ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಹೆಸರು, ಹೊಸ ನಾಮಕರಣ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಿನಿಮಾ ಹೆಸರಿನಲ್ಲಿರುವ ಶಕ್ತಿಯ ಪರಿಣಾಮವೇ ಇರಬೇಕು’– ಕತ್ತಲಿನಲ್ಯಾರೋ ಗೊಣಗಿದರು. ‘ಪವರ್‌ಸ್ಟಾರ್‌ ಇದ್ದರೂ ಪವರ್ ಕೈಕೊಡುತ್ತಿದೆಯಲ್ಲ’ ಎಂದು ಮತ್ತೊಬ್ಬರು ದನಿಗೂಡಿಸಿದರು. ಚಿತ್ರಕ್ಕಿಟ್ಟಿರುವುದು ಪವರ್‌ಫುಲ್‌ ಹೆಸರು ಎನ್ನುವುದನ್ನು ಸಾಬೀತುಪಡಿಸಲು ಅಂದು ಪ್ರಕೃತಿ ಅನುಮೋದಿಸಿದಂತಿತ್ತು.

ನಿರ್ದೇಶಕ ಪ್ರೇಮ್‌, ನಾಯಕನಟನಾಗಿ ಹೊಸ ವೇಷ ಧರಿಸಿದ್ದಾರೆ. ಚಿತ್ರದ ಹೆಸರಿನ ಕುತೂಹಲವನ್ನು ಕಾಯ್ದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಅದಕ್ಕೂ ಮುನ್ನ ಭರ್ಜರಿ ಮನರಂಜನೆ ನೀಡುವ ಸಿದ್ಧತೆಯನ್ನೂ ಮಾಡಿದ್ದರು. ಮಳೆಯ ಚೆಲ್ಲಾಟ, ವಿದ್ಯುತ್ತಿನ ಕಣ್ಣಾಮುಚ್ಚಾಲೆ ಅವರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು.

ವೇದಿಕೆಯ ಪಕ್ಕದಲ್ಲೊಂದು ತೊಟ್ಟಿಲು. ಅದರೊಳಗೆ ಕನಸಿನ ಸಿನಿಮಾ ಕೂಸು ಮಲಗಿದೆ. ಅದಕ್ಕೆ ನಾಮಕರಣ ಮಾಡುವುದು ಬಾಕಿ ಇದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿದ್ದರೂ, ಶೀರ್ಷಿಕೆಯನ್ನು ಬಹಿರಂಗಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಹಾಡು, ಕುಣಿತದ ಬಳಿಕ ಎ.ಎಂ. ಗೋಪಿ ಮಿಮಿಕ್ರಿ ಮೂಲಕ ಮನರಂಜನೆ ನೀಡುವ ಹೊಣೆಗಾರಿಕೆ ವಹಿಸಿಕೊಂಡರು.

ಹೊರಗೆ ಮಳೆ ವಿರಾಮ ಪಡೆಯುವ ಹೊತ್ತಿಗೆ ಕತ್ತಲು ಮತ್ತಷ್ಟು ದಟ್ಟವಾಗಿತ್ತು. ‘ಇನ್ನು ಕೂರಲು ಸಮಯವಿಲ್ಲ, ತಡವಾಗುತ್ತಿದೆ’ ಎಂದು ಅವಸರಿಸಿದರು ಪುನೀತ್‌ ರಾಜ್‌ಕುಮಾರ್‌. ವೇದಿಕೆ ಮೇಲೇರಿದ ಪುನೀತ್‌, ಅಂಕದ ಪರದೆ ಸರಿಸಿದೊಡನೆ ಎದೆ ನಡುಗಿಸುವ ಸದ್ದಿನೊಂದಿಗೆ ಶೀರ್ಷಿಕೆಯ ಅಕ್ಷರಗಳು ಒಂದೊಂದಾಗಿ ತೆರೆಮೇಲೆ ಮೂಡತೊಡಗಿದವು. ಅದರ ಬೆನ್ನಲ್ಲೇ ‘ಜೋಗಯ್ಯ’ ಚಿತ್ರದ ಹಾಡಿನ ತುಣುಕು ಪ್ರತಿಧ್ವನಿಸತೊಡಗಿತು.

‘ಭಂ ಭಂ ಭೋಲೆನಾಥ್‌’ ಎಂಬ ಹೆಸರು ಮೂಡುತ್ತಿದ್ದಂತೆ ಪ್ರೇಮ್‌ರ ಹುರಿ ಮೀಸೆ ಮುಖದಲ್ಲಿ ನಗು. ನಾಮಕರಣ ಶಾಸ್ತ್ರಕ್ಕೆ ಅಷ್ಟೆಲ್ಲಾ ಕಾಯಿಸಿದ ಚಿತ್ರತಂಡ ಸಿನಿಮಾ ಕುರಿತು ವಿವರಣೆ ನೀಡುವ ಉತ್ಸಾಹ ತೋರಲಿಲ್ಲ. ಶೀರ್ಷಿಕೆ ಬಿಡುಗಡೆ ಮಾಡಿದ ಪುನೀತ್‌, ಚಿತ್ರತಂಡಕ್ಕೆ ಶುಭ ಹಾರೈಸಿ ಹೊರಟರು. ತಮ್ಮ ಸಿನಿಮಾದ ಬಗ್ಗೆ ತುಸು ಹೆಚ್ಚೇ ಮಾತನಾಡುತ್ತಿದ್ದ ಪ್ರೇಮ್‌ ಕೂಡ ಅಂದು ಮಾತನಾಡಬಾರದು ಎಂದು ತೀರ್ಮಾನಿಸಿದಂತಿತ್ತು.

ನಿರ್ದೇಶಕ ಶ್ರೀನಿವಾಸ್‌ ತಮ್ಮ ಮಾತುಗಳು ಯಾರಿಗೂ ಅರ್ಥವಾಗಬಾರದು ಎಂದು ಪಣ ತೊಟ್ಟವರಂತೆ ಒಂದೇ ಉಸಿರಿನಲ್ಲಿ ಉದ್ದದ ಸಂಭಾಷಣೆ ಒಪ್ಪಿಸಿ, ‘...ಇದೇ ಭೋಲೆನಾಥ್’ ಎಂದು ಮಾತು ಮುಗಿಸಿದರು! ‘ಭೋಲೆನಾಥ್‌’ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ‘ಆನೆ ಪಟಾಕಿ’ ಎಂಬ ಚಿತ್ರಕ್ಕೆ ಬಂಡವಾಳ ಹೂಡಿರುವ ಸುರೇಶ್‌ಬಾಬು ಭೋಲೆನಾಥನ ನಿರ್ಮಾಪಕರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT