ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ಅರಿವು ಮೂಡಿಸಲು ಬೈಕ್‌ ‌ರ‍್ಯಾಲಿ

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಕಾನ್‌ನ ಅಕ್ಷಯ ಪಾತ್ರೆ ಫೌಂಡೇಷನ್‌ ವತಿಯಿಂದ ಒದಗಿಸುವ ಮಧ್ಯಾಹ್ನದ ಬಿಸಿಯೂಟ ಕುರಿತಂತೆ ಜಾಗೃತಿ ಮೂಡಿಸಲು ಭಾನುವಾರ ನಗರದಲ್ಲಿ ‘ಔಟ್‌ರೈಡ್‌ ಹಂಗರ್‌ 2016’ ಎಂಬ ಬೈಕ್‌ ರ‍್ಯಾಲಿ ಆಯೋಜಿಸಲಾಗಿತ್ತು.

ತರಗತಿಯ ಹಸಿವು ಮತ್ತು ಅನಕ್ಷರತೆ  ತೊಡೆದು ಹಾಕುವ ಧ್ಯೇಯ ಹೊಂದಿದ್ದ ಈ ರ‍್ಯಾಲಿಯಲ್ಲಿ ಸುಮಾರು 300 ಬೈಕರುಗಳು ಭಾಗವಹಿಸಿದ್ದರು.
ರಾಜಾಜಿನಗರದ ಇಸ್ಕಾನ್‌ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರ‍್ಯಾಲಿಗೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ, ನಟ ಅಜಯ್‌ ರಾವ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಲೀಂ, ‘ಅಕ್ಷಯ ಪಾತ್ರೆ ಫೌಂಡೇಷನ್‌ ನಿತ್ಯ 14 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ  ಪೂರೈಸುತ್ತ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಈ ರ‍್ಯಾಲಿಯಿಂದ ಇಂತಹದೊಂದು ಉದಾತ್ತ ಕಾರ್ಯ ಬಹಳ ಜನರಿಗೆ ಸ್ಫೂರ್ತಿಯಾಗಲಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಅಜಯ್ ರಾವ್ ಮಾತನಾಡಿ, ‘ಅಕ್ಷಯ ಪಾತ್ರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬರೀ ಊಟ ಮಾತ್ರ ನೀಡುವುದಿಲ್ಲ. ದೈಹಿಕ, ಮಾನಸಿಕ  ಬೆಳವಣಿಗೆಗೆ ಪೂರಕವಾದ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುತ್ತದೆ. ಬಡ ಮಕ್ಕಳ ಹೊಟ್ಟೆ ಹಸಿವು ನೀಗಿಸುವ  ಈ ಮಹತ್ಕಾರ್ಯ ರ‍್ಯಾಲಿ ಮೂಲಕ ಇನ್ನೊಂದಿಷ್ಟು ಜನಕ್ಕೆ ತಲುಪಲಿದೆ’ ಎಂದು ತಿಳಿಸಿದರು.

ಹಿರಿಯ ಬೈಕರ್‌ ಎಂ.ಚಕ್ರವರ್ತಿ ಮಾತನಾಡಿ, ‘ಹಸಿವಿಗೆ ಬಡವ, ಶ್ರೀಮಂತರು ಎಂಬ ಬೇಧಭಾವ ಇರದು. ಆಹಾರವಿಲ್ಲದೆ ಬರೀ ಶ್ರೀಮಂತಿಕೆಯಿಂದ ಹಸಿವು ನೀಗುವುದಿಲ್ಲ. ಹಸಿವಿನ ವಿಚಾರದಲ್ಲಿ ನಾವೆಲ್ಲರೂ ಮಕ್ಕಳನ್ನು ಗೌರವಿಸಬೇಕು’ ಎಂದರು.

ಅಕ್ಷಯ ಪಾತ್ರೆ ಫೌಂಡೇಷನ್‌ ಮುಖ್ಯ ನಿಧಿ ಅಧಿಕಾರಿ ಶ್ರೀಧಾಮಕೃಷ್ಣ ದಾಸ ಮಾತನಾಡಿ, ‘ಬಿಸಿಯೂಟ ಯೋಜನೆ ಈವರೆಗೆ ಯಶಸ್ವಿಯಾಗಿ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಇದಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿವೆ. 

ಇನ್ನು ಹೆಚ್ಚಿನ ಜನರು ಈ ಕೈಂಕರ್ಯಕ್ಕೆ ಕೈಜೋಡಿಸಲಿ, ಇನ್ನಷ್ಟು ಮಕ್ಕಳಿಗೆ ಇದರ ಉಪಯೋಗ ದೊರೆಯಲಿ ಎನ್ನುವ ಉದ್ದೇಶದಿಂದ ಈ ರ‍್ಯಾಲಿ ಆಯೋಜಿಸಲಾಗಿದೆ’ ಎಂದರು.

ಸುಮಾರು 30 ಕಿ.ಮೀ ದೂರದ ಈ ರ‍್ಯಾಲಿ ಮಲ್ಲೇಶ್ವರ, ರೇಸ್‌ಕೋರ್ಸ್‌ ರಸ್ತೆ, ಕಾರ್ಪೋರೇಷನ್‌ ರಸ್ತೆ, ಲಾಲ್‌ಬಾಗ್‌ ರಸ್ತೆ, ಆರ್‌.ವಿ.ರಸ್ತೆ, ಬನಶಂಕರಿ, ಕನಕಪುರ ರಸ್ತೆ ಮಾರ್ಗವಾಗಿ ಸಾಗಿ ವಸಂತಪುರದಲ್ಲಿರುವ ಅಕ್ಷಯ ಪಾತ್ರೆಯ ಅಡುಗೆ ಮನೆ ತಲುಪಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT