ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಕಾಡಿನ ನಡುವೆ ‘ನಾಲ್ಕ್ನಾಡು’

Last Updated 24 ಅಕ್ಟೋಬರ್ 2015, 19:40 IST
ಅಕ್ಷರ ಗಾತ್ರ

ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧ. ಕೊಡಗನ್ನು ಆಳಿದ ರಾಜಸಂತತಿಗಳಲ್ಲಿ ಹಾಲೇರಿ ವಂಶದ ರಾಜರು ಪ್ರಸಿದ್ಧರು. ಆ ವಂಶದ ಲಿಂಗರಾಜ ಅರಸರು ಮಡಿಕೇರಿಯಲ್ಲಿ ನಿರ್ಮಿಸಿದ ಅರಮನೆ ಪ್ರಸಿದ್ಧಿಯಾದುದು. ಆದರೆ ಅದಕ್ಕೆ ಮೊದಲೇ ಇಂದಿನ ಯವಕಪಾಡಿ ಗ್ರಾಮದ ಬಳಿ ‘ನಾಲ್ಕ್ನಾಡು ಅರಮನೆ’ ನಿರ್ಮಾಣಗೊಂಡಿತ್ತು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಕೊಡಗು ರಾಜರು ಹಾಲೇರಿ ಹಾಗೂ ಮಡಿಕೇರಿಯನ್ನು ರಾಜಧಾನಿ ಮಾಡಿಕೊಂಡಂತೆ, ನಾಲ್ಕ್ನಾಡನ್ನು ಮೂರನೇ ರಾಜಧಾನಿಯಾಗಿ ಮಾಡಿಕೊಂಡಿದ್ದರು. ಹೀಗಾಗಿ ನಾಲ್ಕ್ನಾಡು ಐತಿಹಾಸಿಕವಾಗಿ ಎರಡು ವಿಷಯದಲ್ಲಿ ಪ್ರಸಿದ್ಧ ಸ್ಥಳ. ಮೊದಲನೆಯದಾಗಿ ಕೊಡಗು ಜಿಲ್ಲೆ ಕಾಫಿತೋಟಗಳ ನಾಡಾಗಿ ಪ್ರಸಿದ್ಧಿಗೊಳ್ಳಲು ಮೂಲ ನಾಲ್ಕ್ನಾಡು. ಏಕೆಂದರೆ, ಈ ಮೊದಲೆ ಚಿಕ್ಕಮಗಳೂರು ಕಾಫಿ ಗಿಡವನ್ನು ಕಂಡಿತ್ತು.

ಚಿಕ್ಕಮಗಳೂರು ಜಿಲ್ಲೆಯ ಅತ್ತಿಗುಂಡಿ ಗ್ರಾಮದಿಂದ ಕೆಲವು ಕಾಫಿ ಸಸಿಗಳನ್ನು ಮೊಟ್ಟಮೊದಲಿಗೆ ಕೊಡಗಿನ ನಾಲ್ಕ್ನಾಡು ಪ್ರದೇಶದಲ್ಲಿ ನೆಡಲಾಯಿತು. ತದನಂತರ 19ನೇ ಶತಮಾನದ ಆರಂಭದಲ್ಲಿ ಬ್ರಿಟಿಷರು ಮಡಿಕೇರಿ ಪ್ರದೇಶವನ್ನು ಕಾಫಿಯ ನಾಡನ್ನಾಗಿ ಅಭಿವೃದ್ಧಿಪಡಿಸಿದರು.

ಹಾಲೇರಿ ವಂಶದ ರಾಜರು ಶತ್ರುಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ನಾಲ್ಕ್ನಾಡನ್ನು ಕೆಲವು ಕಾಲ ರಾಜಧಾನಿಯಾಗಿ ಮಾಡಿಕೊಂಡಿದ್ದರೆಂದು ಇತಿಹಾಸ ತಿಳಿಸುತ್ತದೆ. ಮಡಿಕೇರಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ತಡಿಯಾಂಡಮೋಳ್ ಬೆಟ್ಟ ಇದೆ. ಇದು ಕೊಡಗು ಜಿಲ್ಲೆಯಲ್ಲೇ ಬಹು ಎತ್ತರದ ಬೆಟ್ಟ. ಇದರ ತಪ್ಪಲು ಸಹ ಪರ್ವತಮಯವಾಗಿದ್ದು, ಗಿರಿಕಂದರಗಳಿಂದ ಹಸಿರು ಕಾಡುಗಳಿಂದ ಆ ಪ್ರದೇಶ ಕಣ್ಮನ ಸೆಳೆಯುತ್ತದೆ. ಇಂತಹ ದಟ್ಟ ಅಡವಿ ಕಲ್ಪಿಸಿದ ಸುರಕ್ಷಿತ ಸ್ಥಳದಲ್ಲಿ ಕ್ರಿ.ಶ. 1792ರಲ್ಲಿ ದೊಡ್ಡವೀರರಾಜೇಂದ್ರ ಅರಮನೆ ನಿರ್ಮಿಸಿದನು. ಇದು ನಾಲ್ಕ್ನಾಡು ಎಂದೇ ಪ್ರಸಿದ್ಧಿ. ಈ ಅರಮನೆಯೇ ಕ್ರಿ.ಶ. 1834ರಲ್ಲಿ ಬ್ರಿಟಿಷರಿಗೆ ಹೆದರಿದ ಚಿಕ್ಕವೀರರಾಜೇಂದ್ರನಿಗೆ ಅಡಗು ತಾಣವಾಗಿತ್ತು.

ಈ ಅರಮನೆ ಮೇಲ್ನೋಟಕ್ಕೆ ಮಲೆನಾಡಿನ ಸಾಮಾನ್ಯ ಮನೆಯಂತೆ ಕಂಡರೂ ಒಳಹೋಗಿ ನೋಡಿದಾಗ ಶ್ರೀಮಂತಿಕೆಯ ನೋಟ ಕಂಡುಬರುತ್ತದೆ. 18ನೇ ಶತಮಾನದಲ್ಲೇ ಕಟ್ಟಲಾಗಿರುವ ಈ ಕಟ್ಟಡ ಭದ್ರವಾಗಿದೆ. ಪ್ರಾಕಾರ ಹೊಂದಿರುವ ಈ ಅರಮನೆಗೆ ನಾಲ್ಕು ಕಂಬಗಳಿರುವ ಪ್ರವೇಶ ದ್ವಾರ ಇದೆ. ಅರಮನೆ ಎರಡು ಅಂತಸ್ತು ಹೊಂದಿದ್ದು, ಇಟ್ಟಿಗೆ ಗಾರೆಯಿಂದ ನಿರ್ಮಿಸಿದ ದಪ್ಪ ಗೋಡೆ ಹಾಗೂ ಮರದ ಸಾಮಾನುಗಳಿಂದ ನಿರ್ಮಿಸಲಾಗಿದೆ.

ಕೆಳ ಮತ್ತು ಮೇಲಂತಸ್ತುಗಳಲ್ಲಿ ದಪ್ಪಮರದ ಕಂಬಗಳನ್ನು ಅಳವಡಿಸಲಾಗಿದೆ. ಕಂಬಗಳು ಕೆಳಭಾಗದಲ್ಲಿ ದಪ್ಪವಾಗಿ ಮೇಲೆ ಹೋದಂತೆ ಚಿಕ್ಕದಾಗಿ ಕಂಡುಬರುತ್ತವೆ. ಮೇಲಂತಸ್ತಿನ ಕಂಬಗಳಂತೂ ಸುಂದರ ಕೆತ್ತನೆಗಳನ್ನು ಹೊಂದಿದೆ.

ಮರದ ತೊಲೆಗಳು ಮತ್ತು ಹಲಗೆಗಳಿಂದ ನಿರ್ಮಿಸಿರುವ ಛಾವಣಿಯ ಕೆಳಭಾಗದಲ್ಲಿ ಅಲಂಕಾರ ಮೂಡಿಬಂದಿದೆ. ಕಿಟಕಿ ಬಾಗಿಲುಗಳು ಕುಶಲ ಕೆತ್ತನೆಗಳಿಂದ ಸುಂದರವಾಗಿ ಕಂಡುಬರುತ್ತದೆ. ಛಾವಣಿಯ ಕೆಳ ಮುಖದಲ್ಲಿ ಬಣ್ಣದ ಚಿತ್ರಗಳು ಅಲಂಕೃತವಾಗಿವೆ. ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಬರೆಯಲಾಗಿದ್ದು, (ಅಂಬಾರಿ ಮೇಲಿನ ರಾಜ ಮತ್ತು ಪರಿವಾರದವರ ಚಿತ್ರ) ಅವುಗಳು ಮಾಸಿ ಹೋಗಿವೆ. ಮೇಲಂತಸ್ತು ರಾಜನ ಒಡ್ಡೋಲಗ ನಡೆಯುತ್ತಿದ್ದ ಸ್ಥಳವಾಗಿದ್ದು, ಅಲ್ಲಿನ ಜಗತಿಯ ಮೇಲೆ ರಾಜನ ಸಿಂಹಾಸನ ಇರುತ್ತಿದ್ದೆಂದು ಊಹಿಸಬಹುದಾಗಿದೆ.

ಅರಮನೆಯ ಮುಂಭಾಗದ ಬಲಭಾಗದಲ್ಲಿ ಇಟ್ಟಿಗೆ ಗಾರೆಯಿಂದ ನಿರ್ಮಿಸಿದ ಒಂದು ಚಿಕ್ಕ ಮಂಟಪವಿದೆ. ಇದನ್ನು ‘ಧಾರಾ ಮಂಟಪ’ ಎಂದು ಕರೆಯಲಾಗಿದೆ. ಕ್ರಿಶ. 1796ರಲ್ಲಿ ದೊಡ್ಡವೀರರಾಜೇಂದ್ರ ಮತ್ತು ಮಹಾದೇವಮ್ಮ ಅವರ ಮದುವೆಯ ಧಾರಾ ಕಾರ್ಯಕ್ರಮ ನಡೆದ ಈ ಸ್ಥಳವನ್ನು ‘ಧಾರಾ ಮಂಟಪ’ ಎಂದು ಕರೆಯಲಾಗುತ್ತದೆ. ಚೌಕದ ವಿನ್ಯಾಸದ, ಒಂದಂಕಣದ ಈ ಮಂಟಪವನ್ನು ಇಟ್ಟಿಗೆ ಮತ್ತು ಗಾರೆ ಬಳಸಿ, ಮುಸ್ಲಿಂ ಶೈಲಿಯ ಕಮಾನುಗಳ ರೀತಿಯಲ್ಲಿ ನಿರ್ಮಿಸಲಾಗಿದೆ.
*
ನಾಲ್ಕ್ನಾಡು ತಲುಪುವ ಮಾರ್ಗ
ಮಡಿಕೇರಿ-ಬೆಟಗೇರಿ-ನಾಪೋಕ್ಲು ಮಾರ್ಗದಲ್ಲಿ ನಾಪೋಕ್ಲಿನಿಂದ 10 ಕಿ.ಮೀ. ದೂರದಲ್ಲಿ ನಾಲ್ಕ್ನಾಡು ಅರಮನೆ ಇದೆ. ನಾಪೋಕ್ಲು ಮುಂದೆ ಕಕ್ಕಬೆ ಸಿಗುತ್ತದೆ. ಕಕ್ಕಬೆಯ ಮುಂದಿನ ಒಂದು ಕಿ.ಮೀ. ದೂರದಲ್ಲಿ– ಬಲಗಡೆಯ ಕಿರುದಾರಿಯಲ್ಲಿ– ಮೂರ್ನಾಲ್ಕು ಕಿ.ಮೀ. ಕ್ರಮಿಸಿದರೆ ನಾಲ್ಕ್ನಾಡು ಅರಮನೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT