ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹೊದ್ದ ಬರಡು ಭೂಮಿ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದೆ ಬರಡು ನೆಲ. ಎತ್ತ ನೋಡಿದರೂ ತಗ್ಗು–ದಿಣ್ಣೆಗಳೇ. ಉತ್ತಲು–ಬಿತ್ತಲು ಯೋಗ್ಯವಲ್ಲದ ಭೂಮಿ. ಆದರೆ ಇದೀಗ ಅದೇ ಬಂಜರು ಭೂಮಿ ನಿತ್ಯ ಹರಿದ್ವರ್ಣವಾಗಿ ಪರಿವರ್ತನೆಗೊಂಡು, ಹಸಿರಿನಿಂದ ಕಂಗೊಳಿಸುತ್ತಿದೆ.

ಕೆಲ ವರ್ಷ ಕಳೆದರೆ ಈ ಭೂಮಿ ಭವಿಷ್ಯದ ಸಸ್ಯ, ಅರಣ್ಯ ವಿಜ್ಞಾನಿಗಳಿಗೊಂದು ಬಯಲು ಪ್ರಾಯೋಗಿಕ ಪಾಠಶಾಲೆ ಯಾಗಲಿದೆ. ವಿಜಾಪುರದಿಂದ 34 ಕಿಲೋ ಮೀಟರ್ ದೂರದಲ್ಲಿರುವ ಶೇಗುಣಸಿ ಗ್ರಾಮದ ಹೊರ ವಲಯದ ಬರಡು ಭೂಮಿಯಲ್ಲಿ ಈ ‘ಹಸಿರು ಹೊನ್ನು’ ಚಿಗುರೊಡೆ ಯುತ್ತಿವೆ. ಸುಮಾರು 19 ಎಕರೆ ಭೂಮಿಯಲ್ಲಿ ಹಸಿರನ್ನೇ ಹಾಸಿ ಹೊದ್ದ ತಗ್ಗು–ದಿಣ್ಣೆಯ ನೆಲದಲ್ಲಿ 83 ಪ್ರಭೇದಗಳ ಜೈವಿಕ, ಅರಣ್ಯ, ಔಷಧೀಯ ಸಸ್ಯಗಳ ಜತೆಗೆ ವೈವಿಧ್ಯಮಯ ಫಲ–ಪುಷ್ಪ ಸಸಿಗಳ ಸಮ್ಮಿಲನದ ತಾಣವಾಗಿದೆ.

ಇದರ ಜತೆಗೆ ಈ ನೆಲಕ್ಕೂ ಧಾರ್ಮಿಕ ಐತಿಹ್ಯದ ನಂಟಿದೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಇಲ್ಲಿಯೇ ಕೆಲ ಕಾಲ ತಂಗಿದ್ದ ಎಂಬುದಕ್ಕೆ ದಾಖಲೆಗಳಿವೆ. ಇದರಿಂದಲೇ ಈ ಸ್ಥಳ ಇಂದು ‘ಹರಳಯ್ಯನ ಗುಂಡಿ’ ಎಂದೇ ಹೆಸರಾಗಿದೆ. ಎಂದಿಗೂ ಬತ್ತದ ಇಲ್ಲಿನ ಮೂರು ಗುಂಡಿಗಳಲ್ಲಿನ ಜಲವೇ ಈ ಹಸಿರಿನ ಜೀವಾಳ. ಜತೆಗೆ ಈ ನೆಲದಲ್ಲಿರುವ ಗುಂಡಿಗಳಲ್ಲಿ ಮಳೆಗಾಲದಲ್ಲಿ ಸಂಗ್ರಹವಾಗುವ ನೀರು, ಸರ್ಕಾರದ ವಿವಿಧ ಇಲಾಖೆಗಳ ಸಹಕಾರದಿಂದ ನಿರ್ಮಿಸಿರುವ ಕೃಷಿ ಹೊಂಡದ ನೀರನ್ನು ಹನಿ ನೀರಾವರಿ ಮೂಲಕ ಬಳಸಿಕೊಂಡು ಬರದ ನಾಡಿನಲ್ಲಿ 3 ಸಾವಿರಕ್ಕೂ ಅಧಿಕ ಸಸ್ಯ ಸಂಪತ್ತು ಬೆಳೆಸಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸುತ್ತದೆ.

ಭವಿಷ್ಯದಲ್ಲಿ ವೈವಿಧ್ಯಮಯ ಸಸ್ಯ ಪ್ರಭೇದ, ಅಧ್ಯಯನ ಶೀಲ ಸಸ್ಯ ತಜ್ಞರಿಗೆ ಒಂದೇ ತಾಣದಲ್ಲಿ ದೊರೆಯುವಂತೆ ಯೋಜಿತವಾಗಿ ಸಸ್ಯ ಸಂಪನ್ಮೂಲ ಬೆಳೆಸಲಾಗಿದೆ. ಹರಳಯ್ಯನ ಗುಂಡಿ ಒಂದೆಡೆ ಸಸ್ಯ, ಜೈವಿಕ ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರಯೋಗ ಶಾಲೆಯಾದರೆ, ಮತ್ತೊಂದೆಡೆ ಧಾರ್ಮಿಕ ಶ್ರದ್ಧೆಯುಳ್ಳವರಿಗೆ ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪರಿಸರ ಪ್ರೇಮಿಗಳಿಗೆ, ಹಸಿರು ಪ್ರವಾಸಿಗರಿಗೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಸುಂದರ ತಾಣವಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬರದ ಬವಣೆಯಲ್ಲಿ ಸದಾ ನಿಟ್ಟುಸಿರು ಬಿಡುವ ವಿಜಾಪುರ ಜಿಲ್ಲೆಯ ಜನತೆ ಈ ಧಾರ್ಮಿಕ–ಸಸ್ಯ ಕ್ಷೇತ್ರದಲ್ಲಿ ಮಾತ್ರ ನಿತ್ಯ ಹರಿಯುವ ನೀರಿನ ಜುಳುಜುಳು ನಿನಾದ (ಕಡು ಬೇಸಿಗೆ ಹೊರತು ಪಡಿಸಿ), ಪಕ್ಷಿಗಳ ಕಲರವವನ್ನು ಆನಂದಿಸಬಹುದು.

ಶರಣ ಹರಳಯ್ಯ ಸೇವಾ ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ, ಮಲ್ಲಿಕಾರ್ಜುನ ಸ್ವಾಮೀಜಿ ನಿರ್ವಹಣೆಯಲ್ಲಿ, ಸರ್ಕಾರದ ವಿವಿಧ ಇಲಾಖೆಗಳ ಸಹಕಾರದಲ್ಲಿ ಬರದ ನಾಡು, ಸೂಫಿ–ಶರಣರ ಬೀಡು ವಿಜಾಪುರ ಜಿಲ್ಲೆಯಲ್ಲಿ ಸಸ್ಯ ಸಂಪತ್ತು ಸಮೃದ್ಧಗೊಳ್ಳುತ್ತಿದೆ. ಇದು ಇತರರಿಗೂ ಮಾದರಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT