ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ವಿಮಾನ ನಿಲ್ದಾಣ ರಸ್ತೆ ಹೂಡಿಕೆಗಿದು ಕಾಲವಯ್ಯ

ದಿಕ್ಸೂಚಿ
Last Updated 21 ಮೇ 2015, 19:30 IST
ಅಕ್ಷರ ಗಾತ್ರ

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಭೂಮಿ ಬೆಲೆ ಹೆಚ್ಚುತ್ತಿರುವ ಹಳೇ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡ  ಪ್ರದೇಶಗಳಿಗೆ ದಕ್ಕುತ್ತಿರುವ ಬೇಡಿಕೆ, ಅನುಕೂಲ ಅನಾನುಕೂಲಗಳ ಕುರಿತ ಮಾಹಿತಿ ಇಲ್ಲಿದೆ.

ಹಳೇ ವಿಮಾನ ನಿಲ್ದಾಣ ರಸ್ತೆ ಪ್ರದೇಶದಲ್ಲಿ ಸಂಪೂರ್ಣ ಪ್ರಮಾಣದ ಬೆಳವಣಿಗೆ ಆಗಿದೆಯೇ ಅಥವಾ ಅಭಿವೃದ್ಧಿಗೆ ಇನ್ನೂ   ಅವಕಾಶವಿದೆಯೇ? ಇದೆ ಎಂದಾದರೆ ಈಗ ಯಾವ ರೀತಿಯ ಅಭಿವೃದ್ಧಿ ಇಲ್ಲಿ ಸಾಧ್ಯ?

ಹಳೇ ವಿಮಾನ ನಿಲ್ದಾಣ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳುವುದು ಸರಿಯಲ್ಲ. ಆದರೆ ಅದರ ಬದಲಾಗಿ ಇದು ‘ಪ್ರೌಢ’ ಮಾರುಕಟ್ಟೆ ಎನ್ನಬಹುದು. ಈ ಪ್ರಮುಖ ರಸ್ತೆಯಲ್ಲಿ ಹಾದುಬರುವ ಹಲವು ಸ್ಥಳಗಳಲ್ಲಿ ಕೆಲ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದರೆ, ಇನ್ನಿತರ ಜಾಗಗಳು ತಮ್ಮ ಮರು ಮಾರಾಟ  ಬೆಲೆ ಅಥವಾ ಬಾಡಿಗೆ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಏನೇ ಆದರೂ, ಈ ಪ್ರದೇಶದೊಳಗಿನ ಇನ್ನಿತರ ಸ್ಥಳಗಳಲ್ಲಿ ವ್ಯವಹಾರ ಪ್ರಗತಿಯಲ್ಲಿದ್ದು, ಇಲ್ಲಿನ ಆಸ್ತಿಯಲ್ಲಿ ಉತ್ತಮ ಮರುಪಾವತಿ ಸಾಧ್ಯವಿದೆ.

ಇಲ್ಲಿನ ಹಲವು ಹಳೆಯ ನಿವಾಸಗಳು ಇದೀಗ ‘ಬಿಲ್ಡರ್‌ ಫ್ಲೋರ್ ಅಪಾರ್ಟ್‌ಮೆಂಟ್‌’ (ಸಾಮಾನ್ಯ ಫ್ಲ್ಯಾಟ್‌ಗಳಂತೆ ಇರದ, ಹೆಚ್ಚು ಖಾಸಗೀತನದ ಅವಕಾಶ ಒದಗಿಸುವ ವಸತಿ ವ್ಯವಸ್ಥೆ) ಹಾಗೂ ಸಣ್ಣ ಅಪಾರ್ಟ್‌ಮೆಂಟ್‌ಗಳಾಗಿ ಪರಿವರ್ತನೆಯಾಗುತ್ತಿವೆ. ನಿವೇಶನದ ಕೊರತೆಯಿಂದ ಕಡಿಮೆ ಘಟಕಗಳ ಪ್ರಾಜೆಕ್ಟ್‌ಗಳು ಸದ್ಯಕ್ಕೆ ಗರಿಗೆದರಿವೆ. ಉದಾಹರಣೆಗೆ, ಕೇವಲ 88 ಘಟಕಗಳನ್ನು ಹೊಂದಿರುವ ಪ್ರೆಸ್ಟೀಜ್‌ ಗ್ರೂಪ್‌ನ ಲೀಲಾ ರೆಸಿಡೆನ್ಸೀಸ್ ಪ್ರಾಜೆಕ್ಟ್‌. ಇದರ ಜೊತೆಗೆ ಬೊಟಿಕ್‌ ಅಪಾರ್ಟ್‌ಮೆಂಟ್‌ (ವ್ಯವಹಾರಕ್ಕೆ ಸಣ್ಣ, ಐಷಾರಾಮಿ ಸ್ಥಳ– ರಿಯಲ್‌ ಎಸ್ಟೇಟ್‌ನಲ್ಲಿನ ಹೊಸ ಟ್ರೆಂಡ್‌) ಕೂಡ ತಲೆ ಎತ್ತುತ್ತಿವೆ.

*ಪ್ರಸ್ತುತ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಸ್ಥಳಕ್ಕೆ ಬೇಡಿಕೆ ಹೇಗಿದೆ?
ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ಹಲವು ಪ್ರದೇಶಗಳಲ್ಲಿ ವಸತಿ ಉದ್ದೇಶಗಳಿಗೆ ವರ್ಷದಿಂದ ವರ್ಷಕ್ಕೆ ಶೇ 20–23ರಷ್ಟು ಬೇಡಿಕೆ ಹೆಚ್ಚುತ್ತಿದೆ. ಈ ಹೆಚ್ಚಳದ ಪರಿಣಾಮ ಈ ಪ್ರದೇಶದ ಒಳಗೆ ಹಾಗೂ ಸುತ್ತಮುತ್ತಲೂ ಹಲವು ವಾಣಿಜ್ಯ ಸಂಸ್ಥೆಗಳು ಹುಟ್ಟಿಕೊಂಡಿವೆ. ಮಾರಾಟ ಅಷ್ಟೇ ಅಲ್ಲ, ಬಾಡಿಗೆಗೂ ಇಲ್ಲಿ ಬೇಡಿಕೆ ಹೆಚ್ಚು. ಇಲ್ಲಿನ ರುಸ್ತಂಬಾಗ್‌ ಪ್ರದೇಶದಲ್ಲಿ ಎಂಬೆಸಿ ಗಾಲ್ಫ್‌ ಲಿಂಕ್ಸ್‌, ಡೈಮಂಡ್ ಡಿಸ್ಟ್ರಿಕ್ಟ್, ಆಂಜನೇಯ ಟೆಕ್ನೋ ಪಾರ್ಕ್‌, ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಹಾಗೂ ಇನ್ನಿತರ ಹಲವು ಕಚೇರಿಗಳು ಆರಂಭವಾಗಿವೆ.

*ಈ ಪ್ರದೇಶದಲ್ಲಿ ವಾಸಿಸುವುದರಿಂದ ಇರುವ ಪ್ರಯೋಜನಗಳೇನು?
ಟ್ರಿನಿಟಿ ಚರ್ಚ್‌ ರಸ್ತೆಯ ಜಂಕ್ಷನ್‌  ಮತ್ತು ವಿಕ್ಟೋರಿಯಾ ರಸ್ತೆಯಿಂದ ಆರಂಭಿಸಿ ಎಚ್‌ಎಎಲ್‌ ರಸ್ತೆಯ ಕೊನೆವರೆಗೂ ಇರುವ ಪ್ರದೇಶಗಳಲ್ಲಿ ಹಲವು ಪ್ರಯೋಜನಗಳು ಇವೆ.

1.ಉತ್ತಮ ಸಂಪರ್ಕ: ಈ ಪ್ರದೇಶವು ಮಧ್ಯ ಬೆಂಗಳೂರು, ಹೊರವರ್ತುಲ ರಸ್ತೆಯ  ಆಚೆಗೂ ನಗರದ ಅಂಚಿನವರೆಗೂ ಸಂಪರ್ಕ ಹೊಂದಿದೆ. ವರ್ತೂರು ರಸ್ತೆ ಹಾಗೂ ಐಟಿ ಕಂಪೆನಿಗಳ ಕೇಂದ್ರವಾಗಿರುವ ವೈಟ್‌ಫೀಲ್ಡ್‌, ಐಟಿಪಿಎಲ್, ಬ್ರುಕ್‌ಫೀಲ್ಡ್‌ಗಳನ್ನು ಸೇರುವ ಸಂಪರ್ಕ ವ್ಯವಸ್ಥೆಯೂ ಇದೆ. ಜೊತೆಗೆ ವಸತಿ ವಲಯಗಳಾದ ವರ್ತೂರು, ಕುಂದಲಹಳ್ಳಿ ಅಷ್ಟೇ ಅಲ್ಲದೆ ಇಂದಿರಾನಗರದ ನೂರು ಅಡಿ ರಸ್ತೆಯನ್ನು ಹಾಯ್ದು ಇಂದಿರಾನಗರ ಹಾಗೂ ಕೋರಮಂಗಲಕ್ಕೂ ಸಂಪರ್ಕ ಹೊಂದಿದೆ.

2. ಸಾರ್ವಜನಿಕ ಸಾರಿಗೆ ಅನುಕೂಲ: ಹಳೇ ವಿಮಾನ ನಿಲ್ದಾಣ ರಸ್ತೆಯಿಂದ ನಗರದ ಇನ್ನಿತರ ಸ್ಥಳಗಳಿಗೆ ಸುಲಭವಾಗಿ ಸಂಚರಿಸಬಹುದು. ಎಚ್‌ಎಎಲ್‌ ಬಸ್‌ ನಿಲ್ದಾಣ, ಲೀಲಾ ಪ್ಯಾಲೆಸ್ ನಿಲ್ದಾಣ, ದೊಮ್ಮಲೂರು ಬಸ್‌ ನಿಲ್ದಾಣ ಹೀಗೆ ಇನ್ನೂ ಹಲವು ಬಸ್‌ ನಿಲ್ದಾಣಗಳು ಈ ರಸ್ತೆಯಲ್ಲಿವೆ. ನಿರಂತರವಾಗಿ ಆಟೊಗಳು ಇಲ್ಲಿ ಲಭ್ಯವಿರುವುದರಿಂದ ಸಂಚಾರ ಕಷ್ಟವೆನಿಸುವುದಿಲ್ಲ.

3. ಸಾಮಾಜಿಕ ಹಾಗೂ ಭೌತಿಕ ಮೂಲ ಸೌಲಭ್ಯ:

ಶಾಲೆ, ಆಸ್ಪತ್ರೆ, ಶಾಪಿಂಗ್‌ ಕೇಂದ್ರಗಳಲ್ಲದೆ, ಹಲವು ಹೋಟೆಲ್‌ಗಳ ತಾಣ ಇದು. ಕೂಗಳತೆ ದೂರದಲ್ಲಿ ಇವೆಲ್ಲವೂ ಲಭ್ಯವಿರುವುದು ಬೆಂಗಳೂರಿನ ರಿಯಾಲ್ಟಿ ಗ್ರಾಫ್‌ನಲ್ಲಿ ಈ ಸ್ಥಳ ಉತ್ತಮ ಸ್ಥಾನ ಪಡೆಯಲು ಕಾರಣವಾಗಿದೆ.

4. ಇಸ್ರೊ, ಎನ್‌ಎಎಲ್‌, ಎಚ್‌ಎಎಲ್‌ನಂಥ ಕೇಂದ್ರ ಸರ್ಕಾರದ ಕಚೇರಿಗಳೊಂದಿಗೆ ಐಟಿ ಮತ್ತು ಇ–ಕಾಮರ್ಸ್‌ ಕಂಪೆನಿಗಳಿಗೆ ನೆಲೆಯಾಗಿರುವುದು.

*ನಗರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ  ಪ್ರದೇಶಗಳಲ್ಲಿ ಹಳೇ ವಿಮಾನ ನಿಲ್ದಾಣ ರಸ್ತೆಯೂ ಒಂದು. ಇಲ್ಲಿನ ಅನನುಕೂಲಕರ ಅಂಶಗಳಾವುವು?
ನಾಣ್ಯಕ್ಕೆ ಎರಡು ಮುಖಗಳಿದ್ದಂತೆ  ಈ ಪ್ರದೇಶಕ್ಕೆ ಅನುಕೂಲಗಳೊಂದಿಗೆ ಹಲವು ಅನನುಕೂಲಗಳೂ ಸೇರಿಕೊಂಡಿವೆ. ಅವುಗಳೆಂದರೆ...
1. ಹತ್ತು ವರ್ಷಗಳ ಹಿಂದೆ ಇದು ಅತಿ ಶಾಂತಿಯುತ ಪ್ರದೇಶ ಎಂದು ಹೆಸರಾಗಿತ್ತು. ಕಾಡಿನಂತೆ ಗಿಡಮರಗಳಿಂದ  ಸುತ್ತುವರಿದಿತ್ತು. ಇಂದು ಈ ರಸ್ತೆಯಲ್ಲಿ ಹಲವು ಕಂಪೆನಿಗಳು ತಲೆಎತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಹುಟ್ಟಿಕೊಂಡಿದೆ.  ಅದರಲ್ಲೂ ಕಚೇರಿ ವೇಳೆಯಲ್ಲಿ ಅತಿರೇಕ ತಲುಪುವುದರಿಂದ ಇದರೆಡೆಗೆ ಹೆಚ್ಚು ಗಮನದ ಅವಶ್ಯಕತೆಯಿದೆ.

2. ನಗರದ ಪ್ರಮುಖ ರಸ್ತೆಗಳಲ್ಲಿ ಇದೂ ಒಂದಾಗಿದ್ದು, ಟ್ರಾಫಿಕ್‌ ಜಾಮ್‌ ಪ್ರಮಾಣ ಕೂಡ ಹೆಚ್ಚು.
3. ಇಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಜಾಗ ಕಡಿಮೆಯಾಗುತ್ತಿದೆ. ಪಾದಚಾರಿ ಮಾರ್ಗವಿಲ್ಲದೆ, ಮೇಲ್ಸೇತುವೆಯೂ ಇಲ್ಲದೆ ರಸ್ತೆ ದಾಟಲು ಹರಸಾಹಸ ಪಡಬೇಕು. ಇಂಡಿಕೇಟರ್‌ಗಳಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳು ನಿಲ್ಲುವುದರಿಂದ ಇತ್ತೀಚೆಗೆ ಅಪಘಾತ ಪ್ರಕರಣಗಳೂ ಹೆಚ್ಚಿವೆ.

4.  ಎಲ್ಲೆಂದರಲ್ಲಿ ಕಸ ಸುರಿಯುವುದು ಇಲ್ಲಿ ಗಮನಿಸ ಬೇಕಾದ ಇನ್ನೊಂದು ಅಂಶ. ಇದು ಕ್ರಿಮಿಕೀಟಗಳಿಗೆ ಜಾಗವಾಗಿದ್ದು, ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಬಹುದಾಗಿದೆ.

*ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮುಂದಿನ ವಸತಿ ಹಾಗೂ ವಾಣಿಜ್ಯ ಯೋಜನೆಗಳೇನು?
ಪಾವನಿ ಇಷ್ತಾ, ಶೋಭಾ ಕಾನ್‌ಕಾರ್ಡಿಯಾ, ಪ್ರೆಸ್ಟೀಜ್‌ ಲೀಲಾ ರೆಸಿಡೆನ್ಸಸ್, ಇಂದಿರಾ ಎಮೋಟಿವ್, ಸಿಟಡೆಲ್ ಶರತ್ ಪ್ಯಾರಡೈಸ್, ಮಂಜುನಾಥ ರೆಸಿಡೆನ್ಸಿ, ಎಂಬಸಿ ಮ್ಯಾನರ್, ಕಾನ್ಫಿಡೆಂಟ್‌ ಕಾರಿನಾ, ಜೀವನ್‌ ಎಲೈಟ್, ಕ್ಲಬ್‌ ನೆಸ್ಟ್ ಲೇಕ್‌ವ್ಯೂ, ಹಿರೆನ್ ವಾಹೆನ್ ಹೈಕ್ಲಿಫ್, ಸಿಟಡೆಲ್‌ ಸನ್‌ಶೈನ್, ಸ್ಕಂದ ರಾಗ, ಶೋಭಾ ಪ್ಯಾಲಡಿಯನ್, ಪರಾಂಜಪೆ ವಿಂಡ್‌ ಫೀಲ್ಡ್ಸ್, ವಿ ರಹೇಜಾ ವಿಂಡರ್‌ಮಿಯರ್.

*ಒಬ್ಬ ವ್ಯಕ್ತಿ, ಇಲ್ಲಿ ನಿವಾಸಕ್ಕೆ ಹಣ ಹೂಡಿದರೆ ಯಾವ ರೀತಿಯ ಅನುಕೂಲಗಳನ್ನು  ನಿರೀಕ್ಷಿಸಬಹುದು?
ಪ್ರಸ್ತುತ ಹೆಚ್ಚು ಹೊಸ ಪ್ರಾಜೆಕ್ಟ್‌ಗಳು ನಡೆಯುತ್ತಿಲ್ಲದೇ ಇದ್ದರೂ, ಇಲ್ಲಿನ ಸುತ್ತಲೂ ಇರುವ ಜಾಗಗಳಲ್ಲಿ ಪರಂಪರೆಯ ಛಾಪು ಉಳಿದಿರುವುದರಿಂದ ವಹಿವಾಟು ಉತ್ತಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಜಾಗ ಹಾಗೂ ಇಲ್ಲಿನ ಉತ್ತಮ ಮೂಲಸೌಕರ್ಯದ ಕಾರಣದಿಂದ ಇಲ್ಲಿ 10–12 ಶೇಕಡಾ ಏರಿಕೆ ನಿರೀಕ್ಷಿಸಬಹುದು. ಇದು ಸ್ಥಿರಾಸ್ತಿಯ ನಿರ್ದಿಷ್ಟ ಸ್ಥಳ ಹಾಗೂ ಪ್ರಮಾಣದ  ಮೇಲೆ ಅವಲಂಬಿತವಾಗಿರುತ್ತದೆ. ಈ ಸ್ಥಳದಲ್ಲಿ ಉತ್ತಮ ಬಾಡಿಗೆಯಲ್ಲದೆ, ಬಂಡವಾಳದಿಂದ ಲಾಭವನ್ನೂ ಪಡೆಯಬಹುದು.
ಮಾಹಿತಿ: commonf*oor.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT