಳ ಹಿಂದೆ ಶೇ 25 ರಷ್ಟಿದ್ದ ರೋಗ ಶೇ5ಕ್ಕೆ ಇಳಿಕೆಯಾಗಿದೆ. ರೋಗಗ್ರಸ್ತ ಅಡಿಕೆ ಮರಗಳಲ್ಲಿಯೂ ಹಂತ ಹಂತವಾಗಿ ಇಳುವರಿ ಹೆಚ್ಚುತ್ತಾ ಬಂದಿದೆ. ಎಕರೆಗೆ ಎರಡು ಕ್ವಿಂಟಾಲ್ ಇಳುವರಿ ಬರುತ್ತಿದ್ದ ತೋಟದಲ್ಲೀಗ 10 ರಿಂದ 12 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ.

ಸಂಪೂರ್ಣ ಸಾವಯವ
ಇವರ ತೋಟದಲ್ಲಿ  ಶೇ 80ರಷ್ಟು  ಸಾವಯವ ಕೃಷಿ ಅಳವಡಿಸಿದ್ದು, ಉಳಿದ ಶೇ 20ಕ್ಕೆ ವಾಟರ್ ಸಾಲ್ಯುಬಲ್ ಫರ್ಟಿಲೈಜರ್‌ನಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಈ ಪದ್ಧತಿಯೂ ಸಂಪೂರ್ಣ ಸಾವಯವವಾಗಿದ್ದು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಕಾರಕವಾಗಿಲ್ಲ.

ಈ ಹಿಂದೆ ತೋಟದ ಕೆಲಸಕ್ಕೆ ಪ್ರತಿ ವರ್ಷ ಸುಮಾರು 3000 ಆಳುಗಳು ಅಗತ್ಯವಿತ್ತು. ಈಗ ಹಂತ ಹಂತವಾಗಿ ಅದರ ಸಂಖ್ಯೆ 600ಕ್ಕೆ ಇಳಿದಿದೆ. ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಕಾರ್ಮಿಕರ ಅವಲಂಬನೆ ಕಡಿಮೆಯಾದ್ದರಿಂದ ವರ್ಷಕ್ಕೆ ₹5 ಲಕ್ಷ  ಉಳಿತಾಯ ಮಾಡಬಹುದಾಗಿದೆ.

ಇವರ ಕೃಷಿ ಕ್ಷೇತ್ರದಲ್ಲಿ ವರ್ಷವಿಡೀ ಕಳೆ ಸಂಪೂರ್ಣ ನಿಯಂತ್ರಣದಲ್ಲಿಟ್ಟಿದ್ದಾರೆ. ಕಳೆ ನಾಶಕವನ್ನು ಉಪಯೋಗಿಸದೇ ಕಳೆ ಯಂತ್ರದಲ್ಲಿಯೇ ಕಳೆ ನಿರ್ವಹಣೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಉತ್ಕೃಷ್ಟವಾಗಿದೆ.                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT