ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಬದಲಾವಣೆಯ ನಿರೀಕ್ಷೆ...

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಬಂಗಾರ ಗೆದ್ದಾಗ ದೇಶದ ಕ್ರೀಡಾಭಿಮಾನಿಗಳು ಅತಿಯಾಗಿ ಸಂಭ್ರಮಿಸಿದ್ದರು. ಎಂಟು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಎನಿಸಿರುವ ತಂಡ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಅಸಾಮಾನ್ಯ ಸಾಧನೆ ಏನೂ ಅಲ್ಲ.  ಅತಿಯಾಗಿ ಸಂಭ್ರಮಿಸುವಂತಹದ್ದೇನೂ ಇಲ್ಲ.

ಆದರೂ ಇಂಚೆನ್‌ ಕೂಟದಲ್ಲಿ ಲಭಿಸಿದ ಸ್ವರ್ಣ ಮಹಾನ್‌ ಸಾಧನೆಯಾಗಿ ಕಾಣುತ್ತದೆ. ಏಕೆಂದರೆ ಭಾರತದ ಹಾಕಿ ಕ್ರೀಡೆ ಸಂಕಷ್ಟದ ಹಾದಿಯಲ್ಲಿದ್ದಾಗ ಈ ಯಶಸ್ಸು ದೊರೆತಿದೆ. ಮೇಲಿಂದ ಮೇಲೆ ನಿರಾಸೆಯನ್ನೇ ಎದುರಿಸುತ್ತಿದ್ದ ತಂಡಕ್ಕೆ ಅನಿರೀಕ್ಷಿತ ಯಶಸ್ಸು ದೊರೆತಾಗ ಸಂತಸ ಉಂಟಾಗುವುದು ಸಹಜ.

ಒಂದು ಕಾಲದಲ್ಲಿ ‘ಭಾರತ’ ಎಂಬ ಹೆಸರು ಕೇಳಿದೊಡನೆ ಹಾಕಿ ಆಡುವ ಇತರ ದೇಶಗಳ ತಂಡಗಳ ಆಟಗಾರರಿಗೆ ನಡುಕ ಉಂಟಾಗುತ್ತಿತ್ತು. ಭಾರತ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿತ್ತು. ಆ ಬಳಿಕ ತಂಡ ಹಿಮ್ಮುಖವಾಗಿ ಚಲಿಸಿ ಪಾತಾಳಕ್ಕೆ ಬಿದ್ದದ್ದು ಈಗ ಇತಿಹಾಸ. ಅಲ್ಲಿಂದ ಮೇಲೇಳಲಾಗದೆ ಹಲವು ವರ್ಷಗಳಿಂದ ಒದ್ದಾಡುತ್ತಲೇ ಇದೆ. ಒಮ್ಮೊಮ್ಮೆ ಚೇತರಿಕೆಯ ಪ್ರದ ರ್ಶನ ನೀಡಿದರೂ, ಮತ್ತೆ ಕುಸಿತದ ಹಾದಿ ಹಿಡಿಯುತ್ತಿತ್ತು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏಷ್ಯನ್‌ ಕ್ರೀಡಾಕೂಟದ ಚಿನ್ನ ಲಭಿಸಿದ್ದು ಸಂಭ್ರಮಕ್ಕೆ ಕಾರಣವಾಗಿದೆ. ಏಷ್ಯನ್‌ ಕೂಟದಲ್ಲಿ 16 ವರ್ಷಗಳ  ಬಿಡುವಿನ ಬಳಿಕ ದೊರೆತ ಪದಕ ಇದು. ಈ ಸ್ವರ್ಣ ಹೊಸ ನಿರೀಕ್ಷೆ, ಭರವಸೆಗೆ ಕಾರಣವಾಗಿದೆ. ‘ಏಷ್ಯನ್‌ ಕ್ರೀಡಾಕೂಟದಲ್ಲಿ ದೊರೆತ ಚಿನ್ನ ದೇಶದ ಹಾಕಿ ಕ್ರೀಡೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ’ ಎಂದು ಪದಕ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಆಟಗಾರ ವಿ.ಆರ್‌. ರಘುನಾಥ್‌ ಅವರ ಹೇಳಿಕೆ.

ಹಾಕಿ ಆಡಳಿತದಲ್ಲಿ ನಡೆದ ಒಳಜಗಳ ಮತ್ತು ಸೂಕ್ತ ಯೋಜನೆಯ ಕೊರತೆ ಒಳಗೊಂಡಂತೆ ಹಲವು ಕಾರಣಗಳಿಂದಾಗಿ ಈ ಕ್ರೀಡೆ ಸತ್ವವನ್ನು ಕಳೆದುಕೊಂಡಿತ್ತು. ಆದರೂ ಇತ್ತೀಚಿನ ಕೆಲ ಸಮಯಗಳಿಂದ ಆಟಗಾರರು ಕಠಿಣ ಪ್ರಯತ್ನ ನಡೆಸುತ್ತಿದ್ದಾರೆ. ಸಂಘಟಿತ ಪ್ರದರ್ಶನ ತೋರಿದ ಕಾರಣ ಪದಕ ದೊರೆತಿದೆ.

‘ಎರಡು ವರ್ಷಗಳ ಕಠಿಣ ಪರಿಶ್ರಮಕ್ಕೆ ದೊರೆತ ಫಲ ಇದು’ ಎಂದು ತಂಡದ ನಾಯಕ ಸರ್ದಾರ್‌ ಸಿಂಗ್ ಹೇಳಿದ್ದರು. ಆದ್ದರಿಂದ ಈ ಪರಿಶ್ರಮದ ಫಲ ಇಲ್ಲಿಗೇ ಕೊನೆ ಗೊಳ್ಳಬಾರದು. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಆಟಗಾರರ ಮೇಲಿದೆ.
ಭಾರತ ಇಂಚೆನ್‌ನಲ್ಲಿ ‘ಪರಿಪೂರ್ಣ ಆಟ ತೋರಿತ್ತು’ ಎಂದು ಹೇಳುವುದು ತಪ್ಪು. ‘ಕೆಲವು ವಿಭಾಗಗಳಲ್ಲಿ ದೌರ್ಬಲ್ಯಗಳಿವೆ. ಸುಧಾರಣೆಗೆ ಇನ್ನೂ ಅವಕಾಶವಿದೆ’ ಎಂದು ತಂಡದ ಮುಖ್ಯ ಕೋಚ್‌ ಟೆರ್ರಿ ವಾಲ್ಶ್‌ ನುಡಿದಿದ್ದರು.

ಸಹಾಯಕ ಕೋಚ್‌ ಜೂಡ್‌ ಫೆಲಿಕ್ಸ್‌ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಏಷ್ಯನ್‌ ಕ್ರೀಡಾಕೂಟದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಆಡದೆಯೂ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೆವು. ಆದ್ದರಿಂದ ಆಟಗಾರರು ಪೂರ್ಣ ಸಾಮರ್ಥ್ಯದೊಂದಿಗೆ ಆಡಿದರೆ ಇನ್ನಷ್ಟು ಯಶಸ್ಸನ್ನು ನಿರೀಕ್ಷಿಸಬಹುದು’ ಎಂದು ಇತ್ತೀಚೆಗೆ ಹೇಳಿದ್ದರು. ಆದರೆ ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಏನು ಮಾಡಬೇಕು? ಇದಕ್ಕೆ ಬೇಗನೇ ಉತ್ತರ ಕಂಡುಕೊಳ್ಳುವುದು ಅಗತ್ಯ.

ಒಲಿಂಪಿಕ್ಸ್‌ ಸಿದ್ಧತೆಗೆ ಅವಕಾಶ
ಏಷ್ಯನ್‌ ಕೂಟದಲ್ಲಿ ಚಿನ್ನ ಗೆದ್ದ ಕಾರಣ ಭಾರತಕ್ಕೆ ರಿಯೊ ಡಿ ಜನೈರೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಸಾಧ್ಯವಾಗಿದೆ.
ರಿಯೊ ಒಲಿಂಪಿಕ್ಸ್‌ 2016ರ ಆಗಸ್ಟ್‌ನಲ್ಲಿ ನಡೆಯಲಿದೆ. ಅಂದರೆ ಇನ್ನೂ 21 ತಿಂಗಳುಗಳು ಇವೆ. ಒಲಿಂಪಿಕ್ಸ್‌ಗೆ ಸೂಕ್ತ ರೀತಿಯಲ್ಲಿ ಸಜ್ಜಾಗಲು ಭಾರತಕ್ಕೆ ಅವಕಾಶ ದೊರೆತಿದೆ.

ಇತ್ತೀಚಿನ ಕೆಲ ಒಲಿಂಪಿಕ್‌ ಕೂಟಗಳಿಗೆ ಭಾರತ ಕೊನೆಯ ಕ್ಷಣದಲ್ಲಿ ಅರ್ಹತೆ ಪಡೆದಿತ್ತು. ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಅರ್ಹತೆ ಪಡೆದುಕೊಂಡಿದೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ವಿಫಲವಾಗಿ ಭಾರತ ಅವಮಾನಕ್ಕೆ ಗುರಿಯಾಗಿತ್ತು. ಇದೀಗ 2016ರ ಒಲಿಂಪಿಕ್ಸ್‌ನ ಹಾಕಿ ಟೂರ್ನಿಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿದೆ. ಭಾರತ ಹಾಕಿ ತಂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಇದರಿಂದ ತಿಳಿಯಬಹುದು.

ಏಷ್ಯನ್‌ ಕೂಟದ ಚಿನ್ನವನ್ನು ಭಾರತದ ಹಾಕಿ ತಂಡ ‘ಚಿಮ್ಮು ಹಲಗೆ’ಯಾಗಿ ಕಾಣಬೇಕು. ಈ ಪದಕದಿಂದ ದೊರೆತ ಆತ್ಮವಿಶ್ವಾಸ, ಉತ್ತೇಜನದಿಂದ ಮೇಲಕ್ಕೆ ಚಿಮ್ಮುತ್ತಾ ಗತವೈಭವವನ್ನು ಪಡೆಯಲು ಪ್ರಯತ್ನಿಸಬೇಕಿದೆ.  ನರೀಂದರ್ ಬಾತ್ರಾ ನೇತೃತ್ವದ ಹೊಸ ಆಡಳಿತ ಮಂಡಳಿ ‘ಹಾಕಿ ಇಂಡಿಯಾ’ದ ಅಧಿಕಾರ ವಹಿಸಿಕೊಂಡಿದೆ. ಹಾಕಿ ಕ್ರೀಡೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಈ ಆಡಳಿತ ಮಂಡಳಿಯ ಮುಂದಿದೆ.

ರಾಜ್ಯದಲ್ಲೂ ಬದಲಾವಣೆಗೆ ಕಾರಣವಾಗಲಿ
ಚಿನ್ನ ಗೆದ್ದ ಭಾರತ ತಂಡದಲ್ಲಿ ಕರ್ನಾಟಕದ ವಿ.ಆರ್‌. ರಘುನಾಥ್‌, ಎಸ್‌.ವಿ. ಸುನಿಲ್‌ ಮತ್ತು ನಿಕಿನ್‌ ತಿಮ್ಮಯ್ಯ ಇದ್ದರು. ಅದೇ ರೀತಿ ಸಹಾಯಕ ಕೋಚ್‌ ಜೂಡ್‌ ಫೆಲಿಕ್ಸ್‌ ಅವರ ಶ್ರಮವೂ ಈ ಯಶಸ್ಸಿನ ಹಿಂದೆ ಇದೆ. ಕರ್ನಾಟಕದ ಆಟಗಾರರ ಪ್ರದರ್ಶನ ರಾಜ್ಯದ ಯುವ ಆಟಗಾರರಲ್ಲಿ ಹೊಸ ಉತ್ತೇಜನಕ್ಕೆ ಕಾರಣವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಿಂದ ಹೆಚ್ಚಿನ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ.

ಹೋದ ವಾರ ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಕಪ್‌’ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯಲ್ಲಿ  ಕರ್ನಾಟಕ ಪುರುಷ ಮತ್ತು ಮಹಿಳಾ ತಂಡಗಳು ನೀರಸ ಆಟ ತೋರಿದ್ದವು. ಪುರುಷರ ತಂಡದವರು ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಪಡೆದಿದ್ದರೆ, ಮಹಿಳಾ ತಂಡದವರು ಐದು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದ್ದರು.

ಕರ್ನಾಟಕ ಮಾತ್ರವಲ್ಲ, ದೇಶದ ಇತರ ಕಡೆಗಳಲ್ಲೂ ನಿರೀಕ್ಷಿಸಿದಷ್ಟು ಹಾಕಿ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ.  ಮಂಬೈ, ಹೈದರಾಬಾದ್‌ ಮತ್ತು ಚೆನ್ನೈನಂತಹ ನಗರಗಳು ಸಾಕಷ್ಟು ಹಾಕಿ ಪ್ರತಿಭೆಗಳನ್ನು ನೀಡುತ್ತಿದ್ದವು. ಅದರೆ ಈಗ ಎಲ್ಲ ಕಡೆ ಜಡತ್ವ ಆವ­ರಿಸಿ­ದೆ. ಪ್ರತಿಭೆಗಳ ಕೊರತೆ ಇದೆ. ಏಷ್ಯನ್‌ ಕ್ರೀಡಾಕೂಟದ ಚಿನ್ನ ಎಲ್ಲರನ್ನೂ ಬಡಿದೆಬ್ಬಿಸಲಿ ಎಂಬುದು ಹಾಕಿ ಪ್ರೇಮಿಗಳ ಆಶಯ.

ನಿಧಾನ ಪ್ರಕ್ರಿಯೆ, ಆತುರ ಬೇಡ: ರಘುನಾಥ್‌
‘ಏಷ್ಯನ್‌ ಕ್ರೀಡಾಕೂಟದ ಚಿನ್ನ ದೇಶದ ಹಾಕಿ ಕ್ರೀಡೆಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣ ವಾಗಲಿದೆ. ಆದರೆ ಯಾರೂ ಆತುರ ಪಡಬಾರದು’ ಎಂಬುದು ಕರ್ನಾಟಕದ ಆಟಗಾರ ರಘುನಾಥ್‌ ಹೇಳಿಕೆ. ‘ಇಂಚೆನ್‌ನಲ್ಲಿ ಬಂಗಾರ ಗೆದ್ದ ಕಾರಣ ನಾವು ಈಗ ಏಷ್ಯಾದಲ್ಲಿ ಅಗ್ರ ಮಾನ್ಯ ತಂಡ ಎನಿಸಿಕೊಂಡಿದ್ದೇವೆ. ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಇಟ್ಟಂತಹ ಮೊದಲ ಹೆಜ್ಜೆ ಇದು. ಆದರೆ ವಿಶ್ವದಲ್ಲೇ ಬಲಿಷ್ಠ ತಂಡ ಎನಿಸಿಕೊಳ್ಳಲು ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ’ ಎಂದಿದ್ದಾರೆ.

‘ನಾವು ಎರಡು ವರ್ಷಗಳಿಂದ ಕಠಿಣ ಪ್ರಯತ್ನ ನಡೆಸುತ್ತಾ ಬಂದಿದ್ದೇವೆ. ಅದರ ಫಲ ಲಭಿಸತೊಡಗಿದೆ. ರಾತ್ರಿ ಬೆಳಗಾಗುವುದರೊಳಗೆ ನಮಗೆ ಇದನ್ನು ಸಾಧಿಸಲು ಆಗಲಿಲ್ಲ. ಇದೊಂದು ನಿಧಾನ ಪ್ರಕ್ರಿಯೆ. ಅಲ್ಪ ಅವಧಿಯಲ್ಲೇ ಎಲ್ಲವನ್ನೂ ಸಾಧಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ’ ಎಂದು ಈ ಡ್ರ್ಯಾಗ್‌ ಫ್ಲಿಕ್ ಪರಿಣತ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮುಂದಿನ ತಿಂಗಳಲ್ಲಿ ನಾವು ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು ಆಡಲಿದ್ದೇವೆ. ಹೀಗೆ ಪ್ರಮುಖ ತಂಡಗಳ ವಿರುದ್ಧ ಆಡುವುದರಿಂದ ಅನುಭವ ಹೆಚ್ಚಲಿದೆ. ಆಸ್ಟ್ರೇಲಿಯ ವಿರುದ್ಧ ಉತ್ತಮ ಪ್ರದರ್ಶನ ತೋರುವ ಗುರಿ ನಮ್ಮದು’ ಎಂದಿದ್ದಾರೆ. ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತದ ಸಾಧ್ಯತೆಯ ಬಗ್ಗೆ ಕೇಳಿದಾಗ, ‘ಆ ಟೂರ್ನಿಯ ಬಗ್ಗೆ ಈಗಲೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಒಂದೊಂದೇ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಯೋಜನೆ ರೂಪಿಸುತ್ತೇವೆ’ಎಂದು ಉತ್ತರಿಸಿದರು.

‘ಯಾವ ವಿಭಾಗದಲ್ಲಿ ದೌರ್ಬಲ್ಯ ಇದೆ ಎಂಬುದನ್ನು ಮೊದಲು ಅರಿಯಬೇಕು. ಬಳಿಕ ಅಂತಹ ವಿಭಾಗದಲ್ಲಿ ಸುಧಾರಣೆ ತಂದುಕೊಳ್ಳಲು ಪ್ರಯತ್ನಿಸಬೇಕಿದೆ. ಹಾಗಾದಲ್ಲಿ ಏಷ್ಯಾ ಮಾತ್ರವಲ್ಲ ವಿಶ್ವದಲ್ಲೇ ನಮಗೆ ನಂಬರ್‌ ಒನ್‌ ಎನಿಸಿಕೊಳ್ಳಲು ಸಾಧ್ಯ’ ಎಂಬುದು ಅವರ ಆತ್ಮವಿಶ್ವಾಸದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT