ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಶಾಲೆಯಲ್ಲೂ ಮಾಡಿ ‘ಮ್ಯಾಜಿಕ್‌’

ಭಾಷೆ ಕಲಿಕೆ ಬಿಕ್ಕಟ್ಟು
Last Updated 23 ಜನವರಿ 2015, 19:46 IST
ಅಕ್ಷರ ಗಾತ್ರ

 ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಹೆಚ್ಚಾ­ಗಿದೆ. ಈ ಪ್ರವೃತ್ತಿ ಪೇಟೆ, ಪಟ್ಟಣಗಳಲ್ಲಿ ಅಧಿಕವಾಗಿದ್ದರೂ, ಹಳ್ಳಿಗಳಿಗೂ ಇದರ ಬಿಸಿ ತಟ್ಟಲು ಆರಂಭವಾಗಿದೆ.

ಪಾಲಕರು ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗಿಂತ ಇಂಗ್ಲಿಷ್‌ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಓದಿಸಲು ಯಾಕೆ ಇಷ್ಟಪಡುತ್ತಿದ್ದಾರೆ? ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗದು, ಅಲ್ಲಿ ಶಿಸ್ತಿಲ್ಲ, ಸಮವಸ್ತ್ರ, ಟೈ, ಬೂಟು ಇರದು ಎಂಬೆಲ್ಲ ಕಾರಣಗಳನ್ನು ಕೆಲವರು ಕೊಡುತ್ತಾರೆ. ಆದರೆ ಇದಕ್ಕಿಂತ ಮುಖ್ಯವಾಗಿ ಅಲ್ಲಿ ಶಿಕ್ಷಕರೇ ಇಲ್ಲ ಎಂಬ ಕಾರಣವನ್ನು ಹಲವರು ನೀಡಿದರೆ, ಬರೀ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರೂ ಅನೇಕರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ವಿದ್ಯಮಾನವನ್ನು ನಾವೆಲ್ಲರೂ ಸಮಗ್ರವಾಗಿ ಅವಲೋಕಿಸಬೇಕಾಗುತ್ತದೆ.

ಇಲ್ಲಿಯ ಚರ್ಚೆಗಾಗಿ ಒಂದು ಶಾಲೆಯನ್ನು ಉದಾಹರಣೆಯಾಗಿ ತೆಗೆದು­ಕೊಳ್ಳೋಣ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಗಡ್ಡದನಾರಾಯಣ ತಾಂಡಾ ಶಾಲೆ ಪ್ರಾರಂಭವಾದದ್ದು 2003ರಲ್ಲಿ. ಆದರೆ ಕಳೆದ ಐದು ವರ್ಷಗಳಿಂದೀಚೆಗೆ ಈ ಶಾಲೆಯಲ್ಲಿ 5ನೇ ತರಗತಿ ಮುಗಿಸಿ, ಹೆಚ್ಚಿನ ಶಿಕ್ಷಣಕ್ಕಾಗಿ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ ಮೊರಾರ್ಜಿ, ಕಿತ್ತೂರು ಚೆನ್ನಮ್ಮ ಮತ್ತು ನವೋದಯ ಶಾಲೆಗಳಿಗೆ ಸೇರ್ಪಡೆಯಾಗಿರುವ ಮಕ್ಕಳ ಸಂಖ್ಯೆ ಸಾಕಷ್ಟಿದೆ.

ಲಂಬಾಣಿ ಜನಾಂಗದ ಮಕ್ಕಳೇ ಹೆಚ್ಚಾಗಿರುವ ಇಲ್ಲಿ ಈಗ ಶೇಕಡ ನೂರರಷ್ಟು  ಹಾಜರಾತಿ, ಉತ್ತಮ ಕಲಿಕೆ (ಅನೇಕ ಪ್ರಶಸ್ತಿಗಳು ಬಂದಿವೆ), ಶಾಲೆ ಬಿಟ್ಟ ಮೇಲೆ ಮಕ್ಕಳು ಒಟ್ಟಿಗೆ ಕೂತು ಮನೆಗೆಲಸ ಮುಗಿಸಿ ಮನೆಗೆ ಕೈಬೀಸಿಕೊಂಡು ಹೋಗುವುದು ಇತ್ಯಾದಿ ಕಾಣುತ್ತದೆ. ಕೆಲವೊಮ್ಮೆ ಶಿಕ್ಷಕರು ಬರುವುದು ತಡ­ವಾದರೆ, ಮಕ್ಕಳೇ ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿ ತರಗತಿಗೆ ತೆರಳಿ ಕಲಿಕೆ ಪ್ರಾರಂಭಿಸುತ್ತಾರೆ. ಶಾಲೆಯಲ್ಲಿ ಪುಟ್ಟ ಗ್ರಂಥಾಲಯವಿದೆ. ಮಕ್ಕಳು ಅಲ್ಲಿಯ ಪುಸ್ತಕಗಳನ್ನು ಓದಿ ತರಗತಿಗಳಲ್ಲಿ ಆ ಪುಸ್ತಕದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುತ್ತಾರೆ.

ಮಕ್ಕಳೇ ನಡೆಸುವ ಪುಟ್ಟದೊಂದು ಬ್ಯಾಂಕ್ ಸಹ ಇದೆ. ಮಕ್ಕಳು ತಮಗೆ ಬೇಕಾದ ಪುಸ್ತಕ, ಪೆನ್ಸಿಲ್, ಪೆನ್ನುಗಳನ್ನು ಕೊಳ್ಳಲು ಹಣವಿಲ್ಲದಾಗ ಇಲ್ಲಿಂದ ಕಡ ಪಡೆದು, ಪೋಷಕರು ಕೊಟ್ಟಾಗ  ಹಿಂದಿರುಗಿಸುತ್ತಾರೆ. ಸಣ್ಣ ಪುಟ್ಟ ಪ್ರವಾಸ­ಗಳನ್ನೂ ಆಯೋಜಿಸಲಾಗುತ್ತದೆ. ಹೀಗೆ ಇಲ್ಲಿ ಅನೇಕ ಚಟುವಟಿಕೆಗಳಿವೆ. ಮೂವರು ಶಿಕ್ಷಕರಿದ್ದು ಎಲ್ಲ ಚಟುವಟಿಕೆಗಳ ಮೇಲ್ವಿಚಾ­ರಣೆ­ಯನ್ನು ಒಗ್ಗೂಡಿ ನಡೆಸಿಕೊಂಡು ಹೋಗುತ್ತಾರೆ.

ಇಂತಹ ಸರ್ಕಾರಿ ಶಾಲೆಗೆ ಪೋಷಕರು ಬೇರೆ ಶಾಲೆಯಲ್ಲಿರುವ ತಮ್ಮ ಮಕ್ಕಳನ್ನು ತಂದು ಸೇರಿಸುವುದು ಸಹಜ ಅಲ್ಲವೇ? ಆದರೆ ಇಲ್ಲಿ ಗಮನಾರ್ಹ ವಿಷಯವೆಂದರೆ, ಈ ಶಾಲೆ ಪ್ರಾರಂಭವಾದಾಗ ಹೀಗಿರಲಿಲ್ಲ. ಆದರೆ ಕಳೆದ 10 ವರ್ಷಗಳ ಹಿಂದೆ ಉತ್ತಮ ಶಿಕ್ಷಕರು ಇಲ್ಲಿಗೆ ವರ್ಗವಾಗಿ ಬಂದಾಗ, ಇದು ಅತಿ ಹಿಂದುಳಿದ ಊರೊಂದರ ತೀರಾ ದುಃಸ್ಥಿತಿಯ ಶಾಲೆಯಾಗಿತ್ತು. ಆದರೆ ಅದೇ ಶಾಲೆ ಬೆಳೆದುಬಂದ ಬಗೆಯನ್ನು ಗಮನಿಸಿದರೆ, ಯಾವುದೇ ಶಾಲೆಯ ಅಭಿವೃದ್ಧಿಗೆ ಪರಿಣಾಮಕಾರಿ ಮುಂದಾಳತ್ವ, ಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿ, ಬೆಂಬಲಿ­ಸುವ ವ್ಯವಸ್ಥೆ, ಸಮುದಾಯದ ಪಾಲುದಾರಿಗೆ ಎಲ್ಲವೂ ಮುಖ್ಯವಾಗುತ್ತದೆ.

ಇಡೀ ಯಾದಗಿರಿ ಜಿಲ್ಲೆಯನ್ನು ತೆಗೆದುಕೊಂಡರೆ, ಪ್ರಾಥಮಿಕ ಶಾಲೆಗಳಲ್ಲಿ ಶೇ 27ರಷ್ಟು ಶಿಕ್ಷಕರ ಕೊರತೆ ಎದ್ದುಕಾಣುತ್ತದೆ. ಶೇ 20ರಷ್ಟು ಏಕೋಪಾಧ್ಯಾಯ ಶಾಲೆಗಳಿವೆ. ಸಾಧಾರಣವಾಗಿ ಒಟ್ಟಾರೆ ಶೇಕಡ 15ರಷ್ಟು ಶಿಕ್ಷಕರು ಗೈರುಹಾಜರಾಗಿರುತ್ತಾರೆ.

ಪ್ರಪಂಚದ ಯಶಸ್ವಿ ಸಂಸ್ಥೆಗಳಲ್ಲಿ ಎದ್ದು ಕಾಣುವುದು  ಅಲ್ಲಿ ಕೆಲಸ ಮಾಡುವ­ವರ ಮುಂದಾಳತ್ವದ ಗುಣ. ನಾವು 2003-- -05ರಲ್ಲಿ ಕಲಿಕಾ ಖಾತ್ರಿ ಕಾರ್ಯ­ಕ್ರಮ­ದಡಿ, ಪ್ರಶಸ್ತಿ ಪಡೆದ ಶಾಲೆಗಳನ್ನು ಅಧ್ಯಯನ ಮಾಡಿದಾ­ಗಲೂ ನಮಗೆ ಕಂಡು ಬಂದ ಅಂಶ ಇದೇ. ಅಂದರೆ ಆ ಶಾಲೆಗಳು ಉತ್ತಮವಾಗಲು ಅಲ್ಲಿಯ ಮುಖ್ಯ ಗುರುಗಳೇ ಕಾರಣ. ಅವರ ಕಾಳಜಿ, ಕನಸು, ಶಿಕ್ಷಕರನ್ನು ಬೆಂಬಲಿ­ಸುವ ರೀತಿ, ಸಮುದಾಯದೊಂದಿಗಿನ ಸಂಬಂಧ ಎಲ್ಲವೂ ಅಲ್ಲಿ ಅಡಕವಾಗಿದ್ದವು.

ಆದರೆ ನಮ್ಮಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆ ಎರಡರಲ್ಲೂ ಮುಖ್ಯ ಶಿಕ್ಷಕರಿಗೆ ತರಬೇತಿಯ ಕೊರತೆ ಇದೆ. ಶಾಲೆಗಳನ್ನು ಗಟ್ಟಿಗೊಳಿಸಬೇಕಾದರೆ ಶೈಕ್ಷಣಿಕ ಮುಂದಾಳತ್ವ ವಹಿಸುವ ಮುಖ್ಯ ಗುರುಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು.  ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ  ಉತ್ತಮವಾದ ವ್ಯವಸ್ಥೆ ಇದೆ. ತರಬೇತಿ, ಪರಿವೀಕ್ಷಣೆ, ಸಂಪನ್ಮೂಲ, ವಿಸ್ತರಣೆ, ಸಮುದಾಯದ ಬೆಂಬಲ ಎಲ್ಲಕ್ಕೂ ಇಲ್ಲಿ ಅನುಕೂಲವಿದೆ.  ಆದರೆ ಈ ವ್ಯವಸ್ಥೆ ಶಿಕ್ಷಕರಿಗೆ ಬೆಂಬಲವಾಗಿ ನಿಂತ ಕಡೆಗಳಲ್ಲಿ ಮಾತ್ರ ಅದ್ಭುತವಾಗಿ ಕೆಲಸ ಆಗಿರುವುದನ್ನು ನಾವು ಕಾಣುತ್ತೇವೆ.

ಉತ್ತಮ ಶಾಲೆಗಳನ್ನು ನಿರ್ಮಿಸುವಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪಾತ್ರ ವಹಿಸಬೇಕಾದುದು  ಸಮುದಾಯ. ಶಿಕ್ಷಕ ವೃಂದಕ್ಕೆ ಸಮುದಾಯ ಬೆಂಬಲವಾಗಿ ನಿಂತರೆ ಮಾತ್ರ ಪ್ರಗತಿ ಸಾಧ್ಯ. ಹೀಗಾಗಿ ಶಾಲೆ ನಡೆಸಲು ಒಳ್ಳೆಯ ವಾತಾವರಣ ನಿರ್ಮಿಸುವುದು ಸಮುದಾಯದ ಜವಾಬ್ದಾರಿ.
(ಲೇಖಕರು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಈಶಾನ್ಯ ಕರ್ನಾಟಕ ವಿಭಾಗದ ಮುಖ್ಯಸ್ಥರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT