ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರ ಮುದ್ದಿಸುವ ಮನ

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಇಪ್ಪತ್ತೇಳು ವಿದ್ಯಾರ್ಥಿಗಳ ‘ವನ್ಯ’ ಸಂಘಟನೆ ದಿನಕ್ಕೊಂದು ಗಿಡ ನೆಡುವ ವ್ರತ ಹಿಡಿದಿದೆ. ನೆಟ್ಟ ಗಿಡಕ್ಕೆ ನೀರು ಹಾಕುವ ಕಾಯಕವನ್ನೂ ಸಂಘಟನೆಯವರು ಮಾಡುತ್ತಿರುವುದು ಅನುಕರಣೀಯ.

ಈ ಜಮಾನದ ವಿದ್ಯಾರ್ಥಿಗಳಲ್ಲಿ ಅನೇಕರು ತಮ್ಮ ವಿರಾಮದ ಸಮಯವನ್ನು ಕೆಲಸಕ್ಕೆ ಬಾರದ ಸಂಗತಿಗಳಿಗೆ ವಿನಿಯೋಗಿಸುತ್ತಾರೆ. ಅಂತಹವರ ನಡುವೆಯೂ ಕೆಲವು ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಪರೋಪಕಾರಿ ಕೆಲಸಕ್ಕೆ ಬಳಸುವ ಗುಣ ಬೆಳೆಸಿಕೊಂಡಿರುತ್ತಾರೆ. ‘ವನ್ಯ’ ಎಂಬ ವಿದ್ಯಾರ್ಥಿ ಸಂಘಟನೆ ಅದಕ್ಕೆ ತಾಜಾ ಉದಾಹರಣೆ.

‘ವನ್ಯ’ 27 ಜನ ವಿದ್ಯಾರ್ಥಿಗಳ ತಂಡ. ದಿನಕ್ಕೊಂದು ಗಿಡ ಎಂಬ ಲೆಕ್ಕದಲ್ಲಿ ತಿಂಗಳಿಗೆ ಮೂವತ್ತು ಗಿಡ ನೆಡುವುದು ಈ ತಂಡದ ಧ್ಯೇಯ. ಗಿಡ ನೆಟ್ಟರೆ ಸಾಲದು; ಅದನ್ನು ಪೋಷಿಸುವುದು ಅಷ್ಟೇ ಮುಖ್ಯ ಎಂಬ ಅರಿವು ಈ ವಿದ್ಯಾರ್ಥಿಗಳಿಗಿದೆ. ಅದಕ್ಕಾಗಿ ಅವರು ತಮ್ಮ ಸ್ವಂತ ದುಡ್ಡು ಖರ್ಚು ಮಾಡಿ ಗಿಡ ನೆಡುವ ಕೆಲಸದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳ ಈ ವೃಕ್ಷ ಪ್ರೇಮ ಕಂಡು ಅನೇಕ ಸಹೃದಯಿಗಳು,  ಪ್ರಾಧ್ಯಾಪಕರು ಅವರೊಂದಿಗೆ ಕೈಜೋಡಿಸಿದ್ದಾರೆ.

‘ಮೂರು ವರ್ಷದಿಂದ ಸ್ನೇಹಿತರಾಗಿರುವ ನಾವೆಲ್ಲ ಜೊತೆಗೂಡಿ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಬಂತು. ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು. ಕೆಲವರು ಒಟ್ಟಾಗಿ ಸೇರಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಶುರುಮಾಡುವ ಎಂಬ ಸಲಹೆ ಕೊಟ್ಟರು. ಆದರೆ, ಅದನ್ನು ಮಾಡುವುದರಿಂದ ಸಮಾಜಕ್ಕೇನು ಲಾಭ ಎಂಬ ಪ್ರಶ್ನೆ ಎದುರಾಯ್ತು. ಸ್ನೇಹಿತರ ಹುಟ್ಟುಹಬ್ಬಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖುಷಿ ಪಡುವ ಬದಲು, ನಮ್ಮ ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲಸ ಮಾಡಬೇಕು ಎಂದು ನಿರ್ಧರಿಸಿದೆವು. ಕೊನೆಗೆ ನಮ್ಮೆಲ್ಲರ ಮನಸ್ಸಿನಲ್ಲಿ ‘ವನ್ಯ’ ಪರಿಕಲ್ಪನೆ ಚಿಗುರಿತು. ‘ವನ್ಯ’ ಹೇಗೆ ಕಾರ್ಯನಿರ್ವಹಿಸಬೇಕು, ತಂಡದ ಸದಸ್ಯರ ಜವಾಬ್ದಾರಿಗಳೇನು, ಲೋಗೊ ಹೇಗಿರಬೇಕು ಎಂಬ ಬಗ್ಗೆ ಎಲ್ಲರೂ ಕೂಡಿ ನಿರ್ಧರಿಸಿ ಆನಂತರ ಕಾರ್ಯಪ್ರವೃತ್ತರಾದೆವು’ ಎಂದು ‘ವನ್ಯ’ ರೂಪುಗೊಂಡ ಬಗೆಯ ಕುರಿತು ಹೇಳುತ್ತಾರೆ ಅಭಿಮಾನ್‌ ಜೋಯಿಸ್‌.

ಸ್ವ–ಪ್ರೇರಣೆಯಿಂದ ಗಿಡ ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಕಾರ್ಯ ನೋಡುಗರಿಗೆ ಅದೊಂದು ಯಃಕಶ್ಚಿತ್‌ ಸಣ್ಣ ಕೆಲಸ ಅಂತ ಅನ್ನಿಸಬಹುದು. ಆದರೆ, ‘ವನ್ಯ’ ಸಂಘಟನೆಯ ತಂಡಸ್ಫೂರ್ತಿ ದೊಡ್ಡ ಮಟ್ಟದ್ದು. ಏನೇ ಆದರೂ ನಾವು ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂಬ ಬದ್ಧತೆ ಅವರಲ್ಲಿದೆ. ‘ನಮ್ಮ ತಂಡದಲ್ಲಿ ಇರುವವರೆಲ್ಲ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡವರು. ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲಿ ಬಿಡುವ ಜಾಯಮಾನ ನಮ್ಮದಲ್ಲ. ಆ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳ್ಯಾರೂ ನಮ್ಮಲ್ಲಿಲ್ಲ’ ಎನ್ನುತ್ತಾರೆ ಅಭಿಮಾನ್‌.

ಗಿಡಗಳನ್ನು ಕೊಳ್ಳಲು ಮತ್ತು ಅದನ್ನು ಪೋಷಣೆ ಮಾಡಲು ಬೇಕಿರುವ ಹಣಕ್ಕಾಗಿ ಈ ವಿದ್ಯಾರ್ಥಿಗಳು ಯಾರ ಮುಂದೆಯೂ ಕೈಯೊಡ್ಡುವುದಿಲ್ಲ. ಅದಕ್ಕೆ ಬೇಕಿರುವ ಹಣವನ್ನು ತಾವೇ  ಹೊಂದಿಸಿಕೊಳ್ಳುತ್ತಾರೆ. ತಿಂಗಳಿಗೆ 30ರಿಂದ 100 ರೂಪಾಯಿ ಹಣ ಸಂಗ್ರಹಿಸಿ ಗಿಡಗಳ ಪೋಷಣೆಗೆ ಬಳಸುತ್ತಾರೆ.

‘ಮೊದಲು ನಾವು ಗಿಡಗಳಿಗಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದೆವು. ಅಲ್ಲಿಯವರು ಉಚಿತವಾಗಿ ಗಿಡ ನೀಡಲು ನಿರಾಕರಿಸಿದರು. ಒಂದು ಬೇವು ಅಥವಾ ಹೊಂಗೆ ಗಿಡಕ್ಕೆ ₨50 ಆಗುತ್ತದೆ. ನಾವು ಏಕಕಾಲಕ್ಕೆ ಮೂವತ್ತು ಗಿಡ ಕೊಳ್ಳುವುದರಿಂದ ನರ್ಸರಿಯವರ ₨20ರಿಂದ 30ಕ್ಕೆ ನೀಡಲು ಒಪ್ಪಿಕೊಂಡರು. ಗಿಡಗಳನ್ನು ತಂದು ನೆಡುವುದರ ಜೊತೆಗೆ ಅದರ ರಕ್ಷಣೆಯ ಜವಾಬ್ದಾರಿಯನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಕುರಿ ಹಿಕ್ಕೆ ಹಾಗೂ ಸಗಣಿಯನ್ನು ಕೊಂಡು, ಫಲವತ್ತಾದ ಕೆಮ್ಮಣ್ಣಿಗೆ ಅದನ್ನು ಮಿಶ್ರಣ ಮಾಡಿ ಗಿಡಗಳಿಗೆ ಹಾಕುತ್ತೇವೆ. ಬೀದಿ ದನಗಳ ಹಾವಳಿಯಿಂದ ಗಿಡಗಳನ್ನು ರಕ್ಷಿಸಲು ಮೆಶ್‌ ಹಾಕುತ್ತೇವೆ. ಗಿಡಗಳಿಗೆ ನೀರುಣಿಸಲು 35 ಲೀಟರ್‌ನ ಐದು ಕ್ಯಾನ್‌ ಮಾಡಿಕೊಂಡಿದ್ದೇವೆ. ವಾರಾಂತ್ಯದಲ್ಲಿ ಪಾಳಿ ಮೇಲೆ ಮೂವರು ಗಿಡಗಳಿಗೆ ನೀರುಣಿಸುತ್ತೇವೆ’ ಎನ್ನುತ್ತಾರೆ ಅವರು.

ರಸ್ತೆ ಬದಿಯ ಖಾಲಿ ಜಾಗದಲ್ಲಿ ಹೊಂಗೆ ಮತ್ತು ಬೇವಿನ ಮರ ಬೆಳೆಸುವ ಗುರಿ ಇರಿಸಿಕೊಂಡಿರುವ ಈ ವಿದ್ಯಾರ್ಥಿಗಳ ಪರಿಸರ ಕಾಳಜಿ ಅನೇಕರ ಮನಗೆದ್ದಿದೆ. ವಿದ್ಯಾರ್ಥಿಗಳು ಗಿಡ ನೆಟ್ಟು ಹೋದ ನಂತರ ಅಕ್ಕಪಕ್ಕದ ಮನೆ ಅಥವಾ ಅಂಗಡಿಯವರೇ ಅವುಗಳಿಗೆ ನೀರು ಹಾಕುತ್ತಾರಂತೆ. ಅವರಿವರು ನೀರು ಹಾಕುತ್ತಾರೆ ಎಂದು ನೆಚ್ಚಿ ಕೂರುವ ಜಾಯಮಾನದವರಲ್ಲದ ಈ ವಿದ್ಯಾರ್ಥಿಗಳು ತಪ್ಪದೆ ವಾರಕ್ಕೊಮ್ಮೆ ಗಿಡಗಳಿಗೆ ನೀರುಣಿಸಿ ಬರುತ್ತಾರೆ. 

ಜೂನ್‌ 5 ವಿಶ್ವ ಪರಿಸರ ದಿನ. ಅಂದು ಕತ್ರಿಗುಪ್ಪೆ ಬಳಿ ಗಿಡಗಳನ್ನು ನೆಡುವ ಉದ್ದೇಶ ಹೊಂದಿರುವ ಈ ವಿದ್ಯಾರ್ಥಿಗಳಿಗೆ ಪ್ರಚಾರದ ಹಂಗಿಲ್ಲ. ಯಾವ ಬಡಾವಣೆಯಲ್ಲಿ ಮರ–ಗಿಡಗಳ ಸಂಖ್ಯೆ ಕಡಿಮೆ ಇದೆಯೋ ಅಂತಹ ಸ್ಥಳಗಳಲ್ಲಿ ಗಿಡ ನೆಡುವ ಉದ್ದೇಶ ಇವರದ್ದು. ಗಿಡ ನೆಡುವ ಯೋಜನೆಯನ್ನು ಇಡೀ ನಗರಕ್ಕೆ ವಿಸ್ತರಿಸುವ ಯೋಜನೆಯೂ ಇವರಿಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ಆಯಾ ಭಾಗದ ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಯೋಚನೆಯೂ ತಂಡಕ್ಕಿದೆ. ಮನೆಮಕ್ಕಳ ಈ ಕೆಲಸವನ್ನು ಮೆಚ್ಚಿ ಬೆನ್ನುತಟ್ಟುವ ತಂದೆ–ತಾಯಂದಿರು ಓದುವುದನ್ನು ಮಾತ್ರ ಮರೆಯಬೇಡಿ ಎಂಬ ಕಿವಿಮಾತನ್ನೂ ಹೇಳುತ್ತಾರಂತೆ. ಒಟ್ಟಾರೆಯಾಗಿ, ಏನೇ ಆದರೂ ತಾವು ನೆಟ್ಟ ಗಿಡಗಳು ಹೆಮ್ಮರವಾಗಿ ಬೆಳೆಯಬೇಕು, ಉತ್ತಮ ಗಾಳಿ ಮತ್ತು ನೆರಳು ನೀಡಬೇಕು ಎಂಬ ಅದಮ್ಯ ಆಸೆ ಹೊಂದಿರುವ ‘ವನ್ಯ’ ತಂಡ ಗಿಡ ನೆಡುವ ಪರಂಪರೆಯನ್ನು ಕೊನೆವರೆಗೂ ವ್ರತದಂತೆ ಕಟ್ಟುನಿಟ್ಟಾಗಿ ಮುಂದುವರಿಸಿಕೊಂಡು ಹೋಗುವ  ಹಂಬಲ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT