ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ನಗರಗಳಿಂದ ಗ್ರಾಮಗಳ ಸ್ವಾಸ್ಥ್ಯ: ವಿಜಯ ಭಾಸ್ಕರ್‌

Last Updated 22 ಏಪ್ರಿಲ್ 2014, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಗಳಲ್ಲಿ ವಿಕೇಂದ್ರೀಕೃತ ತ್ಯಾಜ್ಯ ಮತ್ತು ಕೊಳಚೆ ನೀರು ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಸ್ವಾಸ್ಥ್ಯ ಕಾಪಾಡಬಹುದು’ ಎಂದು  ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಹೇಳಿದರು.

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಪರಿಸರ ಇಲಾಖೆಯ ವತಿಯಿಂದ ‘ವಿಶ್ವ ಭೂ ದಿನಾಚರಣೆ’ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ಹಸಿರು ನಗರಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ತ್ಯಾಜ್ಯ ಮತ್ತು ಕೊಳಚೆ ನೀರಿನ ನಿರ್ವಹಣೆ ಹಾಗೂ ಮರುಬಳಕೆಯ ವ್ಯವಸ್ಥೆ ಗ್ರಾಮೀಣ ಪ್ರದೇಶಗಳ ಪರಿಸರ ಕಲುಷಿತಗೊಳ್ಳುವುದನ್ನು ತಪ್ಪಿಸುತ್ತದೆ.  ಅಲ್ಲದೆ ನಗರಗಳಿಗೆ ನೀರು ಒದಗಿಸುವ ಗ್ರಾಮೀಣ ಪ್ರದೇಶಗಳ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ. ಇದು ನಗರ ಮತ್ತು ಗ್ರಾಮಗಳೆರಡರ ಅಭಿವೃದ್ಧಿಗೆ ಅವಕಾಶ ನೀಡುವ ವ್ಯವಸ್ಥೆ’ ಎಂದರು.

‘ಛತ್ತೀಸಗಡದ ನಯಾರಾಯ್‌ಪುರ್ ನಗರವು ವಿಕೇಂದ್ರೀಕೃತ ತ್ಯಾಜ್ಯ ಮತ್ತು ಕೊಳಚೆನೀರು ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ನಗರ.  ಹೊಸ ಬಡಾವಣೆ ಮತ್ತು ಉಪನಗರಗಳ ನಿರ್ಮಾಣದಲ್ಲಿ  ತ್ಯಾಜ್ಯ ಮತ್ತು ಕೊಳಚೆ ನೀರು ನಿರ್ವಹಣಾ ಘಟಕಗಳನ್ನು ನಿರ್ಮಿಸುವುದನ್ನು ಕಡ್ಡಾಯಗೊಳಿಸಿ ನೀತಿ ರೂಪಿಸಬೇಕು’ ಎಂದರು.

ರಾಜ್ಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಜಿ.ವಿ.ಕೃಷ್ಣರಾವ್ ಮಾತನಾಡಿ, ‘ಇಂದು ವಿಶ್ವ ಭೂ ದಿನಾಚರಣೆಯ ಹೆಸರಿನಲ್ಲಿ ಸಂಭ್ರಮಿಸಲು ಏನೂ ಉಳಿದಿಲ್ಲ. ವಿಶ್ವ ಭೂ ದಿನಾಚರಣೆ ಆರಂಭವಾಗಿ ನಾಲ್ಕು ದಶಕ ಕಳೆದರೂ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಳೆಯುಳಿಕೆ ಇಂಧನ ಆಧಾರಿತ ನಗರ ಸಾರಿಗೆ ವ್ಯವಸ್ಥೆಯನ್ನು ಸೌರಶಕ್ತಿ ಆಧಾರಿತ ಸಾರಿಗೆ ವ್ಯವಸ್ಥೆಯಾಗಿ ಪರಿವರ್ತಿಸುವ ಅನಿವಾರ್ಯತೆ ಇದೆ. ಸುಸ್ಥಿರ ನಗರಗಳ ನಿರ್ಮಾಣದಲ್ಲಿ  ಪರಿಸರ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಮುಂದಿನ ಹೆಜ್ಜೆ ಇಡಬೇಕು. ವನಮಹೋತ್ಸವಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಜೀವವೈವಿಧ್ಯಕ್ಕೆ ಕೊಡುಗೆ ನೀಡುವ  ಸಸಿಗಳಿಗೆ ಆದ್ಯತೆ ನೀಡಬೇಕು’ ಎಂದರು.

ಸುಸ್ಥಿರ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ.ಎ.ರವೀಂದ್ರ, ‘ರಾಷ್ಟ್ರದಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಮತ್ತು ಉತ್ಪಾದಿಸಲಾಗುತ್ತಿರುವ ವಿವಿಧ ಸ್ವರೂಪದ ಇಂಧನಗಳಲ್ಲಿ ಶೇ. 80 ರಷ್ಟು ನಗರಗಳ ಪಾಲಾಗುತ್ತಿವೆ. ನಗರ ಪ್ರದೇಶಗಳಲ್ಲಿ ಒಂದೆರಡು ದಶಕಗಳಿಂದ ಸಾರ್ವಜನಿಕ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚುವುದರೊಂದಿಗೆ ನಗರದ ವಿಸ್ತಾರವೂ ಹೆಚ್ಚುತ್ತಿದ್ದು ಕೃಷಿ ಭೂಮಿ ಕ್ಷೀಣಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಸಿರು ನಗರವೆಂದರೆ ಕೇವಲ ಸಸಿ ಗಳನ್ನು ನೆಡುವುದಲ್ಲ. ಅದೊಂದು ಹಸಿರು ಆರ್ಥಿಕತೆ. ಹಸಿರು ನಗರಗಳ ನಿರ್ಮಾಣದಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ತಂತ್ರಜ್ಞಾನ, ಸಾರ್ವಜನಿಕರು ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸಮನ್ವಯಕ್ಕೆ ಆದ್ಯತೆ ನೀಡುವ ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯ ಕಡೆಗೂ ಗಮನ ಹರಿಸ ಬೇಕು’ ಎಂದರು.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀ ನಾರಾಯಣ, ‘ಇಂದಿಗೂ ನಾವು ಸಮರ್ಥ ಒಳಚರಂಡಿ ವ್ಯವಸ್ಥೆ ಹೊಂದಿಲ್ಲ. ಕೊಳಚೆ ನೀರಿನಿಂದಲೇ ನಮ್ಮ ಜಲಮೂಲಗಳು ಹಾಳಾಗುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT