ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಆರ್ಕೆಸ್ಟ್ರಾ; ಹೊಸ ಚಿಂತನೆ

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಗೌರಿ ಗಣೇಶ ಹಬ್ಬ ಹತ್ತಿರದಲ್ಲಿದೆ. ಕಲಾವಿದರಿಗೆಲ್ಲಾ ಈಗ ಕೈತುಂಬ ಕೆಲಸ. ಆರ್ಕೆಸ್ಟ್ರಾದವರೂ ಈ ಸಮಯ­ದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಅಂಧ ಕಲಾವಿದರ ಆರ್ಕೆಸ್ಟ್ರಾ ತಂಡ ‘ಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್‌’ ಈ ಬಾರಿ ಪ್ರೇಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಮನರಂಜನೆ ನೀಡಲು ಸಜ್ಜಾಗಿದೆ.

‘ಕನ್ನಡ ಹಾಡುಗಳ ಗಾಯನಕ್ಕಷ್ಟೇ ಸೀಮಿತವಾಗಿದ್ದ ನಮ್ಮ ಆರ್ಕೆಸ್ಟ್ರಾ ಈ ಬಾರಿ ಮತ್ತಷ್ಟು ಹೊಸ ಸೇರ್ಪಡೆ ಮಾಡಿ­ಕೊಂಡಿದೆ. ಬಹು ಭಾಷಿಕರು ವಾಸಿಸುವ ಬೆಂಗಳೂರಿನ ಕಲಾ­ರಸಿಕರನ್ನು ರಂಜಿಸಲು ಹಿಂದಿ, ತಮಿಳು, ತೆಲುಗು ಗೀತೆಗಳನ್ನು ಹಾಡುವ ಉದ್ದೇಶ ಇರಿಸಿಕೊಂಡಿದ್ದೇವೆ’ ಎಂದರು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಲಾವಿದ ಪಿ.ಬಾಲಮುರುಗನ್‌.

ಹತ್ತು ವರ್ಷಗಳಿಂದ ಆರ್ಕೆಸ್ಟ್ರಾ ನಡೆಸುತ್ತಿರುವ ಈ ತಂಡ ಈವರೆಗೂ ಅನೇಕ ಏಳು–ಬೀಳು ಕಂಡಿದೆ. ಷೋ ನೀಡುವ ವೇಳೆ ಕೆಲವೆಡೆ ಆಗುವ ಅವಮಾನಗಳನ್ನು ಸಹಿಸಿಕೊಂಡು ತಂಡ ಮುನ್ನಡೆಯುತ್ತಿದೆ. ಅಂಧರ ಆರ್ಕೆಸ್ಟ್ರಾ ನಡೆಸುವ ಕಷ್ಟಗಳನ್ನು ತಂಡದ ಅಧ್ಯಕ್ಷ ಹಂಚಿಕೊಳ್ಳುವುದು ಹೀಗೆ: ‘ತಂಡ ಕಟ್ಟಿದ ಆರಂಭದ ದಿನಗಳಲ್ಲಿ ಸಾಕಷ್ಟು ನೋವುಂಡಿದ್ದೇವೆ. ಹಾಡಲು ವೇದಿಕೆ ಹತ್ತಿ ನಿಂತಾಗ ಹಾಡು ಪ್ರಾರಂಭಿಸುವ ಮುನ್ನವೇ ಅಪಶಕುನ ನುಡಿಯುತ್ತಿದ್ದರು. ನಮ್ಮನ್ನು ನೋಡಿ ಇವರಿಗೆ ಬೇರೆ ಯಾವ ಆರ್ಕೆಸ್ಟ್ರಾದವರು ಸಿಕ್ಕಲಿಲ್ಲವೇ ಎಂದು ಕೆಲವರು ಅಣಕವಾಡಿದ್ದಿದೆ. ಆಗೆಲ್ಲಾ ಮನಸ್ಸಿಗೆ ತುಂಬಾ ನೋವಾಗು­ತ್ತಿತ್ತು. ಇಂತಹ ಮಾತುಗಳನ್ನು ಕೇಳಿ ನಾವೇನೂ ಎದೆಗುಂದಲಿಲ್ಲ. ಆ ಮಾತುಗಳನ್ನು ಛಲವಾಗಿ ಸ್ವೀಕರಿಸಿ ಚೆನ್ನಾಡಿ ಆಡಿ ಆ ಮೂಲಕ ನಮ್ಮನ್ನು ಆಡಿಕೊಂಡವರ ಬಾಯಿ ಮುಚ್ಚಿಸಿದ್ದೇವೆ. ಮೊದಲು ಅಣಕವಾಡಿ­ದವರು ನಮ್ಮ ಹಾಡು ಕೇಳಿ ಕೊನೆಯಲ್ಲಿ, ಪರವಾಗಿಲ್ಲ ಚೆನ್ನಾಗಿಯೇ ಹಾಡುತ್ತೀರಿ ಎಂದು ತಮ್ಮ ಮಾತು ಮತ್ತು ಅಭಿಪ್ರಾಯ ಎರಡನ್ನು ಬದಲಾಯಿಸಿಕೊಂಡಿದ್ದಿದೆ’.

ಕಾಲ ಉರುಳಿದಂತೆ ಹಬ್ಬಗಳ ಆಚರಣೆಯ ಹಿಂದಿನ ಉದ್ದೇಶ­ದಲ್ಲೂ ಬದಲಾಗಿವೆ. ಆಗ ಊರಿಗೊಂದು ಗಣಪತಿ ಕೂರಿಸುತ್ತಿ­ದ್ದರು. ಈಗ ಗಲ್ಲಿಗೊಂದು ಗಣಪ, ಮನೆಗೊಬ್ಬ ವಿಘ್ನೇಶ ಇರು­ತ್ತಾನೆ. ಕೇರಿಗೊಂದು ಸಂಘ ಕಟ್ಟಿಕೊಂಡು ವಿಜೃಂಭಣೆಯಿಂದ ಗಣೇಶೋತ್ಸವ ಮಾಡುವ ಹುಡುಗರಿಗೆ ಹಾಡುವ ಆರ್ಕೆಸ್ಟ್ರಾ­ಗಳಿಗಿಂತ ಹೆಣ್ಮಕ್ಕಳು ಕುಣಿಯುವ ತಂಡಗಳು ಹೆಚ್ಚು ಇಷ್ಟವಾಗ­ತೊಡಗಿವೆ. ದೊಡ್ಡದೊಂದು ವೇದಿಕೆ ಕಟ್ಟಿ ಮಧ್ಯದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದರ ಮುಂದೆ ತುಂಡುಡುಗೆ ತೊಟ್ಟು ಕುಣಿಯುವ ಐಟಂ ಡಾನ್ಸ್‌ ಹುಡುಗಿಯ ಸ್ಟೆಪ್ಸ್‌ ನಲ್ಲಿ ಹೈಕಳು ಖುಷಿ ಕಾಣುತ್ತಿದ್ದಾರೆ. ಉತ್ಸವದ ವೇಳೆ ನಡೆಯುವ ಮನರಂಜನೆಯಲ್ಲಾದ ಇಂತಹ ಸಣ್ಣಪುಟ್ಟ ಬದಲಾವಣೆಗಳು ಅಂಧರ ತಂಡಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಳೆಯುತ್ತಿವೆ.

‘ಶುರುವಿನ ಆರಂಭದ ಕೆಲ ವರ್ಷಗಳಲ್ಲಿ ತಂಡ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಿತ್ತು. ಗಣೇಶ ಹಬ್ಬದ ವೇಳೆ ಕನಿಷ್ಠ 20ರಿಂದ 30 ಕಾರ್ಯ ಕ್ರಮಗಳನ್ನು ನೀಡುತ್ತಿದ್ದೆವು. ಆದರೆ, ಊರಿ­ಗೊಂದು ಗಣಪತಿ ಹೋಗಿ, ಕೇರಿಗೊಬ್ಬ ಗಣೇಶ ಬಂದ ನಂತರ ನಮ್ಮ ನಸೀಬು ಕೆಡ ತೊಡಗಿತು. ಕಳೆದ ವರ್ಷ ನಮಗಂತೂ ಅವಕಾಶದ ಬರಗಾಲ ಬಂದೆರಗಿತ್ತು. ಹೋದ ವರ್ಷ ನಾವು ನೀಡಿದ ಕಾರ್ಯಕ್ರಮಗಳ ಸಂಖ್ಯೆ ಕೇವಲ ಆರು. ಈಗಿನ ಅನೇಕ ಹುಡುಗರಿಗೆ ಹಾಡುವ ಗಾಯಕರಿಗಿಂತ ಕುಣಿವ ಹುಡುಗಿಯ­ರನ್ನು ನೋಡುವುದೇ ಚೆಂದ ಅನಿಸಿದೆ.

ಹಾಗಾಗಿ, ಅವರು ಅಂತಹ ಆರ್ಕೆಸ್ಟ್ರಾಗಳನ್ನು ಕರೆತಂದು ಖುಷಿ ಪಡುತ್ತಿ­ದ್ದಾರೆ. ಹಾಗಂತ, ಎಲ್ಲರೂ ಇದೇ ರೀತಿ ಇರುತ್ತಾರೆ ಎಂದು ಹೇಳಲಾಗು­ವು­ದಿಲ್ಲ. ಅಂಧರಿಗೆ ಸಹಾಯ ಮಾಡುವ ಮನಸ್ಸು­ಗಳು ಸಾಕಷ್ಟಿವೆ. ಹುಡುಗಾಟದ ವಯಸ್ಸನ್ನು ದಾಟಿಬಂದ ಸಹೃದಯಿ ವಯಸ್ಕರು, ಉದ್ಯೋಗಸ್ಥ ಸಂಘಗಳು ಕರೆದು ಹಾಡಿಸುತ್ತಿವೆ. ತುತ್ತಿನ ಚೀಲ ಪೊರೆಯುತ್ತಿವೆ’ ಎನ್ನುತ್ತಾರೆ ಬಾಲು.

ಬಾಲಮುರುಗನ್‌, ಸಿದ್ಧಗಂಗಮ್ಮ, ಭಾನು, ಬಾಬು, ಕುಮಾರ್‌, ಚಂದ್ರಶೇಖರ್‌, ಸುಬ್ರಮಣಿ  ಈ ತಂಡದ ಸದಸ್ಯರು. ಭಾನು ಮತ್ತು ಬಾಬು ಹಿಂದಿ, ತೆಲುಗು ಮತ್ತು ತಮಿಳು ಹಾಡು­ಗಳನ್ನು ಹಾಡುತ್ತಾರೆ. ಕುಮಾರ್‌ ಡಾ. ರಾಜ್‌ಕುಮಾರ್‌ ಅವರ ಗೀತೆಗಳನ್ನು ಹಾಡುತ್ತಾರೆ. ಸಿದ್ಧಗಂಗಮ್ಮನವರ ಶಾರೀರ ಭಾವಗೀತೆ, ಭಕ್ತಗೀತೆಗೆ ಮೀಸಲಾಗಿದೆ. ಕರೋಕೆ ಮತ್ತು ಲೈವ್‌ ಈ ಎರಡೂ ಬಗೆಯ ಆರ್ಕೆಸ್ಟ್ರಾ ನಡೆಸಿಕೊಡುವುದು ಈ ತಂಡದ ಮತ್ತೊಂದು ವಿಶೇಷ. ವಾದ್ಯಗಳನ್ನು ನುಡಿಸುವುದರ ಜೊತೆಗೆ ಸೌಂಡ್‌ ಸಿಸ್ಟಂ, ವಾಯ್ಸ್‌ ಸೆಟ್ಟಿಂಗ್‌ ಇವರೇ ಮಾಡಿಕೊಳ್ಳುತ್ತಾರೆ. ರಾಮನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಗದಗ ಇತರೆಡೆ ಕಾರ್ಯಕ್ರಮ ನೀಡಿದ್ದಾರೆ.

‘ಆರ್ಕೆಸ್ಟ್ರಾ ತಂಡವನ್ನೇ ನಂಬಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ. ಹಾಗಾಗಿ, ತಂಡದ ಸದಸ್ಯರು ಗಾರ್ಮೆಂಟ್ಸ್‌, ವ್ಯಾಪಾರ, ಬಸ್‌ಸ್ಟ್ಯಾಂಡ್‌ ಬಳಿ ವೇಯ್ಟ್‌ ಮಿಷನ್‌ ಇಟ್ಟುಕೊಂಡು ಬದುಕುವ ದಾರಿ ಕಂಡುಕೊಂಡಿದ್ದಾರೆ. ಕೆಲವರು ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಅವಕಾಶಗಳು ಸಿಕ್ಕಾಗ ಎಲ್ಲರೂ ಒಂದೆಡೆ ಕಲೆತು ರಿಯಾಜ್‌ ಮಾಡುತ್ತೇವೆ. ಈ ಬಾರಿಯ ಗಣೇಶ ಹಬ್ಬಕ್ಕೆ ನಮ್ಮನ್ನು ಕರೆದು ಪ್ರೋತ್ಸಾಹಿಸುವ ಗಣೇಶ ಮಂಡಳಿಗಳ ಸಂಖ್ಯೆ ಹಿಗ್ಗಲಿದೆ ಎಂಬ ಆಸೆ ಇರಿಸಿಕೊಂಡಿದ್ದೇವೆ. ಹೀಗೆ ಹೆಚ್ಚಿನ ಅವಕಾಶಗಳು ಸಿಕ್ಕರೆ ಒಂದಷ್ಟು ನೆಮ್ಮದಿಯಿಂದ ಉಸಿರಾಡಬಹುದು’ ಎಂದು ನಿಟ್ಟುಸಿರು ಬಿಟ್ಟ ಬಾಲು ಅವರ ಅರೆಬಿರಿದ ಕಣ್ಣುಗಳಲ್ಲಿ ಹೊಸ ನಿರೀಕ್ಷೆಗಳ ಮಿಂಚೊಂದು ಹಾದು ಹೋದಂತೆ ಭಾಸವಾಯಿತು. ತಂಡದ ಸಂಪರ್ಕಕ್ಕೆ: 93423 21212, 94814 54825.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT