ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಕ ಸಮಾಜಕ್ಕೆ ಏನೂ ಆಗಿಲ್ಲ

ಶಿಷ್ಯರ ಬದ್ಧತಾ ಸಮಾವೇಶದಲ್ಲಿ ರಾಘವೇಶ್ವರ ಶ್ರೀ ಘೋಷಣೆ
Last Updated 28 ನವೆಂಬರ್ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚೆಗಿನ ಪ್ರಕರಣದಿಂದ ಏನೂ ಆಗುವುದಿಲ್ಲ. ಯಾಕೆಂದರೆ ಅಂಥದ್ದೇನೂ ನಡೆದೇ ಇಲ್ಲ. ಏನಾದರೂ ಆಗುವಂತಹದ್ದು ಆಗಿದ್ದರೆ ಸರಿ. ಏನೂ ಆಗದಿದ್ದಾಗ ಏನಾಗುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಶ್ನಿಸಿದರು.

ಮಠದ ಹವ್ಯಕ ಮಹಾಮಂಡಲ ನಗರದಲ್ಲಿ ಹಮ್ಮಿಕೊಂಡಿದ್ದ ಬದ್ಧತಾ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ‘ಇತ್ತೀಚಿನ ಬೆಳವಣಿಗೆಗಳಿಂದ ನಮ್ಮ ಸಮಾಜಕ್ಕೆ ಏನೂ ಆಗಿಲ್ಲ. ಯಾಕೆಂದರೆ ಏನೂ ಆಗಿಲ್ಲ. ಮಠದಲ್ಲಿ ಅಮಂಗಲಗಳು ಸಂಭವಿಸಲು ಸಾಧ್ಯವಿಲ್ಲ.  ಹಾಗಾಗಿ, ಷಡ್ಯಂತ್ರ ಫಲಿಸದು’ ಎಂದು ಪ್ರತಿಪಾದಿಸಿದರು.

‘ಈ ಷಡ್ಯಂತ್ರದ ಮುಖ್ಯ ಉದ್ದೇಶವೇ ಶಿಷ್ಯರ ಬದ್ಧತೆಯನ್ನು ಇಲ್ಲದಂತೆ ಮಾಡುವುದು. ಗುರುಗಳಿಗೆ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದು ಕೇಳಿದ್ದೀರಾ? ನ್ಯಾಯಾಲಯದಲ್ಲಿ ಗೆಲ್ಲುವುದು ಅವರಿಗೆ ಬೇಕಿಲ್ಲ. ಶಿಷ್ಯರ ನಂಬಿಕೆ ಒಡೆಯುವುದು, ಗುರು ಶಿಷ್ಯರನ್ನು ಬೇರೆ ಮಾಡುವುದು ಅವರ ಗುರಿ’ ಎಂದು ಹೇಳಿದರು.

‘ಮಠದ ವ್ಯವಸ್ಥೆಯನ್ನು ನುಚ್ಚುನೂರು  ಮಾಡುವುದು ಅವರ ಯೋಚನೆ ಆಗಿತ್ತು.  ಮಾಧ್ಯಮಗಳನ್ನು ಬಳಸಿಕೊಂಡು ಭಕ್ತರ  ನಂಬಿಕೆ ಮುರಿಯುವ ಯತ್ನ ಅವರದ್ದಾಗಿತ್ತು. ಆದರೆ, ಶಿಷ್ಯರು ಅದಕ್ಕೆ ಅವಕಾಶ ಕೊಡಲಿಲ್ಲ. ನೀವು ಗುರುವನ್ನು, ಪೀಠವನ್ನು ಬಿಡಲಿಲ್ಲ. ‘ಹಾಲು’ ಮನಸ್ಸುಗಳು ಮತ್ತು ‘ಹಾಳು’ ಮನಸ್ಸುಗಳು ಇದನ್ನು ನೋಡಲಿ’ ಎಂದು ನುಡಿದರು.

‘ಇನ್ನಾದರೂ ಅಂತಹ ಪ್ರಯತ್ನಗಳನ್ನು ಬಿಟ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಬುದ್ಧಿ ಅವರಿಗೆ ಕೊಡಲಿ ಎಂದು ಹಾರೈಸುತ್ತೇವೆ. ಸತ್ಯಕ್ಕೆ ಎಂದೂ ಜಯವಿದೆ. ಸತ್ಯ ತಿಳಿದಾಗ ಮೊದಲಿಗಿಂತಲೂ ಉನ್ನತ ಸ್ಥಾನ ಲಭಿಸುತ್ತದೆ. ನಮ್ಮ ಮುಂದಿನ ಶಕ್ತಿಗಳು ಎಷ್ಟು ದೊಡ್ಡದಿದ್ದರೂ ಅವುಗಳು ಸತ್ಯದ ಬಲಕ್ಕಿಂತ ದೊಡ್ಡದಲ್ಲ’ ಎಂದು ಹೇಳಿದರು.

ನಂಟು ಬಿಡಿಸಲಾಗದ ಗಂಟು: ಗುರು ಶಿಷ್ಯರ ನಡುವಣ ಸಂಬಂಧವನ್ನು  ಹಗ್ಗದ ಗಂಟಿಗೆ ಹೋಲಿಸಿದ ಶ್ರೀಗಳು, ‘ಹಾಕಿದ ಗಂಟು ಸರಿಯಾಗಿದ್ದರೆ, ಅದು ಹುಸಿ ಗಂಟು ಅಲ್ಲದಿದ್ದರೆ ಎಳೆದಷ್ಟು  ಗಟ್ಟಿಯಾಗುತ್ತದೆ. ಆದರೆ ಈಗ ಎಳೆಯುತ್ತಿರುವವರಿಗೆ ಅದು ಗೊತ್ತಿಲ್ಲ. ನಮ್ಮ ನಡುವೆ ಬದ್ಧತೆ ಇದೆ ಎಂದು ನಮಗೆ ಗೊತ್ತಿದೆ. ಬೇರೆಯವರಿಗೆ ಗೊತ್ತಾಗಲಿ ಎಂಬುದಕ್ಕೆ ಈ ಸಮಾವೇಶ’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಮಠದ ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ ಮತ್ತು ಹವ್ಯಕ ಸಮಾಜದ ಮುಖಂಡರಾದ ಪ್ರಮೋದ ಹೆಗಡೆ ಯಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
*
ಶಿಷ್ಯರೇ ಸಂಪತ್ತು
‘ಮುತ್ತು, ರತ್ನ, ಹಣ ಸಂಪಾದನೆ ನಮ್ಮ ಕಾಲದಲ್ಲಿ ಆಗಿಲ್ಲ. ಬಂದ ಹಣ, ಸಂಪತ್ತು ಒಳ್ಳೆಯ ಉದ್ದೇಶಕ್ಕೆ ವಿನಿಯೋಗವಾಗಿದೆ. ಮಠದ ಒಳಗೆ ಅಂತಹ ನಿಧಿಯೂ ಇಲ್ಲ. ನಮ್ಮ ಸಮಾಜವೇ ಮಠದಲ್ಲಿ ಮತ್ತು ನಮ್ಮ ಹೃದಯದಲ್ಲಿರುವ ದೊಡ್ಡ ನಿಧಿ. ಮಠದಲ್ಲಿ ಹುಡುಕಿದರೆ ಧನ ಸಿಗುವುದಿಲ್ಲ ಜನ ಸಿಗುತ್ತಾರೆ. ಭಕ್ತರ ವಿಶ್ವಾಸ, ನಂಬಿಕೆಯೇ ನಮ್ಮ ಬದುಕಿನ ಸಂಪಾದನೆ’ ಎಂದು ಸ್ವಾಮೀಜಿ ಹೇಳಿದರು.

‘ಭ್ರಮೆ ಉಂಟು ಮಾಡಲು ನೂರು ಜನ ಬೇಡ. ಮೂರು ಜನ ಸಾಕು. ತರಗತಿಯಲ್ಲಿರುವ 100 ಮಂದಿ ಪೈಕಿ 97 ಜನ ಮೌನವಾಗಿದ್ದರೂ, ಮೂರು ಜನರ ಗಲಾಟೆಯೇ ಕೇಳುತ್ತದೆ. ಈ ಜಗತ್ತಿನಲ್ಲಿ  ಅನ್ಯಾಯ ಆಗುತ್ತಿರುವುದು ಕೆಟ್ಟವರ ಕೆಟ್ಟತನದಿಂದ ಅಲ್ಲ; ಒಳ್ಳೆಯವರ ಮೌನದಿಂದ’ ಎಂದು ವ್ಯಾಖ್ಯಾನಿಸಿದರು.
ಪ್ರತಿಜ್ಞಾ ವಿಧಿ: ಸಮಾವೇಶದಲ್ಲಿ ಸೇರಿದ್ದ  ಮಠದ ಸಾವಿರಾರು ಕಾರ್ಯಕರ್ತರಿಗೆ ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣ ಮೂರ್ತಿ ಅವರು ‘ಮಠ ಮತ್ತು ಶ್ರೀಗಳಿಗೆ ಬದ್ಧತೆ ತೋರಿಸುವ’ ಪ್ರತಿಜ್ಞಾ ವಿಧಿ ಬೋಧಿಸಿದರು.
*
ನಡೆದಿರುವ ಘಟನೆಗಳ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ. ಇದೆಲ್ಲ ಈ ಜೀವನದ ಅಂಗ. ಇಂತಹ ಪರೀಕ್ಷೆ, ಸಂಕಟಗಳಿಲ್ಲದೆ ಚರಿತ್ರೆ ನಿರ್ಮಾಣ ಆಗುವುದಿಲ್ಲ.
– ರಾಘವೇಶ್ವರ ಭಾರತೀ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT