ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಕ್ರಾಂತಿ ಚಿಂತನೆಯತ್ತ ಗಮನ...

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಸಿರು ಕ್ರಾಂತಿ ಹಾಗೂ ಶ್ವೇತ ಕ್ರಾಂತಿ ಬಹಳಷ್ಟು ಸಹಾಯ ಮಾಡಿವೆ. ಹಸಿರು ಕ್ರಾಂತಿಯ ಹರಿಕಾರನೆಂದರೆ ನಾರ್ಮನ್‌ ಅರ್ನೆಸ್ಟ್ ಬೋರ್ಲಾಗ್‌. ಶ್ವೇತ ಕ್ರಾಂತಿಯ ಹರಿಕಾರನೆಂದರೆ ಭಾರತದವರೇ ಆದ ಡಾ.ವರ್ಗಿಸ್‌ ಕುರಿಯನ್‌. ಈ ಇಬ್ಬರು ಮಹ­ನೀ­ಯರು ತಮ್ಮ ಜೀವಿತದಲ್ಲಿ ಪವಾಡಗಳನ್ನು ನಡೆಸಿ ಕೋಟ್ಯಂತರ ಜನ ಹಸಿವಿನಿಂದ, ಅಪೌಷ್ಟಿ­ಕತೆಯಿಂದ ಸಾಯುವುದನ್ನು ತಪ್ಪಿಸಿದ್ದಾರೆ. ಹೈನು ಕ್ಷೇತ್ರದಲ್ಲಿ, ಡೇರಿ ಮುಖಾಂತರ ಕಡು ಬಡವನೂ ಗ್ರಾಮೀಣ ಭಾಗದಲ್ಲಿ ತನ್ನ ಬದುಕನ್ನು ಕಟ್ಟಿ­ಕೊಳ್ಳಲು ಸಾಧ್ಯವಾಗುವಂತೆ ಮಾಡಿದವರು ಡಾ.ಕುರಿಯನ್‌.

ನಾರ್ಮನ್‌ ಅರ್ನೆಸ್ಟ್ ಬೋರ್ಲಾಗ್‌ ಅಮೆರಿ­ಕದ ಒಬ್ಬ ಜೀವಶಾಸ್ತ್ರಜ್ಞ (25.3.1914–12.9.2009). 1937ನೇ ಇಸವಿ­ಯಲ್ಲಿ ಜೀವಶಾಸ್ತ್ರದಲ್ಲಿ ಪದವಿಯನ್ನು, 1942ರಲ್ಲಿ ಅಮೆರಿಕದ ಮಿನ್ನಿಸೋಟಾ ವಿಶ್ವವಿದ್ಯಾಲ­ಯದಿಂದ  ಸಸ್ಯ ರೋಗ ವಿಜ್ಞಾನ ಹಾಗೂ ತಳಿ­ವಿಜ್ಞಾನದಲ್ಲಿ ಡಾಕ್ಟರೇಟ್‌ ಪಡೆದವರು. ನಂತರ ಮೆಕ್ಸಿಕೋದಲ್ಲಿ ಕೃಷಿ ಸಂಶೋಧನೆ ಪ್ರಾರಂಭಿಸಿ ಅಲ್ಲಿ ಅರೆಗಿಡ್ಡ ಹೆಚ್ಚು ಇಳುವರಿಯ, ರೋಗ ನಿರೋಧಕ ಗೋಧಿ ತಳಿಗಳನ್ನು ಹುಟ್ಟು  ಹಾಕಿದರು.

ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಬೋರ್ಲಾಗ್‌ ಅವರು ಆಧುನಿಕ ಕೃಷಿ  ಉತ್ಪಾ­ದನಾ ತಂತ್ರಗಳನ್ನು ಮತ್ತು ಹೆಚ್ಚು ಇಳುವರಿಯ ಗೋಧಿ ತಳಿಗಳನ್ನು ಮೆಕ್ಸಿಕೋ, ಪಾಕಿಸ್ತಾನ ಮತ್ತು ಭಾರತದಂತಹ ದೇಶಗಳಿಗೆ ಪರಿಚಯಿಸಿದರು.

ನಾರ್ಮನ್‌ ಬೋರ್ಲಾಗ್‌ ಅವರು ಗಿಡ್ಡ ಗೋಧಿ ತಳಿಯನ್ನು ಹುಟ್ಟು ಹಾಕಿದರು. ಹಿಂದೆ ಉದ್ದವಾದ ಗೋಧಿ ಗಿಡಗಳು ತಮ್ಮ ಜೈವಿಕ ಶಕ್ತಿಯನ್ನು ಸಸ್ಯ ಬೆಳವಣಿಗೆಗೆ ಎಂದರೆ ಎತ್ತರಕ್ಕೆ ಬೆಳೆಯಲು ಅಗಲವಾದ ಎಲೆಗಳನ್ನು ಬಿಡಲು ಬಳಸಿಕೊಳ್ಳುತ್ತಿದ್ದವು. ಬೋರ್ಲಾಗ್‌ ತಮ್ಮ ಕೃಷಿ ಸಂಶೋಧನೆಯಿಂದ ಅರೆಗಿಡ್ಡ ಗೋಧಿ ಗಿಡಗ­ಳನ್ನು ಬೆಳೆಸಿದರು. ಆ ಗಿಡಗಳು ತಮ್ಮ ಜೈವಿಕ ಶಕ್ತಿ­ಯನ್ನು ಸಸ್ಯ ಬೆಳವಣಿಗೆಗೆ ಎಂದರೆ ಉದ್ದವಾಗಿ  ಬೆಳೆ­ಯಲು, ಅಗಲವಾದ ಎಲೆಗಳನ್ನು ಬಿಡಲು ಬಳಸಿ­ಕೊಳ್ಳುವುದರ ಬದಲು, ಆ ಜೈವಿಕ ಶಕ್ತಿ­ಯನ್ನು ಹೆಚ್ಚು ಉತ್ಪತ್ತಿ ಇರುವ ಸಂತಾನೋತ್ಪತ್ತಿ ಬೆಳವಣಿಗೆಗೆ, ರೋಗನಿರೋಧಕ ಶಕ್ತಿ ಬೆಳವ­ಣಿ­ಗೆಗೆ ಹಾಗೂ  ಪೌಷ್ಟಿಕಾಂಶ ಕಳೆದು­ಕೊಂಡಿ­­ರುವ ಜಮೀನು­ಗಳಲ್ಲಿ ರಸಗೊಬ್ಬರ ಬಳಸಿ ಹೆಚ್ಚು ಇಳುವರಿ ನೀಡಲು ಅನುಕೂಲ­ವಾಗು­ವಂತಹ ಹೊಸ ತಳಿಗಳಾಗಿದ್ದವು.

1965–66ನೇ ಸಾಲಿನಲ್ಲಿ ಭಾರತ ಭೀಕರ ಬರಗಾಲ ಎದುರಿಸುತ್ತಿತ್ತು. ಜನ ಹಸಿವಿನಿಂದ ತತ್ತರಿಸುತ್ತಿದ್ದರು. ಅಮೆರಿಕದಿಂದ ಹಡಗಿನಲ್ಲಿ ಗೋಧಿ ಭಾರತಕ್ಕೆ ಬರುತ್ತಿತ್ತು. ಇದು ಬಂದರೆ ಹೊಟ್ಟೆಗೆ ಉಂಟು, ಇಲ್ಲದಿದ್ದರೆ ಉಪವಾಸ ಎನ್ನುವ ವಿಷಮ ಪರಿಸ್ಥಿತಿ ದೇಶದಲ್ಲಿ ನಿರ್ಮಾ­ಣ­ವಾಗಿತ್ತು. ಇಂತಹ ಹಿನ್ನೆಲೆಯಲ್ಲಿ ಭಾರತ ಸರ್ಕಾ­ರದ ಆಹ್ವಾನದ ಮೇರೆಗೆ 1966ರಲ್ಲಿ  ಬೋರ್ಲಾಗ್‌ ಅವರು ಭಾರತಕ್ಕೆ ಬಂದರು. ಅವರು ತಮ್ಮ ಜತೆ ಮೆಕ್ಸಿಕನ್‌ ಗೋಧಿ ಬೀಜಗಳನ್ನು ಭಾರತಕ್ಕೆ ತಂದಿದ್ದರು. ಮೆಕ್ಸಿಕೋ  ದೇಶದಲ್ಲಿ ಮಾಡಿದ ಪವಾಡಗಳನ್ನು ಭಾರತ­ದಲ್ಲೂ  ಪುನರಾ-­ವರ್ತಿ­ಸಿ­ದರು. 1965ನೇ ಇಸವಿ ಹೊತ್ತಿಗೆ  ಭಾರತ ಕೃಷಿ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ಕಂಡಿತು. ಗೋಧಿ ಉತ್ಪಾದನೆ ದೇಶದಲ್ಲಿ ಶೇಕಡ 50ರಷ್ಟು ಹೆಚ್ಚಾ­ಯಿತು. ಅಂದರೆ 1.60 ಕೋಟಿ ಟನ್‌ಗಳಷ್ಟು ಉತ್ಪಾದನೆ ದೇಶದಲ್ಲಿ ಹೆಚ್ಚಾ­ಯಿತು. ಈ ಹೊತ್ತು ಭಾರತ ಅಂದಿನಿಂದ ಇಂದು ಆರು ಪಟ್ಟು ಹೆಚ್ಚು ಗೋಧಿಯನ್ನು  ಉತ್ಪಾದಿ­ಸುತ್ತಿದೆ. ಎಕರೆವಾರು ಇಳುವರಿ ದುಪ್ಪಟ್ಟು ಆಗಿದೆ.
1950–1992ರ ಕಾಲಘಟ್ಟದಲ್ಲಿ ವಿಶ್ವದಲ್ಲಿ  170 ಕೋಟಿ ಎಕರೆಗಳಲ್ಲಿ  69.2 ಕೋಟಿ ಟನ್‌ ಆಹಾರ ಧಾನ್ಯ ಉತ್ಪಾದನೆ ಆಗುತ್ತಿದ್ದುದು ಈ  ಸಂಶೋಧನೆಯಿಂದ 173 ಕೋಟಿ ಎಕರೆಗಳಲ್ಲಿ 190 ಕೋಟಿ ಟನ್‌ ಉತ್ಪಾದನೆ ಆಗಲು ಸಾಧ್ಯ­ವಾಯಿತು. ಹೆಚ್ಚು ಇಳುವರಿ ನೀಡುವ ಕೃಷಿ ಸಾಧ್ಯವಾಗದೆ ಹೋಗಿದ್ದರೆ, ಲಕ್ಷಾಂತರ ಜನ ಹಸಿವಿನಿಂದ ನರಳು­ತ್ತಿದ್ದರು ಅಥವಾ ಆಹಾರ ಧಾನ್ಯವನ್ನು ಹೆಚ್ಚಿಸಲು ಹೆಚ್ಚು ಭೂಮಿಯನ್ನು ಕೃಷಿಗೆ ಒಳಪಡಿಸಿಕೊಳ್ಳಬೇಕಾಗುತ್ತಿತ್ತು.

ಕುಲಾಂತರಿ ತಳಿಗಳನ್ನು ಅಳವಡಿಸಿಕೊಳ್ಳು­ವುದ­ರಿಂದ ಸ್ಥಳೀಯ ತಳಿವೈವಿಧ್ಯ ಕಣ್ಮರೆ­ ಯಾ­ಗು­ತ್ತದೆ ಎನ್ನುವ ಕೂಗಿದೆ. ಕುಲಾಂತರಿ ತಳಿ ಅಳ­ವಡಿಕೆ­ಯನ್ನು  ಬಲವಾಗಿ ವಿರೋಧಿಸುವ­ವರು ಇದ್ದಾರೆ. ಇದಕ್ಕೆ ಉತ್ತರವಾಗಿ ಬೋರ್ಲಾಗ್‌­ಅವರು ‘ಪರಿಸರವಾದಿಗಳು ವೈಜ್ಞಾನಿಕ
ಮುನ್ನಡೆ­ಯನ್ನು ನಿಲ್ಲಿಸುವಂತೆ ಕಂಡು ಬರುತ್ತಿದ್ದಾರೆ. ಹಣ ಬಲವುಳ್ಳ, ಸಣ್ಣ ವಿಜ್ಞಾನ ವಿರೋಧಿ ಗುಂಪು ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ  ಬೆಳ­ವಣಿಗೆಗೆ ಅಡ್ಡಿ ಒಡ್ಡುತ್ತಿದೆ. ಶ್ರೀಮಂತ ರಾಷ್ಟ್ರಗಳು ಇಂತಹ ಪ್ರತಿಷ್ಠೆಯನ್ನು ಬೆಳೆಸಿಕೊಂಡು ನೈಸರ್ಗಿಕ­ವಾಗಿ ಬೆಳೆದ ಆಹಾರ ಧಾನ್ಯಗಳಿಗೆ ಹೆಚ್ಚು  ಹಣ­ವನ್ನು ನೀಡಿ ಕೊಂಡುಕೊಳ್ಳಲು ಶಕ್ತರಿರಬಹುದು, ಆದರೆ ಆಹಾರದ ಕೊರತೆಯಿಂದ, ನಿರಂತರ­ವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಕೋಟ್ಯಂತರ ಜನರಿಗೆ ಇದು ಸಾಧ್ಯವಾಗುವುದಿಲ್ಲ. ಓಬಿರಾಯನ ಕಾಲದ ಕೃಷಿ ಪದ್ಧತಿ ಅಂದರೆ ಕಡಿಮೆ ಇಳುವರಿ  ನೀಡುವ, ಹೆಚ್ಚು ಉತ್ಪಾದನಾ ವೆಚ್ಚವನ್ನು ಒಳಗೊಂಡಿರುವ ಬೆಳೆಗಳಿಗೆ ಜೋತು ಬೀಳುವುದಕ್ಕಿಂತ ಹೊಸ ತಂತ್ರಜ್ಞಾನವನ್ನು ಬಳಸಿ ಹೆಚ್ಚು ಉತ್ಪಾದನೆ ಮಾಡುವುದರಿಂದ ಬಡವರಿಗೆ ಮುಕ್ತಿ ಸಿಗುತ್ತದೆ. ಸಮರ್ಥವಾದ ಹೊಸ ತಂತ್ರ­ಜ್ಞಾನವನ್ನು ಅಳವಡಿಸಿಕೊಂಡಿದ್ದಲ್ಲದೆ, ಜಾಗತಿಕ ಆಹಾರ ಕೊರತೆ ಸರಿ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.

ಬೋರ್ಲಾಗ್‌ ಬದುಕಿದ್ದರೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಅವರು 2009ರಲ್ಲಿ ಕಾಲ­ವಾದರು. ಬೋರ್ಲಾಗ್‌ ಕ್ಯಾಥೊಲಿಕ್‌ ಪಂಗಡಕ್ಕೆ ಸೇರಿದವರಾಗಿದ್ದರೆ ಅವರಿಗೆ ಇಷ್ಟು ಹೊತ್ತಿಗೆ ಸಂತ ಪದವಿ ಸಿಗುತ್ತಿತ್ತು. ಸಂತ ಪದವಿ ಪಡೆ­ಯಲು ಅರ್ಹವಾಗಿರುವ ವ್ಯಕ್ತಿ  ಸತ್ತ ಐದು ವರ್ಷ­ಗಳ ನಂತರ ವ್ಯಾಟಿಕನ್‌ ಚರ್ಚ್‌ನಲ್ಲಿ ಪದವಿ ನೀಡುವ ಬಗ್ಗೆ ಪ್ರಕ್ರಿಯೆಗಳು  ಪ್ರಾರಂಭ­ವಾಗುತ್ತವೆ. ಸಂತ ಪದವಿ ಪಡೆಯಲು ಅಂತಹ ವ್ಯಕ್ತಿಯ ಜೀವಿತದಲ್ಲಿ ಒಂದು ಪವಾಡ, ಸತ್ತ ನಂತರ ಒಂದು ಪವಾಡ ನಡೆದಿರಬೇಕಾಗುತ್ತದೆ. ಬೋರ್ಲಾಗ್‌, ಈ ಸಂತ ಪದವಿಯನ್ನು ಪಡೆ­ಯಲು ಬೇಕಾದ್ದಕ್ಕಿಂತಹ ಹೆಚ್ಚು ಅರ್ಹತೆ ಪಡೆದಿ­ದ್ದರು. ತಮ್ಮ ಜೀವಿತಾವಧಿ ಯಲ್ಲಿ ಹಾಗೂ ಅವರ ಮರಣಾನಂತರ ಅವರ ಹಸಿರು ಕ್ರಾಂತಿ­ಯಿಂದಾಗಿ ಪ್ರಪಂಚದಲ್ಲಿ ನೂರು ಕೋಟಿಗೂ ಹೆಚ್ಚು ಜನ ಹಸಿವಿನಿಂದ ಸಾಯುವು ದನ್ನು ತಪ್ಪಿ­ಸಿ­ದ್ದಾರೆ. ಇದು ಅವರ ಜೀವಿತದಲ್ಲಿ ಹಾಗೂ ಮರಣಾನಂತರ ನಡೆದ ಪವಾಡಗಳೇ ಆಗಿವೆ. ಹಾಗಾಗಿ ಅವರು ಕ್ಯಾಥೊಲಿಕ್‌ ಪಂಗಡಕ್ಕೆ ಸೇರಿ­ದವರಾಗಿದ್ದರೆ ಅವರಿಗೆ ಖಂಡಿತ ಸಂತ ಪದವಿ ಸಿಗುತ್ತಿತ್ತೇನೋ!

ಸರ್ಕಾರಗಳು ಬಡತನದ ವಿರುದ್ಧ ಯುದ್ಧ ಸಾರಿ­ರುವಾಗ, ಕೋಟ್ಯಂತರ ಭಾರ­ತೀಯರು ಹಸಿವಿನಿಂದ ಸಾಯುವುದನ್ನು ತಪ್ಪಿಸಿದವರು  ನಾರ್ಮನ್‌ ಬೋರ್ಲಾಗ್. ಬೋರ್ಲಾಗ್‌­ ಅವರ ಮಾತುಗಳನ್ನು ಕಿವಿಗೊಟ್ಟು ಕೇಳಿ­ಸಿಕೊಳ್ಳುವುದೇ    ಅವರಿಗೆ ನಾವು ನೀಡ­ಬಹು­ದಾದ ಶ್ರದ್ಧಾಂಜಲಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT