ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಮುಖಗಳಿಗೆ ಮತ್ತೆ ಮಣೆ

ರಾಮಲಿಂಗಾರೆಡ್ಡಿ 6ನೇ ಬಾರಿ ಗೆಲುವಿನ ಕೇಕೆ, ಮಾಜಿ ಗೆಳೆಯನಿಗೆ ಶರಣಾದ ಸೋಮಣ್ಣ
Last Updated 8 ಮೇ 2013, 19:56 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರತಿಷ್ಠೆ'ಯ ಕಣವಾಗಿ ಪರಿವರ್ತನೆಗೊಂಡಿದ್ದ ವಿಜಯನಗರ ಕ್ಷೇತ್ರದಲ್ಲಿ ಮಾಜಿ `ಆಪ್ತಮಿತ್ರ'ನ ಎದುರು ಹೀನಾಯವಾಗಿ ಸೋಲನ್ನಪ್ಪಿದ ವಸತಿ ಸಚಿವ ವಿ.ಸೋಮಣ್ಣ, ಬಿಟಿಎಂ ಬಡಾವಣೆ ಕ್ಷೇತ್ರದಲ್ಲಿ ಸತತ ಆರನೇ ಬಾರಿ ಗೆಲುವಿನ ಕೇಕೆ ಹಾಕಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉಪಮುಖ್ಯಮಂತ್ರಿ ಆರ್.ಅಶೋಕ ಅವರಿಗೆ ಮತ್ತೆ ಗೆಲುವಿನ ಮಾಲೆ...

ಬೆಂಗಳೂರು ದಕ್ಷಿಣ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಪ್ರಮುಖ ಅಂಶಗಳಿವು. ಏಳೂ ಕ್ಷೇತ್ರಗಳಲ್ಲೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳೇ ವಿಜಯಪತಾಕೆ ಬಾರಿಸಿರುವುದು ಈ ಸಲದ ವಿಶೇಷ. ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಮುಡಿಗೇರಿಸಿಕೊಂಡಿದೆ. ಈ ಭಾಗದಲ್ಲಿ ಜೆಡಿಎಸ್ ಖಾತೆ ತೆರೆದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಕೆಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬೊಮ್ಮನಹಳ್ಳಿ ಹಾಗೂ ಬಸವನಗುಡಿ ಕ್ಷೇತ್ರದಲ್ಲಿ ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು `ಸದ್ದು' ಮಾಡಿದ್ದಾರೆ.

ಪದ್ಮನಾಭನಗರ ಕ್ಷೇತ್ರ: ಅವಿಭಜಿತ ಉತ್ತರಹಳ್ಳಿ ಕ್ಷೇತ್ರ ಇದ್ದ ದಿನದಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಉಪಮುಖ್ಯಮಂತ್ರಿ ಆರ್.ಅಶೋಕ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. 15 ಅಭ್ಯರ್ಥಿಗಳು ಕಣದಲ್ಲಿ ಇದ್ದ ಕ್ಷೇತ್ರದಲ್ಲಿ ಅಶೋಕ ಅವರು ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಎಲ್.ಎಸ್.ಚೇತನ್ ಗೌಡ ಅವರನ್ನು 20,123 ಅಂತರದಿಂದ ಮಣಿಸಿದ್ದಾರೆ. ಮಾಜಿ ಶಾಸಕ ಎಲ್.ಎ. ಶಿವರಾಮೇಗೌಡ ಅವರ ಪುತ್ರ ಚೇತನ್ ಅವರನ್ನು ಕಣಕ್ಕೆ ಇಳಿಸಿದ್ದರೂ ಕಾಂಗ್ರೆಸ್ ಪೈಪೋಟಿ ನೀಡಲು ವಿಫಲವಾಗಿದೆ. ಆರು ಸುತ್ತಿನ ವರೆಗೆ ದ್ವಿತೀಯ ಸ್ಥಾನದಲ್ಲಿದ್ದ ಜೆಡಿಎಸ್‌ನ ಡಾ.ಎಂ.ಆರ್.ವಿ.ಪ್ರಸಾದ್ ಅವರು ಮೂರನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಆರಂಭದಿಂದಲೂ ಅಶೋಕ ಅವರ ಮುನ್ನಡೆ ಅಂತರ ಹಿಗ್ಗುತ್ತಲೇ ಸಾಗಿತು.

ವಿಜಯನಗರ: ಮಾಜಿ ಮಿತ್ರನಿಗೆ ಟಾಂಗ್ ನೀಡುವ ಉದ್ದೇಶದಿಂದಲೇ ಕೊನೆಯ ಕ್ಷಣದಲ್ಲಿ ಕ್ಷೇತ್ರ ಬದಲಾಯಿಸಿದ್ದ ಸಚಿವ ವಿ.ಸೋಮಣ್ಣ ಅವರಿಗೆ ಮುಖಭಂಗ ಉಂಟಾಗಿದೆ. ಅವರು ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಅವರ ಎದುರು 32,642 ಮತಗಳ ಅಂತರದಿಂದ ಹೀನಾಯವಾಗಿ ಸೋಲನ್ನು ಕಂಡಿದ್ದಾರೆ. ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಕಣಕ್ಕೆ ಇಳಿದ ಬಿಜೆಪಿ ಅಭ್ಯರ್ಥಿಗೆ `ಕುಬೇರ' ಕೃಷ್ಣಪ್ಪ ಅವರ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 3,403 ಮತಗಳ ಮುನ್ನಡೆ ಸಾಧಿಸಿದ್ದರು. ಐದನೇ ಸುತ್ತು ಅಂತ್ಯಗೊಳ್ಳುವ ವೇಳೆಗೆ ಅಂತರ 10,439 ಆಗಿತ್ತು. ಈ ವೇಳೆಗೆ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಗೆ ಚಾಲನೆ ದೊರಕಿತ್ತು. ಸುತ್ತು ಏರುತ್ತಿದ್ದಂತೆ ಅಂತರವೂ ಹೆಚ್ಚಲಾರಂಭಿಸಿತು. ಕೃಷ್ಣಪ್ಪ ಅವರು ಎರಡನೇ ಬಾರಿ ಪುನರಾಯ್ಕೆಗೊಂಡಿದ್ದಾರೆ.

ಬಿಟಿಎಂ ಬಡಾವಣೆ: ಕ್ಷೇತ್ರದಲ್ಲಿ ರಾಮಲಿಂಗಾ ರೆಡ್ಡಿ ಅವರ ಆರ್ಭಟ ಮುಂದುವರಿದಿದೆ. ಸತತ ಆರನೇ ಬಾರಿ ಗೆಲುವಿನ ಮಾಲೆ ಧರಿಸಿದ್ದಾರೆ. ಚಲಾವಣೆಯಾದ 1,10,589 ಮತಗಳ ಪೈಕಿ ಶೇ 60ಕ್ಕೂ ಅಧಿಕ ಮತಗಳನ್ನು ಅವರೊಬ್ಬರೇ ಗಳಿಸಿದ್ದಾರೆ. ಅವರ ಗೆಲುವಿನ ಅಂತರ 49,048 ಮತಗಳು. ಈ ಮೂಲಕ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಅಂತರದಿಂದ ಜಯ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಈ ಹಿಂದೆ ಸತತ ನಾಲ್ಕು ಬಾರಿ ಜಯನಗರ ಹಾಗೂ ಒಂದು ಬಾರಿ ಬಿಟಿಎಂ ಬಡಾವಣೆಯಿಂದ ಜಯ ಸಾಧಿಸಿದ್ದರು. ಕಣದಲ್ಲಿ 9 ಅಭ್ಯರ್ಥಿಗಳು ಇದ್ದರು.

ಬಸವನಗುಡಿ: ಕ್ಷೇತ್ರದಲ್ಲಿ ಬಿಜೆಪಿಯ ಎಲ್.ಎ.ರವಿಸುಬ್ರಹ್ಮಣ್ಯ ಎರಡನೇ ಬಾರಿ ಜಯ ಸಾಧಿಸುವ ಮೂಲಕ ಎರಡು ದಶಕಗಳಿಂದ ಚಾಲ್ತಿಯಲ್ಲಿದ್ದ ಹಾಲಿ ಶಾಸಕರ ಸೋಲಿನ ಸಂಪ್ರದಾಯಕ್ಕೆ ಕೊನೆ ಹಾಡಿದರು. 

1985 ಹಾಗೂ 1989ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿದ್ದರು. ಆ ಬಳಿಕ ಯಾರೂ ಸತತ ಗೆಲುವು ಸಾಧಿಸಿ ಇರಲಿಲ್ಲ. ಜೆಡಿಎಸ್‌ನ ಕೆ.ಬಾಗೇಗೌಡ ಅವರನ್ನು 19,720 ಮತಗಳ ಅಂತರದಿಂದ ಮಣಿಸಿದರು. ಮಾಜಿ ಸಚಿವ, ಕಾಂಗ್ರೆಸ್‌ನ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಮೂರನೇ ಸ್ಥಾನಕ್ಕೆ ಜಾರಿದರು. ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ವರ್ಚಸ್ಸು ಇದ್ದ `ಪ್ರಬಲ' ಅಭ್ಯರ್ಥಿಯನ್ನು ಕೈ ಪಾಳಯ ಕಣಕ್ಕೆ ಇಳಿಸಿದ್ದರೂ ಕ್ಷೇತ್ರದಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ.

ಮೊದಲ ಸುತ್ತಿನಲ್ಲಿ 1036 ಮತಗಳ ಅಂತರದಿಂದ ಬಾಗೇಗೌಡ ಮುನ್ನಡೆ ಸಾಧಿಸಿದ್ದರು. ಎರಡನೇ ಸುತ್ತಿನ ವೇಳೆಗೆ ಅವರ ಅಂತರ 1693ಕ್ಕೆ ದಾಟಿತು. ನಾಲ್ಕನೇ ಸುತ್ತಿನ ವೇಳೆಗೆ ಈ ಅಂತರ 673ಕ್ಕೆ ಕುಗ್ಗಿತು. ಇಲ್ಲಿ ವರೆಗೆ ಕಾಂಗ್ರೆಸ್ ಅಭ್ಯರ್ಥಿ ದ್ವಿತೀಯ ಸ್ಥಾನದಲ್ಲಿದ್ದರು. ಐದನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 1129 ಮತಗಳ ಮುನ್ನಡೆ ಸಾಧಿಸಿದರು. ಬಳಿಕದ ಸುತ್ತುಗಳಲ್ಲಿ ಅವರು ಮುನ್ನಡೆಯನ್ನು ಹೆಚ್ಚಿಸಿಕೊಂಡರು. ಉಳಿದ ಅಭ್ಯರ್ಥಿಗಳಿಗಿಂತ ವಿಭಿನ್ನವಾಗಿ ಪ್ರಚಾರ ನಡೆಸಿದ್ದ ಲೋಕಸತ್ತಾ ಪಕ್ಷದ ಶಾಂತಲಾ ದಾಮ್ಲೆ 9071 ಮತಗಳನ್ನು ಪಡೆದು ಪ್ರಮುಖ ಪಕ್ಷದ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿದರು. 

ಗೋವಿಂದರಾಜನಗರ: ಕಳೆದ ಬಾರಿ ಗುರುವಿಗೆ ಸೋಲು ಉಣಿಸಿದ್ದ ಕಾಂಗ್ರೆಸ್‌ನ ಪ್ರಿಯಕೃಷ್ಣ ಅವರು ಈ ಸಲ ಶಿಷ್ಯನಿಗೆ ನೀರು ಕುಡಿಸಿದ್ದಾರೆ. ಸಚಿವ ವಿ.ಸೋಮಣ್ಣ ಅವರ ಶಿಷ್ಯ, ಬಿಬಿಎಂಪಿ ಸದಸ್ಯ ಎಚ್.ರವೀಂದ್ರ ಅವರನ್ನು 42,460 ಮತಗಳ ದೊಡ್ಡ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅಪ್ಪ-ಮಗ ವಿರಾಜಮಾನರಾಗಿದ್ದಾರೆ.

ಐದನೇ ಸುತ್ತಿನವರೆಗೂ ಜೆಡಿಎಸ್ ದ್ವಿತೀಯ ಸ್ಥಾನದಲ್ಲಿತ್ತು. ಬಳಿಕ ಬಿಜೆಪಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. 10ನೇ ಸುತ್ತು ಮುಕ್ತಾಯಗೊಳ್ಳುವ ವೇಳೆಗೆ ಪ್ರಿಯಕೃಷ್ಣ ಗೆಲುವು ಖಚಿತಗೊಂಡಿತ್ತು. ಈ ವೇಳೆಗೆ 20,000ಕ್ಕೂ ಅಧಿಕ ಅಂತರದಿಂದ ಅವರು ಮುನ್ನಡೆ ಸಾಧಿಸಿದ್ದರು. ಏಳು ಕ್ಷೇತ್ರಗಳ ಪೈಕಿ ಈ ಕ್ಷೇತ್ರದ ಫಲಿತಾಂಶ ಮೊದಲು ಘೋಷಣೆಯಾಯಿತು. ಮತ ಎಣಿಕೆ ಕೇಂದ್ರದಲ್ಲೇ ಕಾಂಗ್ರೆಸ್ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತು. 
ಜಯನಗರ: ಆರಂಭದಲ್ಲಿ ಕರ-ಕಮಲದ ನಡುವೆ ತೂಗುಯ್ಯಾಲೆಯಲ್ಲಿದ್ದ ಗೆಲುವು ಕೊನೆಗೆ ಬಿಜೆಪಿಗೆ ಒಲಿಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಪರಮಾಪ್ತ ಎಂ.ಸಿ.ವೇಣುಗೋಪಾಲ್ ಅವರಿಗೆ ಹಾಲಿ ಶಾಸಕ ಬಿ.ಎನ್.ವಿಜಯಕುಮಾರ್ ಸೋಲಿನ ರುಚಿ ತೋರಿಸಿದರು.

ಅಬ್ಬರದ ಪ್ರಚಾರದ ಮೂಲಕ ಉಳಿದ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿದ್ದ ವೇಣುಗೋಪಾಲ್ ಅವರು ಬಿಜೆಪಿ ಅಭ್ಯರ್ಥಿಯನ್ನು ನಡುವಿನಲ್ಲಿ ಬೆದರಿಸಿದ್ದರು. ಮೂರನೇ ಸುತ್ತಿನ ವರೆಗೆ ವಿಜಯಕುಮಾರ್ 1289 ಮತಗಳಿಂದ ಮುಂದಿದ್ದರು. ನಾಲ್ಕನೇ ಸುತ್ತಿನಲ್ಲಿ 460 ಮತಗಳ ಅಂತರದಿಂದ `ಕೈ'ಮೇಲಾಯಿತು. ಒಂದು ಹಂತದಲ್ಲಿ ಮುನ್ನಡೆ 1,500 ರ ಹತ್ತಿರ ಸಮೀಪಿಸಿತು. ಮುನ್ನಡೆಯ ಹಗ್ಗಜಗ್ಗಾಟ ಮತ್ತೆ ಮುಂದುವರಿಯಿತು. 9ನೇ ಸುತ್ತಿನ ವೇಳೆಗೆ ಈ ಅಂತರ 528ಕ್ಕೆ ಕಡಿವೆುಯಾಯಿತು. 10ನೇ ಸುತ್ತಿನಲ್ಲಿ 177 ಮತಗಳ ಮುನ್ನಡೆ ಸಾಧಿಸಿದ ವಿಜಯಕುಮಾರ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಕಳೆದ ಬಾರಿ ಜೋರಾಗಿ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ಈ ಸಲ ಸಪ್ಪಗಾಗಿದ್ದರು.

ಬೊಮ್ಮನಹಳ್ಳಿ: ಕಾಂಗ್ರೆಸ್‌ನ ಸಿ.ನಾಗಭೂಷಣ್ ಅವರನ್ನು 25,852 ಮತಗಳ ಭಾರಿ ಅಂತರದಿಂದ ಮಣಿಸುವ ಮೂಲಕ ಬಿಜೆಪಿಯ ಎಂ.ಸತೀಶ್ ರೆಡ್ಡಿ ಅವರು ಪುನರಾಯ್ಕೆಯಾದರು
.
ವಿದ್ಯಾವಂತರು ಹಾಗೂ ಕೈಗಾರಿಕೆಗಳುಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಎಂ.ಸತೀಶ್ ರೆಡ್ಡಿ ಅವರು 86,552 ಮತಗಳನ್ನು ಗಳಿಸಿದರೆ, ಸಿ.ನಾಗಭೂಷಣ್ ಅವರು 60,700 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಲೋಕಸತ್ತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಡಾ.ಅಶ್ವಿನ್ ಮಹೇಶ್ ಅವರು 11,915 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಗಳಿಸಿದರು. ಜೆಡಿಎಸ್ ನಾಲ್ಕಕ್ಕೆ ಸೀಮಿತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT