ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸಕ್ಕೆ ಬೆಳಕಾದ ‘ರಂಗದೀಪ’

ಅಂಕದ ಪರದೆ
Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

‘ರಂಗದೀಪ ರಂಗ ವೇದಿಕೆ’ ಆರಂಭವಾಗಿದ್ದು 2010ರಲ್ಲಿ. ನಾಗರಾಜು ಕಾಡುಶಿವನಹಳ್ಳಿ ಈ ತಂಡವನ್ನು ಆರಂಭಿಸಿದರು. ಮೂಲತಃ ಕನಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ  ಇವರು ರಂಗಭೂಮಿ, ಹಾಡುಗಾರಿಕೆಯ ಆಸಕ್ತಿಯಿಂದ ಸ್ನೇಹಿತರ ಹಲವು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರ ರಂಗ ತುಡಿತ ನಿರಂತರವಾಗಿ ಇದ್ದುದರಿಂದ ತಾವೇ ಒಂದು ತಂಡವನ್ನು ಕಟ್ಟಲು ಯೋಚಿಸಿ ‘ರಂಗದೀಪ ರಂಗ ವೇದಿಕೆ’ ಎಂಬ ತಂಡವನ್ನು  ಕಟ್ಟಿದರು.

ನಾಗರಾಜು ಕಾಡುಶಿವನಹಳ್ಳಿ ಅವರ  ರಂಗಾಸಕ್ತಿಗೆ ಪ್ರೋತ್ಸಾಹ ನೀಡಿದ್ದು ಗೆಳೆಯರು, ಮೂಲತಃ ರಂಗಭೂಮಿ ನಿರ್ದೇಶಕರಾದ ರಂಗನಾಥ ಮಾವಿನಕೆರೆ ಹಾಗೂ ನಾರಾಯಣ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದ ಮುರಳಿ ಕುಮಾರ್‌.  ಇತರೆ ಸಂಘಟನೆ, ತಂಡಗಳೊಂದಿಗೆ ಹಲವು ನಾಟಕ ಪ್ರದರ್ಶನಗಳನ್ನು ನೀಡಿರುವ ನಾಗರಾಜ್‌, ತಮ್ಮ ತಂಡ ಆರಂಭವಾದಾಗಿನಿಂದ ನಾಟಕೋತ್ಸವಗಳನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೆ ಒಟ್ಟು ನಾಲ್ಕು ನಾಟಕೋತ್ಸವಗಳನ್ನು ನಡೆಸಿದ್ದಾರೆ. ಒಂದು ದಿನದಿಂದ ಹಿಡಿದು  ಮೂರು ದಿನಗಳ ನಾಟಕೋತ್ಸವನ್ನು ಆಯೋಜನೆ ಮಾಡಿ, ದಿನದಲ್ಲಿ ಎರಡು ಮೂರು ನಾಟಕ ಪ್ರದರ್ಶನವನ್ನು ನೀಡಿದ್ದಾರೆ.

ಪ್ರಮುಖ ನಾಟಕಗಳು: ‘ ನಾಯಿ ಕಥೆ’, ‘ಚಾಳೇಷ’, ‘ಎಚ್ಚಮ ನಾಯಕ’, ‘ಕತ್ತಲೆಯ ದಾರಿ’, ‘ಕರಿ ಕಂಬಳಿ’, ‘ಭೋಳೆ ಶಂಕರ’, ‘ದಿವ್ಯದರ್ಶನ’, ‘ವಲಸೆ ಹಕ್ಕಿಯ ಹಾಡು’, ‘ಮೌನ ಕೋಗಿಲೆ’, ‘ಸಂಗ್ಯಾ–ಬಾಳ್ಯಾ’, ‘ಬಾಹುಬಲಿ’, ‘ಏಕಲವ್ಯ’, ‘ಕೀಚಕ ವಧೆ’, ‘ಪ್ರಚಂಡ ರಾವಣ’,‘ಪುರಾಣ ಪ್ರಹಸನ’, ‘ಬೆಂಕಿ’, ‘ವರಭ್ರಷ್ಟ’ ನಾಟಕಗಳ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಹಲವು ಬೀದಿ ನಾಟಕಗಳನ್ನು  ಮಾಡಿರುವ ನಾಗರಾಜ್‌, ಬೆಸ್ಕಾಂ ಮತ್ತು ಚುನಾವಣಾ ಆಯೋಗಕ್ಕಾಗಿ ‘ಮತದಾನ’ದ ಬಗ್ಗೆ ಜಾಗೃತಿ ಮೂಡಿಸುವಂಥ 50ಕ್ಕೂ ಹೆಚ್ಚು ಬೀದಿನಾಟಕಗಳ ಪ್ರದರ್ಶನವನ್ನು ನೀಡಿದ್ದಾರೆ.

ರಂಗದೀಪ ರಂಗ ವೇದಿಕೆಯಲ್ಲಿ ನಾಟಕಗಳಷ್ಟೇ ಅಲ್ಲದೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಾಗರಾಜ್‌ ಕಾಡುಶಿವನಹಳ್ಳಿ ಆಯೋಜಿಸುತ್ತಿದ್ದಾರೆ.  ಇದುವರೆಗೆ ಆರು ಗೀತಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಜಾನಪದ ಹಾಡುಗಳು, ಭಾವಗೀತೆ, ಭಕ್ತಿ ಗೀತೆಗಳನ್ನು ಗೀತಗಾಯನ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟಿದ್ದಾರೆ. ಹೊರಗಿನಿಂದ ಮೂಲ ಗಾಯಕರನ್ನು ಕರೆಸಲು ಹಣಕಾಸಿನ ತೊಂದರೆ. ಆದ್ದರಿಂದ ಗೆಳೆಯರೇ ಸೇರಿ ಜನಪದ, ಭಾವಗೀತೆ ಪ್ರಕಾರಗಳನ್ನು ಕಲಿತು ಹಾಡಿದ್ದಾರೆ.  ಇವರ ಈ ರಂಗಭೂಮಿ ಆಸಕ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಣಕಾಸಿನ ಸಹಕಾರ ನೀಡುತ್ತಿದ್ದು, ತಾವೂ ಕೈಯಿಂದ ಹಣ ಹಾಕಿ ಕಾರ್ಯಕ್ರಮ ಮಾಡಿದ್ದಾರೆ.

ಮುಂದಿನ ಯೋಜನೆ: ಐದು ವರ್ಷದಿಂದ ನಿರಂತರವಾಗಿ ರಂಗಭೂಮಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ನಾಗರಾಜ್‌, ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್‌ನಲ್ಲಿ ನಾಟಕೋತ್ಸವವನ್ನು ನಡೆಸಲಿದ್ದಾರೆ. ನಾಟಕೋತ್ಸವದಲ್ಲಿ ಇತರೆ ರಂಗ ತಂಡದವರಿಗೂ ನಾಟಕ ಪ್ರದರ್ಶನ ನೀಡಲು ಅವಕಾಶವಿದೆಯಂತೆ.
ಯುವಕರಿಗೆ, ಹೊಸಬರಿಗೆ ಹೆಚ್ಚು ಅವಕಾಶ ನೀಡುವ ಉದ್ದೇಶ ಹೊಂದಿರುವ ನಾಗರಾಜ್‌ ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿಗಳಿಗೂ ನಾಟಕದ ಗೀಳು ಹಚ್ಚಿದ್ದಾರೆ. ಕನ್ನಡ ಪಾಠವಲ್ಲದೆ ಕಲೆ, ನಾಟಕ, ಹಾಡುಗಾರಿಗೆ, ಅಭಿನಯದ ಪಾಠವನ್ನು ಮಾಡುತ್ತಾರೆ. ತಮ್ಮ ನಾಟಕೋತ್ಸವದಲ್ಲಿ ತಮ್ಮ ತಂಡವಲ್ಲದೆ ಮಹೇಶ್‌ ಸಾಗರ್‌, ವೇಣುಗೋಪಾಲ್‌, ನಾರಾಯಣ್‌ ಅವರ ತಂಡಗಳನ್ನು ಕರೆಸಿ ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT