ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ: ಕೃಷಿ ಮೇಲೆ ದುಷ್ಪರಿಣಾಮ

Last Updated 15 ಜೂನ್ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತಿಕ ಹವಾಮಾನ ಬದಲಾವಣೆಯು ಮುಂಬರುವ ದಿನಗಳಲ್ಲಿ ದೇಶದ ಕೃಷಿ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಭಾರತೀಯ ಅಂಕೆ ಸಂಖ್ಯೆಗಳ ಸಂಸ್ಥೆಯ ಕೃಷಿ ಆರ್ಥಿಕ ತಜ್ಞೆ ಮಧುರಾ ಸ್ವಾಮಿನಾಥನ್‌ ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಬುಧವಾರ ಶಾಸಕರ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ‘ಹವಾಮಾನ ವೈಪರೀತ್ಯ– ಕಾರಣಗಳು, ಪರಿಹಾರಗಳು ವಿಷಯದ ಕುರಿತು ಮಾತನಾಡಿ ಈ ವಿಷಯ ತಿಳಿಸಿದರು.

ಹವಾಮಾನ ವೈಪರೀತ್ಯದಿಂದ (ಕ್ಲೈಮೇಟ್‌ ವೇರಿಯೆಬಲ್‌) ಜಾಗತಿಕ ಹವಾಮಾನ (ಕ್ಲೈಮೇಟ್‌ ಚೇಂಜ್‌) ಬದಲಾವಣೆಯು ನಿಶ್ಚಿತ.  ಹವಾಮಾನ ಬದಲಾವಣೆ ಪರಿಣಾಮ ಭಾರತದ ಕೃಷಿ ಕ್ಷೇತ್ರದ ಮೇಲೆ  ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿದೆ.

ಮುಖ್ಯವಾಗಿ, ಹಿಮಾಚಲ ಪ್ರದೇಶದಲ್ಲಿ ಮೊದಲು ಬಯಲು ಪ್ರದೇಶದಲ್ಲಿ ಸೇಬು ಬೆಳೆಯಲಾಗುತ್ತಿತ್ತು. ಈಗ ಎತ್ತರದ ಪರ್ವತ ಪ್ರದೇಶದಲ್ಲಿ ಬೆಳೆಯಬೇಕಾಗಿದೆ. ಪಂಜಾಬಿನಲ್ಲಿ ಗೋಧಿ ಬಿತ್ತನೆ ಹಂಗಾಮನ್ನು ಮುಂದೂಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೀನುಗಾರಿಕೆ ಋತುವೂ ಅದಲು ಬದಲಾಗಿದೆ ಎಂದರು.

ಹವಾಮಾನ ವೈಪರೀತ್ಯ ಮತ್ತು ಬದಲಾವಣೆ ಎರಡೂ ಪ್ರತ್ಯೇಕ ಪ್ರಾಕೃತಿಕ ವಿದ್ಯಮಾನಗಳು. ಇವೆರಡೂ ತಮ್ಮದೇ ಆದ ರೀತಿಯಲ್ಲಿ ಪರಿಣಾಮಗಳನ್ನು ಬೀರುತ್ತಿವೆ. ಮೂವತ್ತು ವರ್ಷಗಳ ಹವಾಮಾನ ಅಂಕಿ– ಅಂಶಗಳನ್ನು ವಿಶ್ಲೇಷಿಸಿದಾಗ ಉಷ್ಣಾಂಶದಲ್ಲಿ ಏರಿಕೆ ಆಗಿದ್ದು, ಮಳೆ ಬೀಳುವ ಕ್ರಮದಲ್ಲೂ ಬದಲಾವಣೆ ಆಗಿದೆ.

ಈಗ ದೇಶದಲ್ಲಿ ಬೇಸಿಗೆ ಕಾಲದಲ್ಲಿ ಮಳೆ ಬರುವುದು, ಮಳೆಗಾಲದಲ್ಲಿ ಮಳೆ ಕೊರತೆ ಉಂಟಾಗುವ ವಿದ್ಯಮಾನಕ್ಕೂ ಹವಾಮಾನ ಬದಲಾವಣೆಗೂ ಸಂಬಂಧ ಇಲ್ಲ. ಆದರೆ, ಹವಾಮಾನ ವೈಪರೀತ್ಯವು ಹವಾಮಾನ ಬದಲಾವಣೆಗೆ ಮುನ್ನುಡಿ ಎಂದು ಮಧುರಾ ಸ್ಪಷ್ಟಪಡಿಸಿದರು.

ಹವಾಮಾನ ವೈಪರೀತ್ಯ ಮತ್ತು ಬದಲಾವಣೆಯಿಂದ ಕೃಷಿಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಭಾರತ ಸರ್ಕಾರದಿಂದ ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ. ನಮ್ಮ ಪ್ರತಿಷ್ಠಾನದ ವತಿಯಿಂದ ಈ ಕುರಿತು ದೇಶದ ವಿವಿಧ  22 ಗ್ರಾಮಗಳಲ್ಲಿ ಅಧ್ಯಯನ ನಡೆಸಿದ್ದೇವೆ.

ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚುತ್ತಿರುವುದು ನಿಜ. ಆದರೆ, ಪ್ರಯೋಗಾಲಯ ವಾತಾವರಣದಲ್ಲಿ ಸಿಗುವ ಇಳುವರಿಗೂ ಹೊಲದಲ್ಲಿ ಲಭ್ಯವಾಗುವ ಇಳುವರಿ ಪ್ರಮಾಣಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ರಿಜಿಸ್ಟ್ರಾರ್‌ ವಿ.ಎಸ್‌. ಪ್ರಕಾಶ್‌ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮುಂಗಾರಿನಲ್ಲಿ ಮಳೆ ಬಿದ್ದರೂ ಬಿತ್ತನೆಗೆ ಅಗತ್ಯವಿರುವಷ್ಟು  ತೇವಾಂಶ ಮಣ್ಣಿನಲ್ಲಿ ಇಲ್ಲ ಎಂಬ ದೂರು ರೈತರಿಂದ ಹೆಚ್ಚಾಗಿ ಕೇಳಿ ಬರುತ್ತಿದೆ ಎಂದರು.

ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅಧ್ಯಯನ ನಡೆದಿವೆ. ಅಲ್ಲದೆ, ರಾಜ್ಯದ ಪ್ರತಿಯೊಂದು ಗ್ರಾಮ ಮತ್ತು ಹೋಬಳಿ ಕೇಂದ್ರಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಹವಾಮಾನ ಮಾಹಿತಿಯನ್ನು ಪಡೆಯುವಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ವಿ. ಶ್ರೀರಾಮರೆಡ್ಡಿ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಹಾರ ಕ್ರಮಗಳ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT