ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಸೊಗಡಿನ ಆವನಿ

ಸುತ್ತಾಣ
Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಟ್ಟ-ಗುಡ್ಡಗಳ ಮಧ್ಯದಲ್ಲಿರುವ ಆವನಿ ಸುಂದರವಾದ ಹಳ್ಳಿಯ ವಾತಾವರಣ ಹೊಂದಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನವಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಬಳಿ ಇರುವ ಈ ಸ್ಥಳ ಸಾಹಸ ಪ್ರಿಯರಿಗೂ, ಆಸ್ತಿಕರಿಗೂ ಇಷ್ಟವಾಗುತ್ತದೆ. ಬೆಂಗಳೂರಿನಿಂದ 95 ಕಿ. ಮೀ. ದೂರದಲ್ಲಿರುವ ಆವನಿ ಒಂದು ದಿನದ ರಜೆಯಲ್ಲಿ ಹೋಗಿಬರಬಹುದಾದ ಪಿಕ್-ನಿಕ್ ಸ್ಪಾಟ್.

ಪುರಾಣ–ಇತಿಹಾಸ
ಊರಿನ ತುದಿಯಲ್ಲಿರುವ ಬೆಟ್ಟದ ಮೇಲೆ ಸೀತೆ-ಪಾರ್ವತಿಯರ ಗುಡಿಗಳಿವೆ.  ಇದನ್ನು ‘ವಾಲ್ಮೀಕಿ ಬೆಟ್ಟ’ವೆಂದು ಕರೆಯುತ್ತಾರೆ. ಕಾರಣ ಇಲ್ಲಿ ವಾಲ್ಮೀಕಿ ಆಶ್ರಮ ಇತ್ತೆಂಬ ನಂಬಿಕೆ ಇದೆ. ಶ್ರೀರಾಮನು ಸೀತೆಯನ್ನು ತ್ಯಜಿಸಿದಾಗ, ಗರ್ಭಿಣಿ  ಸೀತೆಯನ್ನು ಲಕ್ಷ್ಮಣ ಇಲ್ಲಿನ  ವಾಲ್ಮೀಕಿ ಆಶ್ರಮಕ್ಕೆ ಬಿಟ್ಟು ಬರುತ್ತಾನೆ. ಇಲ್ಲೇ ಲವ-ಕುಶರ ಜನನವಾಗುತ್ತದೆ.  ಹಾಗೆ ಮುಂದೆ ರಾಮ ಮತ್ತು ಲವ-ಕುಶರ ನಡುವೆ ನಡೆಯುವ ಯದ್ಧವು ಇದೇ ಪ್ರದೇಶದಲ್ಲಿ ನಡೆಯಿತು ಎಂಬುದು ಸ್ಥಳೀಯರ ನಂಬಿಕೆ.

ಅವನೀಸುತೆಯೆಂದು ಕರೆಯಲಾಗುವ ಸೀತೆಯು ಬಹಳ ಕಾಲ ಇಲ್ಲೇ ನೆಲಸಿದ್ದರಿಂದ ಈ ಪ್ರದೇಶಕ್ಕೆ ‘ಆವನಿ’ ಹೆಸರು ಬಂದಿದೆ.  ಈ ಬೆಟ್ಟದ ಮೇಲೆ ವಾಲ್ಮೀಕಿ ಗವಿ, ಕಷಾಯ ತೀರ್ಥ, ಲಕ್ಷ್ಮಣ ಸೀತೆಗಾಗಿ ನಿರ್ಮಿಸಿದ ಧನುಷ್ಕೋಟಿ ತೀರ್ಥಗಳು ಇವೆ. ಇಲ್ಲಿನ ಇನ್ನೊಂದು ವಿಶೇಷ ನಂಬಿಕೆಯೆಂದರೆ ಈ ಬೆಟ್ಟದ ಮೇಲೆ ಮಕ್ಕಳಿರದವರು ಕಲ್ಲುಗಳನ್ನು ಒಂದರ ಮೇಲೊಂದು ಇಡುವ ಹರಕೆ ಒಪ್ಪಿಸಿದರೆ ಮಕ್ಕಳಾಗುತ್ತವೆ ಎಂಬ ಪ್ರತೀತಿ ಇದೆ. ಆದ್ದರಿಂದ ಬೆಟ್ಟ ಏರುವ ದಾರಿಯಯದ್ದಕ್ಕೂ ಮಕ್ಕಳು ಆಟಕ್ಕೆಂದು ಕಟ್ಟುವ ‘ಗೊಂಬೆಗುಡಿ’ಯಂಥ ಮನೆಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.  

  ವಾಲ್ಮೀಕಿ ಬೆಟ್ಟದ ಬುಡದಲ್ಲಿ 9ನೇ ಶತಮಾನಕ್ಕೆ ಸೇರಿದ ದೇವಾಲಯ ಸಮುಚ್ಚಯ ಇದೆ. ರಾಮಲಿಂಗೇಶ್ವರ ದೇವಾಲಯವೆಂದು ಪ್ರಸಿದ್ಧವಾಗಿರುವ ಈ ಸಂಕೀರ್ಣವೇ ಊರಿಗೆ ಐತಿಹಾಸಿಕ ಹಿನ್ನೆಲೆ ಒದಗಿಸಿದೆ. 10-12 ದೇವಾಲಯಗಳಿರುವ ಈ ಸಮುಚ್ಚಯದ ನಿರ್ಮಾಣ ಕಾಲದ ಬಗ್ಗೆ ನಿಖರತೆ ಇಲ್ಲದಿದ್ದರೂ ನೊಳಂಬರು , ಚೋಳರು, ಚಾಳುಕ್ಯರು, ಗಂಗರು, ವಿಜಯನಗರದ ಅರಸರಿಂದ ಹಿಡಿದು ಇತ್ತೀಚಿನ ಮೈಸೂರು ಅರಸರವರೆಗೆ ಎಲ್ಲ ರಾಜಮನೆತನಗಳ ಕೆತ್ತನೆ ಶೈಲಿಗಳು ಇಲ್ಲಿವೆ.

ದಕ್ಷಿಣಕ್ಕೆ ಹಾಗೂ ಪೂರ್ವಕ್ಕೆ ಬಾಗಿಲಿದ್ದು, ಎತ್ತರದ ಪ್ರಾಕಾರದಿಂದ ಈ ಸಮುಚ್ಚಯ ಸುರಕ್ಷಿತವಾಗಿದೆ. ಮಧ್ಯದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದ್ದು, ಅದರ ಪಶ್ಚಿಮಕ್ಕೆ ರಾಮೇಶ್ವರ, ಲಕ್ಷ್ಮಣೇಶ್ವರ ಹಾಗೂ ಭರತೇಶ್ವರ ದೇವಾಲಯಗಳಿವೆ. ಪೂರ್ವಕ್ಕೆ ಶತೃಘ್ನೇಶ್ವರ, ಅಂಜನೇಶ್ವರ, ಚಿಕ್ಕದಾದ ಸುಗ್ರೀವೇಶ್ವರ ಮತ್ತು ಅಂಗದೇಶ್ವರ ದೇವಾಲಯಗಳಿವೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಎತ್ತರದ ಗರುಡಗಂಬವಿದೆ.

ಶತೃಘ್ನೇಶ್ವರ ಮತ್ತು  ಲಕ್ಷ್ಮಣೇಶ್ವರ ದೇವಾಲಯಗಳ ಗೋಡೆ ಮೇಲೆ ಹಳೆಗನ್ನಡದ ಲಿಪಿ ಇದ್ದು, ಇದು ವೀರ ನೊಳಂಬ ಕಾಲಕ್ಕೆ ಸೇರಿದ್ದಾಗಿದೆ. ಈ ಶಾಸನದ ಪ್ರಕಾರ ದೇವಬ್ಬರಸಿ ಎಂಬ ಅರಸಿಯೊಬ್ಬಳು ‘ದೇವಬ್ಬೆ ಸಮುದ್ವ’ವನ್ನು ಹಾಗೂ ಹೊರವಂಗಲ(ಬೇತಮಂಗಲ)ದಲ್ಲಿ ವಿಷ್ಣು ದೇವಾಲಯವನ್ನು ಕಟ್ಟಿಸಿರುವ ಮಾಹಿತಿ ಇದೆ. ಅಲ್ಲದೆ ಈಕೆ ತನ್ನ ಮೊದಲನೇ ಮಗ ವೀರ ಮಹೇಂದ್ರ ನೊಳಂಬಾಧಿರಾಜನ ಸಾವಿನಿಂದ ಕೆಂಗೆಟ್ಟು ತನ್ನ ಎರಡನೇ ಮಗ ಇರವ ನೊಳಂಬನಿಗೆ ಪಟ್ಟ ಕಟ್ಟಿ ಆತನ ಕ್ಷೇಮಾಭಿವೃದ್ಧಿಗೆ ‘ನೊಳಂಬ ನಾರಾಯಣೇಶ್ವರ’ ದೇವಾಲಯವನ್ನು ಕಟ್ಟಿಸಿದಳೆಂದು ತಿಳಿದುಬರುತ್ತದೆ.   

ಲಕ್ಷ್ಮಣೇಶ್ವರ ದೇವಾಲಯ
ಈ ಸಮುಚ್ಚಯದಲ್ಲಿರುವ ಎಲ್ಲ ದೇವಾಲಯಗಳಲ್ಲಿ ಇದೇ ತುಂಬ ದೊಡ್ಡದಾಗಿದ್ದು, ಅಪೂರ್ವ ಕೆತ್ತನೆಗಳಿಂದ ಕೂಡಿದೆ.  ಇಲ್ಲಿನ ಗೋಡೆಗಳ ಮೇಲಿನ ಕುದುರೆ-ಆನೆ ಸಾಲುಗಳ ಕೆತ್ತನೆ, ಯಾಳಿ ಮತ್ತು ಮಕರ ಕೆತ್ತನೆಗಳು ಬಾಣರ ಮತ್ತು ರಾಷ್ಟ್ರಕೂಟರ ಕಾಲದವು.  ಇದರ ನವರಂಗ ಚೌಕಾಕಾರದ ಸುಂದರ ಕೆತ್ತನೆಯ ಕಂಬಗಳಿಂದ ರಚಿತವಾಗಿದ್ದು, ಕಂಬಗಳ ಮೇಲ್ತುದಿಯಲ್ಲಿ ದುಂಡನೆಯ ದೊಡ್ಡ-ದೊಡ್ಡ ಕಲ್ಲಿನ ಗಾಲಿಗಳು ಛತ್ತನ್ನು ಎತ್ತಿ ನಿಲ್ಲಿಸಿವೆ.  ತೆರೆದ ಸುಕನಾಸಿ, ಅಷ್ಟದಿಕ್ಪಾಲಕರಿಂದ ಸುತ್ತುವರಿದ ಉಮಾ-ಮಹೇಶ್ವರರ ಮೋಹಕ ಕೆತ್ತನೆಗಳು ನವರಂಗದ ಮೇಲ್ಚಾವಣಿಯಲ್ಲವೆ.

ಶೃಂಗೇರಿ ಶಾರದಾ ಪೀಠ
ಆದಿ ಶಂಕರರು ಸ್ಥಾಪಿಸಿರುವ ಶೃಂಗೇರಿ ಪೀಠದ ಜಗದ್ಗುರುಳಾದ 4ನೇ ನರಸಿಂಹಭಾರತಿಯವರು ಸಂಚಾರದಲ್ಲಿದ್ದಾಗ ಕೆಲದಿನ ಈ ಊರಲ್ಲಿ ತಂಗಿದ್ದರಂತೆ. ಆಗ ಅವರಿಗೆ ನಿಂತ ಭಂಗಿಯಲ್ಲಿರುವ ಶಾರದಾ ಮಾತೆಯ ಮೂರ್ತಿ ಸಿಕ್ಕಿತಂತೆ. ಸ್ಥಳಮಹಿಮೆಯನ್ನರಿತ ಶ್ರೀಗಳು ಅದನ್ನು ಅಲ್ಲೇ ಪ್ರತಿಷ್ಠಾಪಿಸಿ ಶಾಖಾ ಮಠವೊಂದರ ಸ್ಥಾಪನೆಗೆ ಕಾರಣರಾದರೆಂದು ಹೇಳಲಾಗುತ್ತದೆ.

ಬೆಟ್ಟದ ಮೇಲೆ ಹತ್ತಿಕೊಂಡು ಹೋದರೆ ಸೀತಾಮಾತೆ ದೇವಸ್ಥಾನವಿದೆ. ಹಾಗೆ ಹೋಗುವ ದಾರಿಯಲ್ಲಿ ಸೀತೆ ಲವಕುಶರಿಗೆ ಜನ್ಮವಿತ್ತಳೆಂದು ಹೇಳಲಾಗುವ ಗುಹೆಯಿದೆ. ಅಲ್ಲದೇ ವಾಲ್ಮೀಕಿ ಗುಹೆಯೂ ಅಲ್ಲೇ ಪಕ್ಕದಲ್ಲಿದೆ. ಅಷ್ಟೇನೂ ಕಡಿದಾಗಿಲ್ಲದ ಈ ಬೆಟ್ಟವನ್ನು ಎಲ್ಲರೂ ಸುಲಭವಾಗಿ ಹತ್ತಬಹುದು. ಅದರಲ್ಲಿ ಮಕ್ಕಳಿಗಂತೂ ಜಾರುಬಂಡಿ ಥರ ಇರುವ ಈ ಬೆಟ್ಟವನ್ನು ಹತ್ತುವುದೆಂದರೆ ತುಂಬ ಖುಶಿ ಕೊಡುವ ಆಟ. ಬೆಟ್ಟದ ಮೇಲೆ ಹೋಗಿ ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿದಾಗ ಹತ್ತಿ ಬಂದ ದಣಿವೆಲ್ಲ ಕಳೆದು ಬಹುದೂರದವರೆಗೆ ಕಾಣುವ ಸುತ್ತು-ಮುತ್ತಲಿನ ರಮಣೀಯ ದೃಶ್ಯ ಮುದಕೊಡುತ್ತದೆ. 

ಆವನಿ ಒಂದು ಪುಟ್ಟ ಹಳ್ಳಿಯಾದ್ದರಿಂದ ಊಟ-ತಿಂಡಿಯ ವ್ಯವಸ್ಥೆ ಮಾಡಿಕೊಂಡು ಹೋಗುವುದು ಒಳ್ಳೆಯದು. ಜತೆಗೆ ಬೆಟ್ಟ ಹತ್ತುವವರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT